ಲಡಾಖ್: ಲಡಾಖ್ ಶೀಘ್ರದಲ್ಲೇ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನವನ್ನು ಪಡೆದುಕೊಳ್ಳಲಿದೆ. ಈ ಹೊಸ ಕೇಂದ್ರಾಡಳಿತ ಪ್ರದೇಶದ ಎರಡು ಜಿಲ್ಲೆಗಳಾದ ಲೇಹ್ ಮತ್ತು ಕಾರ್ಗಿಲ್ ಭಾರತ ಮತ್ತು ವಿದೇಶಗಳಿಂದ ಭಾರೀ ಪ್ರಮಾಣದ ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿವೆ. 199ರ ಭಾರತ-ಪಾಕಿಸ್ಥಾನ ಯುದ್ಧದಿಂದಾಗಿ ಕಾರ್ಗಿಲ್ ‘ಯುದ್ಧ ವಲಯ’ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿತ್ತು, ಇದೀಗ ಆ ಹಣೆಪಟ್ಟಿಯನ್ನು ತೊಡೆದು ಮುನ್ನಡೆಯಲು ಅದು ಸಜ್ಜಾಗುತ್ತಿದೆ.
ಕೇಂದ್ರ ಪ್ರವಾಸೋದ್ಯಮ ಸಚಿವರು ಇತ್ತೀಚೆಗೆ ಲಡಾಖಿಗೆ ಭೇಟಿ ನೀಡಿದ್ದ ವೇಳೆ, ಆ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳು ಜಿಲ್ಲೆಯ ಪ್ರವಾಸಿ ಸೌಲಭ್ಯಗಳನ್ನು ಹೆಚ್ಚಿಸಲು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
“ಯುದ್ಧದ 20 ವರ್ಷಗಳ ನಂತರವೂ, ಕಾರ್ಗಿಲ್ ಎಂದು ಗೂಗಲ್ ಸರ್ಚ್ ಇಂಜಿನ್ನಲ್ಲಿ ಟೈಪ್ ಮಾಡಿದರೆ, ಕಾರ್ಗಿಲ್ ಯುದ್ಧದ ಬಗ್ಗೆಯೇ ಮೊದಲನೆಯದಾಗಿ ತೋರಿಸುತ್ತದೆ. ಇದು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಕಾರ್ಗಿಲ್ ಜನರಿಗೆ ದೊಡ್ಡ ಹಿನ್ನಡೆಯಾಗಿದೆ. ಯುದ್ಧ ವಲಯದ ಹಣೆಪಟ್ಟಿಯಿಂದಾಗಿ ಈ ಪ್ರದೇಶವು ವಿವಿಧ ಆಸಕ್ತಿದಾಯಕ ತಾಣಗಳನ್ನು ಹೊಂದಿದ್ದರೂ ಸಹ ಪ್ರವಾಸಿತಾಣವಾಗಿ ಗುರುತಿಸಿಕೊಳ್ಳುತ್ತಿಲ್ಲ, ನಮ್ಮ ಪ್ರವಾಸಿ ಸಾಮರ್ಥ್ಯದ ಬಗ್ಗೆ ಯಾರೂ ಅರಿತುಕೊಂಡಿಲ್ಲ “ಎಂದು ಟ್ರೇಡ್ ಅಸೋಸಿಯೇಷನ್ನ ಆಲ್ ಕಾರ್ಗಿಲ್ ಟ್ರಾವೆಲ್ನ ಅಶ್ರಫ್ ಅಲಿ ಹೇಳುತ್ತಾರೆ.
ಜಮ್ಮು ಮತ್ತು ಕಾಶ್ಮೀರದ ಕಪಿಮುಷ್ಠಿಯಿಂದ ಹೊರ ಬಂದಿರುವ ಈ ಪ್ರದೇಶದ ಜನರು, ಈಗ ಉತ್ತಮ ಜೀವನೋಪಾಯವನ್ನು ಸೃಷ್ಟಿಸಲು ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ.
“ನಮ್ಮಲ್ಲಿ ಆರ್ಯನ್ ಕಣಿವೆ, ಸುರು ಕಣಿವೆ, ಡ್ರಾಸ್, ಜನ್ಸ್ಕರ್ ಕಣಿವೆ ಇದೆ, ಇದನ್ನು ಪ್ರವಾಸಿ ತಾಣಗಳಾಗಿ ಪ್ರಚಾರ ಮಾಡಬಹುದು. ಅಲ್ಲದೆ, ನಮ್ಮಲ್ಲಿ ಮೂರು ಬುದ್ಧ ಶಿಲಾ ಕೆತ್ತನೆಗಳು ಇವೆ, ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ನಿಂದ ಬಾಮಿಯನ್ ಪ್ರತಿಮೆಗಳು ನಾಶವಾದ ನಂತರ ಉಳಿದಿರುವ ವಿಶ್ವದ ಏಕೈಕ ವಿಶೇಷ ಬುದ್ಧ ಶಿಲಾ ಕೆತ್ತನೆಗಳು ಇದಾಗಿವೆ” ಎಂದು ಜಿಲ್ಲೆಯ ಹೋಟೆಲ್ ಉದ್ಯಮಿಯೊಬ್ಬರು ಹೇಳುತ್ತಾರೆ.
ಕೇಂದ್ರ ಸರ್ಕಾರವು ಲಡಾಖಿನ ಎರಡೂ ಜಿಲ್ಲೆಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.