ನವದೆಹಲಿ: ಭಾರತದ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿದ್ದು, ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಹೆಚ್ಚಿನ ವಿದೇಶಿ ಸಂಗ್ರಹದೊಂದಿಗೆ ಆರ್ಥಿಕತೆಯು ಬಲಿಷ್ಠವಾದ ಚೇತರಿಕೆಯನ್ನು ಕಾಣುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದ್ದಾರೆ.
ಹಣದುಬ್ಬರ ನಿಯಂತ್ರಣದಲ್ಲಿದೆ ಮತ್ತು ಕೈಗಾರಿಕಾ ಉತ್ಪಾದನೆಯು ಮರು ಚೇತರಿಕೆಯ ಸ್ಪಷ್ಟ ಸೂಚನೆಯನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಆರ್ಥಿಕತೆಗೆ ನಿರಾಳತೆಯನ್ನು ನೀಡಲು ಸರಣಿ ಕ್ರಮಗಳನ್ನು ಕೈಗೊಳ್ಳಲಾಗಿದೆ, ಹಣದುಬ್ಬರವನ್ನು ಸ್ಥಿರವಾಗಿ 4% ಕ್ಕಿಂತ ಕಡಿಮೆ ಇರಿಸಲಾಗಿದೆ, ಇದು ಆರ್ಥಿಕತೆಯ ಆರೋಗ್ಯವನ್ನು ತೋರಿಸುತ್ತದೆ ಎಂದಿದ್ದಾರೆ.
ವಿದೇಶಿ ನೇರ ಹೂಡಿಕೆ (ಎಫ್ಡಿಐ) ಒಳಹರಿವು ಈಗ ದೃಢವಾಗಿದೆ ಮತ್ತು ಮರು ಚೇತರಿಕೆಯ ಸೂಚನೆಯನ್ನು ನೀಡಿದೆ. ವಿದೇಶಿ ವಿನಿಮಯ ಮೀಸಲು ವಿಶೇಷವಾಗಿ ಆಗಸ್ಟ್ ಅಂತ್ಯದಲ್ಲಿ ಏರಿಕೆಯಾಗಿದೆ ಎಂದಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಪ್ರತಿಕ್ರಿಯೆ ನೀಡಿ ಸೀತಾರಾಮನ್, ಸೆಪ್ಟೆಂಬರ್ 19 ರಂದು ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಆ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಘೋಷಿಸಲಾದ ಭಾಗಶಃ ಕ್ರೆಡಿಟ್ ಗ್ಯಾರಂಟಿ ಯೋಜನೆಯ ಪ್ರಯೋಜನಗಳನ್ನು ಈಗ ಎನ್ಬಿಎಫ್ಸಿ ಸ್ವೀಕರಿಸುತ್ತಿದೆ ಎಂದಿದ್ದಾರೆ. ಭಾಗಶಃ ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ. ಆರ್ಥಿಕತೆ ಚೇತರಿಕೆಗೆ ಅಗತ್ಯವಾಗಿರುವ ರಫ್ತು ಕ್ಷೇತ್ರಕ್ಕೆ ಪುಷ್ಟಿ ನೀಡಲು ಕ್ರಮಗಳನ್ನು ಪ್ರಕಟಿಸಿದ್ದಾರೆ. ರಫ್ತು ಕ್ಷೇತ್ರದ ಪ್ರಮುಖ ಭಾಗವಾಗಿರುವ ಗುಡಿಗಾರಿಕೆ, ಎಂಜಿನಿಯರಿಂಗ್, ಮುಕ್ತ ವ್ಯಾಪಾರ ಒಪ್ಪಂದ ಇತ್ಯಾದಿಗಳಲ್ಲಿ ಸುಧಾರಣಾ ಕ್ರಮಗಳನ್ನು ಅವರು ಘೋಷಿಸಿದ್ದಾರೆ.
ಗೃಹ ಸಾಲದ ಮರುಪಾವತಿ ಮಾಡಿದರೆ ಬಡ್ಡಿಯಲ್ಲಿ ಹೆಚ್ಚುವರಿ 1.5 ಲಕ್ಷ ರೂ ಕಡಿತ; ಮನೆ, ವಾಹನಗಳ ಖರೀದಿಗೆ ಹೆಚ್ಚು ಸಾಲ ಸಿಗುವ ವ್ಯವಸ್ಥೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ಧಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.