ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಲಾಲಾ ಯೂಸಫ್ಝೈಯು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ನಿರ್ಧಾರದ ವಿರುದ್ಧ ಟೀಕೆಗಳನ್ನು ಮಾಡುವ ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದ್ದಾಳೆ. ಭಾರತ 370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ, ಪಾಕಿಸ್ಥಾನದ ನಾಗರಿಕರು ಮತ್ತು ಸರ್ಕಾರವು ವಿಲವಿಲ ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ಥಾನಿಯಾದ ಮಾನವ ಹಕ್ಕುಗಳ ಕಾರ್ಯಕರ್ತೆ ಮಲಾಲಾ ಯೂಸಫ್ಝೈ ನೀಡಿರುವ ಹೇಳಿಕೆ ಅನಿರೀಕ್ಷಿತವಲ್ಲ. ಮಾನವ ಹಕ್ಕುಗಳ ಕಗ್ಗೊಲೆ ಮಾಡುವುದಕ್ಕೆ ಹೆಸರುವಾಸಿಯಾದ ದೇಶದಿಂದ ಬಂದಿದ್ದರೂ ಮತ್ತು ತನ್ನ ದೇಶ ನೆರೆಹೊರೆಯವರ ವಿರುದ್ಧ ಭಯೋತ್ಪಾದನೆಯನ್ನು ಛೂ ಬಿಡುತ್ತಿದ್ದರೂ ಸಹ ಆಕೆ ಕಾಶ್ಮೀರದ ವಿಷಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಭಾರತಕ್ಕೆ ಉಪನ್ಯಾಸ ನೀಡುತ್ತಿದ್ದಾಳೆ.
ಆಕೆ ಬರೆದ ಬಹಿರಂಗ ಪತ್ರದಲ್ಲಿ ಈ ರೀತಿಯಾಗಿ ಉಲ್ಲೇಖ ಮಾಡಲಾಗಿದೆ- “ನಾವು ಒಬ್ಬರಿಗೊಬ್ಬರು ತೊಂದರೆ ಅನುಭವಿಸುವುದು ಮತ್ತು ನೋಯಿಸುವುದು ಅಗತ್ಯವಿಲ್ಲ. ಇಂದು ನಾನು ಕಾಶ್ಮೀರಿ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಚಿಂತೆ ಮಾಡುತ್ತೇನೆ, ಅವರು ಹಿಂಸಾಚಾರಕ್ಕೆ ಹೆಚ್ಚು ಗುರಿಯಾಗಬಹುದು ಮತ್ತು ಅವರು ಸಂಘರ್ಷದಲ್ಲಿ ನಷ್ಟ ಅನುಭವಿಸುವ ಸಾಧ್ಯತೆಯಿದೆ. ಎಲ್ಲಾ ದಕ್ಷಿಣ ಏಷ್ಯನ್ನರು, ಅಂತರರಾಷ್ಟ್ರೀಯ ಸಮುದಾಯ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಅವರ ಸಂಕಟಗಳಿಗೆ ಸ್ಪಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಕೂಡ ನಾವು ಯಾವಾಗಲೂ ಮಾನವ ಹಕ್ಕುಗಳನ್ನು ರಕ್ಷಿಸಬೇಕು, ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕು ಮತ್ತು ಕಾಶ್ಮೀರದಲ್ಲಿ ಏಳು ದಶಕಗಳಷ್ಟು ಹಳೆಯದಾದ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವತ್ತ ಗಮನಹರಿಸಬೇಕು”.
ಆದರೆ, ಮಲಾಲಾ ಅವರ ಬೂಟಾಟಿಕೆ ಬಹಿರಂಗಗೊಂಡಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಪಾಕಿಸ್ಥಾನದಲ್ಲಿ ಮುಸ್ಲಿಮರು ಅಪಹರಿಸಿ ಮದುವೆಯಾದ ಇಬ್ಬರು ಹಿಂದೂ ಹುಡುಗಿಯರಿಗೆ ನ್ಯಾಯ ಕೊಡಿಸುವಂತೆ ಕೋರಿದ್ದ ಟ್ವಿಟರ್ ಬಳಕೆದಾರರನ್ನು ಈಕೆ ನಿರ್ಬಂಧಿಸಿದ್ದಳು, ಇದಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದಳು. ಟ್ವಿಟರ್ ಬಳಕೆದಾರರೊಬ್ಬರು ಈ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯನ್ನು ಟ್ಯಾಗ್ ಮಾಡಿ “ನಿಮ್ಮ ವಯಸ್ಸಿನ ಇಬ್ಬರು ಹಿಂದೂ ಹುಡುಗಿಯರನ್ನು ಅವರ ಮನೆಯಿಂದ ಅಪಹರಿಸಲಾಯಿತು, ಕಿರುಕುಳ ನೀಡಲಾಯಿತು ಮತ್ತು ಬಲವಂತವಾಗಿ ನಿಮ್ಮ ಧರ್ಮವಾದ ಇಸ್ಲಾಂಗೆ ಮತಾಂತರಗೊಳಿಸಲಾಯಿತು. ಇಸ್ಲಾಮಿಸ್ಟ್ಗಳ ಈ ಅನಾಗರಿಕ ಕೃತ್ಯದ ಬಗ್ಗೆ ಜಗತ್ತು ತಿಳಿದುಕೊಳ್ಳಬೇಕು. ದಯವಿಟ್ಟು ಆ ಇಬ್ಬರು ಬಡ ಹಿಂದೂ ಹುಡುಗಿಯರನ್ನು ಬೆಂಬಲಿಸಿ. ಧನ್ಯವಾದಗಳು ”ಎಂದು ಬರೆದಿದ್ದರು. ಇವರನ್ನು ಈಕೆ ಬ್ಲಾಕ್ ಮಾಡಿ ಹಾಕಿದ್ದಳು. ಈಕೆ ಈ ಹಿಂದೆಯೂ ಭಾರತದ ವಿರುದ್ಧ ಅಹಿತಕರವಾದ ಟೀಕೆಗಳನ್ನು ಮಾಡಿದ್ದಾಳೆ.
2009 ರಲ್ಲಿ, ತಾಲಿಬಾನ್ ಆಳ್ವಿಕೆಯಲ್ಲಿನ ತನ್ನ ಜೀವನದ ಬಗ್ಗೆ ಬಿಬಿಸಿಗೆ ಉರ್ದು ಭಾಷೆಯಲ್ಲಿ ಬ್ಲಾಗ್ ಬರೆದು ಮಲಾಲಾ ಸುದ್ದಿಯಾಗಿ ಬಂದಳು. ನಂತರ, ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತ ಆಡಮ್ ಬಿ. ಎಲಿಕ್ ಅವರು ಈಕೆಯ ಜೀವನದ ಬಗ್ಗೆ ಸಾಕ್ಷ್ಯಚಿತ್ರವನ್ನು ಮಾಡಿದರು. ಬಳಿಕ ಈಕೆ ಬಾಲಕಿಯರ ಶಿಕ್ಷಣದ ಮಹತ್ವದ ಬಗ್ಗೆ ಪಾಕಿಸ್ತಾನದ ಚಾನೆಲ್ಗಳಲ್ಲಿ ಸಂದರ್ಶನಗಳನ್ನು ನೀಡಲು ಪ್ರಾರಂಭಿಸಿದಳು. ಈಕೆಯ ಈ ನಡೆ ತಾಲಿಬಾನಿಗಳನ್ನು ಕೆರಳಿಸಿತು. ಅಕ್ಟೋಬರ್ 9, 2012 ರಂದು, ತಾಲಿಬಾನ್ ಬಂದೂಕುಧಾರಿ ಈಕೆಯ ಶಾಲಾ ಬಸ್ ಪ್ರವೇಶಿಸಿ ಮೂರು ಗುಂಡುಗಳನ್ನು ಹಾರಿಸಿ ಈಕೆಯನ್ನು ಕೊಲ್ಲಲು ಪ್ರಯತ್ನಿಸಿದ. ಆ ವೇಳೆ ಈಕೆಯ ಹಣೆಯ ಎಡಭಾಗಕ್ಕೆ ತೀವ್ರವಾಗಿ ಗಾಯವಾಗಿತ್ತು. ಬಳಿಕ ಅಕ್ಟೋಬರ್ 15 ರಂದು ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನ ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಈಕೆಯನ್ನು ಸಾಗಿಸಲಾಯಿತು. ಅಂದಿನಿಂದ, ಈ ವಿಶ್ವಸಂಸ್ಥೆ ಪ್ರಮಾಣೀಕೃತ-ಕೆಚ್ಚೆದೆಯ ಹುಡುಗಿ ಯುಕೆಯಲ್ಲಿಯೇ ಇದ್ದಾಳೆ. ಮಲಾಲಾ ಯೂಸಫ್ಝೈ ತನ್ನ ಯೂನಿವರ್ಸಿಟಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರವೇ ಪಾಕಿಸ್ತಾನಕ್ಕೆ ಮರಳುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಆಕೆಯ ತಂದೆ ಹೇಳುತ್ತಾರೆ.
ಮಲಾಲಾ ಯೂಸಫ್ಝೈಳನ್ನು ಅತ್ಯಂತ ಧೈರ್ಯಶಾಲಿ ಯುವತಿ ಎಂದು ಪ್ರಶಂಸಿಸಲಾಗಿದೆ ಮತ್ತು ರಾಣಿ ಎಲಿಜಬೆತ್ II, ಬರಾಕ್ ಒಬಾಮಾ ಮುಂತಾದವರನ್ನು ಭೇಟಿಯಾಗುವ ಅವಕಾಶವನ್ನೂ ಈಕೆಗೆ ನೀಡಲಾಗಿದೆ. ಈಕೆ ಆಕ್ಸ್ಫರ್ಡ್ ಯೂನಿಯನ್, ಹಾರ್ವರ್ಡ್ ವಿಶ್ವವಿದ್ಯಾಲಯ, ಲಂಡನ್ನಲ್ಲಿ ನಡೆದ ಗರ್ಲ್ ಶೃಂಗಸಭೆ ಮತ್ತು ಯುಎಸ್, ಕೆನಡಾದಲ್ಲಿ ನಡೆದ ಕೆಲವು ಕಾರ್ಯಕ್ರಮಗಳಲ್ಲೂ ಮಾತನಾಡಿದ್ದಾಳೆ. ಅಕ್ಟೋಬರ್ 2013 ರಲ್ಲಿ, ಆಕೆ ಆಗಿನ ಯುಎಸ್ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಭೇಟಿಯಾಗಿದ್ದಳು ಮತ್ತು ಪಾಕಿಸ್ಥಾನದ ತಾಲಿಬಾನ್ ನಿಯಂತ್ರಿತ ಪ್ರದೇಶಗಳಲ್ಲಿ ಭಯೋತ್ಪಾದಕರನ್ನು ಕೊಲ್ಲಲು ಯುಎಸ್ ಬಳಸುವ ಡ್ರೋನ್ ದಾಳಿಯ ಬಗ್ಗೆ ಪುನರ್ವಿಮರ್ಶಿಸಲು ಒಬಾಮಾಗೆ ಸೂಚಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಳು. ಭಯೋತ್ಪಾದಕರಿಗೆ ಶಿಕ್ಷಣ ನೀಡುವುದರಿಂದ ಭಯೋತ್ಪಾದನೆ ಸಮಸ್ಯೆಯನ್ನು ಬಗೆಹರಿಸಬಹುದು ಎಂಬುದು ಈಕೆಯ ಪ್ರತಿಪಾದನೆಯಾಗಿದೆ. ಇಲ್ಲಿಂದಲೇ ಆಕೆಯ ಬೂಟಾಟಿಕೆಯ ಪ್ರಯತ್ನಗಳು ಪ್ರಾರಂಭಗೊಂಡವು.
ಒಬ್ಬರನ್ನು ಎಷ್ಟು ತಾನೆ ಮೂರ್ಖರಾನ್ನಾಗಿಸಬಹುದು? ತಾಲಿಬಾನ್ ದಾಳಿಗೆ ಬಲಿಯಾಗಿದ್ದರೂ, ಪಾಕಿಸ್ಥಾನದಲ್ಲಿ ತಾಲಿಬಾನ್ ಉಗ್ರರನ್ನು ಗುರಿಯಾಗಿಸಿ ಯುಎಸ್ ದಾಳಿ ಮಾಡುವುದನ್ನು ಈಕೆ ಬಯಸುವುದಿಲ್ಲ ಯಾಕೆ? ಬಹುಶಃ, ಇಸ್ಲಾಮಿಕ್ ಭಯೋತ್ಪಾದಕ ಗುಂಪಿನ ನಾಯಕರಲ್ಲಿ ಹೆಚ್ಚಿನವರು ಹೆಚ್ಚು ವಿದ್ಯಾವಂತರು ಎಂಬುದು ಆಕೆಗೆ ತಿಳಿದಿಲ್ಲ. ಅಂತಹ ಗುಂಪುಗಳನ್ನು ವಿದ್ಯಾವಂತ ವ್ಯಕ್ತಿಗಳೇ ನಡೆಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇವಳು ಸವಿವರವಾದ ಸುದ್ದಿ ವರದಿಗಳನ್ನು ಓದಬೇಕಾದ ಅಗತ್ಯವಿದೆ.
ಆಕೆಯ ಶ್ರೀಮಂತ ತಂದೆ ‘ದಿ ಮಲಾಲಾ ಫೌಂಡೇಶನ್’ ಅನ್ನು ಸ್ಥಾಪಿಸಿದ್ದಾರೆ ಮತ್ತು ನಟಿ ಏಂಜಲೀನಾ ಜೋಲೀ ಸೇರಿದಂತೆ ಅನೇಕ ಸಂಸ್ಥೆಗಳು ಮತ್ತು ಗಣ್ಯರಿಂದ ಲಕ್ಷಾಂತರ ಹಣವನ್ನು ಇದಕ್ಕಾಗಿ ಸಂಗ್ರಹಿಸಿದ್ದಾರೆ. ಕಳೆದ ವರ್ಷ ಜೂನ್ನಲ್ಲಿ ಮಲಾಲಾ ಸಂಘಟನೆಯು ಲೆಬನಾನ್ನ ಬೆಕಾ ಕಣಿವೆಯಲ್ಲಿ ಸಿರಿಯನ್ ವಲಸೆ ಮಕ್ಕಳಿಗೆ ಶಾಲೆಯನ್ನು ಪ್ರಾರಂಭಿಸಿತು ಎಂದು ವರದಿಗಳು ಹೇಳುತ್ತವೆ.
ಮಲಾಲ ಇಲ್ಲಿಯವರೆಗೆ ಹಲವಾರು ಪ್ರಶಸ್ತಿಗಳು, ಬಹುಮಾನಗಳು, ಮೆಚ್ಚುಗೆ, ಶಾಂತಿ ನೊಬೆಲ್ ಪ್ರಶಸ್ತಿ, ಪದಕಗಳು ಇತ್ಯಾದಿಗಳನ್ನು ಗೆದ್ದುಕೊಂಡಿದ್ದಾಳೆ. ವಿವಿಧ ದೇಶಗಳಲ್ಲಿ ಪ್ರವಾಸ ಮಾಡಿದ್ದಾಳೆ, ಉಪನ್ಯಾಸಗಳು, ದೂರದರ್ಶನ ಸಂದರ್ಶನಗಳನ್ನು ನೀಡಿದ್ದಾಳೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸುವುದು, ಹಣವನ್ನು ಸಂಗ್ರಹಿಸುವುದು ಇತ್ಯಾದಿಗಳು ಈಕೆಯ ಸಕ್ರಿಯ ಕಾರ್ಯಕ್ರಮಗಳಾಗಿವೆ. ಆಶ್ಚರ್ಯಕರ ಸಂಗತಿಯೆಂದರೆ, ಸಿರಿಯಾ ಮತ್ತು ಇರಾಕ್ನಲ್ಲಿ ಮುಸ್ಲಿಮೇತರ ಮಹಿಳೆಯರನ್ನು ಕ್ರೂರವಾಗಿ ಅತ್ಯಾಚಾರ ಮಾಡಿ ಕೊಂದಿದ್ದ ಐಸಿಸ್ ಭಯೋತ್ಪಾದಕ ಸಂಘಟನೆಯನ್ನು ಈಕೆಯಾಗಲಿ ಅಥವಾ ಈಕೆಯ ತಂದೆಯಾಗಲಿ ಟೀಕಿಸಿಲ್ಲ. ಯಜಿದಿ ಹುಡುಗಿಯರನ್ನು ಇಸ್ಲಾಮಿಕ್ ಸ್ಟೇಟ್ ಹಿಡಿತದಿಂದ ರಕ್ಷಿಸಲು ಯುಎನ್ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಈಕೆ ಎಂದಿಗೂ ಒತ್ತಾಯಿಸಲಿಲ್ಲ. ಆದರೆ, ಶಾಂತಿ ನೊಬೆಲ್ ಪ್ರಶಸ್ತಿ ವಿಜೇತೆಯಾದ ಈಕೆ, ಮುಸ್ಲಿಮರನ್ನು ಭಯೋತ್ಪಾದನೆಗಾಗಿ ದೂಷಿಸಬಾರದು ಎಂದು ಪದೇ ಪದೇ ವಾದಿಸುತ್ತಲೇ ಬಂದಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.