ಭೋಪಾಲ್: ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಣೆ ಮಾಡಿದ್ದ ಮಧ್ಯಪ್ರದೇಶದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಯೂಟರ್ನ್ ಹೊಡೆದಿದೆ. ವರದಿಗಳ ಪ್ರಕಾರ, ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಯಾವುದೇ ಯೋಜನೆ ನಮ್ಮ ಮುಂದೆ ಇಲ್ಲ ಎಂಬುದನ್ನು ಕಮಲನಾಥ್ ಅವರು ವಿಧಾನಸಭೆಯಲ್ಲಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ, ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದ ನಿರುದ್ಯೋಗಿ ಯುವಕರಿಗೆ ಮಾಸಿಕ ರೂ. 4000 ಭತ್ಯೆ ನೀಡುವುದಾಗಿ ಕಾಂಗ್ರೆಸ್ ಹೇಳಿಕೊಂಡಿತ್ತು. ಆದರೀಗ ಯೂಟರ್ನ್ ಹೊಡೆದು, ಅಂತಹ ಯೋಜನೆ ನಮ್ಮ ಮುಂದೆ ಇಲ್ಲ ಎಂದಿದೆ. ಈ ಮೂಲಕ ನಿರುದ್ಯೋಗಿ ಯುವಕರಿಗೆ ನಿರಾಸೆ ಮಾಡಿದೆ.
ಸಿಎಂ ಕಮಲ್ ನಾಥ್ ಅವರು ಈ ಬಗ್ಗೆ ವಿಧಾನಸಭೆಗೆ ಈ ಬಗ್ಗೆ ಲಿಖಿತ ಉತ್ತರವನ್ನು ನೀಡಿದ್ದು, ಸರ್ಕಾರಕ್ಕೆ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯೋಜನೆ ಇಲ್ಲ ಎಂದು ಹೇಳಿದ್ದಾರೆ. ವಿವಿಧ ರಾಜ್ಯ ಮತ್ತು ಕೇಂದ್ರ ಯೋಜನೆಗಳ ಅನುಷ್ಠಾನದ ಮೂಲಕ ಯುವಜನರಿಗೆ ಕೌಶಲ್ಯ ತರಬೇತಿ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ, ಆ ಮೂಲಕ ಅವರನ್ನು ಖಾಸಗಿ ವಲಯದಲ್ಲಿ ಕೆಲಸ ಮಾಡಲು ಅರ್ಹರನ್ನಾಗಿಸುತ್ತಿದ್ದೇವೆ ಎಂದಿದ್ದಾರೆ.
ಕಮಲನಾಥ್ ಸರ್ಕಾರದ ಈ ನಡೆಯನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಮಧ್ಯಪ್ರದೇಶದ ಯುವಕರಿಗೆ ಸರ್ಕಾರ ಮೋಸ ಮಾಡಿದೆ, ಚುನಾವಣೆಯ ವೇಳೆ ನೀಡಿದ ಭರವಸೆಯನ್ನು ಅದು ಈಡೇರಿಸಿಲ್ಲ ಎಂದು ಗೋಪಾಲ್ ಭಾರ್ಗವ್ ಆರೋಪಿಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ, ಕಮಲ್ನಾಥ್ ಸರ್ಕಾರವು ನಗರ ಪ್ರದೇಶಗಳಲ್ಲಿನ ಯುವಕ-ಯುವತಿಯರಿಗೆ ತಿಂಗಳಿಗೆ 4000 ರೂ. ಮತ್ತು ಇನ್ನೊಂದು ಯೋಜನೆಯಡಿ ಅವರಿಗೆ ಕನಿಷ್ಠ 100 ದಿನಗಳವರೆಗೆ ಕೆಲಸ ನೀಡಲಾಗುವುದು ಎಂದು ಘೋಷಿಸಿತ್ತು. ಆದರೆ ಈ ಘೋಷಣೆಯ ವೈಭವೀಕರಣ ಬಿಟ್ಟರೆ ಬೇರೆನನ್ನೂ ಸರ್ಕಾರ ಮಾಡಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.