ನವದೆಹಲಿ: ಭಾರತದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಶೇ. 33.2 8ರಷ್ಟು ಏರಿಕೆಯನ್ನು ಕಂಡಿದೆ ಎಂಬುದು ಇಂದು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆಗೊಳಿಸಿದ ಅಖಿಲ ಭಾರತ 2018ರ ಹುಲಿ ಗಣತಿ ವರದಿಯಿಂದ ತಿಳಿದು ಬಂದಿದೆ.
ಅಖಿಲ ಭಾರತ ಹುಲಿ ಅಂದಾಜು – 2018 ರ ನಾಲ್ಕನೇ ಸುತ್ತಿನ ಫಲಿತಾಂಶಗಳ ವರದಿಯನ್ನು ಮೋದಿ ಬಿಡುಗಡೆ ಮಾಡಿದ್ದಾರೆ, ಇದು ಹುಲಿಗಳ ಜನಸಂಖ್ಯೆಯಲ್ಲಿ ಶೇ. 33.28 ರಷ್ಟು ಹೆಚ್ಚಳವಾಗಿದೆ ಎಂಬುದನ್ನು ತೋರಿಸಿದೆ. 2014 ರಲ್ಲಿ 2,226 ಇದ್ದ ಹುಲಿಗಳ ಸಂಖ್ಯೆ, 2018 ರಲ್ಲಿ 2,967 ಕ್ಕೆ ಏರಿಕೆಯಾಗಿದೆ.
ನಾಲ್ಕು ವರ್ಷಗಳಲ್ಲಿ 741 ಹುಲಿಗಳು ಹೆಚ್ಚಾಗಿದ್ದು, ಜಗತ್ತಿನಲ್ಲಿ ಹುಲಿ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳವಾಗಿ ಭಾರತ ಹೊರಹೊಮ್ಮಿದೆ.
“ಒಂಬತ್ತು ವರ್ಷಗಳ ಹಿಂದೆ, ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಹುಲಿಗಳ ಜನಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು 2022ಕ್ಕೆ ನಿರ್ಧರಿಸಲಾಯಿತು. ಭಾರತದಲ್ಲಿ ನಾವು ಈ ಗುರಿಯನ್ನು ನಾಲ್ಕು ವರ್ಷಗಳ ಮುಂಚೆಯೇ ಪೂರ್ಣಗೊಳಿಸಿದ್ದೇವೆ” ಎಂದು ಮೋದಿ ಹೇಳಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿ ಅವರು ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಈ ಹಿಂದಿನ ಗಣತಿಗಳಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕರ್ನಾಟಕ 524 ಹುಲಿಗಳನ್ನು ಹೊಂದುವ ಮೂಲಕ ಈ ಬಾರಿ ಎರಡನೇ ಸ್ಥಾನಕ್ಕಿಳಿದಿದೆ. 526 ಹುಲಿಗಳಿರುವ ಮಧ್ಯಪ್ರದೇಶ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ ಹಾಗೂ 442 ಹುಲಿಗಳಿರುವ ಉತ್ತರಾಖಂಡ ಮೂರನೇ ಸ್ಥಾನ ಪಡೆದಿದೆ.
ಇಂದು ವಿಶ್ವ ಹುಲಿ ಸಂರಕ್ಷಣಾ ದಿನವಾಗಿದೆ. ಈ ಹಿನ್ನಲೆಯಲ್ಲಿ ಹುಲಿ ಗಣತಿಯನ್ನು ಬಿಡುಗಡೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.