ಹೋಸ್ಟನ್: ಅಮೆರಿಕಾದ ಟೆಕ್ಸಾಸ್ನ ಹೋಸ್ಟನ್ನಲ್ಲಿ ನಡೆದ ‘ಹೌಡಿ, ಮೋದಿ’ ಕಾರ್ಯಕ್ರಮ ವಿದೇಶಿ ನೆಲದಲ್ಲಿ ಭಾರತದ ಶ್ರೇಷ್ಠತೆಯನ್ನು ಅನಾವರಣಗೊಳಿಸಿದೆ. 50 ಸಾವಿರ ಅನಿವಾಸಿ ಭಾರತೀಯರು, ಅಮೆರಿಕಾದ ಜನಪ್ರತಿನಿಧಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮ ಭಾರತ ಮತ್ತು ಅಮೆರಿಕಾದ ನಡುವಣ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಅಮೆರಿಕಾದಲ್ಲಿ ವಿದೇಶಿ ನಾಯಕನೊಬ್ಬನ ಸಮಾರಂಭಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿರುವುದು ಇತಿಹಾಸದಲ್ಲೇ ಮೊದಲು.
ಭಾರತ ಮತ್ತು ಅಮೆರಿಕಾ ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು, ಉಭಯ ದೇಶಗಳ ಸಾಂಸ್ಕೃತಿಕ ಬಾಂಧವ್ಯವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದವು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ದೇಶಗಳ ಸಂಬಂಧದ ಬಗ್ಗೆ ಜಗತ್ತಿಗೆ ಹೊಸ ಸಂದೇಶವನ್ನು ರವಾನಿಸಿದ್ದಾರೆ.
ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ”ಇತ್ತೀಚಿನ ವರ್ಷಗಳಲ್ಲಿ ನಮ್ಮ ಎರಡೂ ದೇಶಗಳು ಬಾಂಧವ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿವೆ. ಹೋಸ್ಟನ್ನಲ್ಲಿ ಇಂದು ನೀವು ವಿಶ್ವದ ಎರಡು ಅತಿ ದೊಡ್ಡ ಪ್ರಜಾಪ್ರಭುತ್ವಗಳ ಶ್ರೇಷ್ಠ ಪಾಲುದಾರಿಕೆಯ ಸಂಭ್ರಮಾಚರಣೆಯ ಹೃದಯಬಡಿತವನ್ನು ಕೇಳುತ್ತಿದ್ದೀರಿ. 2017 ರಲ್ಲಿ ನೀವು ನಿಮ್ಮ ಕುಟುಂಬಕ್ಕೆ ನನ್ನನ್ನು ಪರಿಚಯಿಸಿದ್ದೀರಿ, ಈಗ ನಾನು ನನ್ನ ಕುಟುಂಬಕ್ಕೆ ನಿಮ್ಮನ್ನು ಪರಿಚಯಿಸುತ್ತೇನೆ. ’ಅಬ್ ಕಿ ಬಾರ್ ಟ್ರಂಪ್ ಸರ್ಕಾರ್” ಎಂದು ಟ್ರಂಪ್ ಮುಂದೆ ಹೇಳಿದರು.
ಹೊಸ ಇತಿಹಾಸದ ಜೊತೆಗೆ ಕೆಮೆಸ್ಟ್ರಿ, ಸಿನರ್ಜಿಯೂ ಸೃಷ್ಟಿಯಾಗಿದೆ. ನನ್ನನ್ನು ಹೊಗಳಿದ ಪ್ರತಿಶಬ್ದವೂ ಅಮೇರಿಕಾದಲ್ಲಿರುವ ಭಾರತೀಯರನ್ನು ಹೊಗಳಿದಂತೆ. ಮೋದಿ ಒಬ್ಬನೇ ಏನೂ ಅಲ್ಲ, ನಾನು 130 ಕೋಟಿ ಜನರ ಆದೇಶ ಪಾಲಿಸುವ ಸಾಧಾರಣ ವ್ಯಕ್ತಿ. ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಕನ್ನಡ ಸೇರಿದಂತೆ ಕೆಲವು ಭಾಷೆಗಳಲ್ಲಿ ಹೇಳಿದ ಮೋದಿ ಎಲ್ಲರನ್ನೂ ಪುಳಕಿತಗೊಳ್ಳುವಂತೆ ಮಾಡಿದರು.
ನಮ್ಮ ಭಾಷೆಗಳು, ನಮ್ಮ ಉದಾರ ಮತ್ತು ಪ್ರಜಾಪ್ರಭುತ್ವ ಸಮಾಜದ ಶ್ರೇಷ್ಠ ಪ್ರತಿನಿಧಿಗಳಾಗಿವೆ. ಶತಮಾನಗಳಿಂದಲೂ ಸಾವಿರಾರು ಭಾಷೆಗಳು ಭಾರತದಲ್ಲಿ ಶಾಂತಿಯುತವಾಗಿ ಸಹ-ಅಸ್ಥಿತ್ವದಲ್ಲಿದೆ. ವಿವಿಧತೆಯಲ್ಲಿ ಏಕತೆ ನಮ್ಮ ಗುರುತು. ಇದು ನಮ್ಮ ಅಸಾಧಾರಣ ಪ್ರಜಾಪ್ರಭುತ್ವದ ಮೂಲ ಆಶಯ. ಅದು ನಮ್ಮ ಶಕ್ತಿ ಮತ್ತು ಪ್ರೇರಣೆ. ಈ ಸ್ಟೇಡಿಯಂನಲ್ಲಿ ಉಪಸ್ಥಿತರಿರುವ 50 ಸಾವಿರ ಭಾರತೀಯರು ನಮ್ಮ ಶ್ರೇಷ್ಠ ಪರಂಪರೆಯ ಪ್ರತಿನಿಧಿಗಳು ಎಂದು ಕೊಂಡಾಡಿದರು.
ಇಂದು ಭಾರತದಲ್ಲಿನ ಅತಿ ಹೆಚ್ಚು ಚರ್ಚಿತ ವಿಷಯ ವಿಕಾಸ. ಎಲ್ಲದಕ್ಕೂ ದೊಡ್ಡ ಮಂತ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್. ಭಾರತದ ಅತಿ ದೊಡ್ಡ ನೀತಿ ಜನರ ಭಾಗಿದಾರಿತ್ವ. ಸಂಕಲ್ಪದಿಂದ ಸಾಧನೆ ಎಂಬುದು ಭಾರತದ ಅತಿ ದೊಡ್ಡ ಧ್ಯೇಯ. ಭಾರತದ ಅತಿ ದೊಡ್ಡ ಸಂಕಲ್ಪ ನವ ಭಾರತ. 7 ದಶಕಗಳಲ್ಲಿ ಭಾರತದ ಗ್ರಾಮೀಣ ನೈರ್ಮಲ್ಯ ಶೇ. 38 ರಷ್ಟಿತ್ತು. ನಾವು 5 ವರ್ಷಗಳಲ್ಲಿ ಅದನ್ನು ಶೇ. 99 ಕ್ಕೆ ಕೊಂಡೊಯ್ದೆವು. ಅಡುಗೆ ಅನಿಲ ಸಂಪರ್ಕ ಶೇ. 55 ರಷ್ಟಿತ್ತು. ಅದನ್ನು ಶೇ. 95 ಕ್ಕೆ ಏರಿಸಿದೆವು. ಗ್ರಾಮೀಣ ರಸ್ತೆ ಸಂಪರ್ಕ ಶೇ. 55 ರಷ್ಟಿತ್ತು, ನಾವದನ್ನು ಶೇ. 97 ಕ್ಕೇರಿಸಿದೆವು ಎನ್ನುವ ಮೂಲಕ ತಮ್ಮ ಸರ್ಕಾರದ ಸಾಧನೆಯನ್ನು ಮುಂದಿಟ್ಟರು.
370ನೇ ವಿಧಿ ರದ್ಧತಿಯನ್ನು ಸಮರ್ಥಿಸಿಕೊಂಡ ಮೋದಿ, ಭಾರತದ ಎದುರು ಕಳೆದ 70 ವರ್ಷಗಳಿಂದ ಅತಿ ದೊಡ್ಡ ಸವಾಲಿತ್ತು. ಕೆಲ ದಿನಗಳ ಹಿಂದೆ ಅದಕ್ಕೆ ಈ ದೇಶ ಮುಕ್ತಿಯನ್ನು ನೀಡಿದೆ. 370 ನೇ ವಿಧಿ ಜಮ್ಮು ಕಾಶ್ಮೀರ ಮತ್ತು ಲಡಾಖಿನ ಜನರನ್ನು ಅಭಿವೃದ್ಧಿ ಮತ್ತು ಸಮಾನ ಅಧಿಕಾರದಿಂದ ವಂಚಿತರನ್ನಾಗಿ ಮಾಡಿತ್ತು. ಈ ಸ್ಥಿತಿಯ ಲಾಭವನ್ನು ಉಗ್ರವಾದ ಮತ್ತು ಪ್ರತ್ಯೇಕತಾವಾದವನ್ನು ಮುನ್ನಡೆಸುತ್ತಿದ್ದವರು ಪಡೆಯುತ್ತಿದ್ದರು ಎಂದರು. 370 ವಿಧಿಯನ್ನು ರದ್ದುಪಡಿಸಲು ಅನುಮೋದನೆಯನ್ನು ನೀಡಿದ ರಾಜ್ಯಸಭಾ ಮತ್ತು ಲೋಕಸಭಾ ಎಲ್ಲಾ ಸದಸ್ಯರಿಗೂ ಎದ್ದು ನಿಂತು ಗೌರವ ಸಲ್ಲಿಸುವಂತೆ ಸಭಿಕರನ್ನು ಕೇಳಿಕೊಂಡರು. ಆಗ ಪ್ರತಿಯೊಬ್ಬರೂ ಚಪ್ಪಾಳೆಯೊಂದಿಗೆ ಎದ್ದು ನಿಂತು ಗೌರವ ಸೂಚಿಸಿದರು.
ಇಂದು ಭಾರತ ಹಿಂದೆಂದಿಗಿಂತಲೂ ಹೆಚ್ಚಿನ ವೇಗದ ಗತಿಯಲ್ಲಿ ಮುನ್ನಡೆಯಲು ಬಯಸುತ್ತಿದೆ. ಈ ಯೋಚನೆಗೆ ಭಾರತದ ಕೆಲವರು ಸವಾಲೆಸೆದಿದ್ದರು. ಯಾವುದೂ ಬದಲಾಗುವುದಿಲ್ಲ ಎಂಬುದು ಅವರ ಯೋಚನೆಯಾಗಿತ್ತು. ಹಿಂದೆ ಯಾರೂ ಊಹಿಸದ ರೀತಿಯಲ್ಲಿ ಕಳೆದ 5 ವರ್ಷದಲ್ಲಿ 130 ಕೋಟಿ ಭಾರತೀಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಭಾರತ 5 ಟ್ರಿಲಿಯನ್ ಆರ್ಥಿಕತೆಯಾಗುವತ್ತ ಕಾರ್ಯೋನ್ಮುಖಗೊಂಡಿದೆ. ಮೂಲ ಸೌಕರ್ಯ, ಹೂಡಿಕೆ ಮತ್ತು ರಫ್ತನ್ನು ಉತ್ತಮಗೊಳಿಸಲು ಹಲವು ನೀತಿಗಳನ್ನು ರೂಪಿಸಿದ್ದೇವೆ. ನಾವು ಜನಸ್ನೇಹಿ, ಅಭಿವೃದ್ಧಿ ಸ್ನೇಹಿ ಮತ್ತು ಬಂಡವಾಳ ಸ್ನೇಹಿ ಪರಿಸರವನ್ನು ಭಾರತದಲ್ಲಿ ನಿರ್ಮಾಣ ಮಾಡುತ್ತಿದ್ದೇವೆ ಎಂದರು.
ಅಮೆರಿಕಾದ ನೆಲದಲ್ಲಿ ಪಾಕಿಸ್ಥಾನಕ್ಕೆ ದಿಟ್ಟ ಸಂದೇಶವನ್ನು ರವಾನೆ ಮಾಡಿದ ಮೋದಿ, 9/11, 26/11 ದಾಳಿಗಳ ಹಿಂದೆ ಪಾಕಿಸ್ಥಾನದ ಕೈವಾಡವಿದೆ. ಕೆಲ ದೇಶಗಳು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ. ಭಯೋತ್ಪಾದನೆಯ ವಿರುದ್ಧ ನಿರ್ಣಾಯಕ ಯುದ್ಧ ಮಾಡಬೇಕು. ಪಾಕಿಸ್ಥಾನದಂತಹ ರಾಷ್ಟ್ರಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಅವರಿಗೆ ಅವರ ದೇಶವನ್ನೇ ನಿಯಂತ್ರಿಸಲು ಆಗುತ್ತಿಲ್ಲ. ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತದ ಜೊತೆ ಟ್ರಂಪ್ ಇದ್ದಾರೆ. ಭಯೋತ್ಪಾದನೆ ಮಟ್ಟ ಹಾಕಲು ಇದು ಸಕಾಲ ಎಂದರು.
ಭಾರತದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಸಾಕಷ್ಟು ಬದಲಾವಣೆಗಳಾಗುತ್ತಿವೆ ಮತ್ತು ಇನ್ನೂ ಹೆಚ್ಚಿನದನ್ನು ಮಾಡುವ ಉತ್ಸಾಹದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ನಾವು ಹೊಸ ಸವಾಲನ್ನು ಹಾಕಿಕೊಂಡು ಅದನ್ನು ಪೂರೈಸುವ ದೃಢತೆಯೊಂದಿಗೆ ಹೆಜ್ಜೆಯಿಟ್ಟಿದ್ದೇವೆ. ಧನ್ಯವಾದ ಹೋಸ್ಟನ್, ಧನ್ಯವಾದ ಅಮೇರಿಕಾ ಎನ್ನುವ ಮೂಲಕ ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.