ಸಾಧಿಸಬೇಕು ಎಂಬ ಹಂಬಲವಿದ್ದರೆ ಯಾವುದೂ ಕಷ್ಟವಲ್ಲ. ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದವರೆಲ್ಲರೂ ಶ್ರೀಮಂತ ಹಿನ್ನಲೆಯನ್ನು ಹೊಂದಿಲ್ಲ. ರೈತರ, ಕಾರ್ಮಿಕರ ಎಷ್ಟೋ ಮಕ್ಕಳು ಸಾಧನೆಗಳನ್ನು ಮಾಡಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಅವರು ಸವೆಸಿ ಬಂದ ಹಾದಿ, ಗುರಿ ಮುಟ್ಟಲು ಅವರು ಪಟ್ಟ ಶ್ರಮ ಇತರರಿಗೆ ಸದಾ ಮಾದರಿಯಾಗಿರುತ್ತದೆ. ಅಂತಹ ಸಾಧಕರಲ್ಲಿ ಒಬ್ಬರು ಚಂದ್ರಕಾಂತ್ ಕುಮಾರ್. ಚಾಣಾಕ್ಷ್ಯ ವಿಜ್ಞಾನಿಯಾಗಿರುವ ಇವರು ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-2’ ಯೋಜನೆಯ ಪ್ರಮುಖ ರೂವಾರಿಗಳಲ್ಲಿ ಒಬ್ಬರು.
ನೀಡಿದ ಭರವಸೆಯಂತೆಯೇ ಇಸ್ರೋ ಜುಲೈ 22ರಂದು ಜಿಎಸ್ಎಲ್ವಿ ಎಂಕೆ III ಎಂ-1 ದೈತ್ಯ ರಾಕೆಟ್ ಮೂಲಕ ನೌಕೆಯನ್ನು ಚಂದ್ರನ ದಕ್ಷಿಣ ಧ್ರುವಕ್ಕೆ ಯಶಸ್ವಿಯಾಗಿ ಚಿಮ್ಮಿಸಿದೆ. ಇಸ್ರೋ ತನ್ನ ಮೊದಲ ಚಂದ್ರಯಾನ- 1 ಮಿಷನ್ನಿನಲ್ಲಿ ಚಂದ್ರನ ಅಂಗಳದಲ್ಲಿ ನೀರು ಇದೆ ಎಂಬುದನ್ನು ಪತ್ತೆಹಚ್ಚಿತ್ತು. ಈ ಸಂಶೋಧನೆಗಳ ಆಧಾರದ ಮೇಲೆ ಚಂದ್ರಯಾನ-2 ಅನ್ನು ಇನ್ನಷ್ಟು ಹೆಚ್ಚಿನ ಸಂಶೋಧನೆಗಾಗಿ ಉಡಾವಣೆಗೊಳಿಸಲಾಗಿದೆ. ಈ ಉಡಾವಣೆಯನ್ನು ಸಾಧ್ಯವಾಗಿಸಿದ ಇಸ್ರೋದ ಅಸಾಧಾರಣ ವಿಜ್ಞಾನಿಗಳೆಲ್ಲರೂ ತಮ್ಮದೇ ಆದ ಸ್ಪೂರ್ತಿದಾಯಕ ಕಥೆಯನ್ನು ಹೊಂದಿದ್ದಾರೆ. ಅಂತಹವರಲ್ಲಿ ‘ಚಂದ್ರಕಾಂತ ಕುಮಾರ್’ ಎಂಬ ಅದ್ಭುತ ವಿಜ್ಞಾನಿ ಕೂಡ ಒಬ್ಬರು. ಪಶ್ಚಿಮ ಬಂಗಾಳದ ಹೂಗ್ಲಿಯ ಶಿಬ್ಪುರ ಗ್ರಾಮದವರಾದ ಅವರದ್ದು ರೈತ ಕುಟುಂಬ. ಅವರ ತಂದೆ ಮುಧುಸೂಧನ್ ಕುಮಾರ್ ಒಬ್ಬ ರೈತ.
ಚಂದ್ರಕಾಂತ್ ಅವರಿಗೆ ಮಗುವಿದ್ದಾಗ ಸೂರ್ಯಕಾಂತ ಎಂದು ಹೆಸರಿಡಲಾಗಿತ್ತು. ಆದರೆ ಶಿಕ್ಷಕರೊಬ್ಬರು ನೀಡಿದ ಸಲಹೆಯಂತೆ ಚಂದ್ರಕಾಂತ್ ಎಂದು ನಾಮಕರಣ ಮಾಡಲಾಯಿತು. ಇಂದು ಅದೇ ಮಗು ಭಾರತದ ಐತಿಹಾಸಿಕ ಚಂದ್ರಯಾನ-2 ಯೋಜನೆಯನ್ನು ಮುನ್ನಡೆಸಿದೆ. ಹೆಸರು ನಮ್ಮ ಹಣೆಬರಹವನ್ನು ಬದಲಾಯಿಸುತ್ತದೆ ಎನ್ನುವ ಮಾತು ಇಂತಹ ಕಾಕತಾಳೀಯಗಳನ್ನು ನೋಡಿದಾಗಲೇ ಸತ್ಯವೆನಿಸುತ್ತದೆ.
ಚಂದ್ರಕಾಂತ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನ ಹಿರಿಯ ವಿಜ್ಞಾನಿಯಾಗಿ ಇಂದು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಮತ್ತು ಚಂದ್ರಯಾನ- 2 ಕಾರ್ಯಾಚರಣೆಯನ್ನು ಮುನ್ನಡೆಸಿದವರಲ್ಲಿ ಇವರು ಅತ್ಯಂತ ಪ್ರಮುಖರಾಗಿದ್ದಾರೆ. ಚಂದ್ರಕಾಂತರ ತಂದೆ ಮುಧುಸೂಧನ್ ಕುಮಾರ್ ಅವರು ಮಗನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದು, “ಜುಲೈ 15 ರಂದು ಮಿಷನ್ ಸ್ಥಗಿತಗೊಂಡಾಗ ನಮಗೆ ಬೇಸರವಾಯಿತು. ಆದರೆ, ನಮ್ಮ ಭರವಸೆಗಳು ಹೆಚ್ಚಾದವು. ಈ ಸವಾಲಿನ ಕಾರ್ಯಾಚರಣೆಯನ್ನು ಭಾರತದ ಅತ್ಯಂತ ಶಕ್ತಿಶಾಲಿ ರಾಕೆಟ್ ಲಿಫ್ಟ್-ಅಪ್ ಮಾಡಿದ್ದಕ್ಕೆ ಸಾಕ್ಷಿಯಾಗಿ ಆನಂದವಾಯಿತು. ನಮ್ಮ ಮಗ ಚಂದ್ರಯಾನ- 2 ಮಿಷನ್ ತಂಡದ ಅತ್ಯಗತ್ಯ ಭಾಗವಾಗಿದ್ದು ನಮಗೆ ದೊಡ್ಡ ಹೆಮ್ಮೆಯ ವಿಷಯ” ಎಂದಿದ್ದಾರೆ.
ಭಾರತೀಯ ಉಪಗ್ರಹಗಳಿಗೆ ಮತ್ತು ಗ್ರೌಂಡ್ ಸ್ಟೇಷನ್ಗಳಿಗೆ ಆಂಟೆನಾ ವ್ಯವಸ್ಥೆಗಳನ್ನು ವಿನ್ಯಾಸಪಡಿಸಿರುವುದರ ಹಿಂದೆ ಇರುವುದು ಚಂದ್ರಕಾಂತ ಅವರ ಚಾಣಕ್ಷ್ಯತೆ. ಇಸ್ರೋದ ಹಿಂದಿನ ಬಾಹ್ಯಾಕಾಶ ಮಿಷನ್ಗಳಾದ ಚಂದ್ರಯಾನ -1, ಆಸ್ಟ್ರೋಸಾಟ್ ಮತ್ತು ಜಿಎಸ್ಎಟಿ -12 ಗಳಲ್ಲಿ ಚಂದ್ರಕಾಂತ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಚಂದ್ರಯಾನ- 2 ಯೋಜನೆಯ ಉಪ ಯೋಜನಾ ನಿರ್ದೇಶಕರಾಗಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ ಮತ್ತು ರೇಡಿಯೋ-ಫ್ರೀಕ್ವೆನ್ಸಿ ಸಿಸ್ಟಮ್ ಅಭಿವೃದ್ಧಿಗೂ ಇವರೇ ಕಾರಣರಾಗಿದ್ದಾರೆ. ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ (ಯುಆರ್ಎಸ್ಸಿ) ಚಂದ್ರಕಾಂತ್ ಅವರು ‘ವಿದ್ಯುತ್ಕಾಂತೀಯ’ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ತನ್ನ ಮಗನ ಬಗ್ಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ ಎಂದು ಚಂದ್ರಕಾಂತ ಅವರ ತಾಯಿ ಹೇಳಿದ್ದಾರೆ. “ಅವನು (ಚಂದ್ರಕಾಂತ್) ಬೆಳಿಗ್ಗೆ (ಉಡಾವಣೆಯ ದಿನದಂದು) ನನಗೆ ಕರೆ ಮಾಡಿ ಆಕಾಶದ ಮೇಲೆ ಚಂದ್ರಯಾನ್- 2 ರಾಕೆಟ್ ಚಿಮ್ಮುವುದನ್ನು ಟಿವಿಯಲ್ಲಿ ನೋಡಿ ಎಂದು ಹೇಳಿದ್ದ. ಎಲ್ಲಾ ಅಡೆತಡೆಗಳನ್ನು ನಿವಾರಿಸಿ ನನ್ನ ಮಗ ವಿಜ್ಞಾನಿಯಾಗಿದ್ದಾನೆ ಎಂಬುದು ನನಗೆ ನಿಜವಾಗಿಯೂ ಸಂತೋಷ ಮತ್ತು ಹೆಮ್ಮೆ ತಂದಿದೆ” ಎನ್ನುತ್ತಾರೆ.
ಚಂದ್ರಕಾಂತ್ ಅವರ ಕಿರಿಯ ಸಹೋದರ ಕೂಡ ವಿಜ್ಞಾನಿ. ಅವರಿಗೆ ಚಂದ್ರನ ಇನ್ನೊಂದು ಹೆಸರಾದ ಶಶಿಕಾಂತ್ ಎಂಬ ಹೆಸರನ್ನಿಡಲಾಗಿದೆ.
ಇಸ್ರೊದಲ್ಲಿ ವಿಜ್ಞಾನಿಯಾಗಲು ಖಂಡಿತವಾಗಿಯೂ ಸಾಕಷ್ಟು ಶ್ರಮ ಬೇಕಾಗುತ್ತದೆ. ರೈತರ ಕುಟುಂಬಕ್ಕೆ ಸೇರಿದವರಾಗಿದ್ದರೂ ಚಂದ್ರಕಾಂತ್ ಅವರು ಇಸ್ರೋದ ಅತ್ಯಂತ ನಿರ್ಣಾಯಕ ಯೋಜನೆಗಳಲ್ಲಿ ಒಂದಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಪ್ರಯತ್ನ ಮತ್ತು ಕಠಿಣ ಪರಿಶ್ರಮ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ.
ಚಂದ್ರಕಾಂತ್ ಅವರ ಜೀವನ ನಿಜಕ್ಕೂ ಪ್ರೇರಣಾದಾಯಕ. ವಿನಮ್ರ ಹಿನ್ನೆಲೆಯ ವ್ಯಕ್ತಿಯೊಬ್ಬ ಇಂದು ದೇಶ ಮೆಚ್ಚುವಂತಹ ಕಾರ್ಯ ಮಾಡಿದ ಸ್ಪೂರ್ತಿದಾಯಕ ಕಥೆ ಅವರದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.