ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯು ಕೇಂದ್ರ ಸರಕಾರದ ವಿನೂತನ ಯೋಜನೆಯಾಗಿದ್ದು” ಕ್ಯಾಶ್ ಲೆಸ್” ಮತ್ತು” ಪೇಪರ್ ಲೆಸ್” ಇದರ ಪ್ರಮುಖ ವೈಶಿಷ್ಟ್ಯ. ಯಾವುದೇ ಅಪ್ಲಿಕೇಶನ್ ಅಥವಾ ಮನವಿ ಸಲ್ಲಿಸದೆ ಹಾಗೂ ಯಾವುದೇ ದುಡ್ಡು ಕಟ್ಟದೆ ದೊರಕುವ ಆರೋಗ್ಯಸೇವೆಯನ್ನು ಇದು ಖಚಿತಪಡಿಸುತ್ತದೆ.
ಇಷ್ಟರವರೆಗೆ ಇರದ ಇಂತಹ ಅದ್ಭುತವಾದ ಯೋಜನೆ ಇಂದು ಜನರ ಮನೆಬಾಗಿಲಿಗೆ ತಲುಪಿದೆ. ಆರೋಗ್ಯ ಕ್ಷೇತ್ರದಲ್ಲಿ ಹಾಗೂ ಸರಕಾರಿ ಆಸ್ಪತ್ರೆಗಳ ಸೇವೆಯ ಗುಣಮಟ್ಟದಲ್ಲಿ ಈ ಯೋಜನೆ ಮಹತ್ತರ ಬದಲಾವಣೆ ತರಲಿದೆ. ಖಾಸಗಿ ವಿಮಾ ಕಂಪನಿಗಳು ಆರೋಗ್ಯವಿಮೆಯ ಕಂತು ಕಟ್ಟುವ ಚಿಂತೆ ಹಾಗೂ ಯಾರ ಕೈಯಿಂದ ಚಿಕಿತ್ಸೆಗೆ ಸಾಲ ಕೇಳುವುದೆಂಬ ಜನರ ಚಿಂತೆಯನ್ನು ಈ ಯೋಜನೆ ದೂರ ಮಾಡಿದೆ.
ಈ ಮೊದಲು ಇದ್ದ ಕೇಂದ್ರ ಸರಕಾರದ ಯೋಜನೆಗಳಾದ ವಾಜಪೇಯಿ ಆರೋಗ್ಯ ಶ್ರೀ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಇತ್ಯಾದಿಗಳು ಹಾಗೂ ರಾಜ್ಯ ಸರಕಾರದ ಯಶಸ್ವಿನಿ, ಹರೀಶ್ ಅಪಘಾತ ಸಾಂತ್ವನ ವಿಮಾ ಯೋಜನೆ ಇತ್ಯಾದಿ ರಾಜ್ಯ ಸರ್ಕಾರದ ಆರೋಗ್ಯ ವಿಮೆ ಯೋಜನೆಗಳು ಎಲ್ಲವೂ ವಿಲೀನಗೊಂಡು ಈ ಹೊಸ ಯೋಜನೆಯ ಅಡಿಯಲ್ಲಿ ರೋಗಿಗಳು ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಇನ್ನು ಮುಂದೆ ಬೇರೆ ಯಾವುದೇ ಹೆಸರಿನಲ್ಲಿ ಸರಕಾರದ ಯೋಜನೆಗಳು ಅಸ್ತಿತ್ವದಲ್ಲಿ ಇರುವುದಿಲ್ಲ. ಎಲ್ಲವನ್ನೂ ಆಯುಷ್ಮಾನ್ ಆರೋಗ್ಯ ಕಾರ್ಡಿನ ಮುಖಾಂತರ ಪಡೆಯಬಹುದಾಗಿದೆ. ಉದಾಹರಣೆಗೆ ಕರ್ನಾಟಕ ರಾಜ್ಯದಲ್ಲಿ” ಆಯುಷ್ಮಾನ್ ಆರೋಗ್ಯ ಕರ್ನಾಟಕ” ಎಂದು ಕಾರ್ಡು ನೀಡಲ್ಪಡುತ್ತದೆ.
ಏನಿದು ಆಯುಷ್ಮಾನ್ ಭಾರತ್ ಯೋಜನೆ?
ಸ್ವಾತಂತ್ರ್ಯೋತ್ತರ ಭಾರತದ 70 ವರ್ಷಗಳಲ್ಲಿ ಇರದೇ ಇದ್ದ ಈ ಯೋಜನೆಯನ್ನು ಕೇಂದ್ರ ಸರಕಾರವು ಆಯುಷ್ಮಾನ್ ಭಾರತ್ ಎಂಬ ಹೆಸರಿನಲ್ಲಿ ರಾಷ್ಟ್ರದಾದ್ಯಂತ ಜಾರಿಗೊಳಿಸಿದೆ. ಆಯಾ ರಾಜ್ಯಗಳ ಆರೋಗ್ಯ ಇಲಾಖೆಯೊಂದಿಗೆ ಸೇರಿಕೊಂಡು ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳ ಮಟ್ಟದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ.
ಫಲಾನುಭವಿಗಳು ಯಾರು?
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ಪಡೆಯಲು ರೋಗಿಗಳನ್ನು ಎರಡು ವರ್ಗ ಗಳಾಗಿ ವಿಂಗಡಿಸಲಾಗಿದೆ.
ಅರ್ಹತಾ ರೋಗಿಗಳು: ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಹಾಗೂ 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಪ್ರಕಾರ ಅರ್ಹತಾ ಕುಟುಂಬಕ್ಕೆ ಸೇರಿರುವ ರೋಗಿಗಳು ಅಂದರೆ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುಗಳನ್ನು ಹೊಂದಿರುವವರು.( ಬಡತನ ರೇಖೆಗಿಂತ ಕೆಳಗೆ ಇರುವವರು)
ಸಾಮಾನ್ಯ ರೋಗಿಗಳು: ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಪ್ರಕಾರ ಅರ್ಹತಾ ಕಾರ್ಡ್ ಇಲ್ಲದ ಅಥವಾ ಆದ್ಯತೇತರ ಕಾರ್ಡ್ ಹೊಂದಿರುವ ರೋಗಿಗಳು ಅಂದರೆ ಬಿಪಿಎಲ್ ಕಾರ್ಡುದಾರರು( ಬಡತನ ರೇಖೆಗಿಂತ ಮೇಲೆ ಇರುವವರು ಅಥವಾ ಆರ್ಥಿಕ ಸ್ಥಿತಿವಂತರು)
ಯಾರಿಗೆ ಯಾವ ಸೌಲಭ್ಯ ಮತ್ತು ಎಷ್ಟು ಮೊತ್ತದ ಚಿಕಿತ್ಸೆ ಲಭ್ಯ?
ಅರ್ಹತಾ ರೋಗಿಗಳಿಗೆ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಮತ್ತು ರೆಫರ್ರಲ್ ಮೂಲಕ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಒಂದು ಕುಟುಂಬಕ್ಕೆ, ಒಂದು ವರ್ಷಕ್ಕೆ, 5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ, ಅಂದರೆ ಉಚಿತ ಚಿಕಿತ್ಸೆ ಪಡೆಯಬಹುದು. ಅಂತಹ 1650 ಚಿಕಿತ್ಸಾ ವಿಧಾನಗಳ ಪಟ್ಟಿಯನ್ನು ಸರಕಾರವು ಸಿದ್ಧಗೊಳಿಸಿದೆ.
ಸಾಮಾನ್ಯ ರೋಗಿಗಳಿಗೆ ಸಹ ಪಾವತಿ ಆಧಾರದ ಮೇಲೆ, ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ 1. 5 ಲಕ್ಷದವರೆಗೆ ಚಿಕಿತ್ಸೆ ಒದಗಿಸಲಾಗುತ್ತದೆ. ಸರಕಾರವು ಪಟ್ಟಿಮಾಡಿದ 1650 ಚಿಕಿತ್ಸಾವಿಧಾನಗಳಿಗೆ ಇದು ಅನ್ವಯಿಸುತ್ತದೆ. ಸಹ ಪಾವತಿ ಎಂದರೆ ಪ್ರತಿಯೊಂದು ಚಿಕಿತ್ಸಾ ವಿಧಾನಕ್ಕೆ ಸರಕಾರವು ನಿಗದಿಪಡಿಸಿದ ದರಗಳ ಪಟ್ಟಿಯಲ್ಲಿನ 30 ಶೇಕಡಾದಷ್ಟು ದರವನ್ನು ಸರಕಾರವು ಪಾವತಿಸುತ್ತದೆ ಹಾಗೂ 70 ಶೇಕಡ ದರವನ್ನು ರೋಗಿಯೇ ಪಾವತಿಸಬೇಕಾಗುತ್ತದೆ. ಇಲ್ಲಿ ಸರಕಾರವು ನಿಗದಿಪಡಿಸಿದ ದರ ಎಂದು ಅರ್ಥಮಾಡಿಕೊಳ್ಳಬೇಕು ಹೊರತು ಆಸ್ಪತ್ರೆಯವರು ಮಾಡಿದಷ್ಟು ಬಿಲ್ಲಿನ ಎಂದು ಅರ್ಥವಲ್ಲ.
(ಉದಾಹರಣೆಗೆ, ಅಪೆಂಡಿಕ್ಸ್ ಆಪರೇಷನ್ಗೆ ಆಸ್ಪತ್ರೆಯವರು 40,000 ಬಿಲ್ಲು ಬೇಕಾದರೂ ಮಾಡಬಹುದು. ಆದರೆ ಅದಕ್ಕೆ ಸರಕಾರ ನಿಗದಿಪಡಿಸಿದ ಪ್ಯಾಕೇಜ್ ಇದರ ಕೇವಲ 20,000 ಆಗಿರಲೂಬಹುದು. 20 ಸಾವಿರದ 30 ಶೇಕಡಾ ಭಾಗವನ್ನು ಸರಕಾರ ಪಾವತಿಸುತ್ತದೆ, ಮಿಕ್ಕುಳಿದ 70 ಶೇಕಡಾ ಭಾಗವನ್ನು ರೋಗಿಯೇ ಪಾವತಿಸಬೇಕಾಗುತ್ತದೆ. ಇದು ಖಾಸಗಿ ಆಸ್ಪತ್ರೆಗಳಲ್ಲಿ ಎಪಿಎಲ್ ಕಾರ್ಡು ಹೊಂದಿರುವವರಿಗೆ ಅನ್ವಯಿಸುತ್ತದೆ.)
ಬಿಪಿಎಲ್ ಕಾರ್ಡುದಾರರಿಗೆ ಸರಕಾರಿ ಆಸ್ಪತ್ರೆಯಿಂದ ರೆಫರ್ರಲ್ ಲೆಟರ್ ತೆಗೆದುಕೊಂಡು ಖಾಸಗಿ ಆಸ್ಪತ್ರೆಗೆ ಹೋದಾಗ ಪೂರ್ಣ ಚಿಕಿತ್ಸಾ ವೆಚ್ಚ ಸರಕಾರವೇ ಭರಿಸುತ್ತದೆ.
ಯಾವ ಕಾಯಿಲೆಗಳಿಗೆ ಯಾವ ರೀತಿಯಲ್ಲಿ ಆಯುಷ್ಮಾನ್ ಅನ್ವಯಿಸುತ್ತದೆ?
⭕ ತಾಯಿ ಮತ್ತು ಮಕ್ಕಳ ಆರೋಗ್ಯ, ಜ್ವರ ಕೆಮ್ಮು, ವಾಂತಿ, ಭೇದಿ ಮುಂತಾದ ಎಲ್ಲ ರೀತಿಯ ಪ್ರಾಥಮಿಕ ಹಂತದ ಆರೋಗ್ಯ ಸೇವೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುವುದು.
⭕ ಹೆರಿಗೆ ಸೇವೆ, ಡೆಂಗೆ, ಮಲೇರಿಯಾ, ಮೂಳೆಮುರಿತ, ಸಾಮಾನ್ಯ ಶಸ್ತ್ರಚಿಕಿತ್ಸೆಗಳು ಮುಂತಾದ ನಿಗದಿತ 294 ದ್ವಿತೀಯ ಹಂತದ ಚಿಕಿತ್ಸೆಗಳನ್ನು ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ನೀಡಲಾಗುವುದು.
⭕ 251 ಸಂಕೀರ್ಣತೆ ದ್ವಿತೀಯ ಹಂತದ ಕಾಯಿಲೆಗಳಿಗೆ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ಸಾಧ್ಯವಿಲ್ಲದ ಪಕ್ಷದಲ್ಲಿ ರೋಗಿಗಳನ್ನು ಚಿಕಿತ್ಸೆಗಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುವುದು.
⭕ ಹೃದಯ ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ ಮುಂತಾದ ನಿಗದಿತ 935 ತೃತೀಯ ಹಂತದ ಆರೋಗ್ಯ ಸೇವೆಗಳಿಗೆ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ಸಾಧ್ಯವಿಲ್ಲದ ಪಕ್ಷದಲ್ಲಿ ರೋಗಿಗಳನ್ನು ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುವುದು.
⭕ 170 ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಳಿಗೆ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು ಒಮ್ಮೆ ರೆಫರ್ ಆದನಂತರ ರೋಗಿಗಳು ಚಿಕಿತ್ಸೆಗಾಗಿ ತಮಗೆ ಬೇಕಾದ ಆಸ್ಪತ್ರೆಯನ್ನು ಆಯ್ಕೆಮಾಡಿಕೊಳ್ಳಬಹುದು.
⭕ ಯೋಜನೆಗೆ ಆಧಾರ ಸಂಖ್ಯೆ ಬಳಸಲು ರೋಗಿಯೂ ಸ್ವಯಂ ದೃಢೀಕರಣ ಪತ್ರ ನೀಡಬೇಕು. ರೋಗಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯ ಹೆಲ್ತ್ ಕಾರ್ಡ್ ರೂ 10 ಪಡೆದು ನೀಡಲಾಗುತ್ತದೆ. ನಂತರದಲ್ಲಿ ಆಸ್ಪತ್ರೆಗೆ ಹೋಗುವಾಗ ಈ ಕಾರ್ಡನ್ನು ತಪ್ಪದೆ ತೆಗೆದುಕೊಂಡು ಹೋಗಬೇಕು.
⭕ ಸಾರ್ವತ್ರಿಕ ಆರೋಗ್ಯ ಕಾರ್ಡ್ ಕಳೆದು ಹೋದಲ್ಲಿ ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡು ನೀಡಿ, ಸರಕಾರಿ ಆಸ್ಪತ್ರೆಗಳಲ್ಲಿ ನಕಲಿ ಕಾರ್ಡುಗಳನ್ನು ರೂಪಾಯಿ 20 ಪಾವತಿಸಿ ಪಡೆಯಬಹುದು.
⭕ ಸರಕಾರಿ ಆದೇಶದಲ್ಲಿ ಪಟ್ಟಿಮಾಡಿರುವ ಎಮರ್ಜೆನ್ಸಿ ಕೋಡ್ ಇರುವ ಕಾಯಿಲೆಗಳಿಗೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಹೋಗಬಹುದು ಅಲ್ಲಿಯೇ ರೋಗಿಯ ನೋಂದಣಿ ಮಾಡಲಾಗುತ್ತದೆ.
⭕ ಸರಕಾರದಿಂದ ಅನುಮತಿ ಗೊಂಡ ಜನಸೇವಾ ಕೇಂದ್ರಗಳಲ್ಲಿ ಕೂಡ ಆನ್ ಲೈನ್ ನೋಂದಾವಣೆ ಮಾಡಿ ಆರೋಗ್ಯ ಕಾರ್ಡು ನೀಡಲಾಗುತ್ತದೆ.
⭕ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಪ್ರತ್ಯೇಕವಾದ ಆರೋಗ್ಯ ಕಾರ್ಡ್ ನೀಡಲಾಗುವುದು.
⭕ ಅಂದರೆ ಕುಟುಂಬದ ಸದಸ್ಯರು ತಾವೇ ಖುದ್ದಾಗಿ ಹಾಜರಾಗಿ ಆರೋಗ್ಯ ಕಾರ್ಡು ಮಾಡಿಸಿಕೊಳ್ಳಬೇಕು. ಅವರೆಲ್ಲರ ಪರವಾಗಿ ಕುಟುಂಬದ ಯಜಮಾನ ಹೋದರೆ ಆಗುವುದಿಲ್ಲ.
⭕ ಯಾರಿಗೆ ಆರೋಗ್ಯ ಕಾರ್ಡು ಮಾಡಬೇಕಾಗಿದೆಯೋ ಅವರ ಹೆಸರು ರೇಷನ್ ಕಾರ್ಡ್ ನಲ್ಲಿ ಇರಬೇಕು ಮತ್ತು ಅವರ ಆಧಾರ್ ಕಾರ್ಡ್ ಅಗತ್ಯ ಇರಬೇಕು.
⭕ ಒಂದು ವೇಳೆ ನೀವು ಈಗಾಗಲೇ ಆರೋಗ್ಯ ಕಾರ್ಡು ಮಾಡಿಸಿಕೊಳ್ಳದೆ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದಲ್ಲಿ, ನೀವು ನಿಮ್ಮ ಜೊತೆಗೆ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹಾಗೂ ಒಂದು ಭಾವಚಿತ್ರವನ್ನು ಜೊತೆಗೆ ಕೊಂಡು ಹೋದಲ್ಲಿ ಆರೋಗ್ಯ ಕಾರ್ಡು ನೀಡಿ ಮುಂದಿನ ಚಿಕಿತ್ಸಾಕ್ರಮಗಳನ್ನು ಮಾಡಲಾಗುವುದು. ಆದರೆ ತುರ್ತುಚಿಕಿತ್ಸೆಗೆ ಹೊರತಾದ ಸಂದರ್ಭದಲ್ಲಿ ನೀವು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಲ್ಲಿ ಈ ಸೌಲಭ್ಯ ದೊರೆಯುವುದಿಲ್ಲ.
ಈ ಸೌಲಭ್ಯವನ್ನು ಪಡೆಯುವುದು ಹೇಗೆ?
⭕ ಅನಾರೋಗ್ಯವಾದಾಗ ರೋಗಿಗಳು ಹತ್ತಿರದ ಸರಕಾರಿ ಆಸ್ಪತ್ರೆಗೆ ಹೋಗ ತಕ್ಕದ್ದು.
⭕ ಸರಕಾರಿ ಆಸ್ಪತ್ರೆಯ ವೈದ್ಯರು ರೋಗಿಯ ಸಂಪೂರ್ಣ ತಪಾಸಣೆ ನಡೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಾರೆ. ಅಲ್ಲಿ ವ್ಯವಸ್ಥೆ ಇಲ್ಲದಿದ್ದರೆ ಸಮೀಪದ ನೋಂದಾಯಿತ ತಾಲೂಕು ಅಥವಾ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರೆಫರ್ ಮಾಡುತ್ತಾರೆ.
⭕ ಸರಕಾರಿ ಆಸ್ಪತ್ರೆಯಲ್ಲಿ ನಿಮ್ಮ ಕಾಯಿಲೆಗೆ ಚಿಕಿತ್ಸೆಯ ವ್ಯವಸ್ಥೆ ಲಭ್ಯವಿಲ್ಲದ ಸಂದರ್ಭದಲ್ಲಿ ಮಾತ್ರ ನಿಮ್ಮನ್ನು ಬೇರೆ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಗಮನಿಸಬೇಕು. ಹಾಗೆ ರೆಫರ್ ಮಾಡುವಾಗ ನಿಮ್ಮ ಕಾಯಿಲೆಗೆ ಸಂಬಂಧಿಸಿದ ನಿಗದಿತ ಕ್ರಮ ಸಂಖ್ಯೆ ಅಥವಾ ಗೂಡನ್ನು ನಮೂದಿಸಬೇಕು. ಇದನ್ನು ಆಸ್ಪತ್ರೆಯಲ್ಲಿ ರೆಫರ್ ಮಾಡುವಾಗಲೇ ನೋಡಿ ನಿಗದಿಪಡಿಸಬೇಕು.
⭕ ಸರಕಾರಿ ಆದೇಶದಲ್ಲಿ ಪಟ್ಟಿಮಾಡಿರುವ 170 ತುರ್ತು ಸಂದರ್ಭದ ಚಿಕಿತ್ಸೆಯು ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಆದರೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ದಾಖಲಾದ 24 ಗಂಟೆಗಳ ಒಳಗಾಗಿ ರೋಗಿಯ ಸಂಬಂಧಿ ಅಥವಾ ಕುಟುಂಬದವರು ಯಾರಾದರೂ ರೋಗಿಯ ಆರೋಗ್ಯ ಕಾರ್ಡ್ ಹಿಡಿದುಕೊಂಡು ಸರಕಾರಿ ಆಸ್ಪತ್ರೆಗೆ ತೆರಳಿ ರೆಫರ್ ಲೆಟರ್ ಪಡೆದುಕೊಂಡು ಬರಬೇಕು.
⭕ ತುರ್ತು ಚಿಕಿತ್ಸೆಗಳ ಹೊರತಾಗಿ ಅರ್ಹತೆ ರೋಗಿಗಳಾಗಲಿ ಅಥವಾ ಸಾಮಾನ್ಯ ರೋಗಿಗಳೇ ಆಗಲಿ ,ಸರಕಾರಿ ಆಸ್ಪತ್ರೆಯ ರೆಫರೆಲ್ ಇಲ್ಲದೆ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದಲ್ಲಿ ಆ ಚಿಕಿತ್ಸಾ ವೆಚ್ಚವನ್ನು ಸದರಿ ರೋಗಿಯೇ ಭರಿಸಬೇಕಾಗುತ್ತದೆ.
ಯೋಜನೆಯ ವ್ಯಾಪ್ತಿಗೆ ಒಳಪಡದವರು ಯಾರು?
⭕ ಕಾರ್ಮಿಕರ ರಾಜ್ಯ ವಿಮಾ ಯೋಜನೆಯಡಿ ರಕ್ಷಣೆ ಪಡೆದಿರುವ ನಾಗರಿಕರು( ಇ. ಎಸ್. ಐ ಸೌಲಭ್ಯ ಪಡೆದವರು)
⭕ ಉದ್ಯೋಗದಾತರಿಂದ ಆರೋಗ್ಯ ಭರವಸೆ ಅಥವಾ ಆರೋಗ್ಯ ವಿಮೆ ಯೋಜನೆಗಳ ರಕ್ಷಣೆ ಪಡೆದಿರುವ ನಾಗರಿಕರು.
⭕ ಭಾರತ ಸರಕಾರದ ಕೇಂದ್ರ ಸರಕಾರಿ ಆರೋಗ್ಯ ಯೋಜನೆಯಲ್ಲಿ ರಕ್ಷಣೆ ಪಡೆದಿರುವ ನಾಗರಿಕರು
⭕ ಕರ್ನಾಟಕ ಸರಕಾರ ನೌಕರರ ನಿಯಮಗಳಿಗೆ ತಿದ್ದುಪಡಿ ತರುವವರೆಗೂ ಕರ್ನಾಟಕ ಸರಕಾರದ ಸಿಬ್ಬಂದಿಗಳು.
ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು?
⭕ ಪ್ರತಿ ತಾಲೂಕು ಹಾಗೂ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ “ ಆರೋಗ್ಯ ಮಿತ್ರ “ಎಂಬ ಅಧಿಕಾರಿ ಇರುತ್ತಾರೆ. ಅವರನ್ನು ಇಂತಹ ಆರೋಗ್ಯ ಯೋಜನೆಗಳ ಮಾಹಿತಿ ಮತ್ತು ಅನುಷ್ಠಾನಕ್ಕೆ ಸರಕಾರವೇ ನೇಮಕ ಮಾಡಿರುತ್ತದೆ. ಆದುದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಯೋಜನೆಯ ವಿವರ ಮತ್ತು ನಿಭಾವಣೆ ಗೆ ಆರೋಗ್ಯಮಿತ್ರ ಅಧಿಕಾರಿಗಳು ಬದ್ಧರು.
⭕ ಇಲ್ಲವಾದಲ್ಲಿ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸರಕಾರದ ಸಹಾಯವಾಣಿ ಸಂಖ್ಯೆ 18004258330 ಗೆ ಅಥವಾ 104 ಸಂಖ್ಯೆಗೆ ಕರೆ ಮಾಡಿ ನೋಂದಾಯಿತ ಆಸ್ಪತ್ರೆಗಳ ವಿವರಗಳನ್ನು ಪಡೆಯಬಹುದು.
⭕ ಅಥವಾ ಯೋಜನೆಯ ಮಾಹಿತಿ ಬೇಕಾದಲ್ಲಿ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರ 9740545979 ಎಂಬ ವಾಟ್ಸಪ್ ಮೊಬೈಲ್ ಸಂಖ್ಯೆಯನ್ನು ನಿಮ್ಮ ಮೊಬೈಲ್ ಫೋನಿನಲ್ಲಿ ಸೇವ್ ಮಾಡಿದ ನಂತರ ” ಮಾಹಿತಿಗಾಗಿ ” ಎಂದು ಟೈಪ್ ಮಾಡಿ, ನಿಮ್ಮ ಹೆಸರನ್ನು ಬರೆದು ಆ ನಂಬರಿಗೆ ಸಂದೇಶ ಕಳುಹಿಸಿ. ನಿಮ್ಮನ್ನು” ಜನ ಔಷಧಿ ಆಯುಷ್ಮಾನ್” ಮಾಹಿತಿ ಲಿಸ್ಟಿಗೆ ಸೇರಿಸಿದ ನಂತರ, ಅವರು ನಿಮಗೆ ಬೇಕಾದ ಮಾಹಿತಿಯನ್ನು ಸಂದೇಶದ ಮೂಲಕ ಕಳುಹಿಸಬಹುದು.
ಸಾಮಾನ್ಯವಾಗಿ ಎದುರಾಗುವ ಸಮಸ್ಯೆಗಳು ಯಾವುದು?
⭕ ಪ್ರಸ್ತುತ ಸಂದರ್ಭದಲ್ಲಿ ಚಿಕಿತ್ಸೆಗೆ ಸಂಬಂಧಿಸಿದ ಕೋಡ್ ಇಲ್ಲವೆಂದು ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ಆಯುಷ್ಮಾನ ಯೋಜನೆ ಅಡಿಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಬಹುದು. ಅಂದರೆ ನಿಮ್ಮ ಚಿಕಿತ್ಸೆಗೆ ಬೇಕಾದ ಪ್ಯಾಕೇಜ್ ದರವು 1650
⭕ ಚಿಕಿತ್ಸಾ ವಿಧಾನಗಳ ಪಟ್ಟಿಯಲ್ಲಿ ಒಳಗೊಳ್ಳದೇ ಇರಬಹುದು.
⭕ ಆಯುಷ್ಮಾನ್ ಯೋಜನೆಯಡಿಯಲ್ಲಿ ಸರಕಾರವು ಕಾಯಿಲೆಗೆ ನಿಗದಿಪಡಿಸಿದ ಪ್ಯಾಕೇಜ್ ದರವು ತಮಗೆ ತೃಪ್ತಿಕರ ಆಗಿಲ್ಲವೆಂದು ಚಿಕಿತ್ಸೆ ಮಾಡುವಲ್ಲಿ ಆಸಕ್ತಿ ತೋರದೇ ಇರಬಹುದು.
⭕ ಬಹಳಷ್ಟು ರೋಗಿಗಳು ರೆಫರ್ರಲ್ ಲೆಟರ್ ಪಡೆದುಕೊಂಡು ಖಾಸಗಿ ಆಸ್ಪತ್ರೆಗೆ ಹೋಗಬೇಕೆಂಬ ನಿಯಮವನ್ನು ತಿಳಿಯದೇ ಇರುವ ಸಾಧ್ಯತೆಯಿದೆ. ಇದರಿಂದಾಗಿ ನೇರವಾಗಿ ನೋಂದಾವಣೆ ಗೊಳ್ಳದ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ಚಿಕಿತ್ಸಾ ವೆಚ್ಚ ಪಾವತಿಸುವ ಸಂದರ್ಭದಲ್ಲಿ ಆಯುಷ್ಮಾನ್ ಯೋಜನೆಯ ಪ್ರಯೋಜನ ಪಡೆಯಲು ಮುಂದಾಗಬಹುದು. ಆದರೆ ಆ ಹಂತದಲ್ಲಿ ಆ ಯೋಜನೆಯ ಪ್ರಯೋಜನ ಪಡೆಯಲು ಅವರಿಂದ ಸಾಧ್ಯವಾಗುವುದಿಲ್ಲ ಮತ್ತು ಅರ್ಹರಾಗುವುದಿಲ್ಲ.
⭕ ಸರಕಾರಿ ಆಸ್ಪತ್ರೆಗೆ ಹೋಗಬೇಕು ಎಂದು ಕಡ್ಡಾಯ ಇರುವುದರಿಂದ ರೋಗಿಯು ತನ್ನ ಆಯ್ಕೆಯ ಆಸ್ಪತ್ರೆಗೆ ಹೋಗುವ ಮತ್ತು ಅಲ್ಲಿ ಚಿಕಿತ್ಸೆ ಪಡೆಯುವ ಅವಕಾಶವನ್ನು ಈ ಯೋಜನೆ ತಳ್ಳಿಹಾಕುತ್ತದೆ. ರೆಫರ್ರಲ್ ಲೆಟರ್ ಪಡೆದುಕೊಂಡೆ ಖಾಸಗಿ ಆಸ್ಪತ್ರೆಗೆ ಹೋಗಬೇಕೆಂಬ ನಿಯಮದಿಂದ ರೋಗಿಗೆ ಕಿರಿಕಿರಿ ಉಂಟಾಗಬಹುದು.
⭕ ಆಸ್ಪತ್ರೆಗಳು ಈ ಯೋಜನೆಯಲ್ಲಿ ಬರುವ ಕಡಿಮೆ ಪ್ಯಾಕೇಜ್ ಗಳಿಂದಾಗಿ ಈ ಯೋಜನೆಯಡಿಯಲ್ಲಿ ಚಿಕಿತ್ಸೆಗೆ ಆಸಕ್ತಿ ತೋರುವ ಸಾಧ್ಯತೆಗಳು ಕಡಿಮೆಯಾಗಬಹುದು. ಅರ್ಥಾತ್ ಹೆಚ್ಚಿನ ಮೊತ್ತದ ವಿಮಾಕಂತು ಕಟ್ಟುವ ಖಾಸಗಿ ಆರೋಗ್ಯ ವಿಮೆಗಳನ್ನು ಆಸ್ಪತ್ರೆಗಳು ಪ್ರೋತ್ಸಾಹಿಸಬಹುದು.
⭕ ಕೆಲವೊಂದು ಆಸ್ಪತ್ರೆಗಳಲ್ಲಿ ಕೇವಲ ಕೆಲವೊಂದು ವಿಭಾಗದ ಚಿಕಿತ್ಸೆಗಳು ಮಾತ್ರ ಆಯುಷ್ಮಾನ್ ಯೋಜನೆಯಡಿಯಲ್ಲಿ ನೋಂದಾವಣೆ ಆಗಿರಬಹುದು. ಉದಾಹರಣೆಗೆ ಒಂದು ಆಸ್ಪತ್ರೆಯಲ್ಲಿ ಹೃದಯ ರೋಗದ ಚಿಕಿತ್ಸೆಗೆ ಆಯುಷ್ಮಾನ ಯೋಜನೆ ಅಡಿಯಲ್ಲಿ ನೋಂದಾವಣೆ ಆಗಿರಬಹುದು. ಆದರೆ ನರರೋಗ ಹಾಗೂ ಮೂಳೆ ರೋಗದ ಚಿಕಿತ್ಸೆಗೆ ಆಯುಷ್ಮಾನ್ ನೋಂದಾವಣೆ ಆಗದೇ ಇರಬಹುದು. ಇಂತಹ ಸಂದರ್ಭಗಳಲ್ಲಿ ರೋಗಿಗಳು ಗೊಂದಲಕ್ಕೆ ಒಳಗಾಗಬಹುದು.
ಹಾಗಾದರೆ ಇದಕ್ಕೆ ಪರಿಹಾರವೇನು?
ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಷನ್ (ಟಿ.ಪಿ.ಎ) ವ್ಯವಸ್ಥೆಯನ್ನು ಜಾರಿಗೊಳಿಸಿ, ಮೂರನೆಯ ಘಟಕಕ್ಕೆ ಇದರ ನಿರ್ವಹಣೆಯ ಜವಾಬ್ದಾರಿಯನ್ನು ಕೊಡುವುದರ ಮೂಲಕ ಯೋಜನೆಯಲ್ಲಿ ಅನುಷ್ಠಾನಗೊಳಿಸುವಾಗ ಎದುರಾಗುವ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು.
ಈ ವರ್ಷದ ಬಜೆಟ್ನಲ್ಲಿ ಕಳೆದ ವರ್ಷದಂತೆಯೇ 6,400 ಕೋಟಿ ರೂಪಾಯಿ ಮೊತ್ತವನ್ನು ಆಯುಷ್ಮಾನ್ ಆರೋಗ್ಯ ಯೋಜನೆಗೆ ಕೇಂದ್ರ ಸರಕಾರವು ಮೀಸಲಿಟ್ಟಿದೆ. ದೇಶದಾದ್ಯಂತ ಎಷ್ಟೋ ಮಂದಿ ರೋಗಿಗಳು ಇದರ ಪ್ರಯೋಜನವನ್ನು ಹೊಂದಿದ್ದಾರೆ. ಆದರೆ ಪ್ರಾಯೋಗಿಕವಾಗಿ ಇದಿರಾಗುವ ಕೆಲವೊಂದು ಎಡರುತೊಡರುಗಳಿಗೆ ಕೇಂದ್ರ ಸರಕಾರವು ಹೊಸ ಹಾದಿ ಹೆಜ್ಜೆಗಳನ್ನು ರೂಪಿಸಬೇಕಾಗಿದೆ. ಇಲ್ಲವಾದಲ್ಲಿ ಈ ಯೋಜನೆಯು ತಲುಪಬೇಕಾದವರಿಗೆ ಅಗತ್ಯವಿದ್ದಾಗ ತಲುಪದೇ ಇರಬಹುದು.
✍ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಕೃಪೆ : ಸುಳ್ಯನ್ಯೂಸ್.ಕಾಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.