ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ, ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ ಮತ್ತು ಖ್ಯಾತ ಶಿಕ್ಷಣ ತಜ್ಞ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯನ್ನು ಪ್ರತಿವರ್ಷ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ. ಮೌಲಾನಾ ಆಜಾದ್ ಸ್ವತಂತ್ರ ಭಾರತದ ಶಿಕ್ಷಣ ವ್ಯವಸ್ಥೆಯ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು. ರಾಷ್ಟ್ರೀಯ ಶಿಕ್ಷಣ ದಿನವಾದ ಇಂದು, ರಾಷ್ಟ್ರ ನಿರ್ಮಾಣ, ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ ಮತ್ತು ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಳಿಸಲಾಗದ ಕೊಡುಗೆಗಳನ್ನು ನೀಡಿದ ಮೌಲಾನಾ ಆಜಾದ್ ಅವರ ಅನುಕರಣೀಯ ಕೊಡುಗೆಗಳನ್ನು ಭಾರತ ನೆನಪಿಸಿಕೊಳ್ಳುತ್ತದೆ.
”ಶಾಲೆಗಳು ದೇಶದ ಭವಿಷ್ಯದ ನಾಗರಿಕರನ್ನು ಉತ್ಪಾದಿಸುವ ಪ್ರಯೋಗಾಲಯಗಳಾಗಿವೆ” ಎಂದು ಮೌಲಾನಾ ಆಜಾದ್ ಹೇಳಿದ್ದರು.
ಇತಿಹಾಸಕಾರರ ಪ್ರಕಾರ, ಮೌಲಾನಾ ಆಜಾದ್ ಅವರು ಕೈಗಾರಿಕೀಕರಣಕ್ಕೆ ಅತ್ಯಗತ್ಯವಾದ ಮತ್ತು ಜ್ಞಾನ ಆಧಾರಿತ ಕೈಗಾರಿಕೆಗಳ ಇತ್ತೀಚಿನ ಹೊರಹೊಮ್ಮುವಿಕೆಗೆ ಆಧಾರವಾಗಿರುವ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಮತ್ತು ವೈಜ್ಞಾನಿಕ ಸಂಶೋಧನೆಗೆ ಅಡಿಪಾಯವನ್ನು ಹಾಕಿದ್ದಾರೆ.
ಶಿಕ್ಷಣದ ಪ್ರಾಥಮಿಕ ಉದ್ದೇಶದ ಬಗ್ಗೆ ಅವರಿಗೆ ಸ್ಪಷ್ಟತೆ ಇತ್ತು. ಕೇಂದ್ರ ಸಲಹಾ ಮಂಡಳಿಯ (ಸಿಬಿಎಸ್ಇ) ಮೊದಲ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅವರು, “ದಾರಿ ತಪ್ಪದಂತೆ ಸಮತೋಲಿತ ಮನಸ್ಸುಗಳನ್ನು ಸೃಷ್ಟಿಸುವುದು ಯಾವುದೇ ವ್ಯವಸ್ಥೆಯ ಪ್ರಾಥಮಿಕ ಗುರಿಯಾಗುತ್ತದೆ” ಎಂದು ಅವರು ಹೇಳಿದ್ದರು.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನುದ್ದೇಶಿಸಿ ಮಾತನಾಡುತ್ತಾ ಒಮ್ಮೆ ಹೀಗೆ ಹೇಳಿದ್ದರು,”ಶಿಕ್ಷಣ ಮಂತ್ರಿಯಾಗಿ ಮೌಲಾನ ಅವರು, ವಸಾಹತುಶಾಹಿ ವ್ಯವಸ್ಥೆಯಿಂದ ಕಾಣೆಯಾದ ಒಂದು ಅಂಶವಾದ ರಾಷ್ಟ್ರೀಯ ಮನೋಭಾವವನ್ನು ಬೆಳೆಸಲು ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವ ಸವಾಲಿನ ಕಾರ್ಯವನ್ನು ಹೊಂದಿದ್ದರು. ಶಿಕ್ಷಣ ಪಠ್ಯಕ್ರಮದಲ್ಲಿ ತರ್ಕಬದ್ಧ ವಿಧಾನ ಮತ್ತು ವಿಚಾರಣೆಯ ಮನೋಭಾವವನ್ನು ಬೆಳೆಸುವ ವ್ಯವಸ್ಥೆಯನ್ನು ಅವರು ಪರಿಚಯಿಸಿದರು.”
ಅಲ್ಲದೇ ಪ್ರಣಬ್ ಅವರು ಮೌಲಾನಾ ಆಜಾದ್ ಅವರನ್ನು ಶೈಕ್ಷಣಿಕ ನಿರ್ಮಾತೃ ಎಂದು ಬಣ್ಣಿಸಿದ್ದಾರೆ ಮತ್ತು ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇತರ ಸಂಸ್ಥೆಗಳು ಅವರ ದಣಿವರಿಯದ ಪ್ರಯತ್ನಗಳ ಮೂಲವನ್ನು ಹೊಂದಿವೆ ಎಂದು ಹೇಳಿದ್ದಾರೆ.
ಭಾರತದ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ ಅಥವಾ ಐಐಟಿಯಾದ ಐಐಟಿ ಖರಗ್ಪುರವನ್ನು ಸ್ಥಾಪಿಸಿದ್ದು ಮೌಲಾನಾ ಆಜಾದ್.
“ಭಾರತದಲ್ಲಿ ಸಾಮಾಜಿಕ-ಧಾರ್ಮಿಕ ಮತ್ತು ಸಾಂಸ್ಕೃತಿಕ ಅಂತರ್-ಸಂಪರ್ಕವನ್ನು ಸೃಷ್ಟಿಸಲು ಅವರು ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಲಲಿತ ಕಲಾ ಅಕಾಡೆಮಿ, ಸಂಗೀತ ನಾಟಕ ಅಕಾಡೆಮಿ ಮತ್ತು ಸಾಹಿತ್ಯ ಅಕಾಡೆಮಿಗಳನ್ನೂ ಅವರೇ ಸ್ಥಾಪನೆ ಮಾಡಿದ್ದರು. ಅವರು ಸ್ಥಾಪಿಸಿದ ಸಂಸ್ಥೆಗಳು ಅವರ ದೃಷ್ಟಿಗೆ ಮತ್ತು ಅವರ ದೂರದೃಷ್ಟಿಗೆ ಸಾಕ್ಷಿಯಾಗಿವೆ.
ಅವರು ಸ್ಥಾಪನೆ ಮಾಡಿದ ಇತರ ಸಂಸ್ಥೆಗಳೆಂದರೆ, ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್), ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್).
1888 ರ ನವೆಂಬರ್ 11 ರಂದು ಮೌಲಾನಾ ಅಬುಲ್ ಕಲಾಂ ಅವರ ಜನ್ಮದಿನ. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಮೊದಲ ರಾಷ್ಟ್ರೀಯ ಶಿಕ್ಷಣ ದಿನವನ್ನು ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ನವೆಂಬರ್ 11, 2008 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಮೌಲಾನಾ ಆಜಾದ್ ಅವರ ಸ್ಮರಣಾರ್ಥ ಉದ್ಘಾಟಿಸಿದರು.
ಮೌಲಾನಾ ಆಜಾದ್ಗೆ ಮರಣೋತ್ತರವಾಗಿ 1992 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ನೀಡಲಾಯಿತು.
ರಾಷ್ಟ್ರೀಯ ಶಿಕ್ಷಣ ದಿನದಂದು, ಆರು ದಶಕಗಳ ಹಿಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದು ಶಿಕ್ಷಣ ಕ್ಷೇತ್ರದ ಮೇಲೆ ಪರಿಣಾಮ ಬೀರಿದ ಮೌಲಾನಾ ಆಜಾದ್ ಅವರ ಪರಂಪರೆಯನ್ನು ಮುಂದುವರೆಸಲು ಭಾರತೀಯರಾದ ನಾವೆಲ್ಲರೂ ಪಣತೊಡಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.