ಆಕ್ರಮಣಶೀಲ, ವಿಸ್ತರಣಾವಾದಿ ಚೀನಾಗೆ ಸೆಡ್ಡು ಹೊಡೆಯುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರವು, ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಪಿಯೂಷ್ ಗೋಯಲ್ ಅವರು ಭಾರತೀಯ ನಿಯೋಗದೊಂದಿಗೆ ರಷ್ಯಾದ ಪೂರ್ವ ಪ್ರದೇಶಕ್ಕೆ ಭೇಟಿಯನ್ನು ನೀಡುತ್ತಿದ್ದಾರೆ. ಈ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯವಿದೆ ಮತ್ತು ಡ್ರ್ಯಾಗನ್ ಚೀನಾದ ಪ್ರಭಾವಕ್ಕೆ ಸೆಡ್ಡು ಹೊಡೆಯುವ ಉದ್ದೇಶವನ್ನು ಭಾರತ ಹೊಂದಿದೆ. ನಿಯೋಗದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗುಜರಾತಿನ ಮುಖ್ಯಮಂತ್ರಿ ವಿಜಯ್ ರೂಪಾನಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಅಸ್ಸಾಂನ ಪ್ರತಿನಿಧಿ ಇರಲಿದ್ದಾರೆ.
ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದ ವ್ಲಾಡಿವೋಸ್ಟಾಕ್ಗೆ ಭೇಟಿ ನೀಡಲಿದ್ದಾರೆ. ಅವರಿಗೂ ಮುಂಚಿತವಾಗಿ ಗೋಯಲ್ ನೇತೃತ್ವದ ನಿಯೋಗ ಅಲ್ಲಿಗೆ ಭೇಟಿಯನ್ನು ನೀಡಿ, ಮೋದಿಯ ಆಗಮನದ ಸಮಯದಲ್ಲಿ ಮಾಡಲಾಗುವ ಕೆಲವು ದೊಡ್ಡ ಹೂಡಿಕೆ ಘೋಷಣೆಗಳಿಗೆ ವೇದಿಕೆಯನ್ನು ಸಜ್ಜುಗೊಳಿಸಲಿದೆ. ರಷ್ಯಾದ ದೂರದ ಈ ಪೂರ್ವ ಪ್ರದೇಶವು ಸಂಪನ್ಮೂಲದಿಂದ ಸಮೃದ್ಧವಾಗಿದೆ, ಇದು ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಅಪರೂಪದ ಭೂಮಿಯ ಲೋಹಗಳಿಂದ ಕೂಡಿದೆ. ವಜ್ರ ಸಂಸ್ಕರಣೆ, ಮೂಲಸೌಕರ್ಯ ಮತ್ತು ಕೃಷಿ ಮುಂತಾದ ಕ್ಷೇತ್ರಗಳಲ್ಲಿನ ರಷ್ಯಾದ ಯೋಜನೆಗಳಲ್ಲಿ ಭಾರತವು ತನ್ನ ಅಗ್ಗದ ಕಾರ್ಮಿಕ ಸಂಪನ್ಮೂಲವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.
ಸೆಪ್ಟೆಂಬರ್ ಆರಂಭದಲ್ಲಿ ವ್ಲಾಡಿವೋಸ್ಟಾಕ್ನಲ್ಲಿ ನಡೆಯಲಿರುವ ಈಸ್ಟರ್ನ್ ಎಕನಾಮಿಕ್ ಫೋರಂನ 20 ನೇ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ಸಂಪನ್ಮೂಲ ಸಮೃದ್ಧ ಪೂರ್ವ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಉಪಸ್ಥಿತಿಯಿಂದ ಸಂತೋಷವಾಗಿಲ್ಲ. ಮುಖ್ಯವಾಗಿ ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ಸಮತೋಲನಗೊಳಿಸಲು ಭಾರತದ ಸಹಯೋಗದೊಂದಿಗೆ ಇಂಡೋ ಪೆಸಿಫಿಕ್ ಪ್ರದೇಶವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಪುಟಿನ್ ಹೊಂದಿದ್ದಾರೆ.
ಭಾರತೀಯ ನಿಯೋಗವು ಉದ್ಯಮಿಗಳನ್ನೂ ಒಳಗೊಳ್ಳಲಿದ್ದು, ರಷ್ಯಾದ ಪೂರ್ವ ಪ್ರದೇಶದಲ್ಲಿ ಲಭ್ಯವಿರುವ ಹೂಡಿಕೆ ಅವಕಾಶಗಳನ್ನು ಇವರು ಪರಿಶೀಲಿಸಲಿದ್ದಾರೆ. ರಷ್ಯಾದ ನಾಯಕರುಗಳು ಮತ್ತು ಅಲ್ಲಿನ ಇತರ ಪ್ರಾಂತ್ಯಗಳು ನಿರ್ದಿಷ್ಟ ಕ್ಷೇತ್ರಗಳಲ್ಲಿ ಸಹಯೋಗವನ್ನು ಹುಡುಕಲಿವೆ. ಉದಾಹರಣೆಗೆ, ನವೀಕರಿಸಬಹುದಾದ ಇಂಧನ, ಕೃಷಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಉತ್ತರ ಪ್ರದೇಶ ರಾಜ್ಯವು ಆ ದೇಶದೊಂದಿಗೆ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.
ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ತನ್ನ ಪೂರ್ವ ಪ್ರದೇಶದಲ್ಲಿ ಚೀನಾದ ಉಪಸ್ಥಿತಿಯನ್ನು ಸಮತೋಲನಗೊಳಿಸುವ ಗುರಿಯನ್ನು ರಷ್ಯಾ ಹೊಂದಿದೆ. ಈ ಪ್ರದೇಶದಲ್ಲಿ ಚೀನಾದ ಹೂಡಿಕೆದಾರರಿಗೆ ಶಾಶ್ವತ ಭೂ ವರ್ಗಾವಣೆಯನ್ನು ರಷ್ಯಾ ನಿಷೇಧಿಸಿದೆ ಮತ್ತು ಮುಂಬರುವ ಎಲ್ಲಾ ಚೀನೀ ಯೋಜನೆಗಳಿಗೆ ಸ್ಥಳೀಯ ಜನರಿಗೆ ಶೇಕಡಾ 80 ರಷ್ಟು ಉದ್ಯೋಗವನ್ನು ನೀಡುವುದನ್ನು ಕಡ್ಡಾಯಗೊಳಿಸಿದೆ.
ಚೀನಾದ ಒನ್ ಬೆಲ್ಟ್ ಆ್ಯಂಡ್ ರೋಡ್ ಯೋಜನೆಗೆ ಸೆಡ್ಡು ಹೊಡೆಯಲು ಭಾರತವು ಚೆನ್ನೈ-ವ್ಲಾಡಿವೋಸ್ಟಾಕ್ ಸಮುದ್ರ ಮಾರ್ಗವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ, ರಷ್ಯಾದೊಂದಿಗೆ ಉತ್ತಮ ಸಮುದ್ರ ಸಂಪರ್ಕವನ್ನು ಸಾಧಿಸಲು ಭಾರತವು ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್ಪೋರ್ಟ್ ಕಾರಿಡಾರ್ನಲ್ಲಿ ಕಾರ್ಯನಿರ್ವಹಿಸುತ್ತಿದೆ.
‘ಸ್ಟ್ರಿಂಗ್ ಆಫ್ ಪರ್ಲ್’ ಸಿದ್ಧಾಂತದ ಅಡಿಯಲ್ಲಿ ಚೆನ್ನಾಗಿ ಅರ್ಥವಾಗುವ ಸಂಗತಿ ಏನೆಂದರೆ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತವನ್ನು ಸುತ್ತುವರಿಯಲು ಚೀನಾ ಯೋಜಿಸಿದೆ ಎಂಬುದು. ಬಾಂಗ್ಲಾದೇಶದಲ್ಲಿ ಚೀನಾ ಚಿತ್ತಗಾಂಗ್ ಬಂದರನ್ನು ಅಭಿವೃದ್ಧಿಪಡಿಸಿತು ಮತ್ತು ಆಧುನೀಕರಿಸಿತು. ಇದು ಭಾರತದ ನೌಕಾ ಸುರಕ್ಷತೆಗೆ ಮಹತ್ವದ್ದಾಗಿರುವ ಬಂಗಾಳಕೊಲ್ಲಿಗೆ ಪ್ರವೇಶಿಸಲು ಚೀನಾಗೆ ಮುಕ್ತತೆಯನ್ನು ನೀಡುತ್ತದೆ. ಬಂಗಾಳಕೊಲ್ಲಿಯಲ್ಲಿ, ಮ್ಯಾನ್ಮಾರ್ನ ಕ್ಯುಕ್ಪಿಯು ಬಂದರಿನ ಮೂಲಕ ಚೀನಾ ಅಸ್ತಿತ್ವ ಕಂಡುಕೊಂಡಿದೆ. ಈ ಬಂದರುಗಳ ಮೂಲಕ, ಬಂಗಾಳಕೊಲ್ಲಿಯಲ್ಲಿ ಭಾರತದ ಬಲವಾದ ಉಪಸ್ಥಿತಿಯನ್ನು ಎದುರಿಸಲು ಚೀನಾ ಬಯಸಿದೆ. ಭಾರತದೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿರುವ ಶ್ರೀಲಂಕಾ, ಚೀನಾದ ಕಂಪನಿಯೊಂದಕ್ಕೆ ಹಂಬಂಟೋಟ ಬಂದರನ್ನು ಅಭಿವೃದ್ಧಿಪಡಿಸಲು ಅವಕಾಶ ಮಾಡಿಕೊಟ್ಟಿದೆ. ಈ ಬಂದರನ್ನು ಚೀನಾ ಮತ್ತು ಶ್ರೀಲಂಕಾ ಎರಡೂ ಬಳಸಿಕೊಳ್ಳಲಿವೆ.
ಆದರೂ, ಭಾರತವು ಇಂಧನ ರಾಜತಾಂತ್ರಿಕತೆಯ ಮೂಲಕ ಚೀನಾಗೆ ಸೆಡ್ಡು ಹೊಡೆಯುತ್ತಿದೆ. ಜಪಾನ್ ಸಹಯೋಗದೊಂದಿಗೆ ಕೊಲಂಬೊ ಬಳಿ ಎಲ್ಎನ್ಜಿ ಟರ್ಮಿನಲ್ ನಿರ್ಮಿಸುವ ಒಪ್ಪಂದವನ್ನು ಭಾರತ ರೂಪಿಸಿದೆ. ಶ್ರೀಲಂಕಾ ತನ್ನ ಶಕ್ತಿಯ ಅವಶ್ಯಕತೆಗಳಿಗಾಗಿ ದ್ರವ ಇಂಧನವನ್ನು ಅವಲಂಬಿಸಿದೆ. ಈ ಎಲ್ಎನ್ಜಿ ಟರ್ಮಿನಲ್ ಶ್ರೀಲಂಕಾಕ್ಕೆ ಶುದ್ಧ ಇಂಧನವನ್ನು ಹೊಂದಲು ಸಹಾಯ ಮಾಡುತ್ತದೆ. ಇಂಧನ ಅಗತ್ಯತೆಗಳಲ್ಲಿ ಭಾರತವು ಬಾಂಗ್ಲಾದೇಶಕ್ಕೂ ಸಹಾಯ ಮಾಡುತ್ತಿದೆ.
ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಇತ್ತೀಚೆಗೆ ಬಾಂಗ್ಲಾದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ, ಸಿಲಿಗುರಿಯಿಂದ ಬಾಂಗ್ಲಾದೇಶಕ್ಕೆ ಪೆಟ್ರೋ ಉತ್ಪನ್ನಗಳ ಪೈಪ್ಲೈನ್ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಇದು ಸಿಲಿಗುರಿ ಮೂಲದ ಸಂಸ್ಕರಣಾಗಾರದಿಂದ ಡೀಸೆಲ್ ಪೂರೈಸಲು ಭಾರತಕ್ಕೆ ಸಹಾಯ ಮಾಡುತ್ತದೆ. ನೇಪಾಳದಲ್ಲಿ ಭಾರತವು ನೇಪಾಳದ ಇಂಧನ ಅವಶ್ಯಕತೆಗಳನ್ನು ಪೂರೈಸುವತ್ತ ಎದುರು ನೋಡುತ್ತಿದೆ ಮತ್ತು ಬಿಹಾರದ ಮೋತಿಹರಿಯಿಂದ ನೇಪಾಳಕ್ಕೆ ಇಂಧನ ಉತ್ಪನ್ನಗಳ ಪೈಪ್ಲೈನ್ ನಿರ್ಮಿಸುತ್ತಿದೆ. ನೇಪಾಳ ಪ್ರಧಾನಿ ಅವರ ಇತ್ತೀಚಿನ ಭಾರತ ಭೇಟಿಯ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮ್ಯಾನ್ಮಾರ್ನಲ್ಲಿ ಚೀನಾದ ಪ್ರಭಾವವನ್ನು ಎದುರಿಸಲು, ಭಾರತವು ಈಶಾನ್ಯದಿಂದ ಯಾಂಗೊನ್ಗೆ ಪೆಟ್ರೋ ಉತ್ಪನ್ನಗಳ ಪೈಪ್ಲೈನ್ ನಿರ್ಮಿಸುತ್ತಿದೆ. ಯಾಂಗೊನ್ ಬಳಿ ಎಲ್ಎನ್ಜಿ ಟರ್ಮಿನಲ್ ನಿರ್ಮಿಸುವ ಬಗ್ಗೆ ಭಾರತ ಮತ್ತು ಮ್ಯಾನ್ಮಾರ್ ಮಾತುಕತೆ ನಡೆಸುತ್ತಿವೆ. ಮಾಲ್ಡೀವ್ಸ್ಗೆ ಸಂಬಂಧಿಸಿದಂತೆ, ಭಾರತವು ತನ್ನ ಶೇ.100ರಷ್ಟು ಇಂಧನ ಸಂಬಂಧಿತ ಅವಶ್ಯಕತೆಗಳನ್ನು ಪೂರೈಸುತ್ತಿದೆ.
1962ರಲ್ಲಿ ನೆಹರೂ ಮಾಡಿದ ತಪ್ಪನ್ನು ಪುನರಾವರ್ತಿಸಲು ನರೇಂದ್ರ ಮೋದಿ ಸರ್ಕಾರ ಎಂದಿಗೂ ಬಯಸುವುದಿಲ್ಲ ಮತ್ತು ಭವಿಷ್ಯದ ಯಾವುದೇ ಸಂಘರ್ಷಗಳಿಗೂ ಅದು ತನ್ನನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ರಷ್ಯಾದ ಪೂರ್ವ ಪ್ರದೇಶಕ್ಕೆ ಪಿಯೂಷ್ ಗೋಯಲ್ ಅವರ ಭೇಟಿಯು ‘ಈಸ್ಟರ್ನ್ ಎಕನಾಮಿಕ್ ಫೋರಂ’ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಪ್ರಧಾನಿ ಮೋದಿಯ ಭೇಟಿಗೆ ಮೂಲವನ್ನು ಸಿದ್ಧಪಡಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಗಂಭೀರ ಹೂಡಿಕೆ ಮಾಡುವ ನಿರೀಕ್ಷೆಯಿನ್ನು ಇಟ್ಟುಕೊಂಡಿದೆ. ಈ ಪ್ರದೇಶದಲ್ಲಿ ಹೆಚ್ಚುಗೊಳ್ಳುತ್ತಿರುವ ಭಾರತೀಯ ಉಪಸ್ಥಿತಿಯು ಚೀನಾದ ದುಸ್ಸಾಹಸಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಭಾರತದ ಮಿತ್ರ ರಾಷ್ಟ್ರವಾದ ರಷ್ಯಾಕ್ಕೆ ತನ್ನ ಪೂರ್ವ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ರಷ್ಯಾದ ಪೂರ್ವ ಪ್ರದೇಶಕ್ಕೆ ಮೋದಿಯವರ ಭೇಟಿಗೂ ಮುಂಚಿತವಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೇತೃತ್ವದ 5 ಬಿಜೆಪಿ ಮುಖ್ಯಮಂತ್ರಿಗಳ ನಿಯೋಗ ಅಲ್ಲಿಗೆ ತೆರಳುತ್ತಿದೆ, ಆ ಭಾಗದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಮಹತ್ವದ ಹೂಡಿಕೆ ಅವಕಾಶಗಳ ಬಗ್ಗೆ ತಿಳಿದುಕೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.