ಶ್ರೀನಗರ: ಎರಡು ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆದ 1971ರ ಯುದ್ಧ ಮತ್ತು ಕಾರ್ಗಿಲ್ ಯುದ್ಧದಲ್ಲಿ ಸಂತ್ರಸ್ಥವಾದ ಕಾರ್ಗಿಲ್ನ ಎಲ್ಒಸಿಯಲ್ಲಿರುವ ಹುಂಡರ್ಮನ್ ಎಂಬ ಸಣ್ಣ ಹಳ್ಳಿಯು ತನ್ನ ಯುದ್ಧ-ಹಾನಿಯ ಇತಿಹಾಸದ ಕುರಿತು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದೆ. ಕಾರ್ಗಿಲ್ ಯುದ್ಧ ಮತ್ತು 1971 ರ ಇಂಡೋ-ಪಾಕ್ ಯುದ್ಧದಿಂದ ಜರ್ಜರಿತಗೊಂಡರೂ, ಈ ಗ್ರಾಮವು ಭಾರತೀಯ ಮಿಲಿಟರಿ ಇತಿಹಾಸದ ಎರಡು ಪ್ರಮುಖ ಅಧ್ಯಾಯಗಳನ್ನು ಮತ್ತು ಗಡಿಯಲ್ಲಿ ನಿರ್ಭಯವಾಗಿ ಹೋರಾಡಿದ ಹೋರಾಟದ ನೆನಪನ್ನು ಸಂರಕ್ಷಿಸಿಟ್ಟಿದೆ.
250 ಮಂದಿಯ ಸಣ್ಣ ಜನಸಂಖ್ಯೆಯನ್ನು ಹೊಂದಿರುವ ಹುಂಡರ್ಮನ್ ಗ್ರಾಮ, ಈ ಹಿಂದೆ ಪಾಕಿಸ್ಥಾನ ಆಕ್ರಮಿಸಿಕೊಂಡಿದ್ದ ಗ್ರಾಮವಾಗಿತ್ತು. ಗಡಿಯಲ್ಲಿ ಸಂಭವಿಸಿದ ಎಲ್ಲಾ ಯುದ್ಧಗಳಿಗೆ ಮೀಸಲಾಗಿರುವ ಮ್ಯೂಸಿಯಂ ಅನ್ನು ಈ ಗ್ರಾಮದಲ್ಲಿ ಸ್ಥಾಪನೆ ಮಾಡಲಾಗಿದ್ದು, ಮಾರ್ಟರ್ ಶೆಲ್ ಮತ್ತು ಪಾಕಿಸ್ಥಾನ ಸೈನ್ಯಕ್ಕೆ ಸೇರಿದ ಹಲವಾರು ವಸ್ತುಗಳು ಈ ಮ್ಯೂಸಿಯಂನಲ್ಲಿ ಇದೆ.
ಟ್ರಾವೆಲ್ ಕಂಪನಿ ಮತ್ತು ಸಾಂಸ್ಕೃತಿಕ ಸಂರಕ್ಷಣೆಗಾಗಿ ಕೆಲಸ ಮಾಡುವ ಎನ್ಜಿಒ ಸಹಾಯದಿಂದ ಸ್ಥಳೀಯರು ಹುಂಡರ್ಮನ್ಗಳಲ್ಲಿನ ಮನೆಗಳನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿದ್ದಾರೆ, ಈ ಮ್ಯೂಸಿಯಂ ಗಡಿಯಲ್ಲಿ ವಾಸಿಸುವ ಕುಟುಂಬಗಳ ಜೀವನ ಮತ್ತು ಯುದ್ಧದಲ್ಲಿ ಸಂಭವಿಸಿದ ಎಲ್ಲಾ ರಕ್ತಪಾತಗಳ ದಾಖಲೆಯನ್ನು ಹೊಂದಿದೆ.
1971 ರ ಯುದ್ಧದ ಸಮಯದಲ್ಲಿ ಪಾಕಿಸ್ಥಾನ ಸೇನೆಯು ಬಳಸಿದ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು, ಅವರ ಮಿಲಿಟರಿ ಉಪಕರಣಗಳು, ಪಾಕಿಸ್ಥಾನ ಸೇನೆಯ ಒಣ ಪಡಿತರ ಪೆಟ್ಟಿಗೆಗಳು ಇಂದಿಗೂ ಈ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲ್ಪಟ್ಟಿವೆ. ತಮ್ಮನ್ನು ಯಾಕೆ ಈ ಗ್ರಾಮದಿಂದ ಸ್ಥಳಾಂತರ ಮಾಡಲಾಯಿತು ಎಂಬುದನ್ನು ಈ ಮ್ಯೂಸಿಯಂನಲ್ಲಿ ಇರುವ ಮಾರ್ಟರ್ ಶೇಲ್ಗಳು ಮತ್ತು ಗುಂಡುಗಳು ಗ್ರಾಮಸ್ಥರಿಗೆ ನೆನಪು ಮಾಡಿಕೊಡುತ್ತಲೇ ಇರುತ್ತವೆ.
ಯುದ್ಧ ಪ್ರಾರಂಭವಾದ ನಂತರ ಗ್ರಾಮಸ್ಥರು ಈ ಹಳ್ಳಿಯಿಂದ ಓಡಿಹೋಗಿ ತುಂಬಾ ಎತ್ತರದ ಪ್ರದೇಶದಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದರು.
ಕಾರ್ಗಿಲ್ ಯುದ್ಧದ ಇಪ್ಪತ್ತು ವರ್ಷಗಳ ನಂತರವೂ, ಈ ಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಇಂದಿಗೂ ಯುದ್ಧಭೂಮಿಯಂತೆಯೇ ಗೋಚರಿಸುತ್ತದೆ. ಇದರ ಸುತ್ತಲೂ ನೋಟಿಸ್ ಬೋರ್ಡ್ಗಳನ್ನು ಹಾಕಲಾಗಿದೆ. ಈ ನೋಟಿಸುಗಳು ಈ ಗ್ರಾಮಕ್ಕೆ ಭೇಟಿ ನೀಡುವವರಿಗೆ ಭಾರತೀಯ ಸೇನೆಯು ಹಾಕಿದ ಲ್ಯಾಂಡ್ಮೈನ್ಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ.
ಅನಾಥವಾಗಿರುವ ಈ ಗ್ರಾಮವನ್ನು 2015 ರಲ್ಲಿ ಎಲ್ಲಾ ವಸ್ತುಗಳನ್ನು ಹೊಂದಿದ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು. ಪ್ರತಿ ತಿಂಗಳು 15-20 ಜನರು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುತ್ತಾರೆ ಎಂದು ವಸ್ತುಸಂಗ್ರಹಾಲಯದ ಉಸ್ತುವಾರಿಗಳು ಹೇಳುತ್ತಾರೆ.
“ನಾವು 1971ರ ಯುದ್ಧ ಮತ್ತು ಕಾರ್ಗಿಲ್ ಯುದ್ಧಗಳಿಂದ ಹೊಡೆತ ತಿಂದಿದ್ದೇವೆ. 1971 ರ ಯುದ್ಧವು ನಮ್ಮನ್ನು ಪಾಕಿಸ್ಥಾನದಿಂದ ಮುಕ್ತಗೊಳಿಸಿತು ಮತ್ತು ಕಾರ್ಗಿಲ್ ಯುದ್ಧವು ನಮ್ಮ ಗ್ರಾಮವನ್ನು ನಾವು ಬಿಡುವಂತೆ ಮಾಡಿತು ”ಎಂದು ಆರ್ಮಿ ಪೋರ್ಟರ್ ಆಗಿ ಕೆಲಸ ಮಾಡುವ ಹುಂಡರ್ಮನ್ ನಿವಾಸಿ ಮೊಹಮ್ಮದ್ ಬಕೀರ್ ಹೇಳುತ್ತಾರೆ.
ವಾಹನ ಸಂಚರಿಸುವ ರಸ್ತೆಯನ್ನು ನಿರ್ಮಿಸಿ ಅದರ ಮೂಲಕ ಕಾರ್ಗಿಲ್ಗೆ ಈ ಗ್ರಾಮವನ್ನು ಸಂಪರ್ಕಿಸಿದ ನಂತರ ಮತ್ತು 2006 ರಲ್ಲಿ ವಿದ್ಯುತ್ ಸರಬರಾಜು ಮಾಡಿದ ನಂತರವೇ ಇಲ್ಲಿನ ಗ್ರಾಮಸ್ಥರು ತುಸು ಅಭಿವೃದ್ಧಿಗಳನ್ನು ಕಾಣುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.