ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರವು ಭರದಿಂದ ಸಾಗಿದೆ. ಬಿಜೆಪಿ ಈ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಮರಳಲು ಉತ್ಸುಕವಾಗಿದೆ, ಜಯಗಳಿಸುವ ಯಾವುದೇ ಅವಕಾಶವನ್ನು ಅದು ಕೈಚೆಲ್ಲುತ್ತಿಲ್ಲ. ಮೊನ್ನೆಯಷ್ಟೇ ಅದು ರಾಜ್ಯ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಘೋಷಿಸಿದೆ. ಅವರಲ್ಲಿನ ಕೆಲವು ಪ್ರಮುಖ ಭರವಸೆಗಳೆಂದರೆ, 5 ವರ್ಷಗಳಲ್ಲಿ 5 ಕೋಟಿ ಉದ್ಯೋಗಗಳನ್ನು ನೀಡುವುದು, ಎಲ್ಲರಿಗೂ ಮನೆ, ಕುಡಿಯುವ ನೀರಿನ ಗ್ರಿಡ್ ಯೋಜನೆಯನ್ನು ಅನುಷ್ಠಾನಗೊಳಿಸುವುದು ಇತ್ಯಾದಿ.
ಆದರೂ, ಎಲ್ಲರ ಗಮನ ಸೆಳೆದ ಭರವಸೆ ಏನೆಂದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಮೂರು ವ್ಯಕ್ತಿಗಳಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನವನ್ನು ನೀಡಲು ಮನವಿ ಮಾಡಲಾಗುವುದು ಎಂಬ ಭರವಸೆ. ಪುನರಾಯ್ಕೆಯಾದರೆ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್, ಸಾಮಾಜಿಕ ಸುಧಾರಕರಾದ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಅವರುಗಳಿಗೆ ಮರಣೋತ್ತರವಾಗಿ ಭಾರತ ರತ್ನ ಗೌರವನ್ನು ನೀಡಲು ಒತ್ತಾಯಿಸುವುದಾಗಿ ಮಹಾರಾಷ್ಟ್ರ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆಯನ್ನು ನೀಡಿದೆ.
ಇದು ಎಡ-ಉದಾರವಾದಿ ಬುದ್ಧಿಜೀವಿಗಳ ಭಾರಿ ಕೆಂಗಣ್ಣಿಗೆ ಕಾರಣವಾಗಿದೆ. ಪತ್ರಕರ್ತರಿಂದ ಹಿಡಿದು ಜಾತ್ಯತೀತ ಸೋಗು ಹಾಕಿಕೊಂಡ ರಾಜಕಾರಣಿಗಳೆಲ್ಲರೂ ಕ್ರಾಂತಿಕಾರಿ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದಕ್ಕೆ ದೊಡ್ಡ ಮಟ್ಟದಲ್ಲೇ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, “ಮಹಾತ್ಮ ಗಾಂಧಿಯವರ ಹತ್ಯೆಗೆ ಸಾವರ್ಕರ್ ಕ್ರಿಮಿನಲ್ ವಿಚಾರಣೆಯನ್ನು ಎದುರಿಸಬೇಕಾಯಿತು. ಕಪೂರ್ ಆಯೋಗವೂ ಆರೋಪಗಳ ಬಗ್ಗೆ ತನಿಖೆ ನಡೆಸಿತು. ಇತ್ತೀಚಿನ ಲೇಖನವೊಂದರಲ್ಲಿ, ಆಯೋಗವು ಸಾವರ್ಕರ್ ವಿರುದ್ಧ ದೋಷಾರೋಪಣೆ ಮಾಡಿತ್ತು ಎಂದು ಹೇಳಲಾಗಿದೆ. ದೇವರೇ ಈ ದೇಶವನ್ನು ಉಳಿಸಿ” ಎಂದಿದ್ದಾರೆ.
ಕಾಂಗ್ರೆಸ್ ಅನ್ನು ಬೆಂಬಲಿಸಿರುವ ಮೂಲಭೂತವಾದಿ ನಾಯಕ ಮತ್ತು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಕೂಡ ವೀರ್ ಸಾವರ್ಕರ್ ಬಗ್ಗೆ ತಮ್ಮ ಟ್ವಿಟ್ಟರ್ ಮೂಲಕ ಸುಳ್ಳು ಪ್ರಚಾರವನ್ನು ಪ್ರಾರಂಭಿಸಿದ್ದಾರೆ.
ಅಸಾದುದ್ದೀನ್ ಒವೈಸಿ ತಮ್ಮ ಟ್ವೀಟ್ಗಳ ಮೂಲಕ, ಸಾವರ್ಕರ್ ಒಬ್ಬ ಬ್ರಿಟಿಷ್ ಸೈಕೋಫಾಂಟ್, ಅಲ್ಲದೇ, ಅತ್ಯಾಚಾರವನ್ನು ‘ರಾಜಕೀಯ ಸಾಧನೆ’ ಎಂದು ಸಮರ್ಥಿಸಿಕೊಂಡಿದ್ದರು. ಸಾವರ್ಕರ್ ಅವರು ಅಡಾಲ್ಫ್ ಹಿಟ್ಲರನ ಕಟ್ಟಾ ಅಭಿಮಾನಿ ಎಂದು ಆರೋಪಿಸಿದ್ದಾರೆ.
ಇಂತಹ ಸನ್ನಿವೇಶದಲ್ಲಿ, ನಮ್ಮ ಕಮ್ಯುನಿಸ್ಟ್ ನಾಯಕರು ಹೇಗೆ ತಾನೆ ಸಾವರ್ಕರ್ ಟೀಕೆಯಿಂದ ಹಿಂದೆ ಉಳಿದಾರು? ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕ ಡಿ. ರಾಜಾ ಅವರು ಈ ನಿರ್ಧಾರವನ್ನು ಟೀಕಿಸಿ, “ಇದು ನಮ್ಮ ಕಾಲದ ದೊಡ್ಡ ವಿಪರ್ಯಾಸ, ನಾವೆಲ್ಲರೂ ಗಾಂಧೀಜಿಯವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿರುವಾಗ, ಬಿಜೆಪಿ ಗಾಂಧೀ ಹತ್ಯೆ ಆರೋಪಿಯಾಗಿದ್ದ ಸಾವರ್ಕರ್ ಅವರಿಗೆ ಭಾರತ ರತ್ನವನ್ನು ನೀಡಲು ಬಯಸುತ್ತಿದೆ. ಗಾಂಧೀಜಿಯ ಹಂತಕ ನಾಥುರಾಮ್ ಗೋಡ್ಸೆಗೆ ಭಾರತ ರತ್ನವನ್ನು ನೀಡಲು ಬಿಜೆಪಿ ಒತ್ತಾಯಿಸುವ ದಿನ ದೂರವಿರಲಾರದು. ಇದು ಅವರ ಅಜೆಂಡಾದ ಒಂದು ಭಾಗವಾಗಿದೆ” ಎಂದಿದ್ದಾರೆ.
ಅದೇನೆಯಿದ್ದರೂ, ಸತ್ಯವು ಈ ಎಡಪಂಥೀಯ ಬುದ್ಧಿಜೀವಿಗಳಿಂದ ಸಾಕಷ್ಟು ದೂರವಿದೆ. 1909 ರಲ್ಲಿ, ವಿ.ಡಿ ಸಾವರ್ಕರ್ ಅವರ ಹಿರಿಯ ಸಹೋದರ ಗಣೇಶ್ ಬಾಬಾರಾವ್ ಸಾವರ್ಕರ್ ಅವರು, ಪ್ರತ್ಯೇಕತಾವಾದಿ ಮೊರ್ಲೆ ಮಿಂಟೋ ಸುಧಾರಣೆಗಳ ವಿರುದ್ಧ ಸಶಸ್ತ್ರ ದಂಗೆಗೆ ಕರೆ ನೀಡಿದ್ದರು, ಬಾಬಾರಾವ್ ಅವರ ಮಾತಿನಿಂದ ಪ್ರೇರಿತರಾದ ಯುವಕ ಅನಂತ್ ಲಕ್ಷ್ಮಣ್ ಕನ್ಹೆರೆ 1910 ರಲ್ಲಿ ಜಾಕ್ಸನ್ ಎಂಬ ನಾಸಿಕ್ನ ತೆರಿಗೆ ಸಂಗ್ರಹಕಾರನನ್ನು ಹೊಡೆದುರುಳಿಸಿದ. ಸಾವರ್ಕರ್ ಈ ಯೋಜನೆಯಲ್ಲಿ ನೇರವಾಗಿ ಭಾಗಿಯಾಗಿಲ್ಲವಾದರೂ, ಅವರು ಬ್ರಿಟಿಷ್ ಸರ್ಕಾರದಿಂದ ಪ್ರಕರಣದ ಮುಖ್ಯ ಸಂಚುಕೋರರಲ್ಲಿ ಒಬ್ಬರು ಎಂದು ಆರೋಪಿಸಲ್ಪಟ್ಟರು. ಆದರೂ, ಸಾವರ್ಕರ್ ಅವರು ಬ್ರಿಟಿಷ್ ಕೈಗೆ ಸಿಕ್ಕಿ ಬೀಳಲು ಇಷ್ಟಪಡುವುದಿಲ್ಲ, ಹೀಗಾಗಿ ಫ್ರಾನ್ಸ್ಗೆ ಓಡಿ ಹೋಗುವ ನಿರ್ಧಾರ ಮಾಡಿದರು, ಆದರೆ ಅದು ಫಲಕೊಡಲಿಲ್ಲ. ಬ್ರಿಟಿಷರ ಕೈಗೆ ಸಿಕ್ಕಿಬಿದ್ದರು.
ಬಂಧನದ ಹೊರತಾಗಿಯೂ, ಸಾವರ್ಕರ್ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ಹಡಗಿನ ಮೂಲಕ ಬ್ರಿಟಿಷರು ಅವರನ್ನು ಹೊತ್ತೊಯ್ಯುತ್ತಿದ್ದಾಗ, ಫ್ರೆಂಚ್ ಬಂದರಿನ ಮಾರ್ಸೆಲ್ಲೆಸ್ ಹತ್ತಿರ ಅವರು ಹಡಗಿನ ಪೋರ್ಟ್ಹೋಲ್ನಿಂದ ಜಿಗಿದು ದಡದ ಕಡೆಗೆ ಈಜಿದರು. ಆದರೆ ಅವರನ್ನು ಮರುಬಂಧಿಸಲಾಯಿತು. ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಯಿತು, ಅಲ್ಲಿ ಬ್ರಿಟಿಷ್ ಸರ್ಕಾರವು ಜೀವಾವಧಿ ಶಿಕ್ಷೆ ವಿಧಿಸಿತು, ಅಂದರೆ 50 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಅವರಿಗೆ ವಿಧಿಸಿತು.
ಸಾವರ್ಕರ್ ಅವರು 1911 ರಿಂದ 1921 ರವರೆಗೆ ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ 10 ವರ್ಷಗಳ ಜೈಲುವಾಸವನ್ನು ಅನುಭವಿಸಿದರು. ಅಲ್ಲಿ ಅವರು ಅಮಾನವೀಯ ಶಿಕ್ಷೆಯನ್ನು ಅನುಭವಿಸಿದರು. ತನ್ನ ಸ್ವಂತ ಸಹೋದರ ಗಣೇಶನನ್ನು ಅದೇ ಜೈಲಿನಲ್ಲಿ ಇರಿಸಲಾಗಿದೆ ಎಂದೂ ಅವರಿಗೆ ತಿಳಿದಿರಲಿಲ್ಲ. 10 ವರ್ಷಗಳ ಕಾಲ ನಿರಂತರ ಚಿತ್ರಹಿಂಸೆ ಅನುಭವಿಸಿದ ನಂತರ, ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು 1921 ರಲ್ಲಿ ರತ್ನಾಗಿರಿ ಜೈಲಿಗೆ ವರ್ಗಾಯಿಸಲಾಯಿತು, ಅಂದಿನ ಬ್ರಿಟಿಷ್ ರಾಜ ಜಾರ್ಜ್ ವಿ ಹೊರಡಿಸಿದ ಅಮ್ನೆಸ್ಟಿ ಆದೇಶದ ಪ್ರಕಾರ, ಅವರು ಮೂರು ವರ್ಷಗಳ ಕಾಲ ಆ ಜೈಲಿನಲ್ಲಿ ಕಳೆದರು ಮತ್ತು 1924 ರಲ್ಲಿ ಷರತ್ತುಬದ್ಧ ನಿಯಮಗಳ ಮೇಲೆ ಬಿಡುಗಡೆಯಾದರು. 1937 ರವರೆಗೆ ಅವರಿಗೆ ರಾಜಕೀಯವಾಗಿ ಭಾಗವಹಿಸಲು ಅವಕಾಶವಿರಲಿಲ್ಲ. ಆದರೀಗ ಅಮ್ನೆಸ್ಟಿ ಆದೇಶವನ್ನು ಕ್ಷಮಾಪಣ ಪತ್ರ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ, ಪ್ರತಿಪಕ್ಷಗಳಿಗೆ ಸಾವರ್ಕರ್ ಜೈಲಿನಲ್ಲಿ ಕಳೆದ ದಿನಗಳಬಗ್ಗೆ ನೆನಪಿಲ್ಲವೇ ಅಥವಾ ಅವರ ತ್ಯಾಗದ ಬಗ್ಗೆ ಅರಿವಿಲ್ಲವೇ?
ವಿಶೇಷವೆಂದರೆ, ವಿನಾಯಕ್ ದಾಮೋದರ್ ಸಾವರ್ಕರ್ ರತ್ನಗಿರಿ ಜೈಲಿಗೆ ವರ್ಗಾಯಿಸಲ್ಪಟ್ಟ ಅಮ್ನೆಸ್ಟಿ ಆದೇಶಕ್ಕೆ ಮಹಾಮಾನ್ಯ ಮದನ್ ಮೋಹನ್ ಮಾಳವಿಯಾ ಮತ್ತು ಮೋಹನ್ದಾಸ್ ಕರಮ್ಚಂದ್ ಗಾಂಧಿ ಅವರು ವೈಯಕ್ತಿಕವಾಗಿ ಪ್ರತಿಪಾದಿಸಿ, ಸಹಿ ಹಾಕಿದ್ದರು. ನಾವು ವಿರೋಧ ಪಕ್ಷದ ತರ್ಕ ಹೀನ ಟೀಕೆಯತ್ತ ದೃಷ್ಟಿ ಹಾಯಿಸುವುದಾದರೆ, ಮಹಾತ್ಮ ಗಾಂಧಿ ಈ ವಿಷಯದಲ್ಲಿ ದೇಶದ್ರೋಹಿ ಆಗುವುದಿಲ್ಲವೇ? ಅಲ್ಲದೆ, 80 ರ ದಶಕದ ಆರಂಭದಲ್ಲಿ ಜನರು ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜನ್ಮ ಶತಮಾನೋತ್ಸವದ ತಯಾರಿಯಲ್ಲಿ ನಿರತರಾಗಿದ್ದಾಗ, ಇಂದಿರಾ ಗಾಂಧಿ ಅವರು ಅದರ ಸಂಘಟಕರಿಗೆ ಆತ್ಮೀಯ ಶುಭಾಶಯಗಳನ್ನು ಕಳುಹಿಸಿದ್ದಲ್ಲದೆ, ವೀರ್ ಸಾವರ್ಕರ್ ಅವರ ತ್ಯಾಗವನ್ನು ಸ್ಮರಿಸಿಕೊಂಡು 1970 ರಲ್ಲಿ ಸ್ವತಃ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ್ದರು. ಹಾಗಾದರೆ ‘ಬ್ರಿಟಿಷ್ ಬೆಂಬಲಿಗ'(ಪ್ರತಿ ಪಕ್ಷ ಹೇಳುವಂತೆ) ಅನ್ನು ವೈಭವೀಕರಿಸುವ ಮೂಲಕ ಆಕೆ ರಾಷ್ಟ್ರ ದ್ರೋಹ ಮಾಡಿದ್ದಲ್ಲವೇ?
ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು ಟೀಕಿಸುವ ಹಿಂದಿನ ವಿರೋಧ ಪಕ್ಷಗಳ ತರ್ಕದ ಬಗ್ಗೆ ನಾವು ಮಾತನಾಡುವುದಾದರೆ, ಅವರ ಆರೋಪಗಳಲ್ಲಿ ಬಹುತೇಕ ಹಸಿ ಸುಳ್ಳು. ಓವೈಸಿ ಹರಡಿದ್ದು ಕೂಡ ಅಪ್ಪಟ ಸುಳ್ಳು. ಸಾವರ್ಕರ್ ಕೇವಲ ಭಾರತದ ವಿಭಜನೆಯ ಬಗ್ಗೆ ನಿಸ್ಸಂದಿಗ್ಧವಾಗಿ ಟೀಕಿಸಿದ್ದು ಮಾತ್ರವಲ್ಲ, ಧಾರ್ಮಿಕ ದ್ವೇಷದ ಆಧಾರದ ಮೇಲೆ ರೂಪುಗೊಂಡ ರಾಷ್ಟ್ರವು ಎಂದಿಗೂ ಯಾರಿಗೂ ಒಳ್ಳೆಯ ನೆರೆಯವರಾಗಲು ಸಾಧ್ಯವಿಲ್ಲ ಎಂದು ದಿಟ್ಟವಾಗಿ ಹೇಳಿದ್ದರು. ಸಾವರ್ಕರ್ ಅವರು ಅತ್ಯಾಚಾರವನ್ನು ಸಮರ್ಥಿಸಿದ್ದರು ಎಂದು ಹೇಳುತ್ತಾ ಅವರ ಆದರ್ಶಗಳನ್ನು ತುಚ್ಛವಾಗಿ ಕಾಣುವವರು ಅಲ್ಪವೂ ಜ್ಞಾನವಿಲ್ಲದ ಜನರು ಮಾತ್ರ. ಯಹೂದಿಗಳ ವಿಷಯದಲ್ಲಿ, ವಿನಾಯಕ್ ದಾಮೋದರ್ ಸಾವರ್ಕರ್ ಅವರು ಸಹಾನುಭೂತಿ ತೋರಿಸಿದ್ದಲ್ಲದೆ, ಇಸ್ರೇಲ್ ಸೃಷ್ಟಿಗೆ ಸಂಬಂಧಿಸಿದಂತೆ ಅವರಿಗೆ ಆತ್ಮೀಯ ಅಭಿನಂದನೆಗಳನ್ನೂ ಕಳುಹಿಸಿದ್ದರು. ಗಾಂಧೀಜಿ ಈ ವಿಷಯದಲ್ಲಿ ವಿರುದ್ಧವಾದ ನಡೆಯನ್ನು ಹೊಂದಿದ್ದರು.
ಕಾಂಗ್ರೆಸ್ ನೇತೃತ್ವದ ಹೆಚ್ಚಿನ ವಿರೋಧ ಪಕ್ಷಗಳು ವಿನಾಯಕ್ ದಾಮೋದರ್ ಸಾವರ್ಕರ್ ಅವರ ವ್ಯಕ್ತಿತ್ವವನ್ನು ಕೇವಲ ಮೂಲಭೂತವಾದಿ ನಾಯಕನಿಗೆ ಸೀಮಿತಗೊಳಿಸಲು ಸಾಕಷ್ಟು ಪ್ರಯತ್ನಿಸಿವೆ. ಕಳೆದ ವರ್ಷ, ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ, ಶಾಲೆಯ ಇತಿಹಾಸ ಪುಸ್ತಕಗಳಿಂದ ಸಾವರ್ಕರ್ ಪಾಠವನ್ನು ತೆಗೆದುಹಾಕಿದ್ದಲ್ಲದೆ, ಅವರನ್ನು ಹೇಡಿಯೆಂದು ಬಿಂಬಿಸಲು ಪ್ರಯತ್ನಿಸಿದರು. ಇಂತಹ ಸನ್ನಿವೇಶದಲ್ಲಿ, ವೀರ ಸಾವರ್ಕರ್ ಅವರನ್ನು ಭಾರತ ರತ್ನದೊಂದಿಗೆ ಗೌರವಿಸುವ ಬಿಜೆಪಿ ನಿರ್ಧಾರವು ಸ್ವಾಗತಾರ್ಹ ಹೆಜ್ಜೆ ಮಾತ್ರವಲ್ಲ, ಭಾರತದ ನಿಜವಾದ ವೀರರ ಗೌರವವನ್ನು ಪುನಃಸ್ಥಾಪಿಸುವ ದಿಕ್ಕಿನಲ್ಲಿ ಸರಿಯಾದ ಕ್ರಮವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.