ಆಧುನಿಕ ತಂತ್ರಜ್ಞಾನಕ್ಕಾಗಿ ಅದೆಷ್ಟೋ ಭಾರತೀಯ ವಿಜ್ಞಾನಿಗಳು ಅಜ್ಞಾತ ಕೊಠಡಿಗಳಲ್ಲಿ ಮೌನವಾಗಿ ಸಂಶೋಧನೆಗಳನ್ನು ನಡೆಸಿದ್ದಾರೆ. ನಮ್ಮ ದೇಶದಲ್ಲಿ ಅತ್ಯಾಧುನಿಕ ಪ್ರಯೋಗಾಲಯಗಳು ಇಲ್ಲದ ಸಂದರ್ಭದಲ್ಲೂ, ತಮ್ಮ ಮನೆಗಳಲ್ಲಿ ಕೂತು ಪ್ರಯೋಗಗಳನ್ನು ಮಾಡಿ ದೇಶದ ಪ್ರಗತಿಗಾಗಿ ಶ್ರಮಿಸಿದ ವಿಜ್ಞಾನಿಗಳು ನಮ್ಮಲ್ಲಿದ್ದಾರೆ. ಆದರೆ ಅವರ್ಯಾರು ಸುದ್ದಿ ವಾಹಿನಿಗಳಲ್ಲಿ ದೊಡ್ಡದಾಗಿ ಸುದ್ದಿಯಾಗುವುದಿಲ್ಲ. ಎಲೆಮರೆ ಕಾಯಿಗಳಂತೆ ತಮ್ಮ ಸಾಧನೆಗಳನ್ನು ಮುಂದುವರೆಸಿ ಮೌನವಾಗಿಯೇ ಕಣ್ಮರೆಯಾಗಿದ್ದಾರೆ.
ಅಂತಹ ಐದು ಭಾರತೀಯ ಸಾಧಕ ವಿಜ್ಞಾನಿಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲು ಈ ಲೇಖನ ಪ್ರಯತ್ನಿಸಿದೆ.
1.ಶಂಕರ್ ಅಬಾಜಿ ಭಿಸೆ
ಸ್ವಾತಂತ್ರ್ಯ ಪೂರ್ವದಲ್ಲಿ ಸಾಧನೆ ಮಾಡಿದ ವಿಜ್ಞಾನಿ, 1857 ರ ಸಿಪಾಯಿ ದಂಗೆಯ ಕೇವಲ ಒಂದು ದಶಕದ ನಂತರ ಜನಿಸಿದ ಶಂಕರ್ ಅಬಾಜಿ ಭಿಸೆ ಅವರು ಕೇವಲ 14 ವರ್ಷದವರಾಗಿದ್ದಾಗ ಕಲ್ಲಿದ್ದಲು ಅನಿಲ ಉತ್ಪಾದಕವವೊಂದನ್ನು ವಿನ್ಯಾಸಗೊಳಿಸಿದ್ದರು. “ಭಾರತದ ಎಡಿಸನ್” ಎಂದೇ ಇವರನ್ನು ಕರೆಯಲಾಗುತ್ತಿತ್ತು. ತನ್ನ 20ನೇ ವಯಸ್ಸಿಗೆ ಇವರು ವಿದ್ಯುತ್ ಬೈಸಿಕಲ್ ಕಾಂಟ್ರಾಪ್ಷನ್ಗಳನ್ನು ಕಂಡುಹಿಡಿದರು. ಬಾಂಬೆಯ ಉಪನಗರ ರೈಲ್ವೆ ವ್ಯವಸ್ಥೆಯ ನಿಲ್ದಾಣ ಸೂಚಕ, ಟ್ಯಾಂಪರ್-ಪ್ರೂಫ್ ಬಾಟಲಿಗಳು ಮತ್ತು ಅತ್ಯಾಧುನಿಕ ಕಿರಾಣಿ ತೂಕದ ಯಂತ್ರವನ್ನು ಅಭಿವೃದ್ಧಿಪಡಿಸಿದರು. ಬ್ರಿಟಿಷ್ ಸಂಶೋಧಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಇವರು ಗಳಿಸಿದರು.
ಮುದ್ರಣ ಉದ್ಯಮದಲ್ಲಿ ಕ್ರಾಂತಿಯುಂಟು ಮಾಡಿದ ಟೈಪ್-ಕಾಸ್ಟಿಂಗ್ ಯಂತ್ರವನ್ನು ಭಿಸೆ ಅಭಿವೃದ್ಧಿಪಡಿಸಿದ್ದು ಅವರ ಮಹತ್ವದ ಸಾಧನೆ. ಒಮ್ಮೆಲೆ 32 ಭಿನ್ನ ಟೈಪ್ ಗಳನ್ನು ಇದು ಏಕಕಾಲಕ್ಕೆ ನೀಡುತ್ತಿತ್ತು. ಬಳಿಕ ಲಂಡನ್ನಿನಿಂದ ಹಣಕಾಸು ನೆರವು ಪಡೆದು ಇವರು ಅಪ್ರತಿಮ ಭಿಸೋಟೈಪ್ ಅಭಿವೃದ್ಧಿಪಡಿಸಿದರು. ಒಂದು ನಿಮಿಷದಲ್ಲಿ, ಈ ಯಂತ್ರವು 1200 ವಿವಿಧ ಟೈಪ್ ಗಳನ್ನು ಸ್ವಯಂಚಾಲಿತವಾಗಿ ಮೂಡಿಸಬಲ್ಲ ಮತ್ತು ಜೋಡಿಸಬಲ್ಲ ಸಾಮರ್ಥ್ಯವನ್ನು ಹೊಂದಿತ್ತು. ಇದಕ್ಕಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ಇವರನ್ನು ಕೊಂಡಾಡಿದವು.
1920ರಲ್ಲಿ ನ್ಯೂಯಾರ್ಕಿನಲ್ಲಿ ಟೈಪ್ ಕಾಸ್ಟಿಂಗ್ ಕಾರ್ಪೂರೇಶನ್ ಸ್ಥಾಪಿಸಿದ ಇವರು, ಅಲ್ಲಿ ಟೈಪ್ಕಾಸ್ಟಿಂಗ್ ಯಂತ್ರಗಳಿಗೆ ಮಾರುಕಟ್ಟೆ ಕಲ್ಪಿಸುವ ಪ್ರಯತ್ನ ಮಾಡಿದರು.
ತಮ್ಮ ವೃತ್ತಿಜೀವನದುದ್ದಕ್ಕೂ ಭಿಸೆ ಅವರು ತಮ್ಮ ಹೆಸರಿನಲ್ಲಿ 200 ಆವಿಷ್ಕಾರಗಳನ್ನು ಮಾಡಿದರು ಮತ್ತು 40 ಪೇಟೆಂಟ್ಗಳನ್ನು ಹೊಂದಿದರು. ಇದರಲ್ಲಿ ವಿಶಿಷ್ಟವಾದ ದೂರವಾಣಿ ಮಾದರಿ, ಅಡಿಗೆ ವಸ್ತುಗಳು, ಸ್ವಯಂಚಾಲಿತ ಟಾಯ್ಲೆಟ್ ಫ್ಲಶರ್ಗಳು ಇದರಲ್ಲಿ ಸೇರಿವೆ.
ಭಿಸೆ ನಂತರ ಭಿಸೋಟೈಪ್ ಅನ್ನು ಉತ್ತಮ ವೈಶಿಷ್ಟ್ಯಗಳು ಮತ್ತು ವೇಗದ ಕಾರ್ಯಕ್ಷಮತೆಯನ್ನು ಒಳಗೊಂಡಂತೆ ಅಪ್ಗ್ರೇಡ್ ಮಾಡಿದರು. ಬಳಿಕ ಮಹಾಯುದ್ಧದ ಪರಿಣಾಮ ಅವರಿಗೆ ಹಣಕಾಸು ಸಿಗದೆ ಅವರ ಆವಿಷ್ಕಾರ ಕುಗ್ಗಿದವು. ಅವರು ಏಪ್ರಿಲ್ 7, 1935 ರಂದು ನ್ಯೂಯಾರ್ಕ್ನಲ್ಲಿ ತಮ್ಮ 68 ನೇ ವಯಸ್ಸಿನಲ್ಲಿ ನಿಧನರಾದರು.
2. ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು
ಭಾರತದ ಅಪ್ರತಿಮ ವಿಜ್ಞಾನಿಗಳಲ್ಲಿ ಇವರೂ ಒಬ್ಬರು, ಭಾರತದ ಕೈಗಾರಿಕಾ ಕ್ರಾಂತಿಗೆ ಪ್ರಭಾವ ಬೀರಿದ ಶ್ರೇಯಸ್ಸನ್ನು ಇವರಿಗೆ ನೀಡಲಾಗುತ್ತದೆ. ದೇಶದ ಮೊದಲ ಎಲೆಕ್ಟ್ರಿಕ್ ಮೋಟರ್ನ ಸೃಷ್ಟಿಕರ್ತರು ಇವರಾಗಿದ್ದಾರೆ. ಮೆಕ್ಯಾನಿಕಲ್ ಕ್ಯಾಲ್ಕುಲೇಟರ್, ಟಿಕೆಟ್ ವಿತರಣಾ ಯಂತ್ರ, ಆರಂಭಿಕ ಎಲೆಕ್ಟ್ರಿಕ್ ರೇಜರ್, ಹಣ್ಣಿನ ಜ್ಯೂಸ್ ಎಕ್ಸ್ಟ್ರಾಕ್ಟರ್, ಸೀಮೆಎಣ್ಣೆ ಚಾಲಿತ ಫ್ಯಾನ್ ಮತ್ತು ಪ್ರೊಜೆಕ್ಷನ್ ಟಿವಿಯಂತಹ ಅದ್ಭುತ ಆವಿಷ್ಕಾರಗಳನ್ನು ಮಾಡಿದ ವಿಜ್ಞಾನಿ ಇವರು.
ಇವರ ವಿಶೇಷವೆಂದರೆ, ಶೈಕ್ಷಣಿಕ ಪಠ್ಯಕ್ರಮವನ್ನು ಬಲವಾಗಿ ವಿರೋಧಿಸುತ್ತಿದ್ದ ಇವರು 3ನೇ ತರಗತಿಯಲ್ಲಿರುವಾಗಲೇ ಶಾಲೆಯನ್ನು ತೊರೆದರು.
23 ಮಾರ್ಚ್ 1893 ರಂದು ಜನಿಸಿದ ನಾಯ್ಡು ಹುಟ್ಟುವ ವೇಳೆಯೇ ತಾಯಿಯನ್ನು ಕಳೆದುಕೊಂಡರು. ಶಾಲೆಯಿಂದ ಹೊರಗುಳಿದ ನಂತರ, ಇವರು ತಮ್ಮ ಜಮೀನಿನಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದರು. ತನ್ನ 16ನೇ ವಯಸ್ಸಿನಲ್ಲಿ 1912 ಮಾಡೆಲ್ ರಡ್ಜ್ ಮೋಟಾರ್ಸೈಕಲ್ ಅನ್ನು ನೋಡಿದ ಇವರಿಗೆ ತಂತ್ರಜ್ಞಾನದ ಬಗ್ಗೆ ಒಲವು ಮೂಡಲಾರಂಭಿಸಿತು. ಬಳಿಕ ಮನೆ ತೊರೆದರು, ಮೂರು ವರ್ಷಗಳ ಕಾಲ ಹೋಟೆಲ್ ಮಾಣಿಯಾಗಿ ಕೆಲಸ ಮಾಡಿದರು ಮತ್ತು ಆ ಬೈಕು ಖರೀದಿಸಲು ಹಣವನ್ನು ಉಳಿತಾಯ ಮಾಡಲಾರಂಭಿಸಿದರು.
ಬೈಕು ಖರೀದಿಸಿದ ನಂತರ, ಅದರ ಮೇಲೆ ಕೂತು ಜಾಲಿ ರೈಡ್ ಹೋಗಲಿಲ್ಲ. ಬದಲಾಗಿ, ಅದರ ಭಾಗಗಳನ್ನು ಕೆಡವಲು ಮತ್ತು ಅದರ ಆಂತರಿಕ ಚೌಕಟ್ಟನ್ನು ಅಧ್ಯಯನ ಮಾಡಲು ಆರಂಭಿಸಿದರು.
ದಶಕಗಳ ನಂತರ, ಅವರು ಯುನಿವರ್ಸಲ್ ಮೋಟಾರ್ ಸರ್ವಿಸ್ (ಯುಎಂಎಸ್) ನ ಸಂಸ್ಥಾಪಕರಾಗಿ 280 ಬಸ್ಸುಗಳ ಸಮೂಹವನ್ನು ಹೊಂದಿದರು.
ಅವರ ಎಲೆಕ್ಟ್ರಿಕ್ ಕಂಪನಿ ನ್ಯೂ ಎಲೆಕ್ಟ್ರಿಕ್ ವರ್ಕ್ಸ್ ಭಾರತದ ಮೊದಲ ಎಲೆಕ್ಟ್ರಿಕ್ ಮೋಟರ್ ತಯಾರಿಸಿದ ಸ್ಥಳವೆಂಬುದು ಉಲ್ಲೇಖಾರ್ಹ. ವಾಸ್ತವವಾಗಿ, ನಾಯ್ಡು ಅವರು ತಮ್ಮ ಪ್ರತಿಯೊಂದು ಹೊಸ ಆವಿಷ್ಕಾರಕ್ಕೂ ಸ್ಥಳೀಯ ಮಟ್ಟದಲ್ಲಿ ಕಂಪನಿಯನ್ನು ಪ್ರಾರಂಭಿಸುವ ಮಟ್ಟಿಗೆ ಬೆಳೆದರು.
ನಾಯ್ಡು ತಮ್ಮ ಹೆಚ್ಚಿನ ವರ್ಷಗಳನ್ನು ಸಮಾಜ ಸೇವೆಯಲ್ಲೇ ಕಳೆದರು. 4 ಜನವರಿ 1974 ರಂದು ನಿಧನರಾದರು.
3.ಅನ್ನಾ ಮಣಿ
ಇವರು ಭಾರತದ ಮಹಿಳಾ ವಿಜ್ಞಾನಿ, ಭೌತ ಹಾಗು ಪವನಶಾಸ್ತ್ರ ವಿಜ್ಞಾನಿಯಾಗಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಇವರು ಭಾರತೀಯ ಪವನ ವಿಜ್ಞಾನದ ಸಂಶೋಧನೆಗೆ ಮಹತ್ವದ ಕೊಡುಗೆಯನ್ನು ಸಲ್ಲಿಸಿದ್ದಾರೆ. ಅನ್ನಾ ಮಣಿಯವರು ಒಝೊನ್, ಪವನ ಶಕ್ತಿಯ ಕುರಿತಾಗಿ ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.
ಅನ್ನಾ ಮಣಿಯವರು ಕೇರಳ ಪೀರುಮೆಡು ಎಂಬಲ್ಲಿ ಜನಿಸಿದರು. ಇವರ ತಂದೆ ಸಿವಿಲ್ ಇಂಜಿನೀಯರ್. ಒಟ್ಟು ಎಂಟು ಜನ ಮಕ್ಕಳಲ್ಲಿ ಅನ್ನಾ ಮಣಿಯವರು ಏಳನೇಯವರು. ಮಹಾತ್ಮಾ ಗಾಂಧೀಜಿಯವರಿಂದ ತುಂಬಾ ಪ್ರಭಾವಿತರಾಗಿದ್ದ ಇವರು, ಬರೀ ಖಾದಿಯನ್ನೇ ತೊಡುತ್ತಿದ್ದರು. ಇವರಿಗೆ ವೈದ್ಯ ವಿಜ್ಞಾನ ಓದುವ ಹಂಬಲವಿತ್ತು, ಆದರೆ ತದನಂತರ ಅವರ ಮನಸ್ಸು ಭೌತವಿಜ್ಞಾನದತ್ತ ಹರಿಯಿತು. 1939 ರಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜ್ ನಿಂದ ಬಿ. ಎಸ್ಸಿ ಭೌತ ಹಾಗು ರಸಾಯನ ಶಾಸ್ತ್ರದಲ್ಲಿ ಪದವಿಯನ್ನು ಪಡೆದರು.
ಪುಣೆಯ ಭಾರತೀಯ ಹವಾಮಾನ ಇಲಾಖೆಯಲ್ಲಿ ಸ್ಕ್ರಾಚ್ನಿಂದ ವಿಕಿರಣ ಸಾಧನವನ್ನು ಇವರು ವಿನ್ಯಾಸಗೊಳಿಸಿದ್ದಾರೆ. ಥುಂಬ ರಾಕೆಟ್ ಉಡಾವಣಾ ಸೌಲಭ್ಯದಲ್ಲಿ ಹವಾಮಾನ ವೀಕ್ಷಣಾಲಯ ಮತ್ತು ಸಲಕರಣೆಗಳ ಗೋಪುರವನ್ನು ಸ್ಥಾಪಿಸಿದ ಕೀರ್ತಿಗೆ ಮಣಿ ಪಾತ್ರರಾಗಿದ್ದಾರೆ.
ಪದವಿ ಪಡೆದ ನಂತರ ಅವರು ಪ್ರೋ. ಸಿ.ವಿ.ರಾಮನ್ ರವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರು. ಇವರು ವಜ್ರ ಮತ್ತು ಮಾಣಿಕ್ಯಗಳ ಬೆಳಕನ್ನು ಚದುರಿಸುವ ಗುಣಗಳ ಬಗ್ಗೆ ಅಧ್ಯಯನ ನಡೆಸಿದರು. ಐದು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದರು, ಇವರಿಗೆ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯಿಲ್ಲದ ಕಾರಣ ಪಿಎಚ್ ಡಿ ದೊರೆಯಲಿಲ್ಲ. ಮುಂದೆ ಭೌತಶಾಸ್ತ್ರದ ಅಧ್ಯಯನಕ್ಕಾಗಿ ಬ್ರಿಟನ್ ತೆರಳಿದರು, ಆದರೆ ಅಲ್ಲಿ ಅವರು ಇಂಪೀರಿಯಲ್ ಕಾಲೇಜ್ ಲಂಡನ್ ನಲ್ಲಿ ಪವನಶಸ್ತ್ರವನ್ನು ಅಭ್ಯಾಸ ಮಾಡಿದರು. 1948 ರಲ್ಲಿ ಭಾರತಕ್ಕೆ ವಾಪಸ್ಸಾದ ನಂತರ ಅವರು ಪುಣೆಯ ಪವನಶಾಸ್ತ್ರ ಇಲಾಖೆಯಲ್ಲಿ ಕೆಲಸ ಮಾಡತೊಡಗಿದರು. ಇವರು ಪವನ ಶಾಸ್ತ್ರದ ಬಗ್ಗೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರು ತಮ್ಮ ಪ್ರತಿಭೆಯ ಸಂಕೇತವಾಗಿ 1987 ರಲ್ಲಿ ಕೆ. ಆರ್. ರಾಮನಾಥನ್ ಮೆಡಲನ್ನು ತಮ್ಮದಾಗಿಸಿಕೊಂಡಿದ್ದಾರೆ. 1994ರಿಂದ ಹೃದಯ ಬೇನೆಯಿಂದ ಬಳಿದ ಇವರು 2001 ಆಗಸ್ಟ್ 16 ರಂದು ತಿರುವನಂತಪುರಂನಲ್ಲಿ ಕೊನೆಯುಸಿರೆಳೆದರು.
4.ನರಿಂದರ್ ಸಿಂಗ್ ಕಪಾನಿ
‘ಫೈಬರ್ ಆಪ್ಟಿಕ್ಸ್ನ ಪಿತಾಮಹ’ ಎಂದು ಪರಿಗಣಿಸಲ್ಪಟ್ಟ ಪಂಜಾಬ್ ಮೂಲದ ಈ ವಿಜ್ಞಾನಿಯ ಆಪ್ಟಿಕಲ್ ಫೈಬರ್ಗಳ ಮೂಲಕ ಸಂವಹನವನ್ನು ವೈಭವೀಕರಿಸುವ ಆವಿಷ್ಕಾರವು ‘ಇಂಟರ್ನೆಟ್’ ಮತ್ತು ಲೇಸರ್ ಶಸ್ತ್ರಚಿಕಿತ್ಸೆಗಳು ಅಥವಾ ಎಂಡೋಸ್ಕೋಪಿಕ್ ಇಮೇಜಿಂಗ್ನಂತಹ ವೈದ್ಯಕೀಯ ಅದ್ಭುತಗಳಿಗೆ ದಾರಿ ಮಾಡಿಕೊಟ್ಟಿತು.
ದುರದೃಷ್ಟವಶಾತ್, ಕಪಾನಿಯ ಆವಿಷ್ಕಾರವನ್ನು ಕಡೆಗಣಿಸಿ, ಕಪಾನಿ ಆವಿಷ್ಕಾರವನ್ನು ಮುಂದಕ್ಕೆ ತೆಗೆದುಕೊಂಡು ಹೋದ ಚಾರ್ಲ್ಸ್ ಕುಯೆನ್ ಕಾವೊ ಅವರಿಗೆ ನೋಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
1927 ರಲ್ಲಿ ಪಂಜಾಬ್ನ ಮೊಗಾ ಎಂಬಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದ ಕಪಾನಿ ಆಗ್ರಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು ಮತ್ತು ನಂತರ ತಂತ್ರಜ್ಞಾನದಲ್ಲಿ ವ್ಯಾಪಕ ಸಂಶೋಧನೆ ನಡೆಸಲು ಲಂಡನ್ನ ಇಂಪೀರಿಯಲ್ ಕಾಲೇಜಿಗೆ ಸೇರಿದರು.
ಈ ಸಂಸ್ಥೆಯಲ್ಲಿ ಪಿಎಚ್ಡಿ ಮಾಡಿದ ಸಮಯದಲ್ಲಿಯೇ ಕಪಾನಿ ಆಪ್ಟಿಕಲ್ ಫೈಬರ್ಗಳ ಮೇಲೆ ಚಿತ್ರಗಳನ್ನು ರವಾನಿಸುವಲ್ಲಿ ಯಶಸ್ವಿಯಾದರು ಮತ್ತು 1955 ರಲ್ಲಿ ‘ಫೈಬರ್ ಆಪ್ಟಿಕ್ಸ್’ ಎಂಬ ಪದವನ್ನು ಸೃಷ್ಟಿಸಿದರು, ಆಪ್ಟಿಕಲ್ ಭೌತಶಾಸ್ತ್ರದ ಸಂಪೂರ್ಣ ಹೊಸ ಪೋರ್ಟಲ್ ಅನ್ನು ತೆರೆದರು.
ಅವರು ರೋಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ಸದಸ್ಯರಾಗಿ ಸೇರಿಕೊಂಡರು ಮತ್ತು ನಂತರ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಯಶಸ್ವಿ ಉದ್ಯಮಿಯಾದರು. ಪ್ರಸ್ತುತ, 92 ವರ್ಷದವಾಗಿರುವ ಇವರ ಹೆಸರಿನಲ್ಲಿ 100 ಕ್ಕೂ ಹೆಚ್ಚು ಪೇಟೆಂಟ್ಗಳಿವೆ ಮತ್ತು ಸಿಖ್ ಫೌಂಡೇಶನ್ ಎಂಬ ಸಮಾಜ ಸೇವಾ ಸಂಘಟನೆಯನ್ನು ಸಹ ಇವರು ನಡೆಸುತ್ತಿದ್ದಾರೆ.
5. ಡಾ.ನೌತಮ್ ಭಟ್
ಈ ಪದ್ಮಶ್ರೀ ಪುರಸ್ಕೃತ ಭೌತಶಾಸ್ತ್ರಜ್ಞನ ಹೆಸರು ಭಾರತದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ವಿರಳವಾಗಿ ಕಂಡುಬರುತ್ತದೆ, ಆದರೂ ಇವರ ಕೊಡುಗೆ ಭಾರತದಲ್ಲಿ ಇಂದಿನ ಭೌತಶಾಸ್ತ್ರ ಸಂಶೋಧನೆಗೆ ಪ್ರೇರಣೆ, ಪ್ರಭಾವ ಮತ್ತು ಸಹಾಯವನ್ನು ನೀಡುತ್ತಲೇ ಇದೆ.
ದೆಹಲಿಯ ಸಾಲಿಡ್ ಸ್ಟೇಟ್ ಫಿಸಿಕ್ಸ್ ಲ್ಯಾಬೊರೇಟರಿಯ ಸಂಸ್ಥಾಪಕ ನಿರ್ದೇಶಕರಾಗಿದ್ದ ಇವರು, ಕ್ಷಿಪಣಿಗಳಿಗಾಗಿ ವೇರಿಯಬಲ್ ಟೈಮ್ ಫ್ಯೂಸ್ ಅನ್ನು ವಿನ್ಯಾಸಗೊಳಿಸುವುದರ ಜೊತೆಗೆ ಹೀಲಿಯಂ-ನಿಯಾನ್ ಲೇಸರ್ಗಳು, ಸೌರ ಕೋಶಗಳು, ಅರೆವಾಹಕ ಚಿಪ್ಸ್ ಇತ್ಯಾದಿಗಳ ಅಭಿವೃದ್ಧಿಗೆ ಮುಂದಾಗುವುದರ ಮೂಲಕ ಭಾರತದಲ್ಲಿ ರಕ್ಷಣಾ ಸಂಶೋಧನೆಯನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದರು. ಇದು ಭಾರತದ ರಕ್ಷಣಾ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿತು.
1909 ರಲ್ಲಿ ಗುಜರಾತ್ನ ಜಾಮ್ನಗರದಲ್ಲಿ ಜನಿಸಿದ ಭಟ್, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಸರ್ ಸಿ.ವಿ ರಾಮನ್ ಅವರ ಮೇಲ್ವಿಚಾರಣೆಯಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಡಾಕ್ಟರೇಟ್ ಪಡೆದ ನಂತರ, ಅವರು ಭಾರತಕ್ಕೆ ಮರಳಿದರು ಮತ್ತು IIScಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಸ್ವಾತಂತ್ರ್ಯದ ನಂತರ, 1949 ರಲ್ಲಿ, ಅವರನ್ನು ದೆಹಲಿಯ ರಕ್ಷಣಾ ವಿಜ್ಞಾನ ಸಂಸ್ಥೆಗೆ ಸೇರಿಸಲಾಯಿತು, ಅಲ್ಲಿ ಅವರು ತಮ್ಮ ಅತ್ಯಂತ ಆಕರ್ಷಕ ಆವಿಷ್ಕಾರಗಳನ್ನು ಪ್ರಸ್ತುತಪಡಿಸಿದರು.
ರಕ್ಷಣಾ ವಿಜ್ಞಾನ ಸಂಸ್ಥೆಯ ಕಟ್ಟುನಿಟ್ಟಾದ ಗೌಪ್ಯತಾ ಶಿಷ್ಟಾಚಾರಗಳ ಕಾರಣದಿಂದಾಗಿ ಅವರ ಹೆಚ್ಚಿನ ಕೆಲಸಗಳು ಗೌಪ್ಯವಾಗಿಯೇ ಇದೆಯಾದರೂ, ಭಾರತದಲ್ಲಿ ಶ್ರವಣಶಾಸ್ತ್ರಕ್ಕೆ ಅವರ ಸಕ್ರಿಯ ಕೊಡುಗೆಯನ್ನು ಉಲ್ಲೇಖಿಸಲೇಬೇಕು.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪೋಷಕ ಮತ್ತು ಸಾಧಕರೂ ಆಗಿರುವ ಡಾ. ನೌತಮ್ ಭಟ್ ಅವರು ಭಾರತದ ಶಾಸ್ತ್ರೀಯ ಸಂಗೀತದ ಪರಿಪೂರ್ಣವಾದ ಆಲಿಸುವ ಸಾರವನ್ನು ಸೆರೆಹಿಡಿಯಲು ದೆಹಲಿಯ ಶೀಲಾ ಮತ್ತು ಓಡಿಯನ್ ಮತ್ತು ಮುಂಬಯಿನ ಬಿರ್ಲಾ ಮಾತುಶ್ರೀ ಸಭಗ್ರುಹಾದಂತಹ 70 ಎಂಎಂ ಚಿತ್ರಮಂದಿರಗಳ ಅಕೌಸ್ಟಿಕ್ ವೈಶಿಷ್ಟ್ಯಗಳನ್ನು ವಿನ್ಯಾಸಗೊಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.