ವಾಷಿಂಗ್ಟನ್: ಅಗತ್ಯವಿರುವ ಮಕ್ಕಳಿಗೆ ಉನ್ನತ ವ್ಯಾಸಂಗವನ್ನು ಮಾಡಲು ಸಹಾಯಕವಾಗುವಂತೆ ತರಬೇತಿಯನ್ನು ನೀಡುತ್ತಾ ಬರುತ್ತಿರುವ ‘ಸೂಪರ್ 30’ ಸ್ಥಾಪಕ ಬಿಹಾರದ ಆನಂದ್ ಕುಮಾರ್ ಅವರಿಗೆ ಅಮೆರಿಕಾದಲ್ಲಿ ಪ್ರತಿಷ್ಠಿತ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನಿಸಿ ಸನ್ಮಾನಿಸಲಾಗಿದೆ.
ಫೌಂಡೇಶನ್ ಫಾರ್ ಎಕ್ಸಲೆನ್ಸ್ ತನ್ನ 25ನೇ ಸಂಸ್ಥಾಪನಾ ವರ್ಷದ ಪ್ರಯುಕ್ತ ಕಳೆದ ವಾರಾಂತ್ಯ ಕ್ಯಾಲಿಫೋರ್ನಿಯಾದ ಸಾನ್ ಜೋಸ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆನಂದ್ ಅವರಿಗೆ ‘ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ 2019’ ಅನ್ನು ಪ್ರದಾನಿಸಿ ಸನ್ಮಾನಿಸಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಆನಂದ್ ಅವರು, “ಜಗತ್ತಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಶಿಕ್ಷಣವು ಒಂದು ಅತೀದೊಡ್ಡ ಅಸ್ತ್ರವಾಗುವಂತೆ ಮಾಡುವ ನಿಟ್ಟಿನಲ್ಲಿ ಅಮೆರಿಕಾದಲ್ಲಿ ವಾಸಿಸುತ್ತಿರುವ ಬಲಿಷ್ಠ ಭಾರತೀಯ ಸಮುದಾಯ ಮತ್ತು ಜಗತ್ತಿನಾದ್ಯಂತದ ಜನರು ಬೆಂಬಲವನ್ನು ನೀಡಬೇಕು” ಎಂದು ಕರೆ ನೀಡಿದ್ದಾರೆ.
“ಗುಣಮಟ್ಟದ ಶಿಕ್ಷಣವು ಜನಸಾಮಾನ್ಯರಿಗೆ ಸಿಗುವಂತೆ ಮಾಡುವುದರಿಂದ ಸಮಾಜದಲ್ಲಿ ಮಹತ್ತರವಾದ ಬದಲಾವಣೆಯಾಗುತ್ತದೆ. ಬಡತನ, ನಿರುದ್ಯೋಗ, ಜನಸಂಖ್ಯೆ ಸ್ಫೋಟ, ಪರಿಸರ ನಾಶ ಮತ್ತು ಇನ್ನೂ ಹೆಚ್ಚಿನ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
“ಅಮೆರಿಕಾ ಸೇರಿದಂತೆ ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಭಾರತೀಯರು ಅದ್ಭುತಗಳನ್ನು ಮಾಡುತ್ತಿದ್ದಾರೆ ಮತ್ತು ತಮ್ಮ ಸಮಾಜಕ್ಕೆ ಏನನ್ನಾದರೂ ಮರಳಿ ಕೊಡುವುದು ಅವರಿಗೆ ಅಪಾರ ತೃಪ್ತಿಯನ್ನು ನೀಡುತ್ತದೆ. ಶಿಕ್ಷಣಕ್ಕಿಂತ ಅಮೂಲ್ಯವಾದ ಯಾವುದೇ ಉಡುಗೊರೆ ಇರಲು ಸಾಧ್ಯವಿಲ್ಲ” ಎಂದು ಆನಂದ್ ಹೇಳಿದ್ದಾರೆ.
ಆನಂದ್ ಕಳೆದ 18 ವರ್ಷಗಳಿಂದ ಐಐಟಿಯನ್ನು ಪ್ರವೇಶಿಸಲು ಬಯಸುವ ಬಡ ಮಕ್ಕಳಿಗೆ ಒಂದು ವರ್ಷದ ಅವಧಿಯ ತರಬೇತಿಯನ್ನು ನೀಡುತ್ತಾ ಬರುತ್ತಿದ್ದಾರೆ. ಇದಕ್ಕೆ ಅವರು ‘ಸೂಪರ್ 30’ ಎಂದು ಹೆಸರಿಟ್ಟಿದ್ದಾರೆ. ಉಚಿತ ತರಬೇತಿ ಮಾತ್ರವಲ್ಲ ತರಬೇತಿಯ ಅವಧಿಯಲ್ಲಿ ಉಚಿತ ವಸತಿ ವ್ಯವಸ್ಥೆಯನ್ನೂ ಮಕ್ಕಳಿಗೆ ಅವರು ಕಲ್ಪಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.