ನವದೆಹಲಿ: ಕುಲಭೂಷಣ್ ಯಾದವ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಈ ಪ್ರಕರಣದಲ್ಲಿ ಭಾರತಕ್ಕೆ ಕಾನ್ಸುಲರ್ ಪ್ರವೇಶವನ್ನು ನೀಡದೆ ಇರುವ ಮೂಲಕ ಪಾಕಿಸ್ಥಾನ ವಿಯೆನ್ನಾ ಕನ್ವೆನ್ಷನ್ ಅನ್ನು ಉಲ್ಲಂಘಿಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ (ಯುಎನ್ಜಿಎ) ತಿಳಿಸಿದೆ.
ಯುಎನ್ ಜನರಲ್ ಅಸೆಂಬ್ಲಿಗೆ ಬುಧವಾರ ತನ್ನ ವರದಿಯನ್ನು ಪ್ರಸ್ತುತಪಡಿಸಿದ ಐಸಿಜೆ ನ್ಯಾಯಾಧೀಶ ಅಬ್ದುಲ್ಕಾವಿ ಯೂಸುಫ್ ಅವರು, ಶಂಕಿತ ಬೇಹುಗಾರ ಕೈದಿಗಳಿಗೆ ನಿಬಂಧನೆಗಳು ಅನ್ವಯಿಸುವುದಿಲ್ಲ ಎಂದು ಹೇಳುವ ಮೂಲಕ ಪಾಕಿಸ್ಥಾನವು ವಿಯೆನ್ನಾ ಕನ್ವೆನ್ಷನ್ನ 36ನೇ ವಿಧಿಯ ಅಡಿಯಲ್ಲಿರುವ ತನ್ನ ಕಟ್ಟುಪಾಡುಗಳನ್ನು ಉಲ್ಲಂಘಿಸಿದೆ ಎಂದು ವರ್ಲ್ಡ್ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಕುಲಭೂಷಣ್ ಯಾದವ್ ಅವರ ಬಂಧನವನ್ನು ತಿಳಿಸಲು ಪಾಕಿಸ್ಥಾನವು ಸುಮಾರು 3 ವಾರಗಳನ್ನು ತೆಗೆದುಕೊಳ್ಳುವ ಮೂಲಕ ಇದು ಕನ್ವೆನ್ಷನ್ ನಿಬಂಧನೆಯನ್ನು ಉಲ್ಲಂಘಿಸಿದೆ, ಕನ್ವೆನ್ಷನ್ ಅಡಿಯಲ್ಲಿ ಭಾರತದ ದೂತಾವಾಸ ಕಚೇರಿಗೆ ವಿಳಂಬವಿಲ್ಲದೆ ತಿಳಿಸುವ ಅಗತ್ಯವಿತ್ತು ಎಂದು ಯೂಸುಫ್ ಹೇಳಿದ್ದಾರೆ.
ಗೂಢ ಚರ್ಯೆ ಆರೋಪದಡಿಯ ಬಂಧನಗಳು ವಿಯೆನ್ನಾ ಕನ್ವೆನ್ಷನ್ಗೆ ಒಳಪಡುವುದಿಲ್ಲ ಎಂಬ ಪಾಕಿಸ್ಥಾನದ ಹಕ್ಕುಗಳನ್ನು ಐಸಿಜೆ ನಿರಾಕರಿಸಿದೆ. ಕನ್ವೆನ್ಷನ್ನ 36 ನೇ ವಿಧಿಯು ಗೂಢಚರ್ಯೆಯ ಶಂಕಿತ ವ್ಯಕ್ತಿಗಳನ್ನು ಹೊರಗಿಡುವುದಿಲ್ಲ, ಹೀಗಾಗಿ ಜಾದವ್ ಪ್ರಕರಣಕ್ಕೆ ನಿಬಂಧನೆಯು ಸಂಪೂರ್ಣವಾಗಿ ಅನ್ವಯಿಸುತ್ತದೆ ಎಂದು ಯೂಸುಫ್ ಪ್ರತಿಪಾದಿಸಿದ್ದಾರೆ.
ಜುಲೈ 17 ರಂದು, ಕುಲಭೂಷಣ್ ಯಾದವ್ ಪ್ರಕರಣದಲ್ಲಿ ಪಾಕಿಸ್ಥಾನ ವಿಯೆನ್ನಾ ಕನ್ವೆನ್ಷನ್ ಅನ್ನು ಉಲ್ಲಂಘಿಸಿದೆ ಎಂದು ಐಸಿಜೆ ತೀರ್ಪು ನೀಡಿತ್ತು ಮತ್ತು ಪ್ರಕರಣದ ಮರು ಪರಿಶೀಲನೆಗೆ ಆದೇಶಿಸಿತ್ತು. ಭಾರತಕ್ಕೆ ಕಾನ್ಸುಲರ್ ಪ್ರವೇಶವನ್ನು ನೀಡುವಂತೆ ಪಾಕಿಸ್ಥಾನಕ್ಕೆ ಆದೇಶಿಸಿತ್ತು. ಇದೀಗ ಮತ್ತೊಮ್ಮೆ ಐಸಿಜೆ ಪಾಕಿಸ್ಥಾನ ವಿಯೆನ್ನಾ ಕನ್ವೆನ್ಷನ್ ಪಾಲಿಸಿಲ್ಲ ಎಂದಿದೆ. ಇದು ಈ ಪ್ರಕರಣದಲ್ಲಿ ಪಾಕಿಸ್ಥಾನಕ್ಕೆ ದೊರೆತ ಮತ್ತೊಂದು ದೊಡ್ಡ ಮಟ್ಟದ ಹಿನ್ನಡೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.