ಶ್ರೀನಗರ: ಪಾಕಿಸ್ಥಾನ ಸೇನಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಸುಂದರ್ಬಾನಿ ಸೆಕ್ಟರ್ನಲ್ಲಿ ಶುಕ್ರವಾರ ಅಪ್ರಚೋದಿತ ಭಾರಿ ಗುಂಡಿನ ದಾಳಿಯನ್ನು ನಡೆಸಿದ್ದು, ಇದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತಿಕ್ರಿಯೆಯನ್ನು ನೀಡಿದೆ. ಕದನ ವಿರಾಮವನ್ನು ಉಲ್ಲಂಘಿಸಿದ ಪಾಕಿಗಳು ಬಳಿಕ ಭಾರತದ ನೆಲೆಯನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಗುಂಡಿನ ದಾಳಿ ನಡೆಸಿವೆ ಎಂದು ಹೇಳಲಾಗಿದೆ.
ಪಾಕಿಸ್ಥಾನದ ಕಡೆಯಿಂದ ಶೆಲ್ ದಾಳಿ ಗುರುವಾರ ರಾತ್ರಿಯಿಂದ ಹಿಡಿದು ಶುಕ್ರವಾರ ಬೆಳಿಗ್ಗೆ ತನಕ ಮುಂದುವರೆದಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಭಾರತೀಯ ಸೈನಿಕರಿಂದ ಆಕ್ರಮಣಕಾರಿ ಪ್ರತಿಕ್ರಿಯೆ ದೊರೆತ ಹಿನ್ನಲೆಯಲ್ಲಿ ಶೆಲ್ ದಾಳಿಯನ್ನು ಪಾಕಿಗಳು ನಿಲ್ಲಿಸಿದರು ಎಂದು ಹೇಳಲಾಗಿದೆ.
ಪಾಕಿಸ್ಥಾನದ ಶೆಲ್ ದಾಳಿಗೆ ಭಾರತೀಯ ಸೇನೆಯು ಪ್ರತೀಕಾರ ತೀರಿಸುತ್ತಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 17 ರಂದು ರಾಜೌರಿ ಜಿಲ್ಲೆಯಲ್ಲಿ ಭಾರೀ ಶೆಲ್ ದಾಳಿ ನಡೆಸಿದ ಪಾಕಿಗಳ ವಿರುದ್ಧ ಭಾರತೀಯ ಸೇನೆಯು ಪ್ರತೀಕಾರವನ್ನು ತೀರಿಸಿಕೊಂಡು ಅದರ ಪೋಸ್ಟ್ವೊಂದನ್ನು ಧ್ವಂಸ ಮಾಡಿತ್ತು. ಈ ಶೆಲ್ ದಾಳಿಯಿಂದಾಗಿ ಭಾರತೀಯ ಸೇನೆಯ ಸೈನಿಕ ಲ್ಯಾನ್ಸ್ ನಾಯಕ್ ಸಂದೀಪ್ ಥಾಪಾ ಅವರು ಹುತಾತ್ಮರಾಗಿದ್ದರು. ತನ್ನ ಪೋಸ್ಟ್ ನಾಶವಾದ ಕೆಲವೇ ದಿನಗಳ ಬಳಿಕ ಪಾಕಿಸ್ಥಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆಯಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ 370 ನೇ ವಿಧಿಯನ್ನು ಭಾರತ ರದ್ದುಪಡಿಸಿದ ನಂತರ ಪಾಕಿಸ್ಥಾನವು ಕದನ ವಿರಾಮ ಉಲ್ಲಂಘನೆಯನ್ನು ಇನ್ನಷ್ಟು ಹೆಚ್ಚಳಗೊಳಿಸಿದೆ.
ಉಭಯ ದೇಶಗಳ ನಡುವೆ 2003 ರಲ್ಲಿ ನಡೆದ ಕದನ ವಿರಾಮ ಒಪ್ಪಂದವನ್ನು ಗೌರವಿಸಿ ಎಂದು ಭಾರತ ಪಾಕಿಸ್ಥಾನಕ್ಕೆ ಸೂಚನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.