ಶ್ರೀನಗರ: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತೀಯ ಭದ್ರತಾ ಪಡೆಗಳಿಗೆ ಮಹತ್ವದ ಪ್ರಗತಿ ಸಿಕ್ಕಿದೆ, ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದ್ದು, ಇವರು ಪಾಕಿಸ್ಥಾನಿ ಪ್ರಜೆಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರನ್ನು ನಿರಂತರವಾಗಿ ವಿಚಾರಣೆಗೊಳಪಡಿಸಲಾಗುತ್ತಿದ್ದು, ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರವನ್ನು ಹರಡಲು ಇವರನ್ನು ಪಾಕಿಸ್ಥಾನ ಕಳುಹಿಸಿಕೊಟ್ಟಿದೆ ಎಂದು ತಿಳಿದು ಬಂದಿದೆ.
ಬಂಧಿತ ಇಬ್ಬರು ಭಯೋತ್ಪಾದಕರನ್ನು ಖಲೀಲ್ ಅಹ್ಮದ್ ಮತ್ತು ನಜೀಮ್ ಖೋಕರ್ ಎಂದು ಗುರುತಿಸಲಾಗಿದ್ದು, ವಿಚಾರಣೆಯ ವೇಳೆ ಪಾಕಿಸ್ಥಾನವು ಭಾರತ ಮೇಲೆ ನಡೆಸಲು ಉದ್ದೇಶಿಸಿರುವ ದುಷ್ಕೃತ್ಯಗಳನ್ನು ಮತ್ತು ಅದರ ದುರುದ್ದೇಶಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ. ಭಯೋತ್ಪಾದಕರಿಗೆ ಅಲ್ಲಿ ಸೇನೆಯು ತರಬೇತಿ ನೀಡುತ್ತಿರುವುದನ್ನು ಮತ್ತು ಜಮ್ಮು ಕಾಶ್ಮೀರದೊಳಗೆ ನುಸುಳಲು ಸಹಾಯ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಭಾರತೀಯ ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುವಂತೆ ನಮಗೆ ಸೂಚನೆಯನ್ನು ನೀಡಲಾಗಿದೆ ಎಂಬುದನ್ನೂ ವಿವರಿಸಿದ್ದಾರೆ ಎನ್ನಲಾಗಿದೆ.
ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ಕೊಟ್ಟಿದ್ದ ಭಾರತ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದಾಗಿನಿಂದ ಪಾಕಿಸ್ಥಾನದ ಹತಾಶೆ ಉತ್ತುಂಗಕ್ಕೇರಿದೆ. ಇದೇ ಹತಾಶೆಯಲ್ಲಿ ಇಸ್ಲಾಮಾಬಾದ್ ಜಮ್ಮು ಕಾಶ್ಮೀರದ ಸಾಮಾನ್ಯ ಜನಜೀವನವನ್ನು ಅಡ್ಡಿಪಡಿಸಲು ಭಯೋತ್ಪಾದಕರನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ.
ಪಾಕಿಸ್ಥಾನವು ಭಯೋತ್ಪಾದಕರನ್ನು ಬಳಸಿಕೊಂಡು ಭಾರತದ ವಿರುದ್ಧ ಪರೋಕ್ಷ ಯುದ್ಧವನ್ನು ದೀರ್ಘಕಾಲ ನಡೆಸುತ್ತಲೇ ಬಂದಿದೆ. ಜಮ್ಮು ಕಾಶ್ಮೀರದ ಒಳಗೆ ನುಸುಳಲು ಹವಣಿಸುತ್ತಿರುವ ಭಯೋತ್ಪಾದಕರಿಗೆ ರಕ್ಷಣೆ ನೀಡುವ ಸಲುವಾಗಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ಥಾನ ಪಡೆಗಳು ನಿರಂತರವಾಗಿ ಕದನ ವಿರಾಮವನ್ನು ಉಲ್ಲಂಘಿಸುತ್ತವೆ.
ಭಯೋತ್ಪಾದನೆಯ ಬಗೆಗಿನ ಭಾರತದ ಶೂನ್ಯ ಸಹಿಷ್ಣುತೆ ನೀತಿ ಮತ್ತು ಭಾರತೀಯ ಭದ್ರತಾ ಪಡೆಗಳ ಶೌರ್ಯವು ಪಾಕಿಸ್ಥಾನದ ತುಚ್ಛ ಉದ್ದೇಶಗಳನ್ನು ವಿಫಲಗೊಳಿಸುತ್ತಲೇ ಇವೆ. ಭಯೋತ್ಪಾದಕ ಗುಂಪುಗಳು ಈಗ ಜಮ್ಮು ಮತ್ತು ಕಾಶ್ಮೀರದ ಸ್ಥಳೀಯರನ್ನು ಬೆದರಿಸುವ ಮತ್ತು ಭಾರತದ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳನ್ನು ನಡೆಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.