ಜಾಗತಿಕ ತಾಪಮಾನ ಏರುತ್ತಲೇ ಸಾಗುತ್ತಿರುವ ಈ ಸಂದರ್ಭದಲ್ಲಿ ಮರಗಳನ್ನು ಕಡಿದು ಅರಣ್ಯ ನಾಶ ಮಾಡುವುದು ನಿಜಕ್ಕೂ ನಮ್ಮನ್ನು ನಾವೇ ಸಾಯಿಸಿಕೊಂಡಂತೆ. ನಮ್ಮಿಂದ ಎಷ್ಟು ಆಗುತ್ತದೋ ಅಷ್ಟು ಮರಗಳನ್ನು ಬೆಳಸಿ ಹಸಿರನ್ನು ಕಾಪಾಡಿಕೊಳ್ಳುವುದು ನಮಗೆ ಅನಿವಾರ್ಯವಾಗಿದೆ. ಹಸಿರು ಬೆಳಸಿದಷ್ಟು ನಮ್ಮ ಭವಿಷ್ಯ ಸೊಂಪಾಗಿರುತ್ತದೆ, ಇಲ್ಲವಾದರೆ ಬರಡಾಗುತ್ತದೆ.
ಪಂಜಾಬಿನ ಲುಧಿಯಾನದ ಐಆರ್ಎಸ್ ಅಧಿಕಾರಿ ರೋಹಿತ್ ಮೆಹ್ರಾ ಹಸಿರನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮಿನಿ ಅರಣ್ಯಗಳನ್ನು ನಿರ್ಮಾಣ ಮಾಡಿ ನಗರವನ್ನು ಹಸಿರಾಗಿಸುತ್ತಿದ್ದಾರೆ. ಇದಕ್ಕಾಗಿಯೇ ಅವರನ್ನು ‘ಗ್ರೀನ್ ಮ್ಯಾನ್’ ಎಂದು ಕರೆಯಲಾಗುತ್ತಿದೆ.
ಕೇವಲ ಎರಡು ವರ್ಷಗಳಲ್ಲಿ 500 ಚದರ ಅಡಿಗಳಿಂದ 4 ಎಕರೆ ವರೆಗಿನ 25 ಮಿನಿ ಕಾಡುಗಳನ್ನು ಇವರು ರಚಿಸಿದ್ದಾರೆ. ಭಾರತೀಯ ಕಂದಾಯ ಸೇವೆಗಳ ಅಧಿಕಾರಯಾಗಿರುವ ರೋಹಿತ್ ಅವರು ಲುಧಿಯಾನ ರೈಲ್ವೆ ನಿಲ್ದಾಣದಲ್ಲಿ ಲಂಬ ಉದ್ಯಾನವನ್ನು ಯಶಸ್ವಿಯಾಗಿ ರಚಿಸಿದ್ದಕ್ಕಾಗಿ ಅವರನ್ನು ಲುಧಿಯಾನದ ಗ್ರೀನ್ ಮ್ಯಾನ್ ಎಂದೇ ಕರೆಯಲಾಯಿತು. ಅಲ್ಲಿಂದ ಬಳಿಕ ಅವರು ಪಂಜಾಬ್ನಲ್ಲಿ 75 ಲಂಬ ಉದ್ಯಾನಗಳನ್ನು ರಚಿಸಿದ್ದಾರೆ.
“ಜನರು ಈ ಲಂಬ ಉದ್ಯಾನಗಳ ಬಗ್ಗೆ ತಿಳಿದುಕೊಂಡು, ಅದರ ಬಗ್ಗೆ ಮಾಹಿತಿ ಪಡೆಯಲು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಅವರು ತಮ್ಮ ಖಾಲಿ ಜಾಗಗಳನ್ನು ಮಿನಿ ಅರಣ್ಗಳಾಗಿ ಪರಿವರ್ತಿಸಲು ಬಯಸುತ್ತಾರೆ” ಎಂದು 41 ವರ್ಷದ ಅಧಿಕಾರಿ ಹೇಳುತ್ತಾರೆ. ಲುಧಿಯಾನದಿಂದ 40 ಕಿ.ಮೀ ದೂರದಲ್ಲಿರುವ ಜಾಗ್ರಾವ್ನ ಕೈಗಾರಿಕೋದ್ಯಮಿ 6,000 ಚದರ ಅಡಿ ಜಾಗವನ್ನು ಅರಣ್ಯವನ್ನಾಗಿ ಪರಿವರ್ತಿಸಲು ರೋಹಿತ್ ಅವರ ಸಹಾಯವನ್ನು ಪಡೆದುಕೊಂಡಿದ್ದಾರೆ.
“ಆ ಕೈಗಾರಿಕೋದ್ಯಮಿ ಅಕ್ಕಿ ಹೊಟ್ಟು ತೈಲ ಕಾರ್ಖಾನೆಯನ್ನು ನಡೆಸುತ್ತಿದ್ದರು ಮತ್ತು ಕಾರ್ಖಾನೆ ಇದ್ದ ಪ್ರದೇಶವು ಅತ್ಯಂತ ಕಲುಷಿತವಾಗಿತ್ತು. ಅಲ್ಲಿ ಅರಣ್ಯವನ್ನು ರಚಿಸುವ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಅವರು ಬಯಸಿದ್ದರು ”ಎಂದು ರೋಹಿತ್ ವಿವರಿಸುತ್ತಾರೆ.
ಲುಧಿಯಾನವು ಕೈಗಾರಿಕೆಗಳ ಕೇಂದ್ರವಾಗಿರುವುದರಿಂದ, ಇಲ್ಲಿನ ಮಾಲಿನ್ಯದ ಪ್ರಮಾಣವು ತುಂಬಾ ಆತಂಕಕಾರಿಯಾಗಿದೆ, ಕೆಲವೊಮ್ಮೆ ಶಾಲೆಗಳು ಮೂರರಿಂದ ನಾಲ್ಕು ದಿನಗಳವರೆಗೂ ರಜೆಯನ್ನು ನೀಡುತ್ತದೆ ಎಂದು ರೋಹಿತ್ ಹೇಳುತ್ತಾರೆ. ಮಿನಿ ಕಾಡುಗಳನ್ನು ರಚಿಸುವಂತೆ ರೋಹಿತ್ ಅವರಿಗೆ ಮನವಿಗಳು ಬರುವವರೆಗೂ ಅವರಿಗೆ ಅದರ ಬಗ್ಗೆ ಹೆಚ್ಚು ಜ್ಞಾನ ಇರಲಿಲ್ಲ, ಹೀಗಾಗಿ ಅಲ್ಪಾವಧಿಯಲ್ಲಿ ಕಾಡುಗಳನ್ನು ಹೇಗೆ ರಚಿಸುವುದು ಎಂಬ ಬಗ್ಗೆ ಅವರು ಸಂಶೋಧನೆಯನ್ನು ನಡೆಸಲು ಪ್ರಾರಂಭಿಸಿದರು.
ಈ ವೇಳೆ ಜಪಾನಿನ ಮಿಯಾವಾಕಿಯ ತಂತ್ರದ ಬಗ್ಗೆ ರೋಹಿತ್ ಅವರಿಗೆ ಮಾಹಿತಿ ಸಿಕ್ಕಿತು. ಮರಗಳನ್ನು ಬೆಳೆಸುವ ತಂತ್ರಗಳ ಬಗ್ಗೆ ತನ್ನ ಜ್ಞಾನದ ನೆಲೆಯನ್ನು ತ್ವರಿತವಾಗಿ ವಿಸ್ತರಿಸಿದ ಅವರು, ವೃಕ್ಷಾಯುರ್ವೇದದಂತಹ ಪ್ರಾಚೀನ ಭಾರತೀಯ ಗ್ರಂಥಗಳತ್ತ ತಮ್ಮ ಗಮನವನ್ನು ತಿರುಗಿಸಿದರು. ಈ ಗ್ರಂಥಗಳು ಸಸ್ಯಗಳನ್ನು ಬೆಳೆಸುವ ಮತ್ತು ಕಾಡುಗಳ ಬಗ್ಗೆ ಪ್ರಾಚೀನ ವಿಜ್ಞಾನದ ಪರಿಕಲ್ಪನೆಯನ್ನು ನೀಡುತ್ತವೆ.
“ಕುತೂಹಲಕಾರಿ ಅಂಶವೆಂದೆ, ಈ ಪ್ರಾಚೀನ ಪಠ್ಯವು ಮಿಯಾವಾಕಿ ವಿಧಾನದಲ್ಲಿ ಉಲ್ಲೇಖಿಸಲಾದ ತಂತ್ರಗಳನ್ನು ಒಳಗೊಂಡಿದೆ. ಸುಮಾರು 2.5 ಅಡಿ ಆಳದಲ್ಲಿ ಮಣ್ಣನ್ನು ಅಗೆದು ನಂತರ ಎಲೆಗಳು, ಹಸುವಿನ ಸಗಣಿ ಮತ್ತು ಇತರ ಅಂಶಗಳಿಂದ ತಯಾರಿಸಿದ ಕಾಂಪೋಸ್ಟ್ ಗೊಬ್ಬರವನ್ನು ಅದಕ್ಕೆ ಹಾಕಲಾಗುತ್ತದೆ. ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಕೃಷಿ ತ್ಯಾಜ್ಯಗಳಾದ ಕೋಲು, ಅಕ್ಕಿ ಹೊಟ್ಟು ಇತ್ಯಾದಿಗಳನ್ನು ಕೂಡ ಸೇರಿಸಲಾಗುತ್ತದೆ.” ಎಂದು ಅವರು ವಿವರಿಸುತ್ತಾರೆ.
ಇದರ ನಂತರ, ವಿವಿಧ ರೀತಿಯ ಮರಗಳನ್ನು ಒಟ್ಟಿಗೆ ಬೆಳೆಯಲಾಗುತ್ತದೆ. ಈ ವಿಧಾನಕ್ಕೆ ಬಳಸುವ ಸಾಮಾನ್ಯ ಸಸಿಗಳೆಂದರೆ, ಬೇವು, ಆಮ್ಲಾ, ಹರಾದ್, ಬೇಲ್, ಅರ್ಜುನ, ಮೊರಿಂಗಾ, ಅರ್ಜುನಾ, ಗುಲ್ಮೋಹರ್, ಬಾರ್ಗಡ್, ಮತ್ತು ಕಾನರ್ ಮುಂತಾದವುಗಳು.
ರೋಹಿತ್ ಅವರ ಕೆಲಸವನ್ನು ಗುರುತಿಸಿ, ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಅವರೊಂದಿಗೆ ಕೈಜೋಡಿಸಿದೆ. ಮಾಲಿನ್ಯವನ್ನು ತಡೆಗಟ್ಟಲು ಲುಧಿಯಾನದಲ್ಲಿನ ಕೈಗಾರಿಕೆಗಳ ಬಳಿ ಇರುವ ತೆರೆದ ಸ್ಥಳಗಳನ್ನು ಕಾಡುಗಳಾಗಿ ಪರಿವರ್ತಿಸುವುದು ಇದರ ಉದ್ದೇಶ. ಈಗ ಇವರು ರಚನೆ ಮಾಡಿದ 25 ಕಾಡುಗಳಲ್ಲಿ, ಕನಿಷ್ಠ ಏಳರಿಂದ ಎಂಟು ಕೈಗಾರಿಕಾ ಪ್ರದೇಶಗಳಲ್ಲಿವೆ.
ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಘಟನೆಗಳು ಕೂಡ ರೋಹಿತ್ ಅವರನ್ನು ಸಂಪರ್ಕಿಸಿ ಕಾಡು ಬೆಳೆಸಲು ಸಹಾಯ ಪಡೆದುಕೊಳ್ಳುತ್ತಿವೆ.. “ಒಬ್ಬ ಕೈಗಾರಿಕೋದ್ಯಮಿ ತನ್ನ ತೋಟದ ಮನೆಯಲ್ಲಿ ಕಾಡು ಬೆಳೆಸಲು ನನ್ನನ್ನು ಸಂಪರ್ಕಿಸಿದ್ದರು. ಅವರ ತಾಯಿಗೆ ಶ್ವಾಸಕೋಶದ ಸಮಸ್ಯೆಗಳಿದ್ದರಿಂದ, ಅರ್ಧ ಎಕರೆ ಭೂಮಿಯನ್ನು ಸ್ವಚ್ಛಗೊಳಿಸಿ ಅಲ್ಲಿ ಮಿನಿ ಫಾರೆಸ್ಟ್ ನಿರ್ಮಾಣ ಮಾಡಲು ಅವರು ಬಯಸಿದ್ದರು”ಎಂದು ರೋಹಿತ್ ಹೇಳುತ್ತಾರೆ.
ರೋಹಿತ್ ಲುಧಿಯಾನದ ಗುರುದ್ವಾರ ದುಖ್ನಿವಾರನ್ ನಲ್ಲಿ ಒಂದು ಮಿನಿ-ಫಾರೆಸ್ಟ್ ಅನ್ನು ರಚಿಸಿದ್ದಾರೆ ಮತ್ತು ಅದಕ್ಕೆ ನಾನಕ್-ವನ್ ಎಂದು ಹೆಸರಿಸಿದ್ದಾರೆ. ಗುರು ನಾನಕ್ ಅವರ 550 ಜನ್ಮ ವರ್ಷಾಷರಣೆಯ ಪ್ರಯುಕ್ತ ವನವನ್ನು ಗುರುನಾನಕ್ ದೇವ್ಗೆ ಸಮರ್ಪಿಸಲಾಗಿದೆ. “ವಿವಿಧ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಎನ್ ಜಿಓಗಳು, ವಿವಿಧ ಸಮುದಾಯಗಳು ತೋಟಗಾರಿಕೆ ಪ್ರಕ್ರಿಯೆಯಲ್ಲಿ ನನಗೆ ಸಹಾಯ ಮಾಡಲು ಸ್ವಯಂಪ್ರೇರಿತವಾಗಿ ಮುಂದೆ ಬರುತ್ತದೆ ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನನಗೆ ಕೈಜೋಡಿಸುತ್ತವೆ” ಎಂದು ರೋಹಿತ್ ಹೇಳುತ್ತಾರೆ.
ಜನರ ಬೆಂಬಲದ ಹೊರತಾಗಿಯೂ, ನಗರ ಪ್ರದೇಶದಲ್ಲಿ ಈ ಕಾಡುಗಳನ್ನು ರಚಿಸಲು ಮುಕ್ತ ಸ್ಥಳವನ್ನು ಹುಡುಕುವುದು ಕಷ್ಟ ಎಂದು ರೋಹಿತ್ ಹೇಳುತ್ತಾರೆ. ಅಲ್ಲದೇ, ಹುಲ್ಲಿನಿಂದ ಆವೃತವಾದ ತೋಟದ ಮನೆಗಳಿಗಿಂತ ಅರಣ್ಯಗಳು ಹೆಚ್ಚು ಪ್ರಯೋಜನಗಳನ್ನು ನೀಡುತ್ತವೆ ಎಂಬುದನ್ನು ಜನರಿಗೆ ಮನವರಿಕೆ ಮಾಡುವುದು ಕಷ್ಟ ಎಂದು ಅವರು ಹೇಳುತ್ತಾರೆ.
ಇದಲ್ಲದೇ, ಅಧಿಕಾರಿಯಾಗಿ ತನ್ನ ಕೆಲಸವನ್ನು ಮುಂದುವರಿಸುತ್ತಾ ಅವರು ಹಸಿರು ಬೆಳೆಸುವ ಕಾರ್ಯದಲ್ಲಿ ಕೈಜೋಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಶಾಲೆಗಳು, ಸಂಸ್ಥೆಗಳು ಮತ್ತು ಇತರ ಸಂಸ್ಥೆಗನ್ನು ಸಂಯೋಜಿಸಿ ಅವರು ಬೀಜ ಚೆಂಡುಗಳನ್ನೂ ರಚಿಸುತ್ತಿದ್ದಾರೆ. ಈ ಬೀಜದ ಚೆಂಡುಗಳು ಜೇಡಿಮಣ್ಣು, ಗೊಬ್ಬರ, ಪೋಷಕಾಂಶಗಳು ಮತ್ತು ಬೀಜಗಳನ್ನು ಒಳಗೊಂಡಿರುತ್ತವೆ.
ತಮ್ಮ ಕಾರ್ಯದ ಮೂಲಕ ಐಆರ್ಎಸ್ ಅಧಿಕಾರಿ ರೋಹಿತ್ ಮಕ್ಕಳು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ಒಂದು ಆಸಕ್ತಿದಾಯಕ ಸ್ಥಳೀಯ ಕ್ರಿಕೆಟ್ ಲೀಗ್ ಅನ್ನೂ ಇವರು ಆಯೋಜನೆಗೊಳಿಸಿದ್ದರು, ಅಲ್ಲಿ ತಂಡವು ಗಳಿಸಿದ ರನ್ಗಳ ಆಧಾರದಲ್ಲಿ ಮಾತ್ರವಲ್ಲದೆ ತಂಡ ತಯಾರಿಸಿದ ಬೀಜ ಚೆಂಡುಗಳ ಸಂಖ್ಯೆಯ ಆಧಾರದಲ್ಲೂ ವಿಜೇತರನ್ನು ನಿರ್ಣಯಿಸಲಾಗಿತ್ತು. ಹಸಿರು ಹೊದಿಕೆಯ ಮಹತ್ವದ ಬಗ್ಗೆ ಶಾಲಾ ಮಕ್ಕಳು ಮತ್ತು ವಯಸ್ಕರನ್ನು ಸಮಾನವಾಗಿ ಸಂಪರ್ಕಿಸಿ ಮಾಹಿತಿ ನೀಡುವ ರೋಹಿತ್ ದೇಶಾದ್ಯಂತ ಭೇಟಿ ನೀಡಿದ್ದಾರೆ.
“ನಾವು ಅಕ್ಷರಶಃ ಟೈಮ್ ಬಾಂಬ್ನಲ್ಲಿ ವಾಸಿಸುತ್ತಿದ್ದೇವೆ, ಇಲ್ಲಿ ನಾವು ಕುಡಿಯುವ ನೀರು, ನಾವು ತಿನ್ನುವ ಆಹಾರ ಮತ್ತು ನಾವು ಉಸಿರಾಡುವ ಗಾಳಿ ಕಲುಷಿತಗೊಳ್ಳುತ್ತಿದೆ. ಪರಿಸರ ವಿಜ್ಞಾನದ ಮಹತ್ವವನ್ನು ಕಲಿಸುವಾಗ ಜನಸಾಮಾನ್ಯರಿಗೆ ಶಿಕ್ಷಣ ಮತ್ತು ಪ್ರೇರಣೆ ನೀಡಲು ನಾನು ಬಯಸುತ್ತೇನೆ. ಮುಂದಿನ ಐದು ವರ್ಷಗಳಲ್ಲಿ, ನಾನು ದೇಶಾದ್ಯಂತ 1,000 ಕಾಡುಗಳನ್ನು ರಚಿಸಲು ಬಯಸುತ್ತೇನೆ ”ಎಂದು ಉತ್ಸಾಹಭರಿತ ಅಧಿಕಾರಿ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.