ನ್ಯೂಯಾರ್ಕ್: ಭಾರತಕ್ಕೆ ಬಂದು ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾದ ಕಂಪನಿಗಳಿಗೆ ಆಹ್ವಾನವನ್ನು ನೀಡಿದ್ದಾರೆ. “ಭಾರತದೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಳ್ಳಲು ಇದು ಸುವರ್ಣಾವಕಾಶವಾಗಿದೆ. ಏನಾದರೂ ಅಂತರ ಕಂಡು ಬಂದರೆ ನಾನು ಸೇತುವೆಯಾಗಿ ಕಾರ್ಯನಿರ್ವಹಿಸುತ್ತೇನೆ” ಎಂದು ಮೋದಿ ಅಲ್ಲಿನ ಕಂಪನಿಗಳಿಗೆ ಭರವಸೆಯನ್ನು ನೀಡಿದ್ದಾರೆ.
ಬ್ಲೂಂಬರ್ಗ್ ಗ್ಲೋಬಲ್ ಬ್ಯುಸಿನೆಸ್ ಫೋರಂ ಅನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ನಿಮ್ಮ ಅಭಿಲಾಷೆ ಮತ್ತು ನಮ್ಮ ಕನಸುಗಳು ಪರಸ್ಪರ ಹೊಂದಾಣಿಕೆಯಾಗುತ್ತಿವೆ. ನಿಮ್ಮ ತಂತ್ರಜ್ಞಾನ ಮತ್ತು ನಮ್ಮ ಪ್ರತಿಭೆ ಜಗತ್ತನ್ನೇ ಬದಲಾಯಿಸಬಲ್ಲದು. ನಿಮ್ಮ ಮಟ್ಟ ಮತ್ತು ನಮ್ಮ ಕೌಶಲ್ಯ ಆರ್ಥಿಕ ಪ್ರಗತಿಯ ವೇಗವನ್ನು ವರ್ಧಿಸಬಲ್ಲದು. ಏನಾದರೂ ಅಂತರ ಕಂಡು ಬಂದರೆ, ನಾನು ಸೇತುವೆಯಾಗುತ್ತೇನೆ” ಎಂದಿದ್ದಾರೆ.
ನಿಧಾನಗೊಂಡಿರುವ ಆರ್ಥಿಕ ಪ್ರಗತಿಯನ್ನು ಮೇಲೆತ್ತಲು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವುದು ಅಗತ್ಯಗತ್ಯವಾಗಿದೆ. ಮುಂದಿನ 5 ವರ್ಷದಲ್ಲಿ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಸರ್ಕಾರದ ಮಹತ್ವದ ಗುರಿಯನ್ನು ತಲುಪುವ ನಿಟ್ಟಿನಲ್ಲೂ ಮೋದಿಯವರು ಇಲ್ಲಿ ಪ್ರಯತ್ನಗಳನ್ನು ನಡೆಸಿದ್ದಾರೆ.
“ನಮ್ಮ ಪ್ರಜಾಪ್ರಭುತ್ವ, ನ್ಯಾಯಾಂಗವು ಹೂಡಿಕೆಯ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ. ನಮ್ಮ ಜನಸಂಖ್ಯೆಯು ಭಾರತವನ್ನು ಅತ್ಯುತ್ತಮ ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿಯ ನೆಲೆಗಳಲ್ಲಿ ಒಂದನ್ನಾಗಿ ಮಾಡುತ್ತಿದೆ” ಎಂದು ಮೋದಿ ಬ್ಯುಸಿನೆಸ್ ಪೋರಂನಲ್ಲಿ ಹೇಳಿದ್ದಾರೆ. ಮೂಲಸೌಕರ್ಯ ಮತ್ತು ರಕ್ಷಣಾ ಸೇರಿದಂತೆ ಹಲವು ರಂಗಗಳಲ್ಲಿ ಹೆಚ್ಚಿನ ಬೇಡಿಕೆ ಇದೆ ಮತ್ತು ತಡೆರಹಿತ, ಅಂತರ್ಗತ ಮತ್ತು ಪಾರದರ್ಶಕ ವ್ಯವಸ್ಥೆಗಳನ್ನು ನಿರ್ಮಿಸಲು ಸರ್ಕಾರ ಒತ್ತು ನೀಡಿದೆ ಎಂದು ಅವರು ಹೇಳಿ ಹೇಳಿದ್ದಾರೆ.
ಜಗತ್ತಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ತಗ್ಗುತ್ತಿರುವ ಸಂದರ್ಭದಲ್ಲಿ ಭಾರತ ಗ್ಲೋಬಲ್ ಎಫ್ಡಿಐ ರ್ಯಾಂಕಿಂಗ್ನಲ್ಲಿ ಏರಿಕೆಯನ್ನು ಕಂಡಿದೆ, ಇದಕ್ಕೆ ನಮ್ಮ ಸರ್ಕಾರ ಐದು ವರ್ಷಗಳಿಂದ ತೆಗೆದುಕೊಂಡ ಕ್ರಮಗಳೇ ಕಾರಣ ಎಂದು ಮೋದಿ ಹೇಳಿದ್ದಾರೆ.
ಭಾರತವು ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ, ಬೇಡಿಕೆ ಮತ್ತು ನಿರ್ಣಾಯಕತೆಯ 4 ಅಂಶಗಳ ವಿಶಿಷ್ಟ ಸಂಯೋಜನೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.