ತನ್ನ ಗ್ರಾಮೀಣ ಅಭಿವೃದ್ಧಿ, ಸಾವಯವ ಕೃಷಿ, ಗೋ-ಸಂರಕ್ಷಣೆ ಮತ್ತು ರಕ್ಷಣೆ, ಸಾಮಾಜಿಕ ಸಮಾನತೆ ಮತ್ತು ಸೌಹಾರ್ದತೆ, ಮಾತೃಭಾಷೆಯಲ್ಲಿ ಶಿಕ್ಷಣ, ಸ್ವದೇಶಿ ಆರ್ಥಿಕತೆ ಮತ್ತು ಜೀವನ ಪದ್ಧತಿ ಮುಂತಾದ ಅನೇಕ ಕಾರ್ಯಗಳ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘವು ಗಾಂಧೀಜಿಯವರ ಆದರ್ಶಗಳನ್ನು ಜೀವಂತವಾಗಿರಿಸಿಕೊಂಡು ಬಂದಿದೆ.
ಈ ಬಾರಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲವು ಪಕ್ಷಗಳ ರಾಜಕೀಯ ನಾಯಕರುಗಳು, ಈ ಚುನಾವಣೆ ಗಾಂಧಿ ಮತ್ತು ಗೋಡ್ಸೆಯ ನಡುವಿನ ಆಯ್ಕೆಯಾಗಲಿದೆ ಎಂದು ಹೇಳಿಕೊಂಡಿದ್ದರು. ಗಾಂಧೀಜಿಯವರ ಸಿದ್ಧಾಂತವನ್ನು ಅನುಸರಿಸುವವರು ಅವರ ತತ್ವಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ ಮತ್ತು ಗೋಡ್ಸೆಯ ಹೆಸರನ್ನೂ ಅವರು ತೆಗೆಯುವುದಿಲ್ಲ. ಸಂಘದ ಗಾಂಧೀಜಿ ಬಗೆಗಿನ ಹಲವು ಚರ್ಚೆಗಳಲ್ಲಿ ನಾನು ಭಾಗಿಯಾಗಿದ್ದೇನೆ ಮತ್ತು ಅಲ್ಲಿ ಗೋಡ್ಸೆಯ ಉಲ್ಲೇಖವಾದುದನ್ನು ನಾನು ನೋಡಿಯೇ ಇಲ್ಲ. ದುರಾದೃಷ್ಟವೆಂದರೆ, ಗಾಂಧೀಜಿಯವರ ಜೀವನ ಮತ್ತು ಪರಂಪರೆಗೆ ವಿರುದ್ಧವಾದ ಕಾರ್ಯ ಮತ್ತು ನೀತಿಗಳನ್ನು ಹೊಂದಿರುವವರು, ರಾಜಕೀಯ ಅಸ್ತ್ರವಾಗಿ ಸುಳ್ಳು ಮತ್ತು ಹಿಂಸೆಯನ್ನು ಬಳಸುವವರು ಯಕಶ್ಚಿತ್ ರಾಜಕೀಯ ಲಾಭಕ್ಕಾಗಿ ಮಹಾತ್ಮನ ಹೆಸರನ್ನು ಪದೇ ಪದೇ ಅಪ್ರಮಾಣಿಕವಾಗಿ ಉಲ್ಲೇಖಿಸುತ್ತಾರೆ.
ಸಂಘದ ಹಲವು ಆಯಾಮಗಳಂತೆ, ಆರ್ ಎಸ್ ಎಸ್ ಮತ್ತು ಗಾಂಧೀಜಿ ನಡುವಣ ಸಂಬಂಧದ ಬಗ್ಗೆಯೂ ಜನರು ಕೆಲವೊಮ್ಮೆ ಸತ್ಯದ ಪರಿಶೋಧನೆ ಮಾಡದೆ ತಪ್ಪು ಊಹೆಗಳನ್ನು ಮಾಡುತ್ತಾರೆ. ಘನ ಪಂಡಿತರು ಎನಿಸಿಕೊಂಡವರು ಕೂಡ ತಮ್ಮ ಅಭಿಪ್ರಾಯಗಳನ್ನು ಬರೆಯುವಾಗ ಈ ವಿಷಯದ ಬಗ್ಗೆ ಸತ್ಯ ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಅವರ ಬರವಣಿಗೆಗಳು ನಿರ್ದಿಷ್ಟ ಸಿದ್ದಾಂತದ ದೃಷ್ಟಿಕೋನದಿಂದ ಪ್ರಭಾವಿತವಾಗಿರುತ್ತವೆ. ವಾಸ್ತವವೆಂದರೆ, ಅವರ ಚಿಂತನೆಗಳಿಗೆ ಸತ್ಯದೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ.
ತಪ್ಪನ್ನು ತಿದ್ದುವ ಸಲುವಾಗಿ, ಮಹಾತ್ಮ ಗಾಂಧಿಯ ಸಂಘದೊಂದಿಗಿನ ಸಂಬಂಧದ ಬಗ್ಗೆ ಲಭ್ಯವಿರುವ ಮಾಹಿತಿಗಳ ಬಗ್ಗೆ ಜಾಗರೂಕತೆಯಿಂದ ಮರು ಪರಿಶೀಲನೆ ನಡೆಸಬೇಕಾದ ಅನಿವಾರ್ಯತೆ ಇದೆ. ಗಾಂಧೀಜಿಯ ಕೆಲವೊಂದು ವಾದಗಳನ್ನು ಆರ್ ಎಸ್ ಎಸ್ ಒಪ್ಪುವುದಿಲ್ಲ, ಜಿಹಾದಿ ಶಕ್ತಿಗಳಿಗೆ ಅವರು ಶರಣಾಗಿದ್ದನ್ನು ಅದು ಬಲವಾಗಿ ಖಂಡಿಸುತ್ತದೆ. ಆದರೆ ಚರಕ, ಸತ್ಯಾಗ್ರಹ ಮುಂತಾದ ಸರಳ ಮಾರ್ಗಗಳ ಮೂಲಕ ಅವರು ಸ್ವಾತಂತ್ರ್ಯ ಚಳುವಳಿಗೆ ಸಾರ್ವಜನಿಕರ ಬೆಂಬಲವನ್ನು ಒಟ್ಟುಗೂಡಿಸಿ ಪ್ರಯತ್ನವನ್ನು ಆರ್ ಎಸ್ ಎಸ್ ಸದಾ ಬೆಂಬಲಿಸಿದೆ, ಶ್ಲಾಘಿಸಿದೆ. ಅವರ ಶ್ರೇಷ್ಠತೆಯನ್ನು ಪರಿಗಣಿಸಿದೆ.
ಗ್ರಾಮ ಸ್ವರಾಜ್ಯ, ಸ್ವದೇಶಿ, ಗೋ-ಸಂರಕ್ಷಣೆ ಮತ್ತು ಅಸ್ಪೃಶ್ಯತೆಯ ನಿವಾರಣೆಯಂತಹ ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆ ಗಾಂಧೀಜಿಯವರ ಆಗ್ರಹಗಳನ್ನು ಅರ್ಥ ಮಾಡಿಕೊಂಡರೆ, ಸನಾತನ ಹಿಂದೂ ಚಿಂತನೆಯ ಬಗೆಗಿನ ಅವರ ಒಲವು ಮತ್ತು ದೃಢತೆಯನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಅವರ ಮೌಲ್ಯಾಧರಿತ ಜೀವನವು ದೇಶಕ್ಕಾಗಿ ಬದುಕನ್ನು ಸಮರ್ಪಿಸುವಂತೆ ಇಂದಿನ ಯುವ ಜನತೆಗೆ ಪ್ರೇರಣೆಯನ್ನು ನೀಡುತ್ತದೆ.
ಆರ್ಎಸ್ಎಸ್ನ ಸಂಸ್ಥಾಪಕ ಡಾ.ಹೆಡ್ಗೆವಾರ್ ಅವರು 1921 ರ ಅಸಹಕಾರ ಚಳವಳಿ ಮತ್ತು 1930ರ ನಾಗರಿಕ ಅಸಮ್ಮತಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇದಕ್ಕಾಗಿ ಅವರು ಆಗಸ್ಟ್ 19 ರಿಂದ ಜುಲೈ 12 ರವರೆಗೆ ಮತ್ತು ನಂತರ 1930ರ ಜುಲೈ 21 ರಿಂದ 1931ರ ಫೆ.14ರವರೆಗೆ ಕಠಿಣ ಜೈಲು ಶಿಕ್ಷೆಯನ್ನು ಅನುಭವಿಸಿದರು.
1922ರ ಮಾರ್ಚ್ 18ರಂದು ಮಹಾತ್ಮ ಗಾಂಧಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗ, ಪ್ರತಿ ತಿಂಗಳ 18ನೇ ತಾರೀಕನ್ನು ಗಾಂಧಿ ದಿನವೆಂದು ಆಚರಿಸಲಾಯಿತು. ಗಾಂಧೀಜಿ ಜೈಲಿನಲ್ಲಿದ್ದಾಗ, ಅವರ ಕೆಲವು ಸ್ವಯಂ-ಅನುಯಾಯಿಗಳು ದೇಶಭಕ್ತಿಯ ಹೆಸರಿನಲ್ಲಿ ತಮ್ಮ ಸ್ವಂತ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳುತ್ತಿದ್ದರು. ಅಕ್ಟೋಬರ್ 1922 ರಲ್ಲಿ ಗಾಂಧಿ ದಿನದಂದು ಮಾಡಿದ ಭಾಷಣದಲ್ಲಿ ಡಾಕ್ಟರ್ ಜಿ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ, ‘ಇಂದು ಬಹಳ ಶುಭ ದಿನ. ಮಹಾತ್ಮ ಜೀ ಅವರಂತಹ ಉದಾತ್ತ ಆತ್ಮದ ಜೀವನದ ಮೌಲ್ಯಗಳು ಮತ್ತು ಗುಣಗಳನ್ನು ಆಲಿಸಲು ಮತ್ತು ಅಳವಡಿಸಲು ಇದು ಸಕಾಲ. ಅವರ ಅನುಯಾಯಿಗಳು ಎಂದು ಕರೆಸಿಕೊಳ್ಳಲು ಹೆಮ್ಮೆಪಡುವವರಿಗೆ ಈ ಗುಣಗಳನ್ನು ಅನುಸರಿಸುವಲ್ಲಿ ಹೆಚ್ಚು ಜವಾಬ್ದಾರಿ ಇರುತ್ತದೆ” ಎಂದಿದ್ದರು.
1934 ರಲ್ಲಿ, ಗಾಂಧಿ ಜಿ ಜಮ್ನಾಲಾಲ್ ಬಜಾಜ್ ಅವರ ನಿವಾಸದಲ್ಲಿ ವಾಸವಾಗಿದ್ದಾಗ, ಅಲ್ಲಿಯೇ ಹತ್ತಿರದಲ್ಲಿಯೇ ನಡೆಯುತ್ತಿದ್ದ ಆರ್ಎಸ್ಎಸ್ನ ಚಳಿಗಾಲದ ಶಿಬಿರದಲ್ಲಿ ಪಾಲ್ಗೊಂಡಿದ್ದರು ಮತ್ತು ಸ್ವಯಂಸೇವಕರೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಶಿಬಿರದಲ್ಲಿ ಪರಿಶಿಷ್ಟ ಜಾತಿಯ ಸ್ವಯಂಸೇವಕರು ಇರುವುದನ್ನು ಮತ್ತು ಅವರೆಲ್ಲರೂ ಸಹೋದರರಂತೆ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂಬುದನ್ನು ತಿಳಿದು ಗಾಂಧೀಜಿ ಸಂತೋಷಪಟ್ಟಿದ್ದರು. ಸ್ವಾತಂತ್ರ್ಯದ ನಂತರ ಗಾಂಧೀಜಿ ಅವರು ಭಂಗಿ ಕಾಲೋನಿ (ಸ್ವೀಪರ್ಸ್ ಕಾಲೋನಿ)ಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ, ಬೆಳಿಗ್ಗೆ ಶಾಖಾ ಅವರ ನಿವಾಸದ ಮುಂದೆ ನಡೆಸಲಾಗುತ್ತಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ, ಗಾಂಧೀಜಿ ಅವರ ಇಚ್ಛೆಯಂತೆ, ಮಂಡಲ್ ಮಟ್ಟಕ್ಕಿಂತ ಮೇಲಿನ 500 ಕ್ಕೂ ಹೆಚ್ಚು ಸ್ವಯಂಸೇವಕರು ಒಟ್ಟುಗೂಡಿದ್ದರು ಮತ್ತು ಗಾಂಧೀಜಿ ಅವರನ್ನು ಉದ್ದೇಶಿಸಿ ಮಾತನಾಡಿದ್ದರು.
ಅಲ್ಲಿ ಅವರು ಈ ಮಾತುಗಳೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದರು, “ನಾನು ವರ್ಷಗಳ ಹಿಂದೆ ವಾರ್ಧಾದಲ್ಲಿ ಆರ್ಎಸ್ಎಸ್ ಶಿಬಿರಕ್ಕೆ ಭೇಟಿ ನೀಡಿದ್ದೆ. ಆ ಸಮಯದಲ್ಲಿ ಸಂಸ್ಥಾಪಕ ಶ್ರೀ ಹೆಡ್ಗೆವಾರ್ ಬದುಕಿದ್ದರು. ದಿವಂಗತ ಶ್ರೀ ಜಮ್ನಾಲಾಲ್ ಬಜಾಜ್ ಜಿ ನನ್ನನ್ನು ಶಿಬಿರಕ್ಕೆ ಕರೆದೊಯ್ದಿದ್ದರು. ಶಿಬಿರದಲ್ಲಿ ಕಠಿಣ ಶಿಸ್ತು, ಸರಳತೆ ಇದ್ದುದನ್ನು ಮತ್ತು ಅಸ್ಪೃಶ್ಯತೆ ಇಲ್ಲದೇ ಇದ್ದುದನ್ನು ನೋಡಿ ನಾನು ಪ್ರಭಾವಿತನಾಗಿದ್ದೆ. ಅಂದಿನಿಂದ ಸಂಘ ಸಾಕಷ್ಟು ಬೆಳೆದಿದೆ. ಸೇವೆ ಮತ್ತು ತ್ಯಾಗದ ಆದರ್ಶದಿಂದ ಪ್ರೇರಿತವಾದ ಯಾವುದೇ ಸಂಸ್ಥೆ ಸ್ವ ಬಲದಿಂದ ಬೆಳೆಯುತ್ತದೆ ಎಂದು ನಾನು ಯಾವಾಗಲೂ ನಂಬುತ್ತೇನೆ.” (‘ಮಹಾತ್ಮ ಗಾಂಧಿಯವರ ಸಂಗ್ರಹಿಸಿದ ಕೃತಿಗಳು’, ಸಂಪುಟ 89, ಪುಟ 193-194 ರಲ್ಲಿ ಪ್ರಕಟಿಸಲಾಗಿದೆ)
1948ರ ಜನವರಿ 30 ರಂದು, ಆರ್ ಎಸ್ ಎಸ್ ಸರಸಂಘಚಾಲಕ ಶ್ರೀ ಗುರೂಜೀ ಅವರಿಗೆ ಗಾಂಧೀಜಿ ಅವರ ಹತ್ಯೆಯ ಸುದ್ದಿ ಬಂದಾಗ, ಅವರು ಶ್ರೀ ದೇವದಾಸ್ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು ಮತ್ತು ಶ್ರೀ ವಲ್ಲಭಭಾಯಿ ಪಟೇಲ್ ಅವರಿಗೆ ಸಂತಾಪ ಸೂಚಿಸಿ ಟೆಲಿಗ್ರಾಮ್ ಕಳುಹಿಸಿದ್ದರು.
ಇದರಲ್ಲಿ ಗುರೂಜೀ ಅವರು, “ಅಮಾನವೀಯ ಕ್ರೂರ ದಾಳಿಯಲ್ಲಿ ಶ್ರೇಷ್ಠ ವ್ಯಕ್ತಿತ್ವದ ದುರಂತ ನಷ್ಟವನ್ನು ಕೇಳಿ ನನಗೆ ಆಘಾತವಾಗಿದೆ. ಈ ನಿರ್ಣಾಯಕ ಕಾಲದಲ್ಲಿ ದೇಶಕ್ಕಾದ ನಷ್ಟಕ್ಕೆ ಮಿತಿಯಿಲ್ಲ. ಅಸಾಧಾರಣ ವ್ಯಕ್ತಿತ್ವದ ನಷ್ಟದಿಂದಾದ ನೋವನ್ನು ನಿವಾರಿಸಲು ದೇವರು ಶಕ್ತಿಯನ್ನು ನೀಡಲಿ ” ಎಂದಿದ್ದರು.
ಮಹಾತ್ಮ ಗಾಂಧಿಯವರ ಸ್ಮರಣಾರ್ಥ 13 ದಿನಗಳವರೆಗೆ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಶ್ರೀ ಗುರುಜಿ ಆರ್ಎಸ್ಎಸ್ನ ಎಲ್ಲಾ ಸ್ವಯಂಸೇವಕರಿಗೆ ಸೂಚನೆ ನೀಡಿದ್ದರು ಮತ್ತು ತಕ್ಷಣ ತಮ್ಮ ಪ್ರಯಾಣವನ್ನು ಮುಗಿಸಿ ನಾಗ್ಪುರಕ್ಕೆ ಮರಳಿದ್ದರು. ಜನವರಿ 31 ರಂದು ಅವರು ಪ್ರಧಾನಿ ಮತ್ತು ಗೃಹ ಸಚಿವರಿಗೆ ಪತ್ರವೊಂದನ್ನು ಬರೆದರು, “ನಿನ್ನೆ ಮದ್ರಾಸ್ನಲ್ಲಿ ನಾನು ಕೆಲವು ವಿಕೃತ ಆತ್ಮಗಳು ಪೂಜ್ಯ ಮಹಾತ್ಮಜಿಯವರನ್ನು ಭೀಕರವಾಗಿ ಗುಂಡಿನ ದಾಳಿಯನ್ನು ನಡೆಸಿ ಅಂತ್ಯಗೊಳಿಸಿದ ಘೋರ ಕೃತ್ಯ ಎಸಗಿದೆ ಎಂಬ ಆಘಾತಕಾರಿ ಸುದ್ದಿಯನ್ನು ಕೇಳಿದೆ. ಈ ನೀಚ ಕೃತ್ಯವು ಪ್ರಪಂಚದ ದೃಷ್ಟಿಯಲ್ಲಿ ನಮ್ಮ ಸಮಾಜಕ್ಕೆ ಕಳಂಕವಾಗಿದೆ” ಎಂದಿದ್ದರು. ಈ ಸಂಪೂರ್ಣ ಪತ್ರವ್ಯವಹಾರದ ಮಾಹಿತಿಯು ‘Justice on Trial and Complete Works of Sri Guruji’ ಪುಸ್ತಕದಲ್ಲಿ ಲಭ್ಯವಿದೆ.
ಮಹಾತ್ಮ ಗಾಂಧಿಯವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ, ಗಾಂಧೀಜಿ ಅವರ ಪ್ರತಿಮೆಯನ್ನು ಶ್ರೀ ಗುರೂಜಿ ಅವರು ಸಾಂಗ್ಲಿಯಲ್ಲಿ ಅನಾವರಣಗೊಳಿಸಿದರು. ಆ ವೇಳೆ ಅವರು ತಮ್ಮ ಭಾಷಣದಲ್ಲಿ, “ನಾವು ಇಲ್ಲಿ ಒಂದು ಪ್ರಮುಖ ಮತ್ತು ಧಾರ್ಮಿಕ ಸಂದರ್ಭದಲ್ಲಿ ಸಭೆ ಸೇರಿದ್ದೇವೆ. 100 ವರ್ಷಗಳ ಹಿಂದೆ, ಈ ದಿನ ಸೌರಾಷ್ಟ್ರದಲ್ಲಿ ಒಂದು ಮಗು ಜನಿಸಿತು. ಆ ದಿನ ಇತರ ಹಲವಾರು ಮಕ್ಕಳು ಕೂಡ ಜನ್ಮ ಪಡೆದಿದ್ದಾರೆ, ಆದರೆ ನಾವು ಅವರ್ಯಾರ ಜನ್ಮ ಶತಮಾನೋತ್ಸವಗಳನ್ನು ಆಚರಿಸುವುದಿಲ್ಲ. ಮಹಾತ್ಮ ಗಾಂಧಿಯವರು ಇತರ ಸಾಮಾನ್ಯ ಮನುಷ್ಯರಂತೆ ಜನಿಸಿದರು, ಆದರೆ ಅವರ ಕಾರ್ಯಗಳು ಮತ್ತು ಆತ್ಮಸಾಕ್ಷಿಯಲ್ಲಿನ ಪ್ರೀತಿಯಿಂದಾಗಿ ಅವರು ಮಹಾನ್ ವ್ಯಕ್ತಿಯ ಸ್ಥಾನಮಾನವನ್ನು ಪಡೆದರು. ನಾವು ಅವರ ಮಾದರಿಯಲ್ಲಿ ನಮ್ಮ ಜೀವನವನ್ನಾಗಿ ರೂಪಿಸಬೇಕು. ನಾವು ಅವರ ಜೀವನವನ್ನು ಎಷ್ಟು ಸಾಧ್ಯವೋ ಅಷ್ಟು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಅನುಸರಿಸಬೇಕು.
ಮಹಾತ್ಮ ಗಾಂಧಿ ಧೂಳನ್ನು ಚಿನ್ನವಾಗಿ ಪರಿವರ್ತಿಸಿದರು. ಸಾಮಾನ್ಯ ಮನುಷ್ಯನಲ್ಲಿನ ಅಸಾಧಾರಣತೆಯನ್ನು ಹೊರತಂದರು. ಬ್ರಿಟಿಷರು ದೇಶದಿಂದ ಹೊರಹೋಗಲು ಇದು ಪ್ರಮುಖ ಕಾರಣವಾಯಿತು.
ಮಹಾತ್ಮ ಜಿ ಹೇಳುತ್ತಿದ್ದರು, “ನಾನು ಕಟ್ಟಾ ಹಿಂದೂ, ಆದ್ದರಿಂದ ನಾನು ಮನುಷ್ಯರನ್ನು ಮಾತ್ರವಲ್ಲದೆ ಜೀವನದ ಪ್ರತಿಯೊಂದು ಅಭಿವ್ಯಕ್ತಿಗಳನ್ನು ಪ್ರೀತಿಸುತ್ತೇನೆ” ಎಂದು. ಹಿಂದುತ್ವದಿಂದಲೇ ಅವರ ಜೀವನ ಮತ್ತು ರಾಜಕೀಯದಲ್ಲಿ ಸತ್ಯ ಮತ್ತು ಅಹಿಂಸೆ ಪ್ರಾಮುಖ್ಯತೆಯನ್ನು ಪಡೆಯಿತು.
‘ಹಿಂದೂ ಧರ್ಮದ ಭವಿಷ್ಯ’ ಎಂಬ ಶೀರ್ಷಿಕೆಯಡಿಯಲ್ಲಿ ಗಾಂಧೀಜಿ, ‘ಹಿಂದೂ ಧರ್ಮ ಎಂದರೆ ನಿಲ್ಲುವಂತಹುದು ಅಲ್ಲ ಎಂದು, ಅದು ನಿರಂತರವಾಗಿ ಬೆಳೆಯುತ್ತದೆ ಮತ್ತು ಅದು ಸತ್ಯದ ಹುಡುಕಾಟಕ್ಕೆ ಒಂದು ಮಾರ್ಗವಾಗಿದೆ. ಇಂದು ಈ ದಣಿದ ಧರ್ಮ, ಮುಂದೆ ಸಾಗಲು ಸ್ಫೂರ್ತಿದಾಯಕವಾಗಿ ಕಂಡುಬರುತ್ತಿಲ್ಲ. ಈ ದಣಿವು ಹೋದ ದಿನ, ಹಿಂದೂ-ಧರ್ಮದ ಒಂದು ದೊಡ್ಡ ಸ್ಫೋಟ ಸಂಭವಿಸುತ್ತದೆ, ಅದು ಹಿಂದೆಂದೂ ಸಂಭವಿಸದ ರೀತಿಯಲ್ಲಿ. ಅಂದು ದೊಡ್ಡ ಪ್ರಮಾಣದಲ್ಲಿ ಹಿಂದೂ-ಧರ್ಮವು ಇಡೀ ಜಗತ್ತಿನಲ್ಲಿ ತನ್ನದೇ ಆದ ಬೆಳಕಿನಿಂದ ಪ್ರಜ್ವಲಿಸುತ್ತದೆ’ ಎಂದಿದ್ದರು, ಇಂದು ಮಹಾತ್ಮ ಜೀ ಅವರ ಈ ಭವಿಷ್ಯವಾಣಿಯನ್ನು ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ.
ದೇಶಕ್ಕೆ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಬೇಕಿದೆ. ಅಂತೆಯೇ, ಧಾರ್ಮಿಕ ಸ್ವಾತಂತ್ರ್ಯದ ಅವಶ್ಯಕತೆಯೂ ಇದೆ, ಇದರಿಂದ ಯಾರೂ ಯಾರನ್ನೂ ಅಗೌರವಗೊಳಿಸಬಾರದು, ವಿವಿಧ ಪಂಗಡಗಳು ಮತ್ತು ಧರ್ಮದ ಜನರು ಒಟ್ಟಾಗಿ ಬದುಕಬೇಕು. ವಿದೇಶಿ ಆಲೋಚನೆಗಳ ಸಂಕೋಲೆಗಳಿಂದಲೂ ಸ್ವಾತಂತ್ರ್ಯ ಬೇಕು. ಇದು ಗಾಂಧೀಜಿ ಅವರ ಪಾಠವಾಗಿತ್ತು. ನಾನು ಹಲವಾರು ಬಾರಿ ಗಾಂಧೀಜಿ ಅವರನ್ನು ಭೇಟಿ ಮಾಡಿದ್ದೇನೆ. ಅವರೊಂದಿಗೆ ನಾನು ಕೂಡ ಚರ್ಚೆ ನಡೆಸಿದ್ದೇನೆ. ಅವರು ವ್ಯಕ್ತಪಡಿಸಿದ ಆಲೋಚನೆಗಳನ್ನು ಅಧ್ಯಯನ ಮಾಡಿದ ನಂತರ ನಾನು ಇದನ್ನು ಹೇಳುತ್ತಿದ್ದೇನೆ. ಆದ್ದರಿಂದ, ನನ್ನ ಆತ್ಮಸಾಕ್ಷಿಯ ಅನುಭವಗಳಿಂದ, ಗಾಂಧೀಜಿ ಬಗ್ಗೆ ನನಗೆ ಅಪಾರ ಗೌರವವಿದೆ.
1947ರಲ್ಲಿ ನಾನು ಗಾಂಧಿಜೀಯನ್ನು ಕೊನೆಯ ಬಾರಿಗೆ ಭೇಟಿಯಾದೆ. ಆ ಸಮಯದಲ್ಲಿ ದೆಹಲಿಯಲ್ಲಿ ಗಲಭೆಗಳು ನಡೆದವು. ಸಾಂಪ್ರದಾಯಿಕವಾಗಿ ಅಹಿಂಸಾತ್ಮಕವಾಗಿದ್ದವರೂ ಕೂಡ ಕ್ರೂರ, ರಾಕ್ಷಸ ಮತ್ತು ಹೃದಯಹೀನರಾಗಿ ವರ್ತಿಸಿದರು. ನಾನು ಆ ಸಮಯದಲ್ಲಿ ಅದೇ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ಕೆಲಸ ಮಾಡುತ್ತಿದ್ದೆ. ಅಂತಹ ವಾತಾವರಣದಲ್ಲಿ ನಾನು ಮಹಾತ್ಮ ಗಾಂಧೀಜಿ ಅವರನ್ನು ಭೇಟಿಯಾದೆ.
ಮಹಾತ್ಮಾ ಜಿ ನನ್ನೊಂದಿಗೆ, “ನೋಡಿ, ಏನಾಗುತ್ತಿದೆ? ಎಂದರು. ನಾನದಕ್ಕೆ “ಇದು ನಮ್ಮ ದೌರ್ಭಾಗ್ಯ, ನಾವು ಹೊರಡುವಾಗ ಬ್ರಿಟಿಷರು ಹೇಳುತ್ತಿದ್ದರು; ನಾವು ಬಿಟ್ಟು ಹೋಗುವಾಗ ನೀವುಗಳು ಪರಸ್ಪರರ ಗಂಟಲು ಕತ್ತರಿಸುತ್ತೀರಿ. ಇಂದು, ಅದೇ ನಡೆಯುತ್ತಿದೆ. ಇದು ಇಡೀ ಜಗತ್ತಿನಲ್ಲಿ ನಮಗೆ ಅಪಖ್ಯಾತಿಯನ್ನು ತರುತ್ತಿದೆ. ಇದನ್ನು ನಿಲ್ಲಿಸಬೇಕು. ಆ ದಿನದ ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿ ನನ್ನ ಹೆಸರನ್ನು ಹೆಮ್ಮೆಯಿಂದ ತೆಗೆದುಕೊಂಡು ನನ್ನ ಆಲೋಚನೆಗಳನ್ನು ವ್ಯಕ್ತಪಡಿಸಿದರು. ಮಹಾತ್ಮರು ನನ್ನ ಹೆಸರನ್ನು ಉಲ್ಲೇಖ ಮಾಡಿರುವುದು ನನ್ನ ದೊಡ್ಡ ಅದೃಷ್ಟ. ಈ ಸಂಪೂರ್ಣ ಸನ್ನಿವೇಶದಲ್ಲಿ, ನಾವು ಗಾಂಧೀಜಿಯನ್ನು ಅನುಕರಿಸಬೇಕು ಎಂದು ನಾನು ಪುನರುಚ್ಚರಿಸುತ್ತೇನೆ.
ನಾವು ಮಹಾತ್ಮ ಜೀ ಅವರ ಆಲೋಚನೆಗಳನ್ನು ಕಾರ್ಯಗತಗೊಳಿಸಿದರೆ, ಅಂತಹ ಆಲೋಚನೆಗಳ ಪಾಠವನ್ನು ನೀಡುವ ಮಹಾನ್ ಹಿಂದೂ ಧರ್ಮವನ್ನು ನಾವು ಪುನರುಜ್ಜೀವನಗೊಳಿಸಿದಂತೆ. ಧರ್ಮವಿಲ್ಲದೆ ಮಾನವ ಸಮಾಜವು ಪ್ರಾಣಿಗಳ ಸಮಾಜದಂತೆ, ಪರಸ್ಪರರನ್ನು ನಾಶಪಡಿಸುತ್ತದೆ. ಹಿಂದೂ ಧರ್ಮವನ್ನು ಜಾಗೃತಗೊಳಿಸುವ ಮೂಲಕ, ಅದರ ಅತ್ಯುತ್ತಮ ಗುಣಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ನೆಲೆಗೊಳ್ಳುವಂತೆ ಮಾಡಬೇಕಿದೆ. ಪ್ರೀತಿಯ, ಸಾಮರಸ್ಯದ ದೇಶವಾಗಿ ನಾವು ಆದರ್ಶ ಸಮಾಜವಾಗಿ ವಿಶ್ವ ವೇದಿಕೆಯಲ್ಲಿ ನಿಲ್ಲುತ್ತೇವೆ ಎಂದು ನಾವು ಈಗಲೇ ನಿರ್ಧರಿಸಬೇಕಾಗಿದೆ, ಅದಕ್ಕಾಗಿಯೇ ಮಹಾತ್ಮ ಜೀ ಅವರಂತಹ ಪೂಜ್ಯ ವ್ಯಕ್ತಿತ್ವದ ಬಗ್ಗೆ ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ.”
ಈ ಭಾಷಣ ಮತ್ತು ಲೇಖನವನ್ನು ‘Complete Works of Shri Guru ji’’, ಸಂಪುಟ 1, ಪುಟ 208-221 ರಲ್ಲಿ ಪ್ರಕಟಿಸಲಾಗಿದೆ. ನಾನು ವಡೋದರಾದಲ್ಲಿ (1987-90) ಪ್ರಚಾರಕ ಆಗಿದ್ದಾಗ, ಸಹ-ಸರಕಾರ್ಯವಾಹ ಶ್ರೀ ಯಾದವರಾವ್ ಜೋಶಿ ಅವರ ಉಪನ್ಯಾಸದಲ್ಲಿ ಹಾಜರಿದ್ದೆ. ಅವರು ಗಾಂಧೀಜಿ ಬಗ್ಗೆ ಬಹಳ ಪೂಜ್ಯ ಮಾತುಗಳಲ್ಲಿ ಮಾತನಾಡಿದಾಗ, ಒಬ್ಬ ಕಾರ್ಯಕರ್ತ ಅವರಲ್ಲಿ ಈ ಮಾತನ್ನು ಹೃದಯದಿಂದ ಮಾತನಾಡುತ್ತೀರಾ ಎಂದು ಕೇಳಿದರು. ಅದಕ್ಕೆ ಯಾದವರಾವ್ ಜಿ, “ನಾನು ರಾಜಕೀಯ ನಾಯಕನಲ್ಲ, ಹಾಗಾಗಿ ನನ್ನ ಹೃದಯದಲ್ಲಿ ನಂಬಿಕೆಯಿಲ್ಲದ ಯಾವುದನ್ನೂ ನಾನು ಹೇಳುವುದಿಲ್ಲ. ಯಾರನ್ನಾದರೂ ಗೌರವಿಸುವುದು ಎಂದರೆ ಅವರ ಎಲ್ಲ ಅಭಿಪ್ರಾಯಗಳನ್ನು ನಾವು ಒಪ್ಪುತ್ತೇವೆ ಎಂದಲ್ಲ, ಆದರೆ ನಾವು ಅವರನ್ನು ಆದರ್ಶವೆಂದು ಪರಿಗಣಿಸುತ್ತೇವೆ ಮತ್ತು ಅವರ ಪ್ರಭಾವಶಾಲಿ ಗುಣಗಳನ್ನು ಸ್ಮರಿಸುತ್ತೇವೆ” ಎಂದು ಅವರು ಹೇಳಿದರು. ಮಹಾಭಾರತದ ಭೀಷ್ಮ ಪಿತಾಮಹಾ ಅವರ ಉದಾಹರಣೆಯ ಮೂಲಕ ಅವರು ಜಿಜ್ಞಾಸೆಯನ್ನು ಹೊಂದಿದ್ದ ಸ್ವಯಂಸೇವಕನಿಗೆ ವಿವರಣೆಯನ್ನು ನೀಡಿದರು. “ಭೀಷ್ಮನು ತಾನು ಮಾಡಿದ ಪ್ರತಿಜ್ಞೆಗಳ ಬಗೆಗಿನ ದೃಢವಾದ ಬದ್ಧತೆಗಾಗಿ ಸ್ಮರಣೀಯನಾಗಿದ್ದಾನೆಯೇ ಹೊರತು, ಕೌರವರು ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಅವಮಾನಿಸಿದ ಸಮಯದಲ್ಲಿ ವಹಿಸಿದ ಮೌನಕ್ಕಾಗಿ ಅಲ್ಲ. ಅಂತೆಯೇ, ಮೂಲಭೂತವಾದಿ ಮತ್ತು ಜಿಹಾದಿ ಮುಸ್ಲಿಂ ನಾಯಕತ್ವದ ಬಗ್ಗೆ ಗಾಂಧೀಜಿಯವರ ವಿಧಾನದ ಬಗ್ಗೆ ಬಲವಾದ ಭಿನ್ನಾಭಿಪ್ರಾಯಗಳಿದ್ದರೂ, ಸ್ವಾತಂತ್ರ್ಯ ಹೋರಾಟಕ್ಕೆ ಸಾಮಾನ್ಯ ಜನರನ್ನು ಕರೆತರುವಲ್ಲಿ ಅವರು ನೀಡಿದ ಕೊಡುಗೆ, ಅವರ ಸತ್ಯಾಗ್ರಹ ಮತ್ತು ಭಾರತೀಯ ಚಿಂತನೆಗಳು ಶ್ಲಾಘನೀಯ ಮತ್ತು ಸ್ಫೂರ್ತಿದಾಯಕವಾಗಿದೆ ” ಎಂದಿದ್ದರು.
ಈ ಸಂಗತಿಗಳನ್ನು ಪರಿಗಣಿಸದೆ ಗಾಂಧಿ ಮತ್ತು ಸಂಘದ ಸಂಬಂಧದ ಬಗ್ಗೆ ಪ್ರತಿಕ್ರಿಯಿಸುವುದು ಸತ್ಯಕ್ಕೆ ಮಾಡಿದ ಅಪಚಾರವಾಗುತ್ತದೆ. ಗ್ರಾಮೀಣಾಭಿವೃದ್ಧಿ, ಸಾವಯವ ಕೃಷಿ, ಹಸು ಸಂರಕ್ಷಣೆ ಮತ್ತು ರಕ್ಷಣೆ, ಸಾಮಾಜಿಕ ಸಮಾನತೆ ಮತ್ತು ಸಾಮರಸ್ಯ, ಒಬ್ಬರ ಸ್ವಂತ ಭಾಷೆಯಲ್ಲಿ ಶಿಕ್ಷಣವನ್ನು ನೀಡುವುದು ಮತ್ತು ಸ್ವದೇಶಿ ಆರ್ಥಿಕತೆ ಮತ್ತು ಜೀವನಶೈಲಿಗಳ ಮೂಲಕ ಸಂಘವು ಗಾಂಧೀಜಿಯ ಆದರ್ಶಗಳನ್ನು ಜೀವಂತವಾಗಿರಿಸಿದೆ ಮತ್ತು ಅದನ್ನು ಮುಂದುವರಿಸಲಿದೆ. ಚುನಾವಣೆಗಳು ಸಮೀಪಿಸಿದಾಗ ಮಾತ್ರ ಅವರನ್ನು ನೆನಪಿಸಿಕೊಳ್ಳುವವರಿಗೆ ನಾವು ಇಷ್ಟು ಮಾತ್ರ ಹೇಳಬಲ್ಲೆವು.
ಇಂದು ಗಾಂಧೀಜಿಯ 150 ನೇ ಜನ್ಮದಿನಾಚರಣೆ. ಅವರ ಶ್ರೇಷ್ಠ ನೆನಪುಗಳಿಗೆ ವಿನಮ್ರಪೂರ್ವಕ ಗೌರವ.
ಮೂಲ ಲೇಖನ: ಮನಮೋಹನ್ ವೈದ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.