ಇಂದು ನಾವು ಇ-ಮೇಲ್ಗಳು, ಮೊಬೈಲ್ ಫೋನ್ಗಳು ಮತ್ತು ಫ್ಯಾಕ್ಸ್ಗಳ ಯುಗದಲ್ಲಿ ವಾಸಿಸುತ್ತಿದ್ದೇವೆ. ಆದರೂ ಕೂಡ ಇಂದಿಗೂ ಅಂಚೆ ಭಾರತದ ಪ್ರಮುಖ ಸಂವಹನ ವಿಧಾನಗಳಲ್ಲಿ ಒಂದಾಗಿ ಉಳಿದುಕೊಂಡಿದೆ. ದಶಕಗಳ ಹಿಂದೆ ಸಂದೇಶಗಳನ್ನು, ಪತ್ರ, ಡ್ರಾಫ್ಟ್ಗಳನ್ನು, ಚೆಕ್ ಮತ್ತು ಇತರ ಪ್ರಮುಖ ಮಾಹಿತಿಯನ್ನು ಕಳುಹಿಸಲು ಜನರು ಅಂಚೆಯನ್ನು ಹೆಚ್ಚಾಗಿ ಅವಲಂಬಿಸಿದ್ದರು. ಆದರೀಗ ಅದರ ಬಳಕೆ ಕಡಿಮೆಯಾಗಿದೆ. ಭಾರತದಲ್ಲಿ ಅಂಚೆ ಸೇವೆಯನ್ನು ಪ್ರಾರಂಭಿಸಿದವರು ಬ್ರಿಟಿಷರು. ಹೊಸ ಯುಗದ ತಂತ್ರಜ್ಞಾನಗಳು ಮತ್ತು ಹೊಸ ಸಂವಹನ ವಿಧಾನಗಳ ಆಗಮನದಿಂದಾಗಿ, ಸಾಂಪ್ರದಾಯಿಕ ಸಂದೇಶ ರವಾನೆ ಸೇವೆಗಳ ಬಳಕೆ ಕಡಿಮೆಯಾಗಿದೆ. ಆದರೆ ಇದು ಇನ್ನೂ ಅರೆ ನಗರ ಮತ್ತು ಗ್ರಾಮೀಣ ಭಾರತದಲ್ಲಿ ಸಂವಹನದ ಪ್ರಾಥಮಿಕ ಮೂಲವಾಗಿ ಅಂಚೆ ಅಸ್ತಿತ್ವದಲ್ಲಿದೆ.
ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ ಮತ್ತು ಇದರ 1,55,000 ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಮಗೆ ಅಂಚೆ ಕಛೇರಿ ಕಾಣಸಿಗುತ್ತದೆ. ಇದರಿಂದಾಗಿಯೇ ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿದೆ.
ಭಾರತೀಯ ಅಂಚೆ ಸೇವೆ ಭಾರತದ ಅವಿಭಾಜ್ಯ ಅಂಗವಾಗಿದೆ. ಗಡಿ ಕಾಯುವ ಯೋಧನ ಪತ್ರವನ್ನು ಆತನ ಕುಟುಂಬಿಕರಿಗೆ ತಂದು ತಲುಪಿಸುವುದರಿಂದ ಹಿಡಿದು, ರೈತನೊಬ್ಬ ಪಟ್ಟಣದಲ್ಲಿ ಓದುತ್ತಿರುವ ತನ್ನ ಮಗನಿಗೆ ಮನಿ ಆರ್ಡರ್ ಮಾಡುವವರೆಗೆ ಭಾರತ ಮತ್ತು ಭಾರತೀಯರನ್ನು ಒಂದುಗೂಡಿಸುವಲ್ಲಿ ಅಂಚೆ ಸೇವೆಗಳು ಮಹತ್ವದ ಪಾತ್ರವನ್ನು ನಿಭಾಯಿಸಿವೆ. ಸಂಸ್ಕೃತಿ, ಸಂಪ್ರದಾಯದ ವೈವಿಧ್ಯತೆ ಮತ್ತು ಕ್ಲಿಷ್ಟ ಭೌಗೋಳಿಕ ಭೂಪ್ರದೇಶಗಳನ್ನು ಹೊಂದಿರುವ ಭಾರತದಲ್ಲಿ ಅಂಚೆ ಸೇವೆಗಳನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಆದರೂ, ಭಾರತೀಯ ಅಂಚೆ ಇಲಾಖೆ ಶ್ಲಾಘನೀಯ ಉತ್ಸಾಹ ಮತ್ತು ಪ್ರೇರಣೆಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದೆ. ಇದು ನಮ್ಮನ್ನು ಬೆಸೆಯುವ ಮತ್ತು ಪರಸ್ಪರ ಹತ್ತಿರ ತರುವಲ್ಲಿನ ರಾಷ್ಟ್ರದ ವಿಭಿನ್ನ ಚಿತ್ರಣವನ್ನು ಪ್ರತಿಬಿಂಬಿಸುತ್ತದೆ.
ಪ್ರತಿ ವರ್ಷ ಅಕ್ಟೋಬರ್ 10 ರಂದು ರಾಷ್ಟ್ರೀಯ ಅಂಚೆ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಅಂಚೆ ಇಲಾಖೆ 150 ವರ್ಷಗಳಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿದೆ ಮತ್ತು ಅದು ಕನಿಷ್ಠ ಸಾಧನೆಯೇನಲ್ಲ. ವಿಶ್ವ ಅಂಚೆ ದಿನದ ಭಾಗವಾಗಿಯೇ ಭಾರತದ ರಾಷ್ಟ್ರೀಯ ಅಂಚೆ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ಅನ್ನು 1874 ರಲ್ಲಿ ಬರ್ನೆಯಲ್ಲಿ ಸ್ಥಾಪಿಸಲಾಯಿತು. ಈ ದಿನವನ್ನು ವಿಶ್ವದಾದ್ಯಂತ ದೇಶಗಳು ಆಚರಿಸುತ್ತವೆ. ಈ ದಿನ ಹೊಸ ಅಂಚೆ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸಲಾಗುತ್ತದೆ. ಅಂಚೆ ಕಛೇರಿಗಳು, ಮೇಲ್ ಕೇಂದ್ರಗಳು ಮತ್ತು ಅಂಚೆ ವಸ್ತು ಸಂಗ್ರಹಾಲಯಗಳು, ಸಮ್ಮೇಳನಗಳು, ಸೆಮಿನಾರ್ಗಳು ಮತ್ತು ಕಾರ್ಯಾಗಾರಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ ಮತ್ತು ಇತರ ಮನರಂಜನಾ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಅಂಚೆ ದಿನದಂದು ಆಯೋಜಿಸಲಾಗುತ್ತದೆ.
ಭಾರತೀಯ ಅಂಚೆ ಸೇವೆಯು ವಿವಿಧ ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದೆ. ಇದರಲ್ಲಿ ಪತ್ರ ವ್ಯವಹಾರ, ನೊಂದಾಯಿತ ಪತ್ರವ್ಯವಹಾರ, ಶೀಘ್ರ ಅಂಚೆ, ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ (EMS-SPEED POST) ಇನ್ನಿತರ ಸೇವೆಗಳು ಸೇರಿವೆ. ಇದರ ಜೊತೆಗೆ ಹಣದ ವ್ಯವಹಾರದಲ್ಲಿ ಮನಿ ಆರ್ಡರ್, ಮ್ಯುಚುಯಲ್ ಫಂಡ್, ಹಣ ವರ್ಗಾವಣೆ ಸೇವೆಗಳನ್ನೂ ನೀಡುತ್ತಿದೆ. ವಿಶೇಷ ಉಳಿತಾಯ ಸೇವೆಗಳಾದ ರಾಷ್ಟ್ರೀಯ ಉಳಿತಾಯ ಪತ್ರ (NSC), ಕಿಸಾನ್ ವಿಕಾಸ್ ಪತ್ರ, ಆವರ್ತಿತ ಠೇವಣಿ (RD) ಮತ್ತು ನಿಶ್ಚಿತ ಠೇವಣಿ (FD) ಗಳನ್ನು ಇದು ಒದಗಿಸುತ್ತಿದೆ. ಅಂಚೆ ಕಛೇರಿಗಳು ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತವೆ. ಭಾನುವಾರ ರಜಾದಿನವಾಗಿದ್ದು, ಶನಿವಾರ ಮಧ್ಯಾಹ್ನದವರೆಗೆ ಮಾತ್ರ ತೆರೆದಿರುತ್ತದೆ. ಯಾರಾದರು ಪತ್ರವ್ಯವಹಾರ ಮಾಡಬೇಕಾದಲ್ಲಿ ಅಂಚೆ ಚೀಟಿಯನ್ನು ಅಂಟಿಸುವುದು ಕಡ್ಡಾಯ ನಿಯಮವಾಗಿದೆ. ಅಂತಾರಾಪ್ಟ್ರೀಯ ಪಾರ್ಸೆಲ್ ಇಪ್ಪತ್ತು ಕೆ.ಜಿ.ಯನ್ನು ಮೀರಿರಬಾರದು ಎಂಬ ನಿಯಮವಿದೆ. ಬುಕ್ ಪೋಸ್ಟ್ ಸೇವೆ ಅತಿ ಕಡಿಮೆ ದರದ ಸೇವೆಯಾಗಿದೆ. ಇದರಲ್ಲಿ ಪುಸ್ತಕಗಳು, ಕಡತಗಳು, ಮುದ್ರಣ ಪತ್ರಗಳು ಐದು ಕೆ.ಜಿ. ಮೀರಿರಬಾರದು ಎಂಬ ನಿಯಮವಿದೆ. ಪ್ರಸ್ತುತ ಭಾರತೀಯ ಅಂಚೆ ಇಲಾಖೆಯಲ್ಲಿ 520,191 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
ಪ್ರಸ್ತುತ ಭಾರತೀಯ ಅಂಚೆ ಇಲಾಖೆಯಡಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅನ್ನು ಆರಂಭಿಸಲಾಗಿದ್ದು, ಇದು ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡುತ್ತಿದೆ. ಇದರಡಿ ನೀಡಲಾಗುವ ಎಲ್ಲಾ ಬ್ಯಾಂಕಿಂಗ್ ಸೇವೆಗಳು ಪೋಸ್ಟ್ಮನ್ ಮೂಲಕ ಜನರ ಮನೆಬಾಗಿಲಿಗೆ ಬರುತ್ತಿವೆ. ಇದು ರೈತರಿಗೆ ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಡಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ವಿಸ್ತರಣೆಯೂ ನಡೆಯುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಇದು ಒದಗಿಸುತ್ತಿದೆ. ಮೊಬೈಲ್ ಆ್ಯಪ್ ಮೂಲಕ ಅಥವಾ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ಯಾವುದೇ ಖಾತೆಗೆ ಹಣ ವರ್ಗಾಯಿಸಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಡಿ ಅವಕಾಶ ಇದೆ.
ಏರ್ಟೆಲ್ ಮತ್ತು ಪೇಟಿಎಂ ಬಳಿಕ ಪಾವತಿ ಬ್ಯಾಂಕ್ ಸೇವೆಗೆ ಅನುಮತಿ ಪಡೆದುಕೊಂಡ ಮೂರನೇ ಸಂಸ್ಥೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಆಗಿದೆ. ಪೇಮೆಂಟ್ ಬ್ಯಾಂಕ್ಗಳು ವ್ಯಕ್ತಿಗಳ ಮತ್ತು ಸಣ್ಣ ವ್ಯವಹಾರಸ್ಥರ ಪ್ರತಿ ಖಾತೆಗೆ 1 ಲಕ್ಷ ರೂ ವರೆಗೆ ಠೇವಣಿಯನ್ನು ಸ್ವೀಕರಿಸುತ್ತವೆ. ಆರ್ಟಿಜಿಎಸ್, ಎನ್ಇಎಫ್ಟಿ, ಐಎಂಪಿಎಸ್ ಮೂಲಕ ಹಣ ವರ್ಗಾವಣೆಗೆ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಪರವಾನಗಿ ಪಡೆದುಕೊಂಡಿದೆ.
ಹಿಂದಿನ ಶತಮಾನಕ್ಕೆ ಹೋಲಿಸಿದರೆ ಈಗ ಭಾರತೀಯ ಅಂಚೆಯ ಸ್ವರೂಪ, ಕಾರ್ಯವಿಧಾನ ಬದಲಾಗಿದೆ. ಆದರೆ ಭಾರತವನ್ನು ಬೆಸಯುವ ಕಾರ್ಯವನ್ನು ಇಂದಿಗೂ ಅದು ಉತ್ಕೃಷ್ಟವಾದ ರೀತಿಯಲ್ಲೇ ಮಾಡುತ್ತಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬ ಭಾರತೀಯನಿಗೂ ಅಂಚೆಯೊಂದಿಗೆ ಅವಿನಾಭಾವ ಸಂಬಂಧವಿದೆ. ಆ ಸಂಬಂಧವೇ ಭಾರತೀಯ ಅಂಚೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.