ಲೇಹ್ ಮತ್ತು ಕಾರ್ಗಿಲ್ ಎಂಬ ಎರಡು ಜಿಲ್ಲೆಗಳನ್ನು, 2.75 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಭಾರತದ ಉತ್ತರ ಗಡಿಯಲ್ಲಿರುವ ಗುಡ್ಡಗಾಡು ಭೌಗೋಳಿಕ ಪ್ರದೇಶವಾದ ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಡಿಸಲಾಗಿದೆ. ಡಾಮನ್ ಮತ್ತು ಡಿಯು ರೀತಿಯಲ್ಲೇ ಇದು ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ಮರುಸಂಘಟನೆಯಾಗಲಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಲಡಾಕ್ ಪ್ರದೇಶವು ಕಳುಹಿಸುತ್ತಿದ್ದ ಶಾಸಕರ ಸಂಖ್ಯೆ ಅಪ್ರಸ್ತುತವಾಗಿತ್ತು, ಇತರ ಎರಡು ಪ್ರದೇಶಗಳ ಸದಸ್ಯರಿಗೆ ಹೋಲಿಸಿದರೆ ಅಲ್ಪ ಸಂಖ್ಯೆಯ ಶಾಸಕರನ್ನು ಇದು ಹೊಂದಿತ್ತು. ಇಲ್ಲಿನ ಶಾಸಕಾಂಗ ಸದಸ್ಯರಿಗೆ ರಾಜ್ಯದಲ್ಲಿ ಯಾವುದೇ ರೀತಿಯ ಚೌಕಾಶಿ ಮಾಡುವ ಅಧಿಕಾರವಿರಲಿಲ್ಲ ಮತ್ತು ಇದೇ ಕಾರಣಕ್ಕೆ ಈ ಪ್ರದೇಶ ದಶಕಗಳಿಂದಲೂ ನಿರ್ಲಕ್ಷಕ್ಕೊಳಗಾಗುತ್ತಾ ಬಂದಿದೆ.
ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ ಪ್ರದೇಶದ ರಾಜಕಾರಣಿಗಳ ಹಸ್ತಕ್ಷೇಪವಿಲ್ಲದೆ ಈ ಪ್ರದೇಶವು ಅಭಿವೃದ್ಧಿ ಹೊಂದಬಹುದು. ಲೇಹ್ ಬಹಳ ಮುಖ್ಯವಾದ ಪ್ರವಾಸಿ ಕೇಂದ್ರವಾಗಿದೆ ಮತ್ತು ಆರ್ಥಿಕತೆಯನ್ನು ಬೆಂಬಲಿಸುವ ಪ್ರವಾಸೋದ್ಯಮವು ಈ ಪ್ರದೇಶದ ಪ್ರಾಥಮಿಕ ಚಟುವಟಿಕೆಯಾಗಿದೆ. ಆದ್ದರಿಂದ ಪ್ರವಾಸಿಗರ ಅಗತ್ಯಗಳಿಗೆ ತಕ್ಕಂತೆ ಅಭಿವೃದ್ಧಿ ಹೊಂದಲು ಮತ್ತು ಜನರ ಉತ್ಪಾದಕತೆಯನ್ನು ಹೆಚ್ಚಿಸಲು ಈ ಪ್ರದೇಶವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ.
ಪ್ರವಾಸೋದ್ಯಮದ ಹೊರತಾಗಿ, ಲಡಾಖ್ ಅನ್ನು ಅಮೂಲ್ಯ ಖನಿಜ ಸಂಪನ್ಮೂಲಗಳು ಮತ್ತು ಜಲವಿದ್ಯುತ್ ಯೋಜನೆಗಳಿಗೆ ಬಳಸಿಕೊಳ್ಳಬಹುದು. 2007 ರಲ್ಲಿ ಪ್ರಕಟವಾದ ಹಿಂದೂಸ್ತಾನ್ ಟೈಮ್ಸ್ ಲೇಖನವೊಂದರ ಪ್ರಕಾರ, ವಿಜ್ಞಾನಿಗಳು ಲಡಾಖ್ನಲ್ಲಿ ಯುರೇನಿಯಂನ “ಅಸಾಧಾರಣವಾದ ಹೆಚ್ಚಿನ ಸಾಂದ್ರತೆಯನ್ನು” ಕಂಡುಕೊಂಡಿದ್ದಾರೆ. “ಜರ್ಮನಿಯ ಪ್ರಯೋಗಾಲಯದಲ್ಲಿ ವಿಶ್ಲೇಷಿಸಲಾದ ಬಂಡೆಗಳ ಮಾದರಿಯ ಯುರೇನಿಯಂ ಅಂಶವು ಇಲ್ಲಿ ಶೇಕಡಾ 5.36 ರಷ್ಟಿದೆ ಎಂದು ಬಹಿರಂಗಪಡಿಸಿದ್ದಾರೆ. ದೇಶದ ಬೇರೆಡೆ ಇರುವುದು ಶೇಕಡಾ 0.1 ಅಥವಾ ಅದಕ್ಕಿಂತ ಕಡಿಮೆ” ಎಂದು ವರದಿ ಹೇಳಿದೆ. ಭಾರತಕ್ಕೆ ತನ್ನ ಪರಮಾಣು ವಿದ್ಯುತ್ ಸ್ಥಾವರಗಳಿಗೆ ಇಂಧನ ತುಂಬಲು ಯುರೇನಿಯಂನ ಅಗತ್ಯವಿದೆ. ಅಗ್ಗದ ಮತ್ತು ಶುದ್ಧ ಮೂಲವಾಗಿ ತನ್ನ ಪರಮಾಣು ಶಕ್ತಿಯನ್ನು ದೊಡ್ಡ ಮಟ್ಟದಲ್ಲಿ ಮುನ್ನಡೆಸುವ ಗುರಿಯನ್ನು ನಮ್ಮ ದೇಶ ಹೊಂದಿದೆ. ಪರಮಾಣು ಶಕ್ತಿಯನ್ನು ಬೃಹತ್ ಪ್ರಮಾಣದಲ್ಲಿ ಮತ್ತು ಯುರೇನಿಯಂ ಅನ್ನು ನಿರ್ಣಾಯಕ ಮೂಲದಲ್ಲಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲಾ ಅಂತರರಾಷ್ಟ್ರೀಯ ಪ್ರಕ್ರಿಯೆಯನ್ನು ನಮ್ಮ ದೇಶ ಪೂರ್ಣಗೊಳಿಸಿದೆ. ಅಮೂಲ್ಯ ಖನಿಜದ ವಿರಳತೆ ಮತ್ತು ಉಪಯುಕ್ತತೆಯನ್ನು ಗಮನಿಸಿದರೆ, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳ ದುಬಾರಿಯಾಗಿದೆ. ದೇಶೀಯವಾಗಿ ಲಭ್ಯವಿರುವ ಯುರೇನಿಯಂ ಅನ್ನು ಭಾರತ ಹೊರತೆಗೆಯಲು ಸಾಧ್ಯವಾದರೆ, ದೇಶದಲ್ಲಿ ಪರಮಾಣು ಶಕ್ತಿಯ ವೆಚ್ಚವು ಕಡಿಮೆಯಾಗುತ್ತದೆ.
2007 ರಲ್ಲಿ ಈ ಲಡಾಖ್ ಪ್ರದೇಶದಲ್ಲಿ ಯುರೇನಿಯಂ ಇರುವುದು ಕಂಡುಬಂದಿದೆ ಆದರೆ ರಾಜ್ಯ ಸರ್ಕಾರದ ಅಡಚಣೆಯಿಂದಾಗಿ ಯಾವುದೇ ದೊಡ್ಡ ಅಭಿವೃದ್ಧಿಯನ್ನು ಈ ವಿಷಯದಲ್ಲಿ ಸಾಧಿಸಲು ಸಾಧ್ಯವಾಗಲಿಲ್ಲ. ಈಗ ಲಡಾಖ್ ನೇರವಾಗಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ, ಯುರೇನಿಯಂ ಅನ್ನು ಅಲ್ಲಿಂದ ಹೊರತೆಗೆಯಬಹುದು ಮತ್ತು ಲಡಾಖ್ನ ಕೇಂದ್ರಾಡಳಿತ ಪ್ರದೇಶವು ಅದಕ್ಕೆ ನ್ಯಾಯಯುತ ಪರಿಹಾರವನ್ನು ಪಡೆದುಕೊಳ್ಳಬಹುದು. ಇದರಿಂದ ಅಲ್ಲಿನ ಸ್ಥಳೀಯ ಜನರ ಜೀವನ ಮಟ್ಟವನ್ನು ಸುಧಾರಿಸಲು ಸಹಾಯವಾಗಲಿದೆ.
ನಿಮೂ ಬಾಜ್ಗೊ ವಿದ್ಯುತ್ ಯೋಜನೆ ಈಗಾಗಲೇ ಈ ಪ್ರದೇಶದ ಪ್ರಮುಖ ಜಲವಿದ್ಯುತ್ ಯೋಜನೆಯಾಗಿದೆ. ಸಿಂಧೂ ನದಿಯ ಹರಿವು ಈ ಪ್ರದೇಶದಲ್ಲಿ ತುಂಬಾ ತೀಕ್ಷ್ಣವಾಗಿದೆ ಮತ್ತು ಆದ್ದರಿಂದ ಈ ಪ್ರದೇಶದಲ್ಲಿನ ಜಲವಿದ್ಯುತ್ ಯೋಜನೆಗೆ ತುಂಬಾ ಸಾಮರ್ಥ್ಯವಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿದ್ಯುತ್ ಅಭಿವೃದ್ಧಿ ನಿಗಮ ಲಿಮಿಟೆಡ್ನ ವರದಿಯ ಪ್ರಕಾರ, “ಲಡಾಖ್ ಸಂಸ್ಕೃತಿಯಲ್ಲಿ ಮಾತ್ರವಲ್ಲ, ಜಲವಿದ್ಯುತ್ ಸಾಮರ್ಥ್ಯದಲ್ಲೂ ಸಮೃದ್ಧವಾಗಿದೆ.”
ಸಿಂಧೂ ನದಿಯಲ್ಲಿ 760 ಮೆಗಾವ್ಯಾಟ್ ಸಾಮರ್ಥ್ಯದ ಐದು ಜಲ ವಿದ್ಯುತ್ ಯೋಜನೆಗಳನ್ನು ಸರ್ಕಾರ ಗುರುತಿಸಿದೆ.
ಲಡಾಖ್ ಪ್ರದೇಶದಲ್ಲಿ ತೀಕ್ಷ್ಣವಾದ ಹರಿವನ್ನು ಹೊಂದಿರುವ ಇತರ ಎರಡು ನದಿಗಳಾದ ಸುರು ಮತ್ತು ಡ್ರಾಸ್, 95 ಮೆಗಾವ್ಯಾಟ್ ಸಾಮರ್ಥ್ಯವನ್ನು ಉತ್ಪಾದಿಸಬಹುದು.
ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲು ಮತ್ತು ದಿನದ 24 ಗಂಟೆಯೂ ಶುದ್ಧ ಶಕ್ತಿಯನ್ನು ಒದಗಿಸಲು ಈ ಪ್ರದೇಶದಲ್ಲಿ ಈಗಾಗಲೇ 9 ಯೋಜನೆಗಳು ನಡೆಯುತ್ತಿವೆ. “ಈ ಯೋಜನೆಯಿಂದ ಉತ್ಪತ್ತಿಯಾಗುವ ಶುದ್ಧ ಶಕ್ತಿಯು ಪಳೆಯುಳಿಕೆ ಇಂಧನ ಆಧಾರಿತ ಶಕ್ತಿಯನ್ನು ಬದಲಾಯಿಸಲಿದೆ, ಇದರಿಂದಾಗಿ ಈ ಪ್ರದೇಶದ ಪ್ರಾಚೀನ ಪರಿಸರದ ಸಂರಕ್ಷಣೆಯೂ ಆಗಲಿದೆ” ಎಂದು ಜೆಕೆಎಸ್ಪಿಡಿಸಿ ವರದಿ ತಿಳಿಸಿದೆ.
ಲಡಾಖ್ ಜಲವಿದ್ಯುತ್ ಸಾಮರ್ಥ್ಯವು ಭಾರಿ ಸಂಭಾವ್ಯತೆಗಳನ್ನು ಹೊಂದಿದೆ, ಇದನ್ನು ದೇಶೀಯ ಬೇಡಿಕೆ ಮತ್ತು ರಫ್ತು ಪೂರೈಸಲು ಬಳಸಬಹುದು. ಈ ಪ್ರದೇಶದ ಜಲವಿದ್ಯುತ್ ಶಕ್ತಿಯನ್ನು ನೆರೆಯ ರಾಜ್ಯಗಳಿಗೆ ಮಾರಾಟ ಮಾಡಬಹುದು ಮತ್ತು ಇದರಿಂದ ಸಾರ್ವಜನಿಕರ ಬೊಕ್ಕಸಕ್ಕೆ ಆದಾಯವನ್ನು ಗಳಿಸಬಹುದು.
ಲಡಾಖ್ ಪ್ರದೇಶದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ತುಂಬಾ ಹೆಚ್ಚಾಗಿತ್ತು. ಎಲ್ಲಾ ಧಾರ್ಮಿಕ ಜಂಟಿ ಕ್ರಿಯಾ ಸಮಿತಿ (ARJAC) ನಾಯಕರು ಲಡಾಖ್ಗೆ ಕೇಂದ್ರ ಪ್ರದೇಶದ ಸ್ಥಾನಮಾನವನ್ನು ಕೋರಿ ನಿರ್ಣಯವನ್ನು ಅಂಗೀಕರಿಸಿದ್ದರು. ಪ್ರಧಾನ ಮಂತ್ರಿಗೆ ನೀಡಿದ ಜ್ಞಾಪಕ ಪತ್ರದಲ್ಲಿ, “ಆಧುನಿಕ ಕಾಲದಲ್ಲಿ, ಇಡೀ ಉಪಖಂಡವು ರಾಷ್ಟ್ರೀಯ ಸ್ವಾತಂತ್ರ್ಯದ ಫಲವನ್ನು ಆನಂದಿಸಲು ವಸಾಹತುಶಾಹಿ ಪ್ರಕ್ರಿಯೆಯನ್ನು ದಾಟಿ ಮುಂದೆ ಹೋಗಿದೆ, ಆದರೆ ನಾವು ಲಡಾಖ್ ಜನರು ಮತ್ತು ನಮ್ಮ ಭೂಮಿ ಇನ್ನೂ ಹಳೆಯ ವಸಾಹತುಶಾಹಿ ಆಡಳಿತ ರಚನೆಯ ಪರಿಕಲ್ಪನೆಯಡಿಯಲ್ಲಿ ನರಳುತ್ತಿದೆ, ಜಮ್ಮು ಮತ್ತು ಕಾಶ್ಮೀರವೆಂಬ ಹುಸಿ ರಾಜ್ಯದ ಹೆಸರಿನಲ್ಲಿ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳು ಮತ್ತು ಉಳಿಗಮಾನ್ಯ ಆಡಳಿತಗಾರರು ನಮ್ಮನ್ನು ನರಳುವಂತೆ ಮಾಡಿದ್ದಾರೆ” ಎಂದು ARJAC ನಾಯಕರು ಹೇಳಿದ್ದರು.
ಈಗ ಲಡಾಖ್ನ ಆರ್ಥಿಕ ವಸಾಹತುಶಾಹಿ ಕೊನೆಗೊಂಡಿದೆ, ಇನ್ನು ಮುಂದೆ ಅದು ತನ್ನ ಆರ್ಥಿಕ ಸಾಮರ್ಥ್ಯವನ್ನು ಈ ಪ್ರದೇಶದ ಜನರ ಜೀವನ ಮಟ್ಟವನ್ನು ಸುಧಾರಿಸಲು ಬಳಸಿಕೊಳ್ಳಬಹುದು. ಅಲ್ಲದೇ, ಲಡಾಖ್ ದೇಶದ ಇಂಧನ ಅಗತ್ಯಗಳಿಗೆ ಪ್ರಯೋಜನಕಾರಿಯಾಗಿ ಪರಿಣಮಿಸಬಲ್ಲದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.