ಲಕ್ನೋ: ಜನಸೇವೆಯಲ್ಲಿ ನಿರತರಾಗಿರುವ ಪೊಲೀಸರು ಶೌರ್ಯ ಪ್ರಶಸ್ತಿಗಳೊಂದಿಗೆ ನಗದು ಪುರಸ್ಕಾರಗಳನ್ನು ಪಡೆಯುವುದು ಸಾಮಾನ್ಯ ಸಂಗತಿ. ಆದರೆ ಉತ್ತರ ಪ್ರದೇಶದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರೂ ತಮ್ಮ ಸೇವೆಗಾಗಿ ಪ್ರಶಂಸಾ ಪತ್ರದೊಂದಿಗೆ ರೂ.500 ನಗದು ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ. ಇದು ಸರ್ಕಾರದಿಂದ ಅವರಿಗೆ ಸಿಕ್ಕ ಸನ್ಮಾನವಲ್ಲ, ಬದಲಿಗೆ ಸಾಮಾನ್ಯ ವ್ಯಕ್ತಿಯೊಬ್ಬ ನೀಡಿದ ಪುರಸ್ಕಾರ.
ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ (ಆಗ್ರಾ ರೇಂಜ್) ಸತೀಶ್ ಗಣೇಶ್ ಅವರು “ಪ್ರಶಂಸಾ ಪ್ರಮಾಣ್ ಪತ್ರ” (ಮೆಚ್ಚುಗೆಯ ಪತ್ರ) ಎಂಬ ಶೀರ್ಷಿಕೆಯ ಪತ್ರವನ್ನು ಹೊಂದಿದ ಅಂಚೆಯನ್ನು ಸ್ವೀಕರಿಸಿದ್ದಾರೆ, ಗುರುವಾರ ಅದನ್ನು ತೆರೆದು ನೋಡಿದಾಗ 500 ರೂಪಾಯಿಗಳೊಂದಿಗೆ ಅದರಲ್ಲಿ ಪ್ರಶಂಸಾ ಪತ್ರವೊಂದಿತ್ತು.
ಇಟಾದ ವಿಜಯ್ ಪಾಲ್ ಸಿಂಗ್ ಎಂಬುವವರು ಕಳುಹಿಸಿದ ಪತ್ರ ಇದಾಗಿತ್ತು, 1996 ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಸತೀಶ್ ಗಣೇಶ್ ಅವರ ಕಾರ್ಯ ಶೈಲಿಯನ್ನು ಪತ್ರದಲ್ಲಿ ಶ್ಲಾಘಿಸಲಾಗಿತ್ತು. ನಾನು ಕರ್ನಲ್ ಆಗಿ ಮಾರುವೇಷ ತೊಟ್ಟು ಮಥುರಾದ ಹೆದ್ದಾರಿ ಪೊಲೀಸ್ ಠಾಣೆಗೆ ಲ್ಯಾಪ್ಟಾಪ್ ಕಳ್ಳತನವಾದ ಬಗ್ಗೆ ದೂರು ನೀಡಲು ಹೋಗಿದ್ದೆ. ಪೊಲೀಸರು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದಷ್ಟೇ ನೋಡುವುದು ನನ್ನ ಉದ್ದೇಶವಾಗಿತ್ತು ಎಂದು ಪತ್ರದಲ್ಲಿ ಸಿಂಗ್ ಬರೆದಿದ್ದಾರೆ.
“ಬಡವರ ಎಫ್ಐಆರ್ಗಳನ್ನು ನೋಂದಾಯಿಸಲು ಪೊಲೀಸರು ಹಿಂಜರಿಯುತ್ತಾರೆ ಮತ್ತು ಅವರನ್ನು ಅವಮಾನಿಸುತ್ತಾರೆ ಎಂಬುದು ಸಾಮಾನ್ಯ ಗ್ರಹಿಕೆಯಾಗಿದೆ. ಆದರೆ ನಿಮ್ಮ ಕಾರ್ಯಶೈಲಿಯ ಬಗ್ಗೆ ನನಗೆ ಸಂತೋಷವಾಗಿದೆ ಮತ್ತು ಈ ಪತ್ರದೊಂದಿಗೆ 500 ರೂ.ಗಳ ಚೆಕ್ ಅನ್ನು ಲಗತ್ತಿಸುತ್ತಿದ್ದೇನೆ” ಎಂದು ಸಿಂಗ್ ಪತ್ರದಲ್ಲಿ ಬರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತೀಶ್ ಗಣೇಶ್, “ನನ್ನ 23 ವರ್ಷಗಳ ಪೊಲೀಸ್ ವೃತ್ತಿಜೀವನದಲ್ಲಿ ನಾನು ಅನೇಕ ಪದಕಗಳು, ಪ್ರಶಸ್ತಿಗಳು ಮತ್ತು ಮೆಚ್ಚುಗೆಯ ಪತ್ರಗಳನ್ನು ಸ್ವೀಕರಿಸಿದ್ದೇನೆ. ಆದರೆ ಇದು ಉನ್ನತವಾಗಿದೆ. ಪೊಲೀಸ್ ಅಧಿಕಾರಿಯೊಬ್ಬರು ಪಡೆಯಬಹುದಾದ ಅತ್ಯುತ್ತಮ ಪ್ರಶಂಸೆ ಇದಾಗಿದೆ. ಇದು ಚಿನ್ನದ ಪದಕದಷ್ಟೇ ಮೌಲ್ಯಯುತವಾಗಿದೆ” ಎಂದಿದ್ದಾರೆ.
“ಸಾರ್ವಜನಿಕರಿಂದ ವ್ಯಕ್ತವಾಗುವ ಇಂತಹ ಪ್ರಶಂಸೆಗಳು ನನಗೆ ದಣಿವರಿಯಿಲ್ಲದೆ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಈ ಹಣ ಮತ್ತು ಪತ್ರ ಎರಡನ್ನೂ ಪ್ರೇರಣೆಗಾಗಿ ಸದಾ ಜೊತೆಗಿಟ್ಟುಕೊಂಡಿರುತ್ತೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.