ನಮ್ಮ ದೇಶದಲ್ಲಿ ಎರಡು ಹೊತ್ತಿನ ಊಟಕ್ಕೆ ಪರದಾಡುವವರು ಅನೇಕ ಮಂದಿ ಇದ್ದಾರೆ. ವೆಲ್ಟ್ತುಂಗರ್ಹಿಲ್ಫ್ ಮತ್ತು ಕನ್ಸರ್ನ್ ವರ್ಲ್ಡ್ವೈಡ್ ಸಿದ್ಧಪಡಿಸಿದ ಜಾಗತಿಕ ಹಸಿವಿನ ಸೂಚ್ಯಂಕ (ಜಿಹೆಚ್ಐ) ಭಾರತವನ್ನು 103 ನೇ ಸ್ಥಾನದಲ್ಲಿ ಇರಿಸಿದೆ. ಆದರೆ ಇಂತಹ ಸನ್ನಿವೇಶಗಳಲ್ಲಿಯೂ, ಆಹಾರದ ಕೊರತೆ, ಹಸಿವು ಮತ್ತು ಹಸಿವಿನ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿರುವ ಹಲವು ತೆರೆಮರೆ ಹೀರೋಗಳು ನಮ್ಮಲ್ಲಿದ್ದಾರೆ.
ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಹರಿ ಸಿಂಗ್, ತನ್ನ ಊರು ಜಾರ್ಖಂಡ್ನ ಜಮ್ಶೆಡ್ಪುರದಲ್ಲಿ ಹಸಿವನ್ನು ಹೋಗಲಾಡಿಸುವ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಯಾರೂ ಹಸಿವಿನಿಂದ ಮಲಗಬಾರದು ಎಂಬ ಧ್ಯೇಯದೊಂದಿಗೆ ಮಾನವೀಯತೆಗೆ ಸೇವೆ ಸಲ್ಲಿಸುತ್ತಿರುವ ಈ ಯುವಕ ‘ವಾಯ್ಸಸ್ ಆಫ್ ಹ್ಯುಮ್ಯಾನಿಟಿ’ ಸ್ಥಾಪನೆ ಮಾಡಿದ್ದಾರೆ.
‘ವಾಯ್ಸಸ್ ಆಫ್ ಹ್ಯುಮ್ಯಾನಿಟಿ’ಯನ್ನು 2015ರಲ್ಲಿ ಹರಿ ಅವರು ಸ್ಥಾಪನೆ ಮಾಡಿದ್ದು, ಈ ಲಾಭ ರಹಿತ ಸಂಸ್ಥೆಯು ಇಂದು ವಿವಿಧ ಹಿನ್ನಲೆಯ ನೂರಾರು ಮಂದಿಗೆ ಅಗತ್ಯ ನೆರವನ್ನು ನೀಡುತ್ತಿದೆ. ಅವರ ಹಸಿವನ್ನು ತಣಿಸುತ್ತಿದೆ. ಪ್ರಸ್ತುತ ಈ ಸಂಸ್ಥೆ 250ಕ್ಕೂ ಹೆಚ್ಚು ಸದಸ್ಯರ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಬಡವರಿಗೆ ಮತ್ತು ದೀನದಲಿತರಿಗೆ ಸಹಾಯ ಮಾಡಲು ಹಲವಾರು ಅಭಿಯಾನಗಳನ್ನು ನಡೆಸುತ್ತಿದೆ.
ಪಾರ್ಟಿ, ಕ್ಲಬ್, ಮದುವೆ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಸಂಗ್ರಹಿಸುವುದು ಮತ್ತು ವಸತಿ ರಹಿತರಿಗೆ ಮತ್ತು ರಾತ್ರಿಯಲ್ಲಿ ಹಸಿದು ಮಲಗುವವರಿಗೆ ಅದನ್ನು ಒದಗಿಸುವುದು ಮುಂತಾದ ಕಾರ್ಯವನ್ನು ಹರಿ ಅವರ ಸಂಸ್ಥೆ ಮಾಡುತ್ತಿದೆ. ಸಮರ್ಪಣಾ ಭಾವದಿಂದ ಕೆಲಸ ಮಾಡುವುದು ಅವರ ತಂಡದ ದೊಡ್ಡತನವಾಗಿದೆ. ಸಮಾಜಕ್ಕೆ ಮಾಡಿದ ನಿಜವಾದ ಸೇವೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗಳನ್ನು ಪಡೆದಿದ್ದಾರೆ. ಹರಿ ಸಿಂಗ್ ಅವರನ್ನು ಗೌತಮ್ ಗಂಭೀರ್ ಅವರ ಟಾಕ್ ಶೋನಲ್ಲಿ ಇತ್ತೀಚೆಗೆ ಸಂದರ್ಶನ ಮಾಡಲಾಗಿದೆ ಮತ್ತು ಅವರ ಕಾರ್ಯಗಳಿಗೆ ಸನ್ಮಾನಿಸಲಾಗಿದೆ.
”ಡಸ್ಟ್ಬಿನ್ಗಳಲ್ಲಿ ಎಸೆಯಲ್ಪಟ್ಟ ಆಹಾರವನ್ನು ಬಡವರು ತಿನ್ನುವುದನ್ನು ನೋಡಿ ನನಗೆ ತೀವ್ರ ನೋವಾಗುತ್ತಿತ್ತು. ಪ್ರತಿದಿನ, ಒಂದು ಕಡೆ ವಿವಿಧ ಸಮಾರಂಭಗಳಲ್ಲಿ ಬಹಳಷ್ಟು ಆಹಾರ ವ್ಯರ್ಥವಾಗುತ್ತಿವೆ, ಇನ್ನೊಂದ ಕಡೆ ಬೀದಿಗಳಲ್ಲಿ ಮಲಗಿರುವ ಜನರು ದಿನಕ್ಕೆ ಒಂದು ಹೊತ್ತಿನ ಊಟವನ್ನು ಮಾಡಲು ಕೂಡ ಪರದಾಡುತ್ತಿರುತ್ತಾರೆ. ಈ ಅಸಮಾನತೆಯ ಬಗ್ಗೆ ತೀವ್ರ ಸ್ವರೂಪದಲ್ಲಿ ಯೋಚನೆ ಮಾಡಿದ ನನಗೆ ಅಂತಹ ಜನರಿಗೆ ಸಹಾಯ ಮಾಡಲು ಸಂಘಟನೆಯೊಂದನ್ನು ಆರಂಭಿಸುವ ಉಪಾಯ ಹೊಳೆಯಿತು. ಅದರಂತೆ ‘ವಾಯ್ಸಸ್ ಆಫ್ ಹ್ಯುಮಾನಿಟಿ’ಯನ್ನು ಸ್ಥಾಪನ ಮಾಡಿದೆ. ಅದರ ಮೂಲಕ ನಿರ್ಗತಿಕ ಜನರಿಗೆ ಸೇವೆ ಸಲ್ಲಿಸುವ ಕಾರ್ಯ ಆರಂಭಿಸಿದೆ. ಮಾನವೀಯತೆಯ ಮೇಲೆ ಕಳೆದುಹೋದ ನಂಬಿಕೆಯನ್ನು ಪುನರುಜ್ಜೀವನಗೊಳಿಸಲು ಮತ್ತು ದೊಡ್ಡ ಗುರಿಯತ್ತ ಕೆಲಸ ಮಾಡಲು ಜನರನ್ನು ಒಟ್ಟುಗೂಡಿಸಲು ನನಗೆ ಇದರಿಂದ ಸಾಧ್ಯವಾಗುತ್ತಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹರಿ ಸಿಂಗ್ ಹೇಳುತ್ತಾರೆ.
ಮಿಷನ್ ಅನ್ನಪೂರ್ಣ ಎಂಬ ಅಭಿಯಾನವನ್ನು ಇವರು ಆರಂಭಿಸಿದ್ದಾರೆ. ಇದರ ಮೂಲಕ ಅವರು ಸಾವಿರಾರು ನಿರ್ಗತಿಕರಿಗೆ ಅಥವಾ ಮನೆಯಿಲ್ಲದವರಿಗೆ ಬೀದಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಾಯ್ಸಸ್ ಆಫ್ ಹ್ಯುಮಾನಿಟಿ ಅನ್ನಪೂರ್ಣ ಮಿಷನ್ ಮೂಲಕ ವಿವಿಧ ಸಮಾರಂಭಗಳಲ್ಲಿ ಮಿಕ್ಕ ಆಹಾರವನ್ನು ಸಂಗ್ರಹಿಸಿ ಅದನ್ನು ಹಸಿದವರಿಗೆ ಒದಗಿಸುವಲ್ಲಿ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ಆಹಾರ ಉಳಿದಿದೆ ಎಂದು ಕರೆ ಬಂದರೆ ತಕ್ಷಣ ವಾಯ್ಸಸ್ ಆಫ್ ಹ್ಯುಮಾನಿಟಿ ಅರ್ಧ ಗಂಟೆಯಲ್ಲಿ ಆ ಸ್ಥಳವನ್ನು ತಲುಪುತ್ತದೆ. ಆಹಾರವನ್ನು ಸಂಗ್ರಹ ಮಾಡುತ್ತದೆ ಮತ್ತು ಅದನ್ನು ಮಧ್ಯರಾತ್ರಿ 1 ಗಂಟೆಯವರೆಗೂ ವಿತರಿಸುತ್ತದೆ. ಸಾಮಾಜಿಕ ಮಾಧ್ಯಮವು ಅವರ ಕಾರ್ಯಾಚರಣೆಯ ಕೆಲಸವನ್ನು ಸುಲಭಗೊಳಿಸುತ್ತಿದೆ ಮತ್ತು ಅನೇಕ ಸಮಾನ ಮನಸ್ಕ ಜನರೊಂದಿಗೆ ಸಂಪರ್ಕ ಸಾಧಿಸಲು ಇದು ಸಹಾಯ ಮಾಡುತ್ತಿದೆ.
ಆಹಾರವು ಹಸಿದವರಿಗೆ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ತಲುಪುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಡಿಸೆಂಬರ್ ತಿಂಗಳ ಕೊರೆಯು ಚಳಿಯ ನಡುವೆಯೂ ಇವರ ತಂಡ ಕಾರ್ಯನಿರ್ವಹಿಸುತ್ತದೆ ಮತ್ತು ಹಸಿದವರಿಗೆ ಆಹಾರವನ್ನು ವಿತರಿಸುತ್ತದೆ.
ಅನ್ನಪೂರ್ಣ ಅಭಿಯಾನ ಮಾತ್ರವಲ್ಲದೇ, ಹರಿ ಸಿಂಗ್ ಅವರ ತಂಡವು ಮಿಶನ್ ಸಾಕ್ಷರ್ ಅಭಿಯಾನವನ್ನೂ ಹಮ್ಮಿಕೊಂಡಿದೆ. ಇದರಡಿಯಲ್ಲಿ ಅದು ಬಡ ಮಕ್ಕಳಿಗೆ ವಿದ್ಯೆಯನ್ನು ಕಲಿಸಿಕೊಡುತ್ತಿದೆ.
“ನಮ್ಮ ತಂಡವು ದೇವ್ನಗರ ಬಸ್ತಿಯಲ್ಲಿ ಕುಷ್ಠರೋಗದಿಂದ ಬಳಲುತ್ತಿರುವ ಸುಮಾರು 90 ಮಕ್ಕಳಿಗೆ ಕಲಿಸುತ್ತದೆ. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅದರಲ್ಲೂ ಇಂತಹ ಕಾಯಿಲೆಯ ಹಿನ್ನೆಲೆಯಿಂದ ಬಂದ ಮಕ್ಕಳು ಹೆಚ್ಚು ಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕಠೋರ ಸಂದರ್ಭಗಳಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಲು ಅವರನ್ನು ಪ್ರೇರೇಪಿಸಬೇಕಾಗುತ್ತದೆ ”ಎಂದು ಹರಿ ಹೇಳುತ್ತಾರೆ.
“ವಾಲ್ ಆಫ್ ಹ್ಯುಮ್ಯಾನಿಟಿ” ಎಂಬ ಇವರ ವಿಷಯ ಎಲ್ಲರಿಗೂ ಮೆಚ್ಚುಗೆಯಾಗಿದೆ. ಇದಕ್ಕೆ ಅತ್ಯದ್ಭುತವಾದ ಸ್ಪಂದನೆಯೂ ಸಿಗುತ್ತಿದೆ. ಬಟ್ಟೆಗಳನ್ನು ಇತರರಿಂದ ದಾನವಾಗಿ ಪಡೆದುಕೊಂಡು ಈ ತಂಡ ಅದನ್ನು ಸಮೀಪದ ಶಾಲೆಯ ಬಡ ಮಕ್ಕಳಿಗೆ ಹಂಚುತ್ತದೆ.
ಈ ತಂಡ ನಡೆಸುತ್ತಿರುವ ಮತ್ತೊಂದು ಮಹತ್ವದ ಅಭಿಯಾನವೆಂದರೆ ‘ಮಿಶನ್ ಜೀವನರಕ್ಷಕ್ ಅಭಿಯಾನ್”. ರಕ್ತದ ಅವಶ್ಯಕತೆಯುಳ್ಳ ಬಡವರಿಗೆ ರಕ್ತವನ್ನು ನೀಡುವುದು ಈ ಅಭಿಯಾನದ ಗುರಿ. ಈಗಾಗಲೇ 1200 ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ರಕ್ತವನ್ನು ಈ ತಂಡ ನೀಡಿದೆ. ರಕ್ತದ ಕೊರತೆಯಿಂದ ಬಡವರು ಸಾಯಬಾರದು ಎಂಬುದು ಇದರ ಉದ್ದೇಶ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಇವರು ಬಳಸುತ್ತಿದ್ದಾರೆ. ಅದರ ಮೂಲಕ ರಕ್ತದಾನಿಗಳನ್ನು ಕನೆಕ್ಟ್ ಆಗುತ್ತಿದ್ದಾರೆ.
ಇಷ್ಟೆಲ್ಲಾ ಸಮಾಜ ಸೇವೆ ಮಾಡುವ ಹರಿ ಸಿಂಗ್ ಮತ್ತು ಅವರ ತಂಡಕ್ಕೆ ಉದ್ಯೋಗ ಮತ್ತು ಸೇವೆಯ ನಡುವೆ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವುದೇ ದೊಡ್ಡ ಸವಾಲು. ಆದರೂ ಅವರು ಸಮಾಜಕ್ಕೆ, ಯುವಕರಿಗೆ ಮಾದರಿಯಾಗುವಂತಹ ಕಾರ್ಯವನ್ನು ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.