ಥಾಯ್ಲೆಂಡಿನ ಬ್ಯಾಂಕಾಕ್ನಲ್ಲಿ ನಡೆದ ‘ಸವಸ್ಡೀ ಪಿಎಂ ಮೋದಿ’ ಕಾರ್ಯಕ್ರಮದಲ್ಲಿ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತದ ಈಶಾನ್ಯ ಪ್ರದೇಶವನ್ನು ಆಗ್ನೇಯ ಏಷ್ಯಾದ ಹೆಬ್ಬಾಗಿಲಾಗಿ ಪರಿವರ್ತಿಸುವ ಮೂಲಕ ಎರಡೂ ರಾಷ್ಟ್ರಗಳನ್ನು ಹತ್ತಿರಕ್ಕೆ ತರುವ ಸರ್ಕಾರದ ಅಭಿಪ್ರಾಯಗಳನ್ನು ಪುನರುಚ್ಚರಿಸಿದರು.
“ಒಮ್ಮೆ ಇಂಡೋ-ಮಯನ್ಮಾರ್-ಥಾಯ್ಲೆಂಡ್ ಹೆದ್ದಾರಿ ಅಂದರೆ ತ್ರಿಪಕ್ಷೀಯ ಹೆದ್ದಾರಿ ಪ್ರಾರಂಭವಾದರೆ, ಈಶಾನ್ಯ ಭಾರತ ಮತ್ತು ಥಾಯ್ಲೆಂಡ್ ನಡುವೆ ತಡೆರಹಿತ ಸಂಪರ್ಕ ಆರಂಭವಾಗಲಿದೆ. ಇದು ಈ ಪ್ರದೇಶದಲ್ಲಿ ವ್ಯಾಪಾರ, ಪ್ರವಾಸೋದ್ಯಮ ಮತ್ತು ಸಂಪ್ರದಾಯವನ್ನು ವೃದ್ಧಿಗೊಳಿಸಲಿದೆ” ಎಂದಿದ್ದಾರೆ.
“ನಾವು ಈಶಾನ್ಯ ಭಾರತವನ್ನು ಆಗ್ನೇಯ ಏಷ್ಯಾದ ಹೆಬ್ಬಾಗಿಲಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ಭಾರತದ ಈ ಭಾಗವು ನಮ್ಮ ಆಕ್ಟ್ ಈಸ್ಟ್ ಪಾಲಿಸಿ ಮತ್ತು ಥಾಯ್ಲೆಂಡಿನ ಆಕ್ಟ್ ವೆಸ್ಟ್ ಪಾಲಿಸಿ ಎರಡಕ್ಕೂ ಬಲವನ್ನು ನೀಡುತ್ತದೆ”ಎಂದು ಹೇಳಿದ್ದಾರೆ.
“ಇಂದು, ಎರಡೂ ದೇಶಗಳ ಯಾವುದೇ ಎರಡು ತಾಣಗಳ ನಡುವೆ ಸರಾಸರಿ ವಿಮಾನ ಸಮಯ 2 ರಿಂದ 4 ಗಂಟೆಗಳು. ಇದು ನೀವು ಭಾರತದ ಎರಡು ಸ್ಥಳಗಳ ನಡುವೆ ಹಾರಾಟ ನಡೆಸಿದಂತೆಯೇ. ಉಭಯ ದೇಶಗಳ ನಡುವೆ ಪ್ರತಿ ವಾರ ಸುಮಾರು 300 ವಿಮಾನಗಳು ಹಾರಾಟ ನಡೆಸುತ್ತಿವೆ. ಭಾರತದ 18 ತಾಣಗಳು ಇಂದು ನೇರವಾಗಿ ಥಾಯ್ಲೆಂಡಿಗೆ ಸಂಪರ್ಕ ಹೊಂದಿವೆ” ಎಂದು ಅವರು ಹೇಳಿದರು.
ಭಾರತ-ಮಯನ್ಮಾರ್-ಥೈಲ್ಯಾಂಡ್ ತ್ರಿಪಕ್ಷೀಯ ಹೆದ್ದಾರಿ ಮೊರೆಹ್, ಭಾರತವನ್ನು ಥಾಯ್ಲೆಂಡಿನ ಮೇ ಸೋಟ್ಗೆ ಮಯನ್ಮಾರ್ ಮೂಲಕ ಸಂಪರ್ಕಿಸಲಿದೆ ಮತ್ತು ಇದು ಆಸಿಯಾನ್-ಭಾರತ ಮತ್ತು ಇತರ ಆಗ್ನೇಯ ಭಾಗಗಳ ಮುಕ್ತ ವ್ಯಾಪಾರ ಪ್ರದೇಶದಲ್ಲಿ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಭಾರಿ ಉತ್ತೇಜನ ನೀಡುವ ನಿರೀಕ್ಷೆಯಿದೆ. ಏಷ್ಯಾ, ದಕ್ಷಿಣ ಮತ್ತು ಪೂರ್ವ ಏಷ್ಯಾದ ರಾಷ್ಟ್ರಗಳೊಂದಿಗಿನ ವಾಣಿಜ್ಯವು ಭಾರತದ ವಿದೇಶಿ ವ್ಯಾಪಾರದ ಸುಮಾರು 45%ರಷ್ಟಿದೆ.
ಏಪ್ರಿಲ್ 2002ರಲ್ಲಿ ಯಾಂಗೊನ್ನಲ್ಲಿ ನಡೆದ ಸಾರಿಗೆ ಸಂಪರ್ಕಗಳ ಕುರಿತಾದ ತ್ರಿಪಕ್ಷೀಯ ಮಂತ್ರಿ ಸಭೆಯಲ್ಲಿ ಭಾರತದಲ್ಲಿನ ಮೊರೆಹ್ ಅನ್ನು ಮಯನ್ಮಾರ್ ಮೂಲಕ ಮೇ ಸೋಟ್ಗೆ ಸಂಪರ್ಕಿಸುವ ಹೆದ್ದಾರಿಯನ್ನು ಮೊದಲು ಪ್ರಸ್ತಾಪಿಸಲಾಯಿತು. ನಾಲ್ಕು ಪಥದ ಹೆದ್ದಾರಿಯ ಉದ್ದ ಸುಮಾರು 1,360 ಕಿ.ಮೀ ಆಗಿದೆ.
ಮೊರೆ-ತಮು-ಕಲೆಮಿಯೊ-ಕಲೆವಾವನ್ನು ಸಂಪರ್ಕಿಸುವ 160 ಕಿ.ಮೀ ಉದ್ದದ ಭಾರತ-ಮಯನ್ಮಾರ್ ಸ್ನೇಹದ ಸಂಕೇತವಾದ ರಸ್ತೆಯನ್ನು ಅಧಿಕೃತವಾಗಿ 13 ಫೆಬ್ರವರಿ 2001 ರಂದು ಉದ್ಘಾಟಿಸಲಾಯಿತು, ಇದು ಈಗ ತ್ರಿಪಕ್ಷೀಯ ಹೆದ್ದಾರಿಯ ಒಂದು ಭಾಗವಾಗಿದೆ. ಈ ರಸ್ತೆಯನ್ನು ಭಾರತೀಯ ಸೇನೆಯ BRO ನಿರ್ಮಿಸಿದೆ. ಬಿಆರ್ಒ ಈ ರಸ್ತೆಯನ್ನು 2009 ರವರೆಗೆ ಮಯನ್ಮಾರ್ ಸರ್ಕಾರಕ್ಕೆ ವರ್ಗಾಯಿಸುವವರೆಗೂ ನಿರ್ವಹಿಸುತ್ತಿತ್ತು.
ಭಾರತ ಮತ್ತು ಮಯನ್ಮಾರ್ 2016 ರಲ್ಲಿ ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದವು, ಇದರ ಅಡಿಯಲ್ಲಿ ಹೆದ್ದಾರಿಯ ತಮು-ಕೈಗೊನ್-ಕಲೆವಾ ವಿಭಾಗದಲ್ಲಿ (149.70 ಕಿ.ಮೀ) ಅಪ್ರೋಚ್ ರಸ್ತೆಗಳು ಸೇರಿದಂತೆ 69 ಸೇತುವೆಗಳ ನಿರ್ಮಾಣಕ್ಕೆ ಭಾರತ ಹಣ ನೀಡಲಿದೆ ಮತ್ತು 120.74 ಕಿ.ಮೀ ಕಲೇವಾ-ಯಾಗಿ ವಿಭಾಗವನ್ನು ನವೀಕರಿಸುತ್ತದೆ. ಮೂಲತಃ ಎರಡನೇ ಮಹಾಯುದ್ಧದ ಸಮಯದಲ್ಲಿ ನಿರ್ಮಿಸಲಾದ ಮಯನ್ಮಾರಿನ ಮಾರ್ಗದಲ್ಲಿ 73 ಸೇತುವೆಗಳ ನವೀಕರಣಕ್ಕಾಗಿ ಭಾರತವು ಹಣವನ್ನು ಒದಗಿಸಿತು. ಉಭಯ ದೇಶಗಳು 2016 ರ ಆಗಸ್ಟ್ 29 ರಂದು ಹೆದ್ದಾರಿಯ ನಿರ್ಮಾಣವನ್ನು ವೇಗಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದವು.
ಆಗಸ್ಟ್ 30, 2015 ರಂದು ಥಾಯ್ ಮತ್ತು ಮಯನ್ಮಾರ್ ಅಧಿಕಾರಿಗಳು ಉದ್ಘಾಟಿಸಿದ ಹೆದ್ದಾರಿಯ 25.6 ಕಿ.ಮೀ ಉದ್ದದ ಮೈವಾಡ್ಡಿ-ಥಿಂಗ್ಗಾನ್ ನೈನಾಂಗ್-ಕಾವ್ಕೆರಿಕ್ ವಿಭಾಗವು ಥಿಂಗ್ಗನ್ ನೈನಾಂಗ್ ಮತ್ತು ಕಾವ್ಕೇರಿಕ್ ನಡುವಿನ ಪ್ರಯಾಣದ ಸಮಯವನ್ನು ಮೂರು ಗಂಟೆಯಿಂದ 45 ನಿಮಿಷಕ್ಕೆ ಇಳಿಸಿತು. ಈ ವಿಭಾಗದ ನಿರ್ಮಾಣವು 2012 ರಲ್ಲಿ ಪ್ರಾರಂಭವಾಗಿತ್ತು ಮತ್ತು ಅದೇ ದಿನ, ಮಯನ್ಮಾರ್-ಥಾಯ್ಲೆಂಡ್ ಸ್ನೇಹ ಸೇತುವೆ ನಂ .2 ರ ನಿರ್ಮಾಣಕ್ಕೆ ಮಯನ್ಮಾರಿನ ಮೈವಾಡ್ಡಿಯಲ್ಲಿ ಅಡಿಪಾಯ ಹಾಕುವ ಸಮಾರಂಭವನ್ನು ನಡೆಸಲಾಯಿತು, ಈ ಸೇತುವೆ ಥಾಯ್ಲೆಂಡ್ನ ಮೇ ಸೋಟ್ ಅನ್ನು ಮೈವಾಡಿಯೊಂದಿಗೆ ಸಂಪರ್ಕಿಸುತ್ತದೆ.
ಫೆಬ್ರವರಿ 2017 ರಲ್ಲಿ, ಮಯನ್ಮಾರ್ ಸರ್ಕಾರವು ಥಾಯ್ ಸರ್ಕಾರದ ಪ್ರಸ್ತಾವನೆಯನ್ನು ಅಂಗೀಕರಿಸಿತು, ಮೋನ್ ರಾಜ್ಯದ ಥಾಟನ್ ಮತ್ತು ಕಾಯಿನ್ ರಾಜ್ಯದ ಐನ್ ಡು ನಡುವಿನ ರಸ್ತೆಯ 68 ಕಿ.ಮೀ ವಿಭಾಗವನ್ನು ಮೇಲ್ದರ್ಜೆಗೇರಿಸಲು ಅನುಮತಿ ನೀಡಿತು. ನವೀಕರಣಕ್ಕೆ US $ 51 ಮಿಲಿಯನ್ ವೆಚ್ಚದಲ್ಲಿ ಥಾಯ್ಲೆಂಡ್ ಹಣಕಾಸು ಒದಗಿಸುತ್ತಿದೆ. ಯೋಜನೆಯಡಿ, ರಸ್ತೆಯನ್ನು ಅಗಲಗೊಳಿಸಿ ಅದರ ಮೇಲ್ಮೈ ಸುಧಾರಿಸಲಾಗುತ್ತಿದೆ. ಹೆದ್ದಾರಿಯ ಇತರ ವಿಭಾಗಗಳ ಅಭಿವೃದ್ಧಿಗೆ ಸಹಕರಿಸುವಂತೆ ಮಯನ್ಮಾರ್ ಥಾಯ್ಲೆಂಡಿಗೆ ವಿನಂತಿಸಿದೆ.
ಈ ಹೆದ್ದಾರಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವುದರಿಂದ ಈಶಾನ್ಯ ಭಾರತದ ಸ್ಥಳೀಯ ಕೈಗಾರಿಕೆಗಳಿಗೆ ಉತ್ತೇಜನ ಸಿಗುತ್ತಿದೆ, ಜನರು ಈ ಪ್ರದೇಶದ ಮೂಲಕ ಸರಕು ಮತ್ತು ಸೇವೆಗಳ ಹೆಚ್ಚಿದ ಚಲನೆಯ ಲಾಭವನ್ನು ಪಡೆಯುತ್ತಾರೆ. ಹೆದ್ದಾರಿಯನ್ನು ಕಾಂಬೋಡಿಯಾ, ಲಾವೋಸ್ ಮತ್ತು ವಿಯೆಟ್ನಾಂಗೆ ವಿಸ್ತರಿಸಲು ಭಾರತವು ಪ್ರಸ್ತಾಪಿಸಿದೆ, ಹೆದ್ದಾರಿಯು ತನ್ನ ಮಾರ್ಗದಲ್ಲಿ ಹಲವಾರು ಬಂದರುಗಳನ್ನು ಸಂಪರ್ಕಿಸಲು ಪ್ರಸ್ತಾವಣೆಯನ್ನು ಸಲ್ಲಿಸಿದೆ ಮತ್ತು ಈ ಪ್ರದೇಶದಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲು ಉದ್ದೇಶಿಸಿದೆ. ಭಾರತವು BIMSTEC, ಪೂರ್ವ ಏಷ್ಯಾ ಶೃಂಗಸಭೆ, ಮೆಕಾಂಗ್-ಗಂಗಾ ಸಹಕಾರ, ಏಷ್ಯಾ ಮತ್ತು ಪೆಸಿಫಿಕ್ಗಾಗಿನ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ, ಏಷ್ಯನ್ ಹೈವೇ ನೆಟ್ವರ್ಕ್ ಮತ್ತು ಟ್ರಾನ್ಸ್-ಏಷ್ಯನ್ ರೈಲ್ವೆ ನೆಟ್ವರ್ಕ್ನ ಒಂದು ಭಾಗವಾಗಿದೆ ಮತ್ತು ಭಾರತವು ಪೂರ್ವ ರಾಷ್ಟ್ರಗಳೊಂದಿಗಿನ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಹಲವಾರು ಯೋಜನೆಗಳನ್ನು ಕೈಗೊಂಡಿದೆ.
ಆಳವಾದ ಕಾರ್ಯತಂತ್ರದ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತವು ಥಾಯ್ಲೆಂಡ್ ಮತ್ತು ಇತರ ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಭಾರತದ ರಕ್ಷಣಾ ರಫ್ತಿಗೆ ದೊಡ್ಡ ಉತ್ತೇಜನ ನೀಡುವ ಸಲುವಾಗಿ, ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಖರೀದಿಸುವ ಥಾಯ್ಲೆಂಡ್ ಆಸಕ್ತಿಯನ್ನು ಭಾರತ ಪುರಸ್ಕರಿಸುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತದ ರಾಜತಾಂತ್ರಿಕ ಮೂಲಗಳು, “ಮಾತುಕತೆಗಳು ನಡೆಯುತ್ತಿವೆ. ಇದು ಈ ವರ್ಷ ಸಂಭವಿಸದೆ ಇರಬಹುದು, ಆದರೆ ಮುಂದಿನ ವರ್ಷ ಖಂಡಿತವಾಗಿಯೂ ಸಂಭವಿಸಬಹುದು. ಥಾಯ್ಲೆಂಡ್ ಸ್ವಲ್ಪ ಸಮಯದ ಹಿಂದೆ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಬಗ್ಗೆ ಆಸಕ್ತಿಯನ್ನು ವ್ಯಕ್ತಪಡಿಸಿತು, ಆದರೆ ರಾಯಲ್ ಥಾಯ್ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ರುಡ್ಡಿಟ್ ಕಳೆದ ವರ್ಷ ಡಿಸೆಂಬರ್ನಲ್ಲಿ ಭಾರತಕ್ಕೆ ಭೇಟಿ ನೀಡಿದ ನಂತರ ಈ ಬಗ್ಗೆ ಚರ್ಚೆಗಳು ಆರಂಭವಾದವು. ವಿಪತ್ತು ಅಪಾಯ ನಿರ್ವಹಣೆ, ಕಡಲ ಸುರಕ್ಷತೆ , ಮಾಹಿತಿ ಹಂಚಿಕೆ ಮತ್ತು ಪರಸ್ಪರ ಕಾರ್ಯಸಾಧ್ಯತೆ ಕ್ಷೇತ್ರಗಳಲ್ಲಿ ಉಭಯ ದೇಶಗಳ ನೌಕಾಪಡೆಗಳು ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಗಮನಿಸಬೇಕು. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ರಕ್ಷಣಾ ಸಹಕಾರದ ಭಾಗವಾಗಿ, ಥಾಯ್ಲೆಂಡ್ ತಮ್ಮ ಡಾರ್ನಿಯರ್ ಕಡಲ ಗಸ್ತು ವಿಮಾನಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಭಾರತವನ್ನು ಕೋರಿದೆ. ರಕ್ಷಣಾ ಮೂಲದ ಪ್ರಕಾರ, ಭಾರತೀಯ ನೌಕಾಪಡೆ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಜಂಟಿ ತಂಡವು ಕಳೆದ ಜೂನ್ ಮಧ್ಯದಲ್ಲಿ ಥಾಯ್ಲೆಂಡಿಗೆ ಭೇಟಿ ನೀಡಿ ಈ ವಿಷಯದ ಬಗ್ಗೆ ಚರ್ಚಿಸಿದೆ.”
ಅದೇನೇ ಇದ್ದರೂ, ಕಳೆದ ಕೆಲವು ವರ್ಷಗಳಿಂದ ಮೋದಿ ಆಡಳಿತವು ಖಂಡಿತವಾಗಿಯೂ ಭಾರತದ ಪೂರ್ವದತ್ತ ಹೆಚ್ಚಿನ ಗಮನ ಹರಿಸಿದೆ, ಇದು ದೀರ್ಘಕಾಲದವರೆಗೂ ಭಾರತದ ವಿದೇಶಾಂಗ ನೀತಿಯಲ್ಲಿ ನಿಷ್ಕ್ರಿಯ ಅಂಶವಾಗಿ ಉಳಿದಿತ್ತು. ದೃಷ್ಟಿಕೋನದ ಬದಲಾವಣೆಯೊಂದಿಗೆ ಭಾರತವು ಪೂರ್ವಕ್ಕೆ ತನ್ನ ನೆರೆಹೊರೆಯವರೊಂದಿಗೆ ಹೆಚ್ಚಿನ ಸಹಕಾರದ ವಾತಾವರಣವನ್ನು ಹೊಂದುವತ್ತ ಸಾಗುತ್ತಿದೆ ಮತ್ತು ಇಂಡೋ-ಮಯನ್ಮಾರ್-ಥಾಯ್ಲೆಂಡ್ ಹೆದ್ದಾರಿಯನ್ನು ಪೂರ್ಣಗೊಳಿಸುವತ್ತ ಪ್ರಯತ್ನಗಳನ್ನು ಚುರುಕುಗೊಳಿಸಿರುವುದು ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.