ಕೆಫೆ ಕಾಫಿ ಡೇ ಮಾಲಕ ಸಿದ್ಧಾರ್ಥ ಅವರ ಆತ್ಮಹತ್ಯೆಯ ನಂತರ, ಅವರು ಬರೆದಿಟ್ಟಿದ್ದಾರೆ ಎನ್ನಲಾದ (?) ಪತ್ರದಲ್ಲಿ ಉಲ್ಲೇಖಿಸಿದ ವಿಚಾರವಾಗಿ ಟ್ಯಾಕ್ಸ್ ಟೆರರಿಸಂ ಎನ್ನುವ ವಿಷಯವು ಅಲ್ಲಿ ಇಲ್ಲಿ ಹರಿದಾಡುತ್ತಿದೆ. 2017 ನೇ ಇಸವಿಯಲ್ಲಿ ಅವರ ಮೇಲೆ ನಡೆದ ಆದಾಯ ತೆರಿಗೆ ದಾಳಿಯಿಂದಾಗಿ ನೊಂದು ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಈ ಮೂಲಕ ಆದಾಯ ತೆರಿಗೆ ಇಲಾಖೆಯನ್ನು ಅವರ ಸಾವಿಗೆ ಹೊಣೆಯಾಗಿಸಿ ಖಳನಾಯಕನನ್ನಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ.
ಇವರು ಆದಾಯ ತೆರಿಗೆ ದಾಳಿಯನ್ನು ಎದುರಿಸಿದ ಮೊದಲ ವ್ಯಕ್ತಿಯೇನೂ ಅಲ್ಲ ಅಥವಾ ದಾಳಿ ಎದುರಿಸಿದ ಕೊನೆಯ ವ್ಯಕ್ತಿಯೂ ಆಗುವುದಿಲ್ಲ. ಈ ಹಿಂದೆಯೂ ಇಂತಹ ಸಾವಿರಾರು ರೈಡ್ಗಳು ನಡೆದಿವೆ, ಮುಂದೆಯೂ ನಡೆಯಲಿದೆ. ಕರ್ನಾಟಕದಲ್ಲಿ ಹಲವು ನಟರ ಮೇಲೆ, ರಾಜಕಾರಣಿಗಳ ಮೇಲೆ, ಉದ್ಯಮಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಾನೂನು ಕ್ರಮ ಕೈಗೊಂಡಿದೆ. ವ್ಯಕ್ತಿಯಾಗಲೀ, ಸಂಸ್ಥೆಯಾಗಲಿ ತಾನು ಘೋಷಿಸಿಕೊಂಡಿದ್ದಕ್ಕಿಂತ ಹೆಚ್ಚು ಆದಾಯವನ್ನು ಸಂಗ್ರಹಿಸಿಟ್ಟ ಪಕ್ಷದಲ್ಲಿ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳಲೇಬೇಕಾಗುತ್ತದೆ. ಈ ವಿಷಯದಲ್ಲಿ ಯಾರಿಗೂ ವಿನಾಯಿತಿಯನ್ನು ತೋರಿಸಲಾಗುವುದಿಲ್ಲ. ತೆರಿಗೆ ಕಾನೂನುಗಳು ಮೋದಿ ಸರಕಾರವು ಆಡಳಿತಕ್ಕೆ ಬಂದ ನಂತರವೇನೂ ರೂಪುಗೊಂಡವುಗಳಲ್ಲ. ಮೊದಲಿನಿಂದಲೂ ಇದ್ದವು.
ಹಿಂದೆ ವ್ಯವಸ್ಥೆಯ ಭ್ರಷ್ಟತೆಯ ಕಾರಣ ಆದಾಯ ತೆರಿಗೆಯ ಕಾನೂನಿನ ಕುಣಿಕೆಯಿಂದ ಬಹಳ ಜನರು ಬಹಳ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರು. ಈಗ ಬದಲಾದ ಆಡಳಿತ ವ್ಯವಸ್ಥೆಯಡಿಯಲ್ಲಿ ಯಾರಿಗೂ ತಪ್ಪಿಸಿಕೊಳ್ಳಲಾಗುತ್ತಿಲ್ಲವಷ್ಟೇ!
ಮೊದಲು ದೇಶದ ಒಟ್ಟು ಆರ್ಥಿಕ ವ್ಯವಹಾರದ ಮೂರನೇ ಒಂದು ಭಾಗ ಕಾನೂನಿನ ಪರಿಧಿಯ ಹೊರಗೇ ನಡೆಯುತ್ತಿತ್ತು. ಮಾಫಿಯಾ, ಕಪ್ಪುಹಣ, ಹವಾಲಾ ಇವುಗಳ ಮೂಲಕ ಅಕ್ರಮ ಆರ್ಥಿಕ ವ್ಯವಹಾರಗಳು ನಡೆಯುತ್ತಿದ್ದವು. ತೆರಿಗೆ ವಂಚನೆ, ಭ್ರಷ್ಟಾಚಾರ ಮೊದಲಾದವುಗಳು ಇದರ ಭಾಗವೇ ಆಗಿದ್ದವು. ಕಳೆದ 70 ವರ್ಷಗಳಿಂದ ಇದೇ ವ್ಯವಸ್ಥೆಯೊಳಗೆ ಬದುಕಿದ ಪ್ರಜೆಗಳೂ ಕೂಡಾ ಈ ವ್ಯವಸ್ಥೆಗೆ ಹೊಂದಿಕೊಂಡಿದ್ದರು.
ಪ್ರಸ್ತುತ ಕೇಂದ್ರ ಸರಕಾರವು ಈಗ ಕಾನೂನುಗಳನ್ನು ಸಮರ್ಪಕವಾಗಿ ಜಾರಿ ಮಾಡುತ್ತಿದೆ. ಹಳೆಯ ಭ್ರಷ್ಟ ವ್ಯವಸ್ಥೆಗೇ ಹೊಂದಿಕೊಂಡು ಬದುಕಿದ ಜನರಿಗೆ ಕಾನೂನು ಸಕ್ರಮಗಳು ತೆರಿಗೆ ಭಯೋತ್ಪಾದನೆಯಂತೆ ಕಾಣುತ್ತಿದೆ.
ಸರಕಾರವಿಂದು ತೆರಿಗೆಗಳ್ಳತನವನ್ನು ಗಣನೀಯವಾಗಿ ನಿಯಂತ್ರಿಸಿದುದರಿಂದ ಕಳೆದೈದು ವರ್ಷಗಳಲ್ಲಿ ಸಂಗ್ರಹಿತವಾದ ಆದಾಯ ತೆರಿಗೆಯೂ ಸೇರಿದಂತೆ ನೇರ ತೆರಿಗೆ ದುಪ್ಪಟ್ಟಾಗಿದೆ. 2014 ರಲ್ಲಿ 5.85 ಲಕ್ಷ ಕೋಟಿಗಳ ನೇರ ತೆರಿಗೆ ಸಂಗ್ರಹವಾಗಿದ್ದರೆ, 2018-19 ರಲ್ಲಿ ಈ ಮೊತ್ತ ಸರಿಸುಮಾರು 12 ಲಕ್ಷ ಕೋಟಿ ರೂಪಾಯಿಗಳು. ಈ ತೆರಿಗೆ ಹಣವನ್ನು ಉಪಯೋಗಿಸಿ ಭಾರತ ಸರಕಾರವಿಂದು ರಸ್ತೆ, ರೈಲ್ವೇ, ಸರ್ವರಿಗೂ ವಿದ್ಯುತ್, ಬಡವರಿಗೆ ಉಚಿತ ಗ್ಯಾಸ್ ಸಂಪರ್ಕ, ದೇಶದ 50 ಕೋಟಿ ಬಡವರಿಗೆ ಉಚಿತ ಆರೋಗ್ಯ ಸೌಲಭ್ಯವಾದ ಆಯುಷ್ಮಾನ್ ಭಾರತ್ , ರೈತರಿಗೆ ಪ್ರೋತ್ಸಾಹಧನ ಹೀಗೆ ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಈ ಮೊದಲು ದಿವಾಳಿ ಕಾನೂನಿನ ಲೋಪದೋಷಗಳಿಂದಾಗಿ ಉದ್ಯಮಗಳು ಬ್ಯಾಂಕ್ಗಳಿಗೆ ಲಕ್ಷಾಂತರ ಕೋಟಿ ಸಾಲ ಪಡೆದು ವಂಚನೆ ಮಾಡುತ್ತಿದ್ದುವು. ಸರಕಾರವು ಇನ್ಸಾಲ್ವೆನ್ಸ್ ಹಾಗೂ ಬ್ಯಾಂಕ್ರಪ್ಟಸಿ ಕಾನೂನನ್ನು ಈಗ ಬಿಗುಗೊಳಿಸಿದ ಕಾರಣ ವಿವಿಧ ಉದ್ಯಮಿಗಳಿಂದ ಕಳೆದ 4 ವರ್ಷಗಳಲ್ಲಿ 3 ಲಕ್ಷ ಕೋಟಿ ರೂಪಾಯಿಗಳ ಕೆಟ್ಟ ಸಾಲವು ಮರು ವಸೂಲಿಯಾಗಿದೆ. ಇಂತಹ ಸಕಾರಾತ್ಮಕ ಬೆಳವಣಿಗೆಯನ್ನು ಆರ್ಥಿಕ ಭಯೋತ್ಪಾದನೆ ಎಂದು ಕರೆಯಬಹುದೇ?
ಸಿದ್ಧಾರ್ಥರಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದ್ದಕ್ಕೆ ವಿಷಾದವಿದೆ. ಅವರ ಆತ್ಮಹತ್ಯೆಗೆ ಬೇರೆಯೂ ಹಿನ್ನೆಲೆಯಿರಬಹುದು. ಸಂಸ್ಥೆಯ ಆರ್ಥಿಕ ಕುಸಿತ, ಬಾಹ್ಯ ಹೂಡಿಕೆದಾರರ ಒತ್ತಡ, ಸಾಲ ಮೊದಲಾದ ವಿಷಯಗಳನ್ನೂ ಅವರು ಬರೆದಿರುವರೆನ್ನಲಾದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇವೆಲ್ಲವನ್ನೂ ಬಿಟ್ಟು ದೇಶದ ಆರ್ಥಿಕ ಕಾನೂನನ್ನೇ ತೆರಿಗೆ ಭಯೋತ್ಪಾದನೆ ಎನ್ನುವುದು ಎಷ್ಟು ಸರಿ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.