ನವದೆಹಲಿ: ಅಯೋಧ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಭಾನುವಾರ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ನಾಯಕರುಗಳೊಂದಿಗೆ ಸಭೆ ನಡೆಸಿದರು. ದೇಶದ ಕಾನೂನು ಸುವ್ಯವಸ್ಥೆಯನ್ನು ಎಲ್ಲಾ ಸಂದರ್ಭದಲ್ಲೂ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪೂರ್ಣ ಸಹಕಾರವನ್ನು ನೀಡುವುದಾಗಿ ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರುಗಳು ಭರವಸೆ ನೀಡಿದ್ದಾರೆ.
ಕೆಲವು ರಾಷ್ಟ್ರ ವಿರೋಧಿ ಅಂಶಗಳು ಪರಿಸ್ಥಿತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು ಎಂಬ ಆತಂಕ ಮನೆ ಮಾಡಿರುವ ಸಂದರ್ಭದಲ್ಲಿ, ಹಿಂದೂ-ಮುಸ್ಲಿಂ ಧಾರ್ಮಿಕ ಮುಖಂಡರು ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕೆಂದು ತಮ್ಮ ಜನರಿಗೆ ಮನವಿ ಮಾಡಿಕೊಂಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
“ದೇಶದೊಳಗೆ ಮತ್ತು ಹೊರಗಿರುವ ಕೆಲವು ರಾಷ್ಟ್ರ ವಿರೋಧಿ ಶಕ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಹಾಳುಗೆಡವಲು ಪ್ರಯತ್ನವನ್ನು ಈ ಸಂದರ್ಭದಲ್ಲಿ ಮಾಡಬಹುದು ಎಂಬ ಅಂಶದ ಬಗ್ಗೆ ಸಭೆಯಲ್ಲಿ ಭಾಗವಹಿಸಿದವರು ಕಾಳಜಿ ವ್ಯಕ್ತಪಡಿಸಿದರು” ಎಂದು ಅಜಿತ್ ದೋವಲ್ ನಿವಾಸದಲ್ಲಿ ನಡೆದ ಸಭೆಯ ಬಗ್ಗೆ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸಭೆಯಲ್ಲಿ ದೇಶಾದ್ಯಂತದ ಧಾರ್ಮಿಕ ಮುಖಂಡರು ಮತ್ತು ಹಿಂದೂ ಧರ್ಮಚಾರ್ಯ ಸಭಾ ಮತ್ತು ವಿಶ್ವ ಹಿಂದೂ ಪರಿಷತ್ ಸದಸ್ಯರು ಭಾಗವಹಿಸಿದ್ದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ನಂತರ ದೇಶದಲ್ಲಿನ ಸಾಮರಸ್ಯವನ್ನು ಅಚ್ಚುಕಟ್ಟಾಗಿ ಜತನ ಮಾಡಿದ್ದಕ್ಕಾಗಿ ಸಭೆಯಲ್ಲಿ ಭಾಗವಹಿಸಿದ ಮುಖಂಡರು ಸರ್ಕಾರ ಮತ್ತು ಜನರನ್ನು ಶ್ಲಾಘಿಸಿದರು.
ಒಂದು ಶತಮಾನಕ್ಕೂ ಹೆಚ್ಚು ಹಿಂದಿನದಾದ ಒಂದು ವಿವಾದಾತ್ಮಕ ಸಮಸ್ಯೆಯನ್ನು ಬಗೆಹರಿಸುತ್ತಾ, ಸುಪ್ರೀಂ ಕೋರ್ಟ್ ಶನಿವಾರ ಐತಿಹಾಸಿಕ ತೀರ್ಪಿನಲ್ಲಿ ಅಯೋಧ್ಯೆಯಲ್ಲಿನ ವಿವಾದಿತ ಸ್ಥಳದಲ್ಲಿ ಸರ್ಕಾರಿ ಟ್ರಸ್ಟ್ನಿಂದ ರಾಮ ದೇವಾಲಯವನ್ನು ನಿರ್ಮಿಸುವುದನ್ನು ಬೆಂಬಲಿಸಿತು ಮತ್ತು ಐದು ಎಕರೆಗಳ ಪರ್ಯಾಯ ಜಾಗವನ್ನು ನೀಡಬೇಕು ಎಂದು ತೀರ್ಪು ನೀಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.