“ಭಾರತದ ಉಕ್ಕಿನ ಮನುಷ್ಯ” ಎಂದೇ ಕರೆಯಲ್ಪಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 144 ನೇ ಜನ್ಮ ದಿನವಾದ ಇಂದು ಭಾರತ ಸರ್ಕಾರವು ರಾಷ್ಟ್ರೀಯ ಏಕತಾ ದಿನವನ್ನು ಆಚರಣೆ ಮಾಡುತ್ತಿದೆ. ಸರ್ದಾರ್ ಅವರ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ 31 ಅನ್ನು ಏಕತಾ ದಿನವನ್ನಾಗಿ ಆಚರಿಸಲಾಗುತ್ತದೆ. ಗೃಹ ಸಚಿವಾಲಯದ ಹೇಳಿಕೆಯು ಈ ದಿನದ ಮಹತ್ವವನ್ನು ಪ್ರತಿಪಾದಿಸುತ್ತದೆ. ” ಏಕತಾ ದಿನವು ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಸುರಕ್ಷತೆಗೆ ಇರುವ ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು ನಮ್ಮ ರಾಷ್ಟ್ರದ ಅಂತರ್ಗತ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಪುನಃ ದೃಢೀಕರಿಸಲು ಒಂದು ಅವಕಾಶವನ್ನು ಒದಗಿಸುತ್ತದೆ” ಎಂದು ಅದು ಹೇಳಿದೆ. ಕಳೆದ ವರ್ಷ ಈ ದಿನದಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಇದು ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವದ ಪ್ರಮುಖ 100 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಲಕ್ಷಾಂತರ ಜನರು ಇದುವರೆಗೆ ಅಲ್ಲಿಗೆ ಭೇಟಿ ನೀಡಿ, ಪ್ರತಿಮೆಯ ಸೊಗಸನ್ನು ಕಣ್ತುಂಬಿಕೊಂಡಿದ್ದಾರೆ.
ಪ್ರತಿ ವರ್ಷ ಅಕ್ಟೋಬರ್ 31 ರಂದು ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಂದು ಸರ್ಕಾರವು “ರನ್ ಫಾರ್ ಯೂನಿಟಿ” ಆಯೋಜನೆಗೊಳಿಸುತ್ತದೆ. ರಾಷ್ಟ್ರೀಯ ಏಕತಾ ದಿನವನ್ನು ಭಾರತ ಸರ್ಕಾರ 2014 ರಲ್ಲಿ ಪರಿಚಯಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ಸರ್ದಾರ್ ಪಟೇಲ್ ಜಯಂತಿ ಸಂದರ್ಭದಲ್ಲಿ “ರನ್ ಫಾರ್ ಯೂನಿಟಿ” ಅನ್ನು ಆರಂಭಿಸಿದರು. “ಏಕ್ ಭಾರತ್, ಶ್ರೇಷ್ಠ ಭಾರತ್ ” ಮಂತ್ರವನ್ನು ಪುನರುಚ್ಛರಿಸಿರುವ ಮೋದಿಯವರು, ಸರ್ದಾರ್ ವಲ್ಲಭಭಾಯ್ ಪಟೇಲ್ ನಮಗೆ ಏಕ ಭಾರತವನ್ನು ನೀಡಿದರು ಮತ್ತು ನಾವೆಲ್ಲರೂ ಸೇರಿ “ಶ್ರೇಷ್ಠ ಭಾರತ”ವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂಬ ಸಂದೇಶವನ್ನು ನೀಡಿದ್ದರು. “ಏಕ್ ಭಾರತ್, ಶ್ರೇಷ್ಠ ಭಾರತ್” ಲಕ್ಷ್ಯದೊಂದಿಗೆ ಏಕತಾ ಓಟದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸರ್ದಾರ್ ಪಟೇಲ್ ಜಯಂತಿಯನ್ನು ಸ್ಫೂರ್ತಿದಾಯಕ ಕ್ಷಣ ಎಂದು ಮೋದಿ ಉಲ್ಲೇಖಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಸರ್ದಾರ್ ಪಟೇಲ್ ಅವರ ಅನನ್ಯ ಕೊಡುಗೆಯನ್ನು ಪ್ರಧಾನಿ ಮೋದಿ ಅವರು 2014 ರಲ್ಲಿ ಮೊದಲ ರನ್ ಫಾರ್ ಯುನಿಟಿಯಲ್ಲಿ ಪ್ರಸ್ತಾಪಿಸಿದ್ದರು, ಸರ್ದಾರ್ ಅವರು ಮಹಾತ್ಮ ಗಾಂಧಿಯವರೊಂದಿಗೆ ಹೊಂದಿದ್ದ ಸಂಬಂಧವನ್ನು, ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ನಡುವಿನ ಸಂಬಂಧಕ್ಕೆ ಮೋದಿ ಹೋಲಿಕೆ ಮಾಡಿದ್ದರು.
ವೈವಿಧ್ಯತೆಯಲ್ಲಿ ಭಾರತದ ಏಕತೆಯ ಕುರಿತು ಮಾತನಾಡಿದ್ದ ಮೋದಿ, ಈ ವೈವಿಧ್ಯತೆಯು ನಮಗೆ ಬಲವನ್ನು ನೀಡುತ್ತದೆ ಎಂದಿದ್ದರು. ವೈವಿಧ್ಯತೆಯಲ್ಲಿ ಏಕತೆಯ ಈ ವಿಶಿಷ್ಟ ಶಕ್ತಿಯನ್ನು ಕಾಪಾಡಲು ಭಾರತದ ಜನರು ಯಾವಾಗಲೂ ಜಾಗರೂಕರಾಗಿರಬೇಕು ಎಂದು ಅವರು ಕರೆ ನೀಡಿದ್ದರು. ಜನರಿಗೆ ಏಕತೆಯ ಪ್ರತಿಜ್ಞೆಯನ್ನು ಪ್ರಧಾನಿ ಮಾಡಿಸಿದ್ದರು ಮತ್ತು ರನ್ ಫಾರ್ ಯೂನಿಟಿಯ ನೇತೃತ್ವವನ್ನು ವಹಿಸಿದ್ದರು.
ವಲ್ಲಭಭಾಯ್ ಪಟೇಲ್ ಅವರು ಅಕ್ಟೋಬರ್ 31, 1875ರಂದು ಗುಜರಾತಿನ ನಡಿಯಾದ್ ಪ್ರದೇಶದಲ್ಲಿ ಜನಿಸಿದರು. ಭಾರತದ ಪ್ರಥಮ ಉಪಪ್ರಧಾನಿಯಾಗಿ ಹಾಗೂ ಪ್ರಥಮ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಅವರೊಬ್ಬ ವಕೀಲರೂ ಆಗಿದ್ದರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಹಿರಿಯ ಮುಖಂಡರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೇ, ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದರು. 1947ರ ಇಂಡೋ-ಪಾಕಿಸ್ಥಾನ ಯುದ್ಧದ ಅವಧಿಯಲ್ಲಿ ಅವರು ಭಾರತೀಯ ಸೈನ್ಯದ ಕಮಾಂಡರ್-ಇನ್-ಚೀಫ್ ಆಗಿ ಸಹ ಕಾರ್ಯ ನಿರ್ವಹಿಸಿದರು. ಇವರು ಕೈಗೊಂಡ ಕಠು ನಿರ್ಧಾರಗಳಿಂದ ಇವರಿಗೆ, ಉಕ್ಕಿನ ಮನುಷ್ಯ ಅಥವಾ ಲೋಹ ಪುರುಷ ಎಂಬ ಬಿರುದು ದೊರಕಿದೆ.
ಭಾರತದ ಏಕೀಕರಣದಲ್ಲಿ ಅವರು ನಿರ್ವಹಿಸಿದ ಪಾತ್ರ ನಿಜಕ್ಕೂ ಅನನ್ಯವಾದುದು. ಭಾರತ ಇಂದು ಒಂದು ದೇಶವಾಗಿದ್ದರೆ ಅದಕ್ಕೆ ಸರ್ದಾರ್ ಅವರೇ ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಅವರ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವನ್ನಾಗಿ ಆಚರಿಸುವ ಮೂಲಕ ಮೋದಿ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.