ಬೇರೆ ಯಾರೇ ಆಗಿದ್ದರೂ ಈ ವೇಳೆಗೆ ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ಎಸೆದು ಮನೆಗೆ ಹೋಗುತ್ತಿದ್ದರು. ಜನಪರ ಸಂಘಟನೆಗಳ ಪ್ರತಿಭಟನೆ, ರಾಜ್ಯ ವಕೀಲರ ಪರಿಷತ್ನ ತೀವ್ರ ಆಂದೋಲನ, ಅತ್ತ ವಿಧಾನಸಭೆಯ ಉಭಯ ಸದನಗಳಲ್ಲೂ ಸದಸ್ಯರಿಂದ ರಾಜೀನಾಮೆಗೆ ಆಗ್ರಹ, ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ಗಳಿಂದ ರಾಜೀನಾಮೆಗೆ ಆಗ್ರಹಿಸಿ 57 ಕ್ಕೂ ಹೆಚ್ಚು ಶಾಸಕರಿಂದ ಸಹಿ ಸಂಗ್ರಹ, ವಿಧಾನಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆಗೆ ಅನುಮತಿ ನೀಡಬೇಕೆಂದು ಸ್ಪೀಕರ್ಗೆ ಮನವಿ… ಹೀಗೆ ಕಳೆದ ಒಂದು ವಾರದಿಂದ ಸತತವಾಗಿ ಕರ್ನಾಟಕ ಲೋಕಾಯುಕ್ತ ನ್ಯಾ. ಭಾಸ್ಕರ ರಾವ್ ಅವರ ರಾಜೀನಾಮೆಗೆ ಆಗ್ರಹಿಸಿ ಬಗೆಬಗೆಯ ಪ್ರಜಾತಾಂತ್ರಿಕ ವಿದ್ಯಮಾನಗಳು ಘಟಿಸುತ್ತಿದ್ದರೂ ಲೋಕಾಯುಕ್ತರು ಮಾತ್ರ ಕ್ಯಾರೇ ಎಂದಿಲ್ಲ. ತಮ್ಮ ಮೇಲಿನ ಗುರುತರ ಭ್ರಷ್ಟಾಚಾರ ಆರೋಪಕ್ಕೆ ಅವರಿಂದ ಯಾವುದೇ ಧನಾತ್ಮಕ ಸ್ಪಂದನವೇ ಇಲ್ಲ.
ಲೋಕಾಯುಕ್ತ ಭಾಸ್ಕರ ರಾವ್ ಕೊನೆಪಕ್ಷ ಹಿಂದಿನ ಆಯುಕ್ತರ ನಿದರ್ಶನವನ್ನಾದರೂ ಪರಿಪಾಲಿಸಬಹುದಿತ್ತು. ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾ.ಶಿವರಾಜ ಪಾಟೀಲ್ ಅವರ ವಿರುದ್ಧ ಆರೋಪವೊಂದು ಕೇಳಿಬಂದಾಗ ಮರು ನಿಮಿಷದಲ್ಲೇ ಮೀನಮೇಷ ಎಣಿಸದೆ ಸಂಸ್ಥೆಯ ಗೌರವ ಕಾಪಾಡುವ ದೃಷ್ಟಿಯಿಂದ ಹುದ್ದೆ ತ್ಯಜಿಸಿದ್ದರು. ಇಂತಹ ಪೂರ್ವ ನಿದರ್ಶನವನ್ನು ಪರಿಪಾಲಿಸಬೇಕೆಂದು ನ್ಯಾ.ಭಾಸ್ಕರ ರಾವ್ಗೆ ಏಕೆ ಅನಿಸಲಿಲ್ಲ? ಲೋಕಾಯುಕ್ತ ಕಚೇರಿ ಆವರಣದಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರ ಹಗರಣದಲ್ಲಿ ಸ್ವತಃ ಅವರ ಮಗನ ಹೆಸರು ತಳುಕು ಹಾಕಿಕೊಂಡಿದೆ. ಆತನ ವಿರುದ್ಧ ಎಫ್ಐಆರ್ ಕೂಡಾ ದಾಖಲಾಗಿದೆ. ರಾಜೀನಾಮೆ ಒಂದು ವೇಳೆ ನೀಡದಿದ್ದರೂ ದೀರ್ಘ ರಜೆಯ ಮೇಲೆ ತೆರಳಬಹುದಿತ್ತು. ಅದನ್ನೂ ಮಾಡಿಲ್ಲ. ಪ್ರತಿಭಟನೆ ಇನ್ನಷ್ಟು ತಾರಕಕ್ಕೇರುವುದಂತೂ ನಿಶ್ಚಿತ. ಆಗ ರಾಜೀನಾಮೆ ನೀಡಿದರೆ ಅದು ಪ್ರತಿಭಟನೆಗಳ ಒತ್ತಾಯಕ್ಕೆ ಲೋಕಾಯುಕ್ತರು ಮಣಿದಂತಾಗುವುದಲ್ಲವೇ? ಲೋಕಾಯುಕ್ತ ಹುದ್ದೆಯ ಘನತೆ ಗೌರವ ಮತ್ತಷ್ಟು ಪಾತಾಳಕ್ಕೆ ಕುಸಿದಂತಾಗುವುದಿಲ್ಲವೇ?
ಕರ್ನಾಟಕದ ಲೋಕಾಯುಕ್ತ ಸಂಸ್ಥೆ ಇಡೀ ದೇಶಕ್ಕೆ ಮಾದರಿ ಎನ್ನಲಾಗುತ್ತಿದೆ. ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾ. ವೆಂಕಟಾಚಲಯ್ಯ, ಅನಂತರ ಬಂದ ನ್ಯಾ.ಸಂತೋಷ ಹೆಗ್ಡೆ ಇಬ್ಬರೂ ತಮ್ಮದೇ ಕಾರ್ಯವೈಖರಿ ಮೂಲಕ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಭ್ರಷ್ಟಾಚಾರ ನಿಗ್ರಹಕ್ಕೆ ದಿಟ್ಟ ಭಾಷ್ಯ ಬರೆದಿದ್ದರು. ಸರ್ಕಾರಿ ಅಧಿಕಾರಿಗಳಷ್ಟೇ ಅಲ್ಲ, ರಾಜಕಾರಣಿಗಳು, ಶಾಸಕರು, ಸಚಿವರು, ಕೊನೆಗೆ ಮುಖ್ಯಮಂತ್ರಿಗಳೂ ಲೋಕಾಯುಕ್ತರೆಂದರೆ ಹೆದರಿ ನಡುಗುವ ಪರಿಸ್ಥಿತಿ ನಿರ್ಮಿಸಿದ್ದರು. ಲೋಕಾಯುಕ್ತರೊಂದಿಗೆ ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಳ್ಳಲು ಅಧಿಕಾರಸ್ಥ ರಾಜಕಾರಣಿಗಳು ಒಳಗೊಳಗೇ ಅಂಜುತ್ತಿದ್ದರು. ಇಂತಿಪ್ಪ ಲೋಕಾಯುಕ್ತ ಸಂಸ್ಥೆ ಇದೀಗ ಬೀದಿ ಜನರ ಬಾಯಲ್ಲೂ ಅಪಹಾಸ್ಯಕ್ಕೆ ಈಡಾಗಿರುವುದು ಪರಿಸ್ಥಿತಿಯ ವೈರುಧ್ಯವೇ ಸರಿ.
ಕಾರ್ಯಾಂಗ, ಶಾಸಕಾಂಗಕ್ಕೆ ಜಡ್ಡು ಹಿಡಿದು ಕೆಟ್ಟು ಕೆರಹಿಡಿದರೂ ಜನರಿಗೆ ನ್ಯಾಯಾಂಗದ ಮೇಲೆ ಅಪಾರ ನಂಬುಗೆ ಇತ್ತು. ನ್ಯಾಯಾಂಗವನ್ನು ಪ್ರಜಾತಂತ್ರದ ದೇಗುಲವೆಂದೇ ಪ್ರಜ್ಞಾವಂತರು ಭಾವಿಸಿದ್ದರು. ಆದರೀಗ ಅದು ದೇಗುಲವಾಗಿ ಉಳಿದಿಲ್ಲ ಎಂಬ ಹಳಹಳಿಕೆ ಅವರೆಲ್ಲರನ್ನೂ ಕಾಡತೊಡಗಿದೆ. ಇದಕ್ಕೆ ಕಾರಣಗಳು ಸಾಕಷ್ಟು. ಲೋಕಾಯುಕ್ತ ನ್ಯಾ.ಭಾಸ್ಕರ ರಾವ್ ಪ್ರಕರಣವೊಂದೇ ಕಾರಣವಲ್ಲ. ಇಂತಹ ಇನ್ನೂ ಅದೆಷ್ಟೋ ಪ್ರಕರಣಗಳಿವೆ. ತೀರಾ ಈಚೆಗೆ ನಡೆದ ಒಂದು ಪ್ರಕರಣವನ್ನು ಗಮನಿಸಿ. ಸಹವರ್ತಿ ನ್ಯಾಯಾಧೀಶೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಸಿವಿಲ್ ನ್ಯಾಯಾಧೀಶರೊಬ್ಬರನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ತನಿಖೆಗೂ ಆದೇಶಿಸಲಾಗಿದೆ.
ಮಾನವಹಕ್ಕು ಆಯೋಗ (ಎನ್ಹೆಚ್ಆರ್ಸಿ)ದ ಅಧ್ಯಕ್ಷರಾಗಿದ್ದ ಕೆ.ಜಿ. ಬಾಲಕೃಷ್ಣನ್ ಅವರ ಮೇಲೂ ಭ್ರಷ್ಟಾಚಾರದ ಕಳಂಕ ಅಂಟಿತ್ತು. ಆದಾಯ ಮೀರಿದ ಅಕ್ರಮ ಗಳಿಕೆಯ ಆರೋಪ ಅವರ ಮೇಲಿತ್ತು. ಕೆ.ಜಿ. ಬಾಲಕೃಷ್ಣನ್ ಸುಪ್ರೀಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆಗಿದ್ದವರು. 2ಜಿ ತರಂಗಾಂತರ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮಾಜಿ ಕೇಂದ್ರ ಸಚಿವ ಎ.ರಾಜಾ ಅವರನ್ನು ಬಚಾವ್ ಮಾಡಿದ ಆರೋಪದ ತೂಗುಕತ್ತಿ ಅವರ ಮೇಲಿತ್ತು. ಕೆ.ಜಿ. ಬಾಲಕೃಷ್ಣನ್ ಕೇರಳದ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿದ್ದಾಗಲೂ ಅವರು ನೀಡುತ್ತಿದ್ದ ತೀರ್ಪುಗಳು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿರುತ್ತಿರಲಿಲ್ಲ ಎಂದು ಕೆಲವು ಹಿರಿಯ ನ್ಯಾಯವಾದಿಗಳು ಹೇಳುತ್ತಾರೆ.
ಅವೆಲ್ಲ ಹಾಗಿರಲಿ, 2010 ರ ಸೆಪ್ಟೆಂಬರ್ ತಿಂಗಳಲ್ಲಿ ಹಿರಿಯ ವಕೀಲ ಶಾಂತಿಭೂಷಣ್ ಸುಪ್ರೀಂಕೋರ್ಟ್ಗೆ ಅರ್ಜಿಯೊಂದನ್ನು ಸಲ್ಲಿಸಿ, ಸೀಲ್ ಮಾಡಿದ ಕವರ್ವೊಂದನ್ನು ಮುಖ್ಯನ್ಯಾಯಾಧೀಶರಿಗೆ ನೀಡಿದ್ದರು. ‘ಸ್ವಾತಂತ್ರ್ಯ ಬಂದ ಬಳಿಕ ಆಗಿ ಹೋದ 16 ಮಂದಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಪೈಕಿ 8 ಮಂದಿ ಭ್ರಷ್ಟರು, 6 ಮಂದಿ ಅತ್ಯಂತ ಪ್ರಾಮಾಣಿಕರು, ಉಳಿದಿಬ್ಬರ ಬಗ್ಗೆ ಅವರು ಭ್ರಷ್ಟರೋ ಅಥವಾ ಪ್ರಾಮಾಣಿಕರೋ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ನಾನು ಹೀಗೆ ಅಧಿಕೃತವಾಗಿ ಹೇಳಿದ್ದು ನ್ಯಾಯಾಂಗ ನಿಂದನೆಯಾಗಿದ್ದಲ್ಲಿ ನನ್ನನ್ನು ಜೈಲಿಗೆ ಕಳುಹಿಸಿ. ನನಗೇನೂ ಬೇಸರವಿಲ್ಲ’ ಎಂದು ಶಾಂತಿಭೂಷಣ್ ಆಗ ಸುಪ್ರೀಕೋರ್ಟ್ಗೆ ಸವಾಲು ಹಾಕಿದ್ದರು. ಸುಪ್ರೀಕೋರ್ಟ್ಗೆ ಅವರು ಸಲ್ಲಿಸಿದ ಸೀಲ್ ಮಾಡಿದ ಕವರ್ನಲ್ಲಿ 8 ಮಂದಿ ಭ್ರಷ್ಟಾತಿಭ್ರಷ್ಟ ಸಿಜೆಐಗಳು ಯಾರೆಂಬುದರ ದಾಖಲೆ ಇತ್ತು. ಧೈರ್ಯವಿದ್ದರೆ ಸೀಲ್ ಮಾಡಿದ ಈ ಕವರ್ ಒಡೆದು ಅಲ್ಲಿರುವ ಹೆಸರಗಳನ್ನು ಓದಿ ಎಂದೂ ಸವಾಲೆಸೆದಿದ್ದರು. ಆದರೆ ಆ ಕವರ್ ಒಡೆದು ಅದರಲ್ಲಿರುವ ಕಳಂಕಿತ ಸಿಜೆಐಗಳ ಹೆಸರನ್ನು ಬಹಿರಂಗಪಡಿಸುವ ಧೈರ್ಯವನ್ನು ಸುಪ್ರೀಂಕೋರ್ಟ್ ಇದುವರೆಗೂ ಪ್ರದರ್ಶಿಸಿಲ್ಲ. ಶಾಂತಿಭೂಷಣ್ ನ್ಯಾಯಾಲಯಕ್ಕೆ ಸಲ್ಲಿಸಿದ ಆ ಅರ್ಜಿಯನ್ನು ಸ್ವೀಕರಿಸಿ ವಿಚಾರಣೆಗೂ ಎತ್ತಿಕೊಳ್ಳಲಿಲ್ಲ. ಶಾಂತಿಭೂಷಣ್ ಯಾರೋ ಅಬ್ಬೇಪಾರಿಯಾಗಿದ್ದರೆ ಅವರಿಗೆ ಈ ವೇಳೆಗೆ ನ್ಯಾಯಾಲಯದ ಕಾಲಹರಣ ಮಾಡಿದ ತಪ್ಪಿಗೆ ದಂಡ ಅಥವಾ ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ ಅವರು ಪ್ರಖ್ಯಾತ ವಕೀಲರು. 1975 ರಲ್ಲಿ ಇಂದಿರಾಗಾಂಧಿ ಭ್ರಷ್ಟಾಚಾರವೆಸಗಿ ಚುನಾವಣೆ ಗೆದ್ದಿದ್ದಾರೆಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಿ, ಆಕೆಯ ಪದಚ್ಯುತಿಗೆ ಮುನ್ನುಡಿ ಬರೆದ ದಿಟ್ಟ ವ್ಯಕ್ತಿ.
ಶಾಂತಿಭೂಷಣ್ ಸುಪ್ರೀಕೋರ್ಟ್ಗೆ ನೀಡಿದ ಸೀಲ್ ಮಾಡಿದ ಕವರ್ನಲ್ಲಿದ್ದ 8 ಮಂದಿ ಕಳಂಕಿತ ಸಿಜೆಐಗಳಲ್ಲಿ ವೈ.ಕೆ.ಸಬರವಾಲ್ ಅವರಂತೂ ಅತ್ಯಂತ ಭ್ರಷ್ಟರೆಂದು ಪ್ರಬಲ ಪುರಾವೆಗಳ ಸಹಿತ ಶಾಂತಭೂಷಣ್ ವಿವರಿಸಿದ್ದರು. ತಮ್ಮ ಪುತ್ರರಿಗೆ ಅನುಕೂಲವಾಗಲೆಂದು ದೆಹಲಿಯ ಲಕ್ಷಾಂತರ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚಿಸುವ ತೀರ್ಪು ನೀಡಿದ್ದು, ಅವರ ಪುತ್ರರು ತಮ್ಮ ವ್ಯಾಪಾರಿ ಸಂಸ್ಥೆಗಳ ವಿಳಾಸವನ್ನು ಸಿಜೆಐಯ ಅಧಿಕೃತ ನಿವಾಸವೆಂದು ಕೊಟ್ಟಾಗಲೂ ಸುಮ್ಮನಿದ್ದುದು, ಉ.ಪ್ರ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಅವರಿಂದ ಸಬರವಾಲಾ ಪುತ್ರರು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ 4 ಬೆಳೆಬಾಳುವ ಫ್ಲಾಟ್ಗಳನ್ನು ಪಡೆದದ್ದು , ಇದಕ್ಕೆ ಪ್ರತಿಯಾಗಿ ಮುಲಾಯಂ ಸಿಂಗ್ರಿಗೆ ಆಪ್ತರಾಗಿದ್ದ ಅಮರ್ ಸಿಂಗ್ಗೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಪೂರಕ ತೀರ್ಪು ನೀಡಿದ್ದು … ಹೀಗೆ ಸಬರವಾಲರ ವಿರುದ್ಧ ಶಾಂತಿಭೂಷಣ್ ಕಲೆಹಾಕಿರುವ ಪುರಾವೆಗಳು ಹಲವು. ಸಬರವಾಲಾ ಎಸಗಿದ ಇಂತಹ ಭ್ರಷ್ಟಾಚಾರ ಹಗರಣಗಳನ್ನು ಬಯಲಿಗೆಳೆದ ದೆಹಲಿಯ ಮೂವರು ಪತ್ರಕರ್ತರು ಹಾಗೂ ಒಬ್ಬ ಪ್ರಕಾಶಕರಿಗೆ ದೆಹಲಿ ಹೈಕೋರ್ಟ್ ನಾಲ್ಕು ತಿಂಗಳ ಶಿಕ್ಷೆಯನ್ನೂ ವಿಧಿಸಿತ್ತು.
ಇದೆಲ್ಲಾ, ಈಗ ಜನಮಾನಸದಿಂದ ಅಳಿಸಿಹೋದ ಹಳೆಯ ವಿದ್ಯಮಾನಗಳು. ಸುಪ್ರೀಕೋರ್ಟ್ನ ಮುಖ್ಯನ್ಯಾಯಧೀಶರೇ ಕಳಂಕಿತರೆನಿಸಿಕೊಂಡರೆ ಇನ್ನು ಉಳಿದವರ ಪಾಡೇನು? ಲೋಕಾಯುಕ್ತ ನ್ಯಾ.ಭಾಸ್ಕರ ರಾವ್ ರಾಜೀನಾಮೆ ಕೊಡದಿರಲು ಬಹುಶಃ ಇಂತಹ ವಿದ್ಯಮಾನಗಳೂ ಕಾರಣವಾಗಿರಬಹುದು!
ಭ್ರಷ್ಟಾಚಾರವೆಂಬ ಅರ್ಬುದ ರೋಗ ಇಡೀ ದೇಶದ ಎಲ್ಲಾ ರಂಗಗಳನ್ನು ವ್ಯಾಪಿಸಿದೆ. ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು, ಪತ್ರಕರ್ತರು, ಸಚಿವರು, ಮುಖ್ಯಮಂತ್ರಿಗಳು, ಮಠಾಧೀಶರು, ನ್ಯಾಯಾಧೀಶರು.. ಹೀಗೆ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗದವರೇ ಇಲ್ಲ. ಭ್ರಷ್ಟಾಚಾರಿಗಳನ್ನು ಬಯಲಿಗೆಳೆಯುವ ಪತ್ರಕರ್ತರು, ಭ್ರಷ್ಟಾಚಾರ ನಿಗ್ರಹಿಸಬೇಕಾದ ಲೋಕಾಯುಕ್ತ ಹುದ್ದೆಯಲ್ಲಿರುವ ನ್ಯಾಯಾಧೀಶರು ಕೂಡ ಭ್ರಷ್ಟಾಚಾರದ ಕೊಳಕನ್ನು ಮೈತುಂಬ ಅಂಟಿಸಿಕೊಂಡಿರುವುದು ಈ ಕಾಲದ ವೈರುಧ್ಯ.
ಕಲಿಯುಗಾಂತ್ಯದಲ್ಲಿ ಹೀಗೆಲ್ಲ ನಡೆಯುತ್ತದೆಂದು ಸುಮಾರು ಐದೂವರೆ ಸಾವಿರ ವರ್ಷಗಳಷ್ಟು ಹಿಂದೆ ಜೀವಿಸಿದ್ದ ಮಹರ್ಷಿ ವ್ಯಾಸರೇ ಅಪ್ಪಣೆ ಕೊಡಿಸಿದ್ದರು. ಅವರು ಹೇಳಿರುವ ಇಂತಹ ಭವಿಷ್ಯವಾಣಿಗಳಲ್ಲಿ ಒಂದು: ‘ಧರ್ಮ ಕ್ಷೀಣಿಸುತ್ತದೆ. ಜನರ ನೈತಿಕ ಮಟ್ಟ ಕಡಿಮೆಯಾಗತೊಡಗುತ್ತದೆ. ಗೋಪ್ಯವಾಗಿಟ್ಟ ವಿಶ್ವಸ್ತ ನಿಧಿಗಳನ್ನು ನುಂಗಿಹಾಕಲು ಆಗಿನ ಜನರು ಹಿಂಜರಿಯುವುದಿಲ್ಲ. ಪಾಪಾತ್ಮರು ಕಲಿಯುಗಾಂತ್ಯದಲ್ಲಿ ಪರರ ಸ್ವತ್ತಿನ ಅಪಹಾರಕ್ಕಾಗಿಯೇ ಹೊಂಚು ಹಾಕುತ್ತಿರುತ್ತಾರೆ.’ ಈಗಿನ ವಿದ್ಯಮಾನಗಳನ್ನು ಗಮನಿಸಿದರೆ ವ್ಯಾಸರ ಭವಿಷ್ಯವಾಣಿ ನಿಜವಾಗುತ್ತಿದೆಯೇನೋ ಎಂಬ ಅನುಮಾನ ಕಾಡುವುದು ಸಹಜ. ಸುಮಾರು ನಾನೂರು ವರ್ಷಗಳ ಹಿಂದೆ ಪುರಂದರದಾಸರು ‘ಸತ್ಯವಂತರಿಗಿದು ಕಾಲವಲ್ಲ’ ಅಂತ ಹೇಳಿದ್ದರು. ವ್ಯಾಸರದ್ದು ಭವಿಷ್ಯವಾಣಿ, ಪುರಂದರದಾಸರದ್ದು ಅನುಭವವಾಣಿ! ಈ ಕಲಿಯುಗದಲ್ಲಿ ಪುಣ್ಯಾತ್ಮರು, ಪ್ರಾಮಾಣಿಕರೇ ಅಲ್ಪಸಂಖ್ಯಾತರು. ಭ್ರಷ್ಟಾಚಾರಿಗಳೇ ಬಹುಸಂಖ್ಯಾತರು.
ಇದುವರೆಗೆ ಅನ್ಯಾಯವೆಸಗಿದವರು ನ್ಯಾಯಾಲಯದ ಕಟಕಟೆಯಲ್ಲಿ ತಲೆಬಗ್ಗಿಸಿ ನಿಲ್ಲಬೇಕಾಗಿತ್ತು. ಆದರೀಗ ನ್ಯಾಯಾಧೀಶರೇ ಕಟಕಟೆಯಲ್ಲಿ ತಲೆತಗ್ಗಿಸಿ ನಿಲ್ಲಬೇಕಾದ ಪ್ರಸಂಗ ಬಂದಿದೆ. ಇದನ್ನೆಲ್ಲಾ ನೋಡಲಾಗದೆ ನ್ಯಾಯದೇವತೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಯಾವುದೋ ಕಾಲವಾಗಿದೆ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.