ದೀಪಾವಳಿ ಹಿಂದೂಗಳ ಧಾರ್ಮಿಕ ಪರಂಪರೆಯ ಅವಿಭಾಜ್ಯ ಭಾಗ. ದೀಪಾವಳಿ ಸಂಭ್ರಮದ ಇತಿಹಾಸವು ಹಿಂದೂ ಸಂಸ್ಕೃತಿಯ ವಿಕಸನ ಮತ್ತು ಮೂಲವನ್ನು ಸಂಬಂಧಿಸಿದೆ. ಇಂದು ದೀಪಾವಳಿ ಕೇವಲ ಸಂಭ್ರಮಾಚರಣೆ, ಖುಷಿಯ ಸಂಕೇತವಾಗಿದ್ದರೂ, ಅದರ ಮೂಲ ಆಶಯವು ಹಿಂದೂ ಧರ್ಮದ ಧಾರ್ಮಿಕ ಮೌಲ್ಯಗಳ ಬೇರುಗಳನ್ನು ತುಂಬಾ ಗಟ್ಟಿಯಾಗಿ ಹೊಂದಿದೆ. ದೀಪಾವಳಿ ಎಂದರೆ ನಮ್ಮ ಮೌಲ್ಯಗಳ, ನಮ್ಮ ಸಂಸ್ಕೃತಿಯ ಸಿರಿವಂತಿಕೆಯ ಆಚರಣೆಯಾಗಿದೆ.
ದೀಪಾವಳಿ ಬಗ್ಗೆ ಒಂದು ಕ್ಷಣ ಯೋಚಿಸಿದರೆ ನಮ್ಮ ಕಣ್ಣ ಮುಂದೆ ದೀಪಗಳು, ತಿಂಡಿ ತಿನಿಸುಗಳು, ಪಟಾಕಿಗಳು, ಬೆಳಕುಗಳು ಹಾದು ಹೋಗುತ್ತದೆ. ಆದರೆ ಇಷ್ಟಕ್ಕೆ ಮಾತ್ರ ದೀಪಾವಳಿ ಸೀಮಿತವಾಗಿಲ್ಲ. ದೀಪಾವಳಿ ಇದೆಲ್ಲದಕ್ಕೂ ಮಿಗಿಲಾದುದಾಗಿದೆ. ದೀಪಾವಳಿ ಹಬ್ಬದ ಆಚರಣೆಯ ಹಿಂದೆ ಆಳವಾದ ಮಹತ್ವವಿದೆ.
ದೀಪಾವಳಿ ಹಬ್ಬವನ್ನು ಆಚರಿಸುವ ಹಿಂದಿನ ಇತಿಹಾಸವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವುದರಿಂದ ಖಂಡಿತವಾಗಿಯೂ ಹಬ್ಬದ ಸಂಭ್ರಮವನ್ನು ಇಮ್ಮಡಿಕೊಳಿಸುತ್ತದೆ. ಹಬ್ಬವನ್ನು ಆಚರಿಸಲು ಒಂದು ಅತ್ಯುತ್ತಮ ನಿರ್ದೇಶನವನ್ನು ನೀಡುತ್ತದೆ.
ದೀಪಾವಳಿಗೆ ಸಂಬಂಧಿಸಿದಂತೆ ಇತಿಹಾಸವು ವಿವಿಧ ಆಸಕ್ತಿದಾಯಕ ದಂತಕಥೆಗಳ ಅಸ್ತಿತ್ವವನ್ನು ಹೊಂದಿದೆ. ಈ ಆಕರ್ಷಕ ಕಥೆಗಳು ಪುರಾಣಗಳು ಸೇರಿದಂತೆ ಅನೇಕ ಧಾರ್ಮಿಕ ಹಿಂದೂ ಧರ್ಮಗ್ರಂಥಗಳಲ್ಲಿ ಕಾಣಸಿಗುತ್ತವೆ. ದೀಪಾವಳಿಯ ಹಬ್ಬವನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ ಮತ್ತು ಈ ಪ್ರತಿಯೊಂದೂ ದಿನವೂ ಅದರದ್ದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿದೆ.
1 ನೇ ದಿನ
ಹಬ್ಬದ ಮೊದಲ ದಿನವನ್ನು ಧನತ್ರಯೋದಶಿ ಎನ್ನಲಾಗುತ್ತದೆ. ಉತ್ತರಭಾರತದಲ್ಲಿ ಇದಕ್ಕೆ ಧನ್ತೇರಸ್ ಎಂದು ಕರೆಯುತ್ತಾರೆ. ಈ ದಿನವನ್ನು ಅಶ್ವಯುಜ ಮಾಸದ 13 ನೇ ದಿನ ಆಚರಿಸಲಾಗುತ್ತದೆ. ಈ ದಿನ ದೇವತೆಗಳ ವೈದ್ಯ, ಆಯುರ್ವೇದದ ಅಧಿದೇವತೆ ಧನ್ವಂತರಿಯು ಅಮೃತದ ಮಡಿಕೆಯೊಂದಿಗೆ ಸಾಗರದಿಂದ ಅವತರಿಸಿದನು ಎಂದು ನಂಬಲಾಗಿದೆ. ಈ ದಿನವು ಇಡೀ ಮಾನವಕುಲಕ್ಕೆ ಒಂದು ಪ್ರಮುಖ ದಿನವೆಂದು ನಂಬಲಾಗಿದೆ. ಮತ್ತೊಂದು ಪುರಾಣ ಕಥೆಯ ಪ್ರಕಾರ, ಈ ದಿನ ಲಕ್ಷ್ಮಿ ದೇವಿಯೂ ಸಹ ಸಾಗರದಿಂದ ಹೊರಬಂದಿದ್ದಾಳೆ. ಇದೇ ಕಾರಣಕ್ಕಾಗಿ, ಈ ದಿನವನ್ನು ಹಣಕಾಸಿನ ಹೂಡಿಕೆಗಳನ್ನು ಮಾಡಲು ತುಂಬಾ ಸೂಕ್ತವಾದ ದಿನವೆಂದು ಪರಿಗಣಿಸಲಾಗುತ್ತದೆ.
2 ನೇ ದಿನ
ಮೊದಲ ದಿನದಂತೆ ದೀಪಾವಳಿಯ ಎರಡನೇ ದಿನವೂ ಕುತೂಹಲಕಾರಿ ಕಥೆಯನ್ನು ಹೊಂದಿದೆ. ಧರ್ಮಗ್ರಂಥಗಳ ಪ್ರಕಾರ, ಭಗವಾನ್ ಕೃಷ್ಣ ಮತ್ತು ಅವರ ಪತ್ನಿ ಸತ್ಯಭಾಮ ನರಕಾಸುರ ಎಂಬ ರಾಕ್ಷಸನನ್ನು ಈ ದಿನ ವಧಿಸಿದ್ದಾರೆ ಎಂದು ನಂಬಲಾಗಿದೆ. ದೇವತೆಗಳ ಆಶೀರ್ವಾದ ಪಡೆದ ನಂತರ ಈ ರಾಕ್ಷಸನು ತುಂಬಾ ಶಕ್ತಿಶಾಲಿಯಾಗಿದ್ದ, ಭೂಮಿ ಮತ್ತು ಸ್ವರ್ಗದಲ್ಲಿ ಈತನ ದೌರ್ಜನ್ಯ ಮಿತಿ ಮೀರಿತ್ತು, ಈತನನ್ನು ತಡೆಯಲು ಯಾರಿಗೂ ಸಾಧ್ಯವಾಗಿರಲಿಲ್ಲ. ಆತ ಭಗವಾನ್ ಇಂದ್ರನನ್ನು ಸೋಲಿಸಿದ್ದಲ್ಲದೆ, ಋಷಿಗಳ 16000 ಹೆಣ್ಣುಮಕ್ಕಳನ್ನು ಅಪಹರಿಸುವ ಪಾಪವನ್ನೂ ಮಾಡಿದ್ದ. ಅಲ್ಲದೇ, ಅದಿತಿ ದೇವಿಯ ಗಳಿಕೆಯನ್ನು ಕದ್ದಿದ್ದ. ಈತನ ದೌರ್ಜನ್ಯ ಮತ್ತು ಕ್ರೌರ್ಯಗಳಿಂದ ಜಗತ್ತನ್ನು ಮುಕ್ತಗೊಳಿಸಲು, ಶ್ರೀಕೃಷ್ಣನು ರಾಕ್ಷಸನನ್ನು ಸಂಹಾರ ಮಾಡಿದ. ದೀಪಾವಳಿಯ ಎರಡನೇ ದಿನ ಇವನನ್ನು ಸಂಹಾರ ಮಾಡಲಾಯಿತು ಮತ್ತು ಆ ದಿನವನ್ನು ನರಕಚತುರ್ದಶಿ ಎಂದು ಕರೆಯಲಾಯಿತು.
3 ನೇ ದಿನ
ಹಬ್ಬದ ಮೂರನೇ ದಿನವನ್ನು ದೀಪಾವಳಿ ಎಂದು ಕರೆಯಲಾಗುತ್ತದೆ. ಈ ದಿನವು ಹಬ್ಬದ ಆಚರಣೆಯ ಪ್ರಮುಖ ಭಾಗವಾಗಿದೆ. ಯಾಕೆಂದರೆ ಈ ದಿನ ದೀಪ ಮತ್ತು ಲಕ್ಷ್ಮಿ ಪೂಜೆಯ ದೊಡ್ಡ ಆಚರಣೆಯನ್ನು ಒಳಗೊಂಡಿರುತ್ತದೆ. ಈ ದೀಪಾವಳಿಯ ಆಚರಣೆಯು ವಿಷ್ಣುವಿನ ಅವತಾರವೆಂದು ಪರಿಗಣಿಸಲ್ಪಟ್ಟ ಭಗವಾನ್ ರಾಮನ ಮಹಾನ್ ಇತಿಹಾಸಕ್ಕೆ ಸಂಬಂಧಿಸಿದೆ. ಧರ್ಮಗ್ರಂಥಗಳ ಪ್ರಕಾರ 14 ವರ್ಷಗಳ ವನವಾಸವನ್ನು ಮುಗಿಸಿಕೊಂಡು ಶ್ರೀರಾಮನು ಪತ್ನಿ ಸೀತಾ ಮತ್ತು ಸಹೋದರ ಲಕ್ಷ್ಮಣನೊಂದಿಗೆ ಈ ತನ್ನ ಸಾಮ್ರಾಜ್ಯಕ್ಕೆ ಹಿಂದಿರುಗಿದನು. 14 ವರ್ಷಗಳ ಬಳಿಕ, ರಾಮನ ಆಗಮನದೊಂದಿಗೆ ಮೊದಲ ದೀಪಾವಳಿಯನ್ನು ಅಯೋಧ್ಯೆಯಲ್ಲಿ ಆಚರಿಸಲಾಯಿತು.
4 ನೇ ದಿನ
ಹಬ್ಬದ ನಾಲ್ಕನೇ ದಿನವು ಶ್ರೀಕೃಷ್ಣನಿಗೆ ಸಂಬಂಧಿಸಿದೆ, ಈ ದಿನ ಆತ ಮಥುರಾದಲ್ಲಿರುವ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು ತನ್ನ ಜನರನ್ನು ಭೀಕರ ಮಳೆಯಿಂದ ರಕ್ಷಿಸಿದನು ಎಂಬ ಪ್ರತೀತಿ ಇದೆ. ಈ ದಿನ ಗೋಪೂಜೆಯನ್ನು ನಡೆಸಲಾಗುತ್ತದೆ. ಮನೆಯಲ್ಲಿರುವ ದನ ಕರುಗಳಿಗೆ ಅಲಂಕರಿಸಿ, ಅವುಗಳಿಗೆ ಶಾಸ್ತ್ರೋಕ್ತ ಪೂಜೆ ಮಾಡಿ, ತಿಂಡಿತಿನಿಸುಗಳನ್ನು ನೀಡುವ ಸಂಪ್ರದಾಯವಿದೆ. ಪೌರಾಣಿಕ ಹಿನ್ನೆಲೆಯ ಪ್ರಕಾರ, ಬಲಿಚಕ್ರವರ್ತಿಯು ವಾಮನರೂಪಿ ವಿಷ್ಣುಗೆ ದಾನ ನೀಡುವಾಗ ವಾಮನನು ತನ್ನ ಮೂರನೆಯ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆ ಮೇಲೆ ಇಟ್ಟನು. ಆ ಸಮಯದಲ್ಲಿ ಬಲಿ ಚಕ್ರವರ್ತಿಯಲ್ಲಿ ವಾಮನನು ಯಾವುದಾದರೊಂದು ವರವನ್ನು ಕೇಳೆಂದಾಗ ಬಲಿಚಕ್ರವರ್ತಿಯು ಪ್ರತಿವರ್ಷವೂ ಒಂದು ದಿನ ತಾನು ಭೂಮಿಗೆ ಆಗಮಿಸಿಬೇಕೆಂದು, ಭೂಮಿಯಲ್ಲಿ ತನ್ನ ನೆನಪಿಗಾಗಿ ಆ ದಿನವನ್ನು ಆಚರಿಸಬೇಕು ಎಂಬುದಾಗಿ ಕೇಳಿದನು. ಅಲ್ಲದೆ, ಆ ದಿನವು ತನ್ನ ಸಾಮ್ರಾಜ್ಯದಲ್ಲಿರುವಂತೆಯೇ, ಸರ್ವ ಸಮೃದ್ಧಿ ಪರಿಪಾಲನೆಯಿಂದ ಕೂಡಿರಬೇಕೆಂದು ಆಶಿಸಿದನು.
ಅದರಂತೆಯೇ, ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ, ಗೋ ಪೂಜೆ, ಇವುಗಳನ್ನು ಮಾಡಲಾಗುತ್ತದೆ. ಯಾಕೆಂದರೆ, ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
5 ನೇ ದಿನ
ಹಬ್ಬದ 5 ನೇ ದಿನ ಮತ್ತು ಕೊನೆಯ ದಿನವನ್ನು ಭಾಯ್ ದೂಜ್ ಹೆಸರಿನೊಂದಿಗೆ ಆಚರಿಸಲಾಗುತ್ತದೆ. ಉತ್ತರಭಾರತದಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ದಿನ, ಸಾವಿನ ದೇವತೆ ಯಮರಾಜನು ತನ್ನ ಸಹೋದರಿಯನ್ನು ಭೇಟಿಯಾದ ಎಂದು ನಂಬಲಾಗಿದೆ ಮತ್ತು ಅವಳು ತೋರಿಸಿದ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಮನಸೋತ ಆತ ಆ ದಿನವನ್ನು ಸಹೋದರರು ಮತ್ತು ಸಹೋದರಿಯರು ದಿನವಾಗಿ ಪ್ರತಿವರ್ಷವೂ ಆಚರಿಸುವುದಾಗಿ ಹೇಳಿದ. ಈ ದಿನ ಪ್ರತಿಯೊಬ್ಬ ಸಹೋದರನು ತನ್ನ ಸಹೋದರಿಯನ್ನು ಭೇಟಿ ಮಾಡುತ್ತಾನೆ ಮತ್ತು ಅವಳೊಂದಿಗೆ ಸಮಯವನ್ನು ಕಳೆಯುತ್ತಾನೆ.
ದೀಪಾವಳಿಯನ್ನು ಹಿಂದೂಗಳು ಮಾತ್ರವಲ್ಲದೇ, ಸಿಖ್ಖರು, ಜೈನರು, ಬೌದ್ಧರು ಕೂಡ ಆಚರಣೆ ಮಾಡುತ್ತಾರೆ. ಅವರಿಗೆ ದೀಪಾವಳಿ ಆಚರಣೆಗೆ ತಮ್ಮದೇ ಆದ ಕಾರಣಗಳಿವೆ. ಸಿಖ್ಖರು ತಮ್ಮ ಆರನೇ ಗುರು ಈ ದಿನ ಮೊಘಲರ ಬಂಧನದಿಂದ ಹೊರ ಬಂದರು ಎಂಬ ನಂಬಿಕೆಯೊಂದಿಗೆ ದೀಪಾವಳಿ ಆಚರಿಸುತ್ತಾರೆ. ಜೈನರು ದೀಪಾವಳಿಯಂದು ಭಗವಾನ್ ಮಹಾವೀರ ನಿರ್ವಾಣ ಹೊಂದಿದ ಎಂಬ ಕಾರಣಕ್ಕೆ ಆ ದಿನವನ್ನು ಆಚರಣೆ ಮಾಡುತ್ತಾರೆ.
ದೀಪಾವಳಿ ಎಂದರೆ ನಮ್ಮ ಮೌಲ್ಯಗಳ, ನಮ್ಮ ಸಂಸ್ಕೃತಿಯ ಸಿರಿವಂತಿಕೆಯ ಆಚರಣೆ. 5 ದಿನಗಳ ಕಾಲ ದೀಪಾವಳಿಯ ಸಂಭ್ರಮ ಇರುತ್ತದೆ. ಒಂದೊಂದು ದಿನವೂ ತನ್ನದೇ ಆದ ಮಹತ್ವವನ್ನು ಒಳಗೊಂಡಿರುತ್ತದೆ. ಹಬ್ಬದ ಮಹತ್ವವನ್ನು ಅರಿತು ಆಚರಿಸಿದಾಗ ಸಂಭ್ರಮ ಇಮ್ಮಡಿಯಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.