ಒಂದು ನಗರ ಏಕಕಾಲದಲ್ಲಿ ತನ್ನ ಹಸಿವು ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ಹೇಗೆ ನಿವಾರಿಸಬಲ್ಲದು?
ಅಂಬಿಕಾಪುರವು ಕೇವಲ ಎರಡು ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ನಗರ. ಇದು ಛತ್ತೀಸ್ಗಢದ ಸುರ್ಗುಜಾ ಜಿಲ್ಲೆಯಲ್ಲಿದೆ. ಹಸಿವು ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಎರಡು ಭೀಕರ ಸಮಸ್ಯೆಗಳಿಗೆ ಏಕಕಾಲದಲ್ಲಿ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಅದು ಯಶಸ್ಸನ್ನು ಕಾಣುತ್ತಿದೆ. ಈ ನಿಟ್ಟಿನಲ್ಲಿ ಅದರ ಪುರಸಭೆಯ ಅಧಿಕಾರಿಗಳು ವಿಶಿಷ್ಟವಾದ ‘ಗಾರ್ಬೆಜ್ ಕೆಫೆ’ ಯೋಜನೆಯನ್ನು ಪ್ರಾರಂಭಿಸಿದ್ದಾರೆ.
ಈ ಕೆಫೆಗಾಗಿ ಚಿಂದಿ ಆಯುವವರು ಮತ್ತು ನಿರ್ಗತಿಕರು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ ಮತ್ತು ಇದಕ್ಕೆ ಪ್ರತಿಯಾಗಿ ಪುರಸಭೆಯು ಅವರಿಗೆ ಆಹಾರವನ್ನು ನೀಡುತ್ತದೆ.
ವರದಿಗಳ ಪ್ರಕಾರ, 1 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವವರಿಗೆ ಪೂರ್ಣ ಊಟವನ್ನು ನೀಡಲಾಗುತ್ತದೆ, 500 ಗ್ರಾಂ ತ್ಯಾಜ್ಯ ಸಂಗ್ರಹಿಸುವವರಿಗೆ ಉಪಹಾರ ನೀಡಲಾಗುತ್ತದೆ. ಪುರಸಭೆಯು ಈ ಸಂಗ್ರಹಿಸಿದ ಪ್ಲಾಸ್ಟಿಕ್ ಅನ್ನು ರಸ್ತೆಗಳ ನಿರ್ಮಾಣಕ್ಕೆ ಬಳಸುತ್ತದೆ. ಅಲ್ಲದೇ ತ್ಯಾಜ್ಯ ಸಂಗ್ರಹ ಮಾಡುವವರಿಗೆ ಆಹಾರವನ್ನೂ ನೀಡುವುದರ ಮೂಲಕ ನಗರದಲ್ಲಿನ 100 ಕ್ಕೂ ಹೆಚ್ಚು ನಿರ್ಗತಿಕರಿಗೆ ಆಶ್ರಯ ನೀಡುವ ಆದರ್ಶಮಯ ಯೋಜನೆಯೂ ಇದಾಗಿದೆ.
ಈ ವಾರದ ಆರಂಭದಲ್ಲಿ ಈ ಪುರಸಭೆಯ ಬಜೆಟ್ ಅನ್ನು ಮಂಡಿಸಿದ ಮೇಯರ್ ಅಜಯ್ ಟಿರ್ಕೆ ಅವರು, ನಗರದ ಪ್ರಮುಖ ಬಸ್ ನಿಲ್ದಾಣದಿಂದ ಕೆಫೆಯನ್ನು ಮುನ್ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಉದ್ದೇಶಕ್ಕಾಗಿ ಬಜೆಟಿನಲ್ಲಿ 5.5 ಲಕ್ಷ ರೂ.ಗಳನ್ನು ನಿಗದಿಪಡಿಸಿದ್ದಾರೆ. ಒಂದು ವೇಳೆ ಹಣ ಇಲ್ಲದ ಪರಿಸ್ಥಿತಿ ಬಂದರೆ, ಚುನಾಯಿತ ಪ್ರತಿನಿಧಿಗಳಿಗೆ (ಶಾಸಕರು ಮತ್ತು ಸಂಸದರು) ತಮ್ಮ ಎಂಪಿಎಲ್ಎಡಿ ಅಥವಾ ಎಂಎಲ್ಸಿಡಿಎಸ್ ನಿಧಿಯಿಂದ ಹಣ ನೀಡುವಂತೆ ಪ್ರಸ್ತಾಪ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಪ್ಲಾಸ್ಟಿಕ್ ಕಣಗಳನ್ನು ಬಳಸುವುದು ಹಸಿರು ರಸ್ತೆಗಳನ್ನು ನಿರ್ಮಿಸುವ ಸಾಮಾನ್ಯ ತಂತ್ರವಾಗಿದೆ. ವಾಸ್ತವವಾಗಿ, ಪ್ರಧಾನ್ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ, ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿದಂತೆಯೂ ಆಗುತ್ತದೆ. ಜೊತೆಗೆ, ಪ್ಲಾಸ್ಟಿಕ್ ಮತ್ತು ಡಾಂಬರುಗಳ ಸಂಯೋಜನೆಯು ರಸ್ತೆಯನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.
ಪ್ಲಾಸ್ಟಿಕ್ ಕಣಗಳು ಮತ್ತು ಡಾಂಬರುಗಳನ್ನು ಬಳಸಿಕೊಂಡು ಈ ನಗರವು ಈಗಾಗಲೇ ಗಾಡ್ಪುರ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆಯನ್ನು ನಿರ್ಮಿಸಿದೆ. ಈ ಯೋಜನೆಯು ಈ ನಗರದ ಬೃಹತ್ ಸ್ವಚ್ಛತಾ ಅಭಿಯಾನದ ಭಾಗವಾಗಿದೆ. ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷನ್ 2019 ರ ರ್ಯಾಂಕಿಂಗ್ ಅಡಿಯಲ್ಲಿ, ಅಂಬಿಕಾಪುರವನ್ನು ಭಾರತದ ಎರಡನೇ ಸ್ವಚ್ಛ ನಗರವೆಂದು ಘೋಷಿಸಲಾಗಿದೆ. ಮಧ್ಯಪ್ರದೇಶದ ಇಂದೋರ್ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ 15 ಸ್ಥಾನಗಳನ್ನು ಈ ನಗರ ಜಿಗಿದಿದೆ. ಈ ನಗರದಲ್ಲಿ ತೆರೆದ ಡಂಪಿಂಗ್ ಸೈಟ್ಗಳಿಲ್ಲ. ಈ ನಗರವು 2016ರ ಮೇ ತಿಂಗಳಲ್ಲಿ ಬೃಹತ್ 15 ಎಕರೆ ಲ್ಯಾಂಡ್ಫಿಲ್ ಜಾಗವನ್ನು ಮರಗಳು ಮತ್ತು ಕೊಳಗಳನ್ನು ಹೊಂದಿದ ‘ನೈರ್ಮಲ್ಯ ಜಾಗೃತಿ ಉದ್ಯಾನವನ’ವನ್ನಾಗಿ ಪರಿವರ್ತಿಸಿತ್ತು.
“ಈ ವರ್ಷ ನಗರವು ‘ಕಸ ಮುಕ್ತ ನಗರಗಳ’ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಕಸ ಮುಕ್ತ ನಗರಗಳ ಸ್ಟಾರ್ ರೇಟಿಂಗ್ SMART ಫ್ರೇಮ್ವರ್ಕ್ ಅನ್ನು ಆಧರಿಸಿದೆ – ಸಿಂಗಲ್ ಮೆಟ್ರಿಕ್, ಅಳತೆ ಮಾಡಬಹುದಾದ, ಸಾಧಿಸಬಹುದಾದ, ಕಠಿಣ ಪರಿಶೀಲನಾ ಕಾರ್ಯವಿಧಾನ ಮತ್ತು ಫಲಿತಾಂಶಗಳತ್ತ ಗುರಿ ಮಾಡಿದ ಫ್ರೇಮ್ವರ್ಕ್ ಆಗಿದೆ.
ಶೇ.100ರಷ್ಟು ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ ಮತ್ತು ಬೇರ್ಪಡಿಸುವಿಕೆಯನ್ನು ಕಾರ್ಯಗತಗೊಳಿಸುವ ಮೂಲಕ ನಗರವು ಸ್ವಚ್ಛತೆಯಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸಿದೆ ಮತ್ತು ಉತ್ಪತ್ತಿಯಾಗುವ ಎಲ್ಲಾ ತ್ಯಾಜ್ಯಗಳನ್ನು ನಗರದಲ್ಲಿಯೇ ಸಂಸ್ಕರಿಸಲಾಗುತ್ತಿದೆ. 2003 ರ ಬ್ಯಾಚ್ನ ಐಎಎಸ್ ಅಧಿಕಾರಿ ಮತ್ತು ಸುರ್ಗುಜಾ ಜಿಲ್ಲೆಯ ಮಾಜಿ ಕಲೆಕ್ಟರ್ ರಿತು ಸೈನ್ 2014 ರಲ್ಲಿ ಮೊದಲ ಬಾರಿಗೆ ಅಂಬಿಕಾಪುರಕ್ಕೆ ಬಂದಾಗ, ಬೃಹತ್ತಾದ ‘ಅಂಬಿಕಾಪುರಕ್ಕೆ ಸ್ವಾಗತ’ ಜಾಹೀರಾತು ಫಲಕದ ಎದುರು ತೆರೆದ ಕಸದ ರಾಶಿಯನ್ನು ಕಂಡಿದ್ದರು. ಅವಾಗಲೇ ಅವರು ತ್ಯಾಜ್ಯ ನಿರ್ಮೂಲನೆಯ ಪಣತೊಟ್ಟರು. ಅವರ ಪ್ರಯತ್ನಗಳು ಮತ್ತು ನಗರ ಆಡಳಿತಗಳು ತೆಗೆದುಕೊಂಡ ಕ್ರಮಗಳು ಅಂಬಿಕಾಪುರವನ್ನು ಸ್ವಚ್ಛತೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುವಂತೆ ಮಾಡಿತು.
“ಮರುಬಳಕೆ ಮಾಡಬಹುದಾದ, ಸಾವಯವ ಮತ್ತು ಮರುಬಳಕೆ ಮಾಡಲಾಗದ ವಸ್ತುಗಳನ್ನು ಬೇರ್ಪಡಿಸಿದ ನಂತರ ಪ್ರತ್ಯೇಕವಾಗಿ ಪ್ಯಾಕ್ ಮಾಡಲಾಗುತ್ತದೆ ಮತ್ತು ಪ್ಲಾಸ್ಟಿಕ್, ಲೋಹ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ವಿಂಗಡಣೆಗಾಗಿ ಕೇಂದ್ರ ಖಜಾನೆಗೆ ಕಳುಹಿಸಲಾಗುತ್ತದೆ. ನಂತರ ಅದನ್ನು ತಯಾರಕರಿಗೆ ಮರುಬಳಕೆ ಮಾಡಲು ಕಚ್ಛಾ ವಸ್ತುಗಳಾಗಿ ಮಾರಾಟ ಮಾಡಲಾಗುತ್ತದೆ. ಈ ಕಾರ್ಯದಲ್ಲಿ ಆಡಳಿತವು ಬುದ್ಧಿವಂತಿಕೆಯಿಂದ ನಡೆದುಕೊಳ್ಳುತ್ತಿದೆ.. ಸಾವಯವ ತ್ಯಾಜ್ಯವನ್ನು ಜಾನುವಾರುಗಳು, ಬಾತುಕೋಳಿಗಳು ಮತ್ತು ಕೋಳಿಗಳ ಸಾಕಾಣಿಕೆ ಕೇಂದ್ರಗಳಿಗೆ ನೀಡಲಾಗುತ್ತದೆ ಮತ್ತು ಇತರ ತ್ಯಾಜ್ಯಗಳನ್ನು ಜೈವಿಕ ಅನಿಲ ಡೈಜೆಸ್ಟರ್ ಮತ್ತು ಮಿಶ್ರಗೊಬ್ಬರವನ್ನು ತಯಾರಿಸಲು ಬಳಸಲಾಗುತ್ತದೆ. ಅಜೈವಿಕ ತ್ಯಾಜ್ಯವು 17 ವಿಭಾಗಗಳನ್ನು ಹೊಂದಿದೆ ಮತ್ತು ಹಲವಾರು ಉಪವರ್ಗಗಳಾದ ಕಾಗದ, ಪ್ಲಾಸ್ಟಿಕ್, ವಿದ್ಯುತ್ ವಸ್ತುಗಳು ಇತ್ಯಾದಿಗಳನ್ನು ಅಂಬಿಕಾಪುರದಲ್ಲಿ ತಯಾರಕರಿಗೆ ಮರುಬಳಕೆಗಾಗಿ ಮಾರಾಟ ಮಾಡಲಾಗುತ್ತದೆ ”ಎಂದು ಇತ್ತೀಚಿಗೆ ಪತ್ರಿಕೆಯೊಂದು ಅಂಬಿಕಾಪುರದ ವರದಿಯಲ್ಲಿ ಉಲ್ಲೇಖ ಮಾಡಿತ್ತು.
ಇಲ್ಲಿನ ಪುರಸಭೆಯು ಅನುಷ್ಠಾನಕ್ಕೆ ತಂದಿರುವ ಗಾರ್ಬೆಜ್ ಕೆಫೆ ಯೋಜನೆಯು ಉತ್ತಮವಾಗಿ ಕಾರ್ಯಗತಗೊಂಡರೆ, ನಗರದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಇನ್ನಷ್ಟು ಬಲಗೊಳ್ಳುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಚಿಂದಿ ಆಯ್ದುಕೊಳ್ಳುವವರಿಗೆ ತಾವು ಸಂಗ್ರಹಿಸಿದ ತ್ಯಾಜ್ಯದಿಂದ ಊಟಕ್ಕೆ ಸಾಕಾಗುಷ್ಟು ಹಣ ಸಿಗುವುದಿಲ್ಲ. ಹೀಗಾಗಿ ಗಾರ್ಬೆಜ್ ಕೆಫೆ ಯೋಜನೆಯಿಂದ ಅವರಿಗೆ ಹೊಟ್ಟೆ ತುಂಬುವಷ್ಟು ಆಹಾರವನ್ನು ತಿನ್ನುವ ಅವಕಾಶ ಸಿಗುತ್ತದೆ.
ಕಸವನ್ನು ರಸವನ್ನಾಗಿಸಲು, ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕಗೊಳಿಸಲು ಹತ್ತು ಹಲವು ದಾರಿಗಳಿವೆ. ಆದರೆ ಅವುಗಳ ಬಗ್ಗೆ ಯೋಚಿಸಿ, ಚಾಣಾಕ್ಷತನದಿಂದ ಅದನ್ನು ಅನುಷ್ಠಾನಗೊಳಿಸಿದರೆ ಮಾತ್ರ ಯಶಸ್ಸು ಸಿಗುತ್ತದೆ ಎಂಬುದಕ್ಕೆ ಅಂಬಿಕಾಪುರವೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.