ಬಂಟ್ವಾಳ: ಇಲ್ಲಿನ ಪುರಸಭೆಯ ಆಡಳಿತ ಪಕ್ಷದ ಸದಸ್ಯರೊಳಗಿನ ಶೀತಲ ಸಮರ ಸಿ.ಸಿ.ಟಿ.ವಿಯ ಧ್ವನಿಮುದ್ರಿತ ಸಿ.ಡಿ. ನೀಡುವ ವಿಚಾರದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಧ್ವನಿಯೆದ್ದಿದೆ.
ಸದಸ್ಯ ಪ್ರವೀಣ್ ಬಿ. ಅವರು ಫೆ೨೩ರಂದು ನಡೆದ ಸಾಮಾನ್ಯ ಸಭೆಯ ಕಲಾಪದ ಸಿ.ಸಿ.ಟಿ.ವಿಯ ಧ್ವನಿಮುದ್ರಿತ ಸಿಡಿಯನ್ನು ಒದಗಿಸುವಂತೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಸಭೆಯಲ್ಲಿ ಪ್ರಸ್ತಾಪಗೊಂಡು ಆಡಳಿತ ಪಕ್ಷದ ಕಾಂಗ್ರೆಸ್ ಸದಸ್ಯರಲ್ಲೇ ವಿರೋಧ ವ್ಯಕ್ತವಾಯಿತು.
ಧ್ವನಿ ಮುದ್ರಿತ ಸಿ.ಡಿ.ಯನ್ನು ಸದಸ್ಯರಿಗೆ ಕೊಟ್ಟಲ್ಲಿ ಅದನ್ನೇ ಹಿಡಿದುಕೊಂಡು ದುರುಪಯೋಗ ಪಡಿಸುವುದು ಇಲ್ಲವೇ ಅಧಿಕಾರಿಗಳನ್ನೇ ಬ್ಲ್ಯಾಕ್ಮೇಲ್ ಮಾಡುವ ಸಾಧ್ಯತೆಯು ಇರುವುದರಿಂದ ಸಿ.ಡಿ.ಯನ್ನು ಯಾವುದೇ ಕಾರಣಕ್ಕೂ ಕೊಡಲಾಗುವುದಿಲ್ಲ ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋರವರು ಖಡಕ್ಕಾಗಿ ಸಭೆಯ ಗಮನಕ್ಕೆ ತಂದರು.
ಮುಖ್ಯಾಧಿಕಾರಿಯವರ ಉತ್ತರದಿಂದ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರುಗಳಾದ ಮಹಮ್ಮದ್ ನಂದರಬೆಟ್ಟು, ಗಂಗಾಧರ, ಜಗದೀಶ್ ಕುಂದರ್ ಸಿ.ಡಿ.ಯನ್ನು ಸದಸ್ಯರಿಗೆ ನೀಡಬೇಕೆಂದು ಪಟ್ಟುಹಿಡಿದರು. ಜೆಡಿಎಸ್ ಸದಸ್ಯ ಬಿ.ಮೋಹನ್ ಕೂಡ ಇವರನ್ನು ಬೆಂಬಲಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರಾದ ಸದಾಶಿವ ಬಂಗೇರ, ಮಹಮ್ಮದ್ ಶರೀಫ್, ರಾಮಕೃಷ್ಣ ಆಳ್ವ, ವಾಸು ಪೂಜಾರಿಯವರ ಸಹಿತ ಬಿಜೆಪಿ ಸದಸ್ಯರು ಸಿ.ಡಿ.ಯನ್ನು ನೀಡಲೇಬಾರದೆಂದು ವಾದಿಸಿದರು. ಇದರಿಂದ ಸಭೆ ಗೊಂದಲದ ಗೂಡಾಯಿತು.
ನೆನೆಗುದಿಗೆ:
ಸ್ಥಾಯಿ ಸಮಿತಿ ಅಸ್ತಿತ್ವಕ್ಕೆ ತರುವ ವಿಚಾರದಲ್ಲೂ ಕಾಂಗ್ರೆಸ್ ಸದಸ್ಯರಲ್ಲಿ ಎಲ್ಲರೂ ಸರಿಯಿಲ್ಲದ ಕಾರಣ ಈ ಪ್ರಸ್ತಾಪವು ಈಗ ನೆನೆಗುದಿಗೆ ಬಿದ್ದಂತಾಗಿದೆ. ಸದ್ಯದ ಮಟ್ಟಿಗೆ ಈ ವಿಚಾರ ಅನಿರ್ಧಿಷ್ಟಾವಧಿವರೆಗೂ ಮುಂದೂಡಲ್ಪಟಿರುವುದು ಆಡಳಿತ ಪಕ್ಷಕ್ಕೆ ಹಿನ್ನಡೆಯಾದರೆ, ಪಕ್ಷದ ಸ್ಥಳೀಯ ಮುಖಂಡರು ಇರಿಸು ಮುರುಸಿಗೊಳಗಾಗಿದ್ದಾರೆ. ಪಕ್ಷವೇ, ಅದರಲ್ಲೂ ಸಚಿವ ರಮಾನಾಥ ರೈ ಯವರೇ ಖುದ್ದು ಗ್ರೀನ್ ಸಿಗ್ನಲ್ ನೀಡಿದ ಬಳಿಕವೂ ಸ್ಥಾಯಿ ಸಮಿತಿ ಅಸ್ತಿತ್ವಕ್ಕೆ ತರಲು ಸಾಧ್ಯವಾಗದಿರುವುದು ಕಾಂಗ್ರೆಸ್ ಪಡಸಾಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪುರಸಭೆಯ ಸ್ಥಾಯಿ ಸಮಿತಿ ಅಸ್ತಿತ್ವಕ್ಕೆ ತರಲಾಗದೆ. ಆಡಳಿತ ಪಕ್ಷವೇ ಸಂದಿಗ್ದಸ್ಥಿತಿಗೆ ತಲುಪಿರುವುದು ಇದೇ ಮೊದಲು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.