ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಬುಧವಾರ ಮುಂಜಾನೆ ಭೂ ಕಕ್ಷೆಯನ್ನು ತೊರೆದು ಚಂದ್ರನತ್ತ ಪ್ರಯಾಣವನ್ನು ಆರಂಭಿಸಿದೆ. ಇಲ್ಲಿಯವರೆಗೂ ಭೂ ಪ್ರದಕ್ಷಿಣೆಯಲ್ಲಿದ್ದ ಗಗನ ನೌಕೆಯನ್ನು ಇಸ್ರೋ ವಿಜ್ಞಾನಗಳ ತಂಡ ಚಂದ್ರನತ್ತ ತಿರುಗಿಸುವ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ.
ಮುಂಜಾನೆ 2.21ರ ಸುಮಾರಿಗೆ ಗಗನ ನೌಕೆಯನ್ನು ಚಂದ್ರನತ್ತ ತಿರುಗಿಸುವ ಕಾರ್ಯವನ್ನು ಮಾಡಲಾಗಿದೆ. ಗಗನ ನೌಕೆಯ ಎಂಜಿನ್ಗೆ ಚಾಲನೆಯನ್ನು ನೀಡಲಾಯಿತು. ಇದರ ಇಂಧನವನ್ನು 1203 ಸೆಕೆಂಡುಗಳ ಕಾಲ ಉರಿಸಲಾಯಿತು. ಇದರಿಂದ ನೌಕೆ ಚಂದ್ರನಲ್ಲಿಗೆ ಪ್ರಯಾಣವನ್ನು ಯಶಸ್ವಿಯಾಗಿ ಆರಂಭಿಸಿತು ಎಂದು ಇಸ್ರೋ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
ಆಗಸ್ಟ್ 20ರಂದು ಚಂದ್ರಯಾನ-2 ನೌಕೆ ಚಂದ್ರನ ಮೇಲ್ಮೈಯನ್ನು ತಲುಪಲಿದ್ದು, ಆ ವೇಳೆ ಎಂಜಿನ್ ಅನ್ನು ಮತ್ತೊಮ್ಮೆ ಚಾಲನೆ ಮಾಡಿ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದಿದ್ದಾರೆ.
ಚಂದ್ರ ಸೇರಿದಂತೆ ಯಾವುದೇ ಗ್ರಹಕ್ಕೆ ಕಳುಹಿಸಿಕೊಡಲಾಗುವ ಯಾವುದೇ ಗಗನ ನೌಕೆಗಳು ಮೊದಲು ಭೂಮಿಯ ಕಕ್ಷೆಯನ್ನು ಸೇರಿ ಅಲ್ಲಿ ಪ್ರದಕ್ಷಿಣೆ ಹಾಕುತ್ತವೆ. ಬಳಿಕ ವಿಜ್ಞಾನಿಗಳು ಅನ್ನು ನಿಗದಿತ ಗ್ರಹದ ಕಕ್ಷೆಗೆ ತಿರುಗಿಸುವ ನಿರ್ಣಾಯಕ ಕಾರ್ಯವನ್ನು ಮಾಡುತ್ತಾರೆ. ಇದು ಅತ್ಯಂತ ಕ್ಲಿಷ್ಟಕರ ಕಾರ್ಯವಾಗಿದ್ದು ಇಸ್ರೋ ಅತ್ಯಂತ ಸಮರ್ಥವಾಗಿ ಇದನ್ನು ನಿಭಾಯಿಸಿದೆ. ಇನ್ನು ಉಪಗ್ರಹ ಗ್ರಹದ ಮೇಲ್ಮೈಗೆ ತಲುಪುತ್ತಿದ್ದಂತೆ ಮತ್ತೆ ಅದನ್ನು ಅದರ ಕಕ್ಷೆಗೆ ತಿರುಗಿಸುವ ಕಾರ್ಯವನ್ನೂ ಮಾಡಬೇಕಿದೆ.
ಚಂದ್ರಯಾನ-2 ಅನ್ನು ಜುಲೈ 22ರಂದು ಆಂಧ್ರದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಲ್ಲಿ ಉಡಾವಣೆಗೊಳಿಸಲಾಗಿತ್ತು. ಚಂದ್ರನ ದಕ್ಷಿಣ ಧ್ರುವವನ್ನು ಅಧ್ಯಯನ ಮಾಡುವ ಮಹತ್ವಾಕಾಂಕ್ಷೆಯ ಮಿಷನ್ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.