RSS ಬಾಗಲಕೋಟೆಯಿಂದ ನೆರೆ ಸಂತ್ರಸ್ಥರಿಗೆ ಊಟ, ನೀರು, ದಿನನಿತ್ಯದ ಅವಶ್ಯಕ ಸಾಮಗ್ರಿಗಳ ವಿತರಣೆ, ವನ್ಯಜೀವಿಗಳಿಗೆ ಆಹಾರ ಪೂರೈಕೆ ಮಾಡಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಂತೆ ದನಕರುಗಳಿಗೆ ಮೇವು ಕೊರತೆಯಾಗಿದ್ದು ಮೇವುಗಳ ಸಂಗ್ರಹ ಮಾಡಿ ಎಂದು ಸಂಘದ ಹಿರಿಯರ ಸೂಚನೆ ಬಂದಿದ್ದೇ ತಡ ಕಾರ್ಯಪ್ರವೃತ್ತರಾದ ಸ್ವಯಂಸೇವಕರು ಮೇವಿಗಾಗಿ ಹುಡುಕಾಟ ನಡೆಯಿತು. ಅದರ ಪರಿಣಾಮವಾಗಿ ಹತ್ತಾರು ರೈತರು ದನಕರುಗಳಿಗೆ ಮೇವು, ಹಾಗೂ ಪ್ರಾಣಿಗಳು ತಿನ್ನುವ ಆಹಾರವನ್ನು ಒದಗಿಸಲು ಒಪ್ಪಿಕೊಂಡರು. ಅದರಂತೆ ರಾತ್ರಿ ಯೋಜನೆ ಮಾಡುತ್ತಿದ್ದೆವು ಆವಾಗ ಒಬ್ಬ ರೈತರು ಇಷ್ಟು ದಿನ ಮಾಡಿರುವ ಸ್ವಯಂಸೇವಕರ ಸೇವಾಕಾರ್ಯ ನೋಡಿ ಪ್ರೇರಣೆಗೊಂಡು ಒಂದು ಎಕರೆಯಲ್ಲಿ ಬೆಳೆದ ಮೆಕ್ಕೆಜೋಳ ದಂಟು (ಮೇವು) ಉಚಿತವಾಗಿ ನೀಡ್ತೀನಿ ಬೆಳಿಗ್ಗೆ ಬೇಗ ತಗೊಂಡು ಹೋಗಿ. ಈ ಸಮಾಜಮುಖಿ ಕಾರ್ಯಕ್ಕೆ ನಮ್ಮದು ಅಲ್ಪ ಸೇವೆ ಇರಲಿ. ಸ್ವಯಂಸೇವಕರ ಸೇವೆಯ ಮುಂದೆ ನಮ್ಮ ಸೇವೆ ಕಡಿಮೆನೇ ಅಂದರು.
ಸೇವೆಯಲ್ಲಿ ಮಗ್ನವಾಗಿರುವ ಎಲ್ಲ ಸ್ವಯಂಸೇವಕರು ಮತ್ತದೇ ಉತ್ಸಾಹದಿಂದ ಬೆಳಿಗ್ಗೆ ಶಾಖೆಯನ್ನು ಮುಗಿಸಿಕೊಂಡು 30 ಸ್ವಯಂಸೇವಕರು ಸೇರಿಕೊಂಡು ಮೇವನ್ನು ನೀಡಿದ ರೈತನ ಹೊಲ (ತೋಟ)ಕ್ಕೆ ಹೋದೆವು. ಮೆಕ್ಕೆಜೋಳ ಬೇರು ಸಹಿತವಾಗಿ ಭೂಮಿಯಲ್ಲಿ ಇರೋದನ್ನು ಕುಡಗೋಲಿನಿಂದ ಕೊಯ್ದು ಗುಡ್ಡೆ ಹಾಕಿ ಟ್ರ್ಯಾಕ್ಟರ್ನಲ್ಲಿ ಹೇರಿ ಒಯ್ಯಬೇಕಿತ್ತು. ಹೊಲದಲ್ಲಿ ಈ ತರಹ ಕೊಯ್ದ ರೂಢಿ ಎಲ್ಲರಿಗೂ ಇರಲಿಲ್ಲ. ತುಂಬಾ ಜನ ಹೊಸಬರೆ, ಅಂದರೆ ಸ್ವಯಂಸೇವಕ ಅನ್ನುವ ಪದವಿಯೊಂದೇ ಎಲ್ಲವನ್ನೂ ಮಾಡಿಸುತ್ತೆ ಅನ್ನುವ ಭರವಸೆ ನಮ್ಮಲ್ಲಿದ್ದದ್ದು ಸುಳ್ಳಲ್ಲ. ಸುಮಾರು 2-3 ಗಂಟೆಗಳಲ್ಲಿ ಇಡೀ ಒಂದು ಎಕರೆಯಲ್ಲಿನ ಮೇವನ್ನು ಕತ್ತರಿಸಿ ಗುಡ್ಡೆ(ಗುಂಪು) ಹಾಕಿದೆವು.
ಟ್ರ್ಯಾಕ್ಟರ್ ಬಂದು ಹೇರಿಕೊಂಡು ಬಿಡಬೇಕಾದರೆ ಮಧ್ಯಾಹ್ನವಾಯ್ತು. ಆದಷ್ಟು ಬೇಗ ಮೇವನ್ನು ತಲುಪಿಸಿ ಊಟ ಮಾಡಿದರಾಯ್ತು ಅನ್ಕೊಂಡು ಊಟ ಮಾಡದೇ ಬಾಗಲಕೋಟೆಯಿಂದ – ಬೀಳಗಿ – ಗಲಗಲಿ ಮಾರ್ಗವಾಗಿ ಜಮಖಂಡಿಯ ತೊದಲಬಾಗಿ ಗ್ರಾಮಕ್ಕೆ ತಲುಪಿಸಬೇಕೆಂದು ಹಿರಿಯರ ಸೂಚನೆಯಿತ್ತು. ಅದರಂತೆ ತುಂಬಾ ಉತ್ಸಾಹದಿಂದ ಹೊಟ್ಟೆ ಹಸಿದಿದ್ದರೂ ಸಹಿಸಿಕೊಂಡು ಮೊದಲು ಗೋ ಮಾತೆ ಆಮೇಲೆ ನಾವು ಅನ್ನುವ ಮನೋಭಾವನೆಯನ್ನಿಟ್ಟುಕೊಂಡು ಹೋಗುವಾಗ ಮೇವು ಟ್ರ್ಯಾಕ್ಟರ್ ಹೊರಗೆ ಹಾಯ್ದಿರೋದರಿಂದ ಒಂದು ಬೈಕನಲ್ಲಿ ಮುಂದಿನ ದಾರಿ ಖುಲ್ಲಾ ಮಾಡ್ತಾ, ಹಿಂದೆ ಮೇವು ಬೀಳಲಾರದ ಹಾಗೇ ನೋಡ್ತಾ ಒಟ್ಟು ಹನ್ನೆರಡು ಸ್ವಯಂಸೇವಕರು ಹೊರಟೆವು. ಪ್ರತಿ ದಿನಾನೂ ಒಂದೊಂದು ರೋಚಕತೆಯೊಂದಿಗೆ ನಮ್ಮ ಕರ್ತವ್ಯ ನಿಭಾಯಿಸಿರೋದರಿಂದ ಮತ್ತೆ ಕಾಡಾಟ ಶುರುವಾಯ್ತು ಅನಿಸಿತು ಏನೆಂದರೆ ಬಬಲಾದಿ ಗ್ರಾಮದ ಸಮೀಪ ನಮ್ಮ ಟ್ರ್ಯಾಕ್ಟರ್ ದೊಡ್ಡ(ಮದ್ಯದ) ಗಾಲಿಯೂ ಪಂಚರಾಯ್ತು. ಪಂಚರಾದ ಸ್ಥಳದಲ್ಲಿ ಟ್ರೇಲರ್ ಹಚ್ಚಿ ಪಂಚರ್ ತೆಗೆಸಿಕೊಂಡು ಬರುವುದು ಒಂದೂವರೇ ಗಂಟೆಯ ಸಮಯಬೇಕಾಯಿತು. ಒಂದು ಬರಬರುತ್ತಾ ಹೊತ್ತು ಇಳಿಯುತ್ತಾ ಬರುತ್ತಿತ್ತು ಮತ್ತೊಂದು ಕಡೆ ಹೋಗ್ತಾ ಹೋಗ್ತಾ ರಸ್ತೆ ಚಿಕ್ಕದಾಗ್ತಾ ಹೋಯ್ತು ಕೊನೆ 20 ಕಿ.ಮೀ. ಅಂತೂ ಒಂದ ಗಾಡಿಯೂ ಹೋಗೋದು ಕಷ್ಟದ ದಾರಿಯಲ್ಲಿ ಆಮೆಯ ನಡಿಗೆಯ ವೇಗದಲ್ಲಿ 20 km ದಾರಿಯನ್ನು ಎರಡು ಗಂಟೆ ಕ್ರಮಿಸಿದೆವು. ಗುಣದಾಳ ಗ್ರಾಮದಿಂದ ನಾಲ್ಕು ಜನ ಸ್ವಯಂಸೇವಕರು ನಮ್ಮ ಜೊತೆಗೆ ಸೇರಿಕೊಂಡರು ಕೊನೆಗೆ ರಾತ್ರಿ 8.30ರ ಹೊತ್ತಿಗೆ ತೊದಲಬಾಗಿ ತಲುಪಿದೆವು. ತೊದಲಬಾಗಿಯ ಸ್ವಯಂಸೇವಕರು ತುಂಬಾ ಜನ ಬಂದರು ಅಲ್ಲಿಯೆ ಮೇವನ್ನು ಇಳಿಸಿದೆವು.
ಬೇಗ ಊರಿಗೆ ಹೋಗೋಣ ಅಂತ ಸ್ವಲ್ಪ ದೂರ ಹೋದ ತಕ್ಷಣ ಮುಂದಿನ ಗಾಲಿಯೂ ಸಹಿತ ಪಂಚರಾಯಿತು. ನಮಗೆ ಈ ವಿಧಿ ಕಾಡ್ತಿದೆ ಅಂತ ಅನಿಸಿದರೂ ಧೈರ್ಯ ಮಾಡಿ, ಪಂಚರ್ ಅಂಗಡಿಗೆ ಹೋದಾಗ ಅಲ್ಲಿಯೂ ಒಂದು ವಿಧಿಯಾಟ ಘೋರ ಇತ್ತು. ಏನೆಂದರೆ ಆ ಪಂಚರ್ ಅಂಗಡಿ ಓಪನ್ ಇದ್ದಿದ್ದರೂ ಪಂಚರ್ ತೆಗೆಯುವವ ಬೇರೆ ಊರಿಗೆ ಹೋಗಿದ್ದನಂತೆ. ಎಲ್ಲವೂ ನಮ್ಮ ಹಣೆಬರಹವೇ ಸರಿಯಿಲ್ಲ ಅನ್ಕೊಳ್ಳುತ್ತಿರುವಾಗ ನಮ್ಮಲ್ಲಿದ್ದ ಒಬ್ಬ ಸ್ವಯಂಸೇವಕನಿಗೆ ಪಂಚರ್ ತೆಗೆದು ರೂಢಿ ಇತ್ತು. ಅವನೇ ತುಂಬಾ ತ್ರಾಸ್ ತಗೊಂಡು ಎಲ್ಲರೂ ಅವನಿಗೆ ಕೈ ಜೊಡಿಸಿ ಪಂಚರ್ ತೆಗೆಸಿದೆವು. ಹೀರೇ ಪಡಸಲಗಿಯಲ್ಲಿ ನಮಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು. ನಾವು ಬೇಡ ಮನೆಗೆ ಬೇಗ ಹೋಗಬೇಕು ಅಂದಿದ್ದಕ್ಕೆ. ಗುಣದಾಳದಲ್ಲಾದ್ರೂ ಊಟ ಮಾಡ್ಕೊಂಡು ಹೋಗಿ ಅಂತ ಸ್ವಯಂಸೇವಕರು ವ್ಯವಸ್ಥೆ ಮಾಡಿದ್ದರ ಪರಿಣಾಮ ಮಧ್ಯಾಹ್ನದ ಊಟವನ್ನು ರಾತ್ರಿ 12.00 ಕ್ಕೆ ಮಾಡಿದ್ದು ಇದೊಂತರ ಅನುಭವ. ಊಟ ಮಾಡಿದ ತಕ್ಷಣ ಗಾಡಿ ಬಿಟ್ಟೆವು.
ಮೊದಲೇ ನೀರಾವರಿ ಪ್ರದೇಶ, ಅಂತಹದ್ದರಲ್ಲಿಯೂ ನೀರು ಬಂದಿರೋದು ನಮಗೆ ಹಾಸಲು, ಹೊದಿಕೆಗೆ ಏನು ಇಲ್ಲದ ಕಾರಣ ಚಳಿಯಲ್ಲಿ ಎಲ್ಲರೂ ಗಡಗಡ ನಡುಗಿದೆವು, ಆ ಮೈ ಕೊರೆಯುವ ಚಳಿಗೆ ಒಂದಿಬ್ಬರಿಗೆ ಚಳಿ ಜ್ವರ ಬಂದೇ ಬಿಟ್ಟಿದ್ದವು. ಆ ರಾತ್ರಿಯಲ್ಲಿ ಯಾವ ಆಸ್ಪತ್ರೆಯೂ ಇಲ್ಲ ಯಾರ ಪರಿಚಯವೂ ಇಲ್ಲ ರಸ್ತೆಯ ಮೇಲೆ ಓಡಾಡುವ ವಾಹನಗಳು ಕಾಣ್ತಿರಲಿಲ್ಲ ಅಷ್ಟು ಫಜಿತಿ ಆಯ್ತು. ಬಾಗಲಕೋಟೆ ತಲುಪಲು ನಸುಕಿನ 4.00 ಗಂಟೆ ಆಯ್ತು. ಎಷ್ಟೇ ಕಷ್ಟ ಆದರೂ ಸಂಘದ ಹಿರಿಯರು ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದು ಎಲ್ಲರಲ್ಲಿಯೂ ಹೆಮ್ಮೆಯಿತ್ತು. ಕಷ್ಟಗಳು ನಮಗೆ ಬರದೇ ಬೇರೆಯವರಿಗೆ ಬರುತ್ತವಾ ? ಅಂತ ಪದೇ ಪದೇ ಎಲ್ಲರೂ ಗುಣಗುತ್ತಿದ್ದರು.
ಸಂಘದ ನೇತೃತ್ವ ಸಮಾಜ ಎಷ್ಟು ಬಯಸುತ್ತಿದೆ ಅಂದರೆ ಈ ನೆರೆ ಹಾವಳಿಯಲ್ಲಿ ಪ್ರತ್ಯಕ್ಷ ಕಾಣುತ್ತಿದೆ. ಸದ್ದಿಲ್ಲದೇ ಸೇವೆ ಮಾಡೋದನ್ನು ಸಂಘ ಕಲಿಸಿದೆ. ಸಮಯ ಮೀರಿದರೂ ಸೇವೆ ಮಾಡಿ ತೃಪ್ತಿ ಪಡೋದನ್ನು ಸಂಘ ಕಲಿಸಿದೆ. ಸಂಘ ಸೇವೆ ಮಾಡೋದನ್ನು ಸ್ವಯಂಸೇವಕರಿಗೆ ಅಷ್ಟೇ ಕಲಿಸಿಲ್ಲ, ಇಡೀ ಸಮಾಜಕ್ಕೆ ಸೇವಾಕಾರ್ಯದ ಸಲುವಾಗಿ ಸಮಯ ಹೇಗೆ ತೆಗಿದಿಡಬೇಕು ಅಂತ ಪ್ರತ್ಯಕ್ಷ ತೋರಿಸುತ್ತಿದೆ. ಸಂಘ ಸಮಯಕ್ಕೆ ತುಂಬಾ ಬೆಲೆ ನೀಡಿದೆ. ಆದರೆ ಸೇವಾಕಾರ್ಯಕ್ಕೆ ಸಮಯವನ್ನು ನಿಗದಿ ಮಾಡಿಯೇ ಇಲ್ಲ, ಮಾಡೋದೂ ಇಲ್ಲ ಅನಿಸುತ್ತೆ. ಯಾಕೆಂದರೆ ನಮ್ಮದು ಸರ್ಕಾರಿ, ಅರೇ ಸರ್ಕಾರಿ ಜಾಬ್ಗಳಲ್ಲಿ ವೇತನ, ಅಧಿಕಾರಕ್ಕೋಸ್ಕರ ಕೆಲಸ ಮಾಡೋಲ್ಲ. ಬದಲಾಗಿ ಸಮಾಜದ ಸಂಕಷ್ಟವನ್ನು ನಿವಾರಿಸೋದು ಸ್ವಯಂಸೇವಕನ ಜವಾಬ್ದಾರಿ ಅಂತ ಪ್ರತಿಯೊಬ್ಬ ಸ್ವಯಂಸೇವಕನ ಮನದಟ್ಟು ಮಾಡಿದೆ. ಸಂಘದ ಸೇವಾ ಮನೋಭಾವನೆಗೆ ಇಡೀ ದೇಶವ್ಯಾಪಿ ಪ್ರಶಂಸೆ ವ್ಯಕ್ತವಾಗ್ತಿರೋದು ಸ್ವಯಂಸೇವಕನಿಗೆ ಸಾರ್ಥಕತೆಯ ಕ್ಷಣವಿದು. ಸೇವೆ ಉಪಕಾರವಲ್ಲ ಅದು ನಮ್ಮ ಕರ್ತವ್ಯ ಅಂತ ಕಲಿತದ್ದು RSS ನಿಂದ.
ಸೇವಾ ಹೀ ಪರಮೋ ಧರ್ಮಃ
✍ RSS ಸ್ವಯಂಸೇವಕ, ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.