“ನಾವು ದೇಶದ 130 ಕೋಟಿ ಜನರಿಗಾಗಿ ಇರುವವರು, ನಾವು ಯಾರ ನಡುವೆಯೂ ತಾರತಮ್ಯವನ್ನು ಮಾಡುವುದಿಲ್ಲ. ಜಾತಿ ಮತ್ತು ಧರ್ಮ ಅಥವಾ ಪ್ರದೇಶವನ್ನು ನಾವು ಪ್ರತ್ಯೇಕಿಸಿ ಬೇಧಭಾವ ಮಾಡುವುದಿಲ್ಲ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅನ್ನು ಸಾಧಿಸುವುದು ಹೇಗೆ ಎಂಬುದನ್ನು ನಾವು ಈಗಾಗಲೇ ತೋರಿಸಿಕೊಟ್ಟಿದ್ದೇವೆ ಮತ್ತು ಈಗ ನಾವು ಸಬ್ಕಾ ವಿಶ್ವಾಸ್ ಗೆಲ್ಲುವತ್ತ ಹೆಜ್ಜೆ ಇರಿಸಿದ್ದೇವೆ. ನಾವು ನಮ್ಮ ಮೇಲೆ ನಂಬಿಕೆ ಇಟ್ಟ ಜನರಿಗಾಗಿ ಕೆಲಸ ಮಾಡಲು ಇರುವವರು. ನಾವು ಯಾರನ್ನೂ ‘ಬೇರೆಯವರು’ ಎಂದು ಅಂದುಕೊಳ್ಳುವುದಿಲ್ಲ” ಎಂದು 2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಳಿಕ ನಡೆದ ಬಿಜೆಪಿಯ ಸಂಸತ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆಡಿದ ಮಾತುಗಳಿವು.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಮೋದಿ ಪರವಾದ ಅಲೆಯ ಎದುರು ತತ್ತರಿಸಿ ಹೋದವು. ಲೋಕಸಭೆಯಲ್ಲಿ ಒಟ್ಟು 353 ಸದಸ್ಯರನ್ನು ದೇಶದ ಜನರು ಆರಿಸಿ ಕಳುಹಿಸಿದರು. ಬಿಜೆಪಿ ತನ್ನ ಸಂಖ್ಯಾ ಬಲವನ್ನು ಅಮೋಘ ಎಂಬ ರೀತಿಯಲ್ಲಿ ವೃದ್ಧಿಸಿಕೊಂಡರೂ ಕೂಡ, ವಿರೋಧ ಪಕ್ಷಗಳ ಕೂಟ ಮಾತ್ರ ಸರ್ಕಾರದ ವಿರುದ್ಧ ‘ಅಲ್ಪಸಂಖ್ಯಾತ ವಿರೋಧಿ’ ವಾಗ್ ಪ್ರಹಾರವನ್ನು ಮುಂದುವರೆಸುತ್ತಲೇ ಇವೆ. ಆದರೆ ಹಿಂದಿನ ಅವಧಿಗಿಂತಲೂ ಮೋದಿ ಸರ್ಕಾರ ಈಗ “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್” ಎಂಬ ಹೊಸ ಧ್ಯೇಯವಾಕ್ಯದೊಂದಿಗೆ ಹೆಚ್ಚು ಶಕ್ತಿಯುತವಾಗಿ ಹೊರಹೊಮ್ಮಿದೆ. ಮೋದಿಯವರು ಎಲ್ಲಾ ಸಮುದಾಯದ ಕಲ್ಯಾಣಕ್ಕಾಗಿ, ಏಳಿಗೆಗಾಗಿ ಕಾರ್ಯನಿರ್ವಹಿಸುವಲ್ಲಿ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಯಾವುದೇ ವರ್ಗ, ಪ್ರದೇಶ, ಧರ್ಮಗಳ ನಡುವೆ ಅವರು ತಾರತಮ್ಯದ ನೀತಿಯನ್ನು ಅನುಸರಿಸುತ್ತಿಲ್ಲ.
ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲು ಕೇಂದ್ರ ಸರ್ಕಾರವು ಇತ್ತೀಚೆಗೆ ಅನುಷ್ಠಾನಗೊಳಿಸಿದ ಯೋಜನೆಯಡಿಯಲ್ಲಿ, ಅಲ್ಪಸಂಖ್ಯಾತ ಸಮುದಾಯದ 3.25 ಲಕ್ಷ ಯುವಕರಿಗೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ ಮತ್ತು ಈ ಕ್ಷೇತ್ರಗಳಲ್ಲಿನ ಉದಯೋನ್ಮುಖ ಉದ್ಯೋಗಾವಕಾಶಗಳ ಲಾಭವನ್ನು ಪಡೆದುಕೊಳ್ಳುವಂತೆ ಅವರನ್ನು ಸಜ್ಜುಗೊಳಿಸಲಾಗುತ್ತಿದೆ. ಇತ್ತೀಚೆಗೆ ಪರಿಚಯಿಸಲಾದ ‘ಪಡೋ ಔರ್ ಬಡೋ’ (ಓದಿ ಮತ್ತು ಬೆಳೆಯಿರಿ) ಕಾರ್ಯಕ್ರಮದ ಅಡಿಯಲ್ಲಿ, ಅಲ್ಪಸಂಖ್ಯಾತ ಸಮುದಾಯದ ಬಾಲಕಿಯರ ಶಿಕ್ಷಣವನ್ನು ಪ್ರೋತ್ಸಾಹಿಸಲು ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ. ಈ ಯೋಜನೆಯಡಿ ಪ್ರಧಾನಿ ಮೋದಿ ಅವರು ಮುಂದಿನ ಐದು ವರ್ಷಗಳಲ್ಲಿ ಅಲ್ಪಸಂಖ್ಯಾತರ ಬಾಲಕಿಯರ ಸ್ಕೂಲ್ ಡ್ರಾಪ್ ಔಟ್ ಪ್ರಮಾಣವನ್ನು ಪ್ರಸ್ತುತ ಮಟ್ಟದಿಂದ ಅಂದರೆ ಶೇ. 40 ರಿಂದ ಶೇ.0ಗೆ ಇಳಿಸುವ ಗುರಿಯನ್ನು ಹೊಂದಿದ್ದಾರೆ.
ಅಲ್ಪಸಂಖ್ಯಾತರಿಗೆ ವಿವಿಧ ವಿದ್ಯಾರ್ಥಿವೇತನವನ್ನು ಕೂಡ ಮೋದಿ ಸರ್ಕಾರದ ವತಿಯಿಂದ ಪರಿಚಯಿಸಲಾಗಿದೆ, ಇದು ಅಲ್ಪಸಂಖ್ಯಾತ ಸಮುದಾಯದ ಆರ್ಥಿಕವಾಗಿ ದುರ್ಬಲರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ಆರ್ಥಿಕ ನೆರವನ್ನು ನೀಡಲು ಸಹಾಯ ಮಾಡಲಿದೆ. ಈ ಮೂಲಕ ಅವರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಉನ್ನತ ಶಿಕ್ಷಣವನ್ನು ಪಡೆಯಲು ಅವರಿಗೆ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಶೇ.50ರಷ್ಟು ಬಾಲಕಿಯರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಸುಮಾರು 5 ಕೋಟಿ ವಿದ್ಯಾರ್ಥಿಗಳಿಗೆ ಮುಂದಿನ 5 ವರ್ಷಗಳಲ್ಲಿ ಸರ್ಕಾರ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಸರ್ಕಾರವು ಈ ಹಿಂದೆ ಯುಎಸ್ಟಿಎಡಿ (USTAAD) ಯೋಜನೆಯನ್ನು ಪರಿಚಯಿಸಿದ್ದು, ಇದು ಬಡ ಸಾಂಪ್ರದಾಯಿಕ ಕುಶಲಕರ್ಮಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅಲ್ಪಸಂಖ್ಯಾತ ಯುವಕರಿಗೆ ಸಾಂಪ್ರದಾಯಿಕ ಕಲೆಗಳಲ್ಲಿ ತರಬೇತಿ ನೀಡಲು ಅನುಷ್ಠಾನಕ್ಕೆ ಬಂದ ಅತ್ಯುತ್ತಮ ಯೋಜನೆಯಾಗಿದೆ.
ಎಲ್ಲಾ ಸಮುದಾಯಗಳ ಉನ್ನತಿಗಾಗಿ ನರೇಂದ್ರ ಮೋದಿಯವರು ಮಾಡುತ್ತಿರುವ ಕಾರ್ಯಗಳಿಗೆ ಗೃಹ ಸಚಿವ ಅಮಿತ್ ಶಾ ಅವರು ಒತ್ತಾಸೆಯಾಗಿ ನಿಂತಿದ್ದಾರೆ. ಭಾರತವನ್ನು ಎಲ್ಲಾ ಸಮುದಾಯಗಳಿಗೆ ಸುರಕ್ಷಿತ ಸ್ಥಳವನ್ನಾಗಿ ಮಾಡುವ ಜವಾಬ್ದಾರಿಯನ್ನು ಅವರು ನಿರ್ವಹಿಸುತ್ತಿದ್ದಾರೆ. ಅಮಿತ್ ಶಾ ಅವರ ನೇತೃತ್ವದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಈಗಾಗಲೇ ರಾಷ್ಟ್ರೀಯ ಭದ್ರತೆಯನ್ನು ಬಲಿಷ್ಠಗೊಳಿಸುವ ಪ್ರಯತ್ನಗಳನ್ನು ಚುರುಕುಗೊಳಿಸುತ್ತಿದೆ. ಪ್ರಸಕ್ತ ಸಂಸತ್ತಿನ ಅಧಿವೇಶನದಲ್ಲಿ, ಅಮಿತ್ ಶಾ ಮತ್ತು ಅವರ ಸಚಿವಾಲಯದ ಸಚಿವರಾದ ಜಿ ಕಿಶನ್ ರೆಡ್ಡಿ ಮತ್ತು ನಿತ್ಯಾನಂದ್ ರಾಯ್ ಅವರು ಪ್ರಮುಖ ಮತ್ತು ನಿರ್ಣಾಯಕ ಮಸೂದೆಗಳನ್ನು ಯಶಸ್ವಿಯಾಗಿ ಯಾವುದೇ ವಿರೋಧವಿಲ್ಲದೆ ಅಂಗೀಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಉದಾಹರಣೆಯೆಂದರೆ, ಅತ್ಯಂತ ನಿರ್ಣಾಯಕವಾದ ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಮಸೂದೆಯನ್ನು ಸದನವು ಅಂಗೀಕರಿಸಿದ್ದು, ಈ ಮಸೂದೆಯ ಪರವಾಗಿ 278 ಮತಗಳು ಬಿದ್ದರೆ, ಮಸೂದೆ ವಿರುದ್ಧ ಬಿದ್ದಿದ್ದು ಕೇವಲ 6 ಮತಗಳಷ್ಟೇ. ಅದಕ್ಕೂ ಮೊದಲು ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಆರು ತಿಂಗಳು ವಿಸ್ತರಿಸುವ ಮಸೂದೆಯನ್ನು ಮತ್ತು ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ, 2019 ಅನ್ನು ಅತ್ಯಂತ ಯಶಸ್ವಿಯಾಗಿ ಸದನದಲ್ಲಿ ಮಂಡಿಸಿ ಅಂಗೀಕಾರವನ್ನು ಗಿಟ್ಟಿಸಿಕೊಂಡಿದ್ದಾರೆ.
ಭಾರತದಲ್ಲಿನ ಅಕ್ರಮ ವಲಸಿಗರ ಬಗ್ಗೆ ಸರ್ಕಾರ ತನ್ನ ನಿಲುವನ್ನು ಎಂದೂ ಮೃದುಗೊಳಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಅಸ್ಸಾಂನಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಯನ್ನು ಇತರ ರಾಜ್ಯಗಳಲ್ಲಿ ತರಲಾಗುವುದು ಮತ್ತು ದೇಶದ ಪ್ರತಿ ಮೂಲೆಯಿಂದಲೂ ಒಳನುಸುಳುಕೋರರನ್ನು ಗುರುತಿಸಿ ಗಡಿಪಾರು ಮಾಡಲಾಗುವುದು ಎಂದು ಅವರು ಈಗಾಗಲೇ ದೃಢಪಡಿಸಿದ್ದಾರೆ.
ಪ್ರಸ್ತುತ, ಎನ್ಆರ್ಸಿ ಅಸ್ಸಾಂನಲ್ಲಿ ಒಪ್ಪಂದದ ಒಂದು ಭಾಗವಾಗಿ ಅನುಷ್ಠಾನಕ್ಕೆ ಬಂದಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ, “ಈ ದೇಶದ ಪ್ರತಿ ಮೂಲೆಯಲ್ಲಿರುವ ಅಕ್ರಮ ವಲಸಿಗರನ್ನು ಓಡಿಸಲಾಗುತ್ತದೆ” ಎಂದು ಹೇಳಿತ್ತು. ಅಂತೆಯೇ ಶಾ ಅವರು, ಎಲ್ಲಾ ವಲಸಿಗರನ್ನು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರವೇ ಗಡಿಪಾರು ಮಾಡಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ಸುರಕ್ಷಿತ ಮತ್ತು ಸಹಿಷ್ಣುತೆಯ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದರೆ, ಅಮಿತ್ ಶಾ ಅವರು ಭಾರತದಲ್ಲಿನ ಭದ್ರತಾ ಸಮಸ್ಯೆಗಳನ್ನು ನಿವಾರಿಸಿ ದೇಶವನ್ನು ಸುವ್ಯವಸ್ಥಿತಗೊಳಿಸುವತ್ತ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಮತ್ತು ಪ್ರಾದೇಶಿಕ ಶಕ್ತಿಯಿಂದ ಜಾಗತಿಕ ಕೊಡುಗೆದಾರನಾಗಿ ಪರಿವರ್ತಿಸುವ ಗುರಿಯತ್ತ ಇವರಿಬ್ಬರೂ ಕಾರ್ಯೋನ್ಮುಖಗೊಂಡಿದ್ದಾರೆ. ಈ ಇಬ್ಬರ ನಡುವಿನ ಸಮನ್ವಯವು ಭಾರತಕ್ಕೆ ತನ್ನ ಗುರಿಯನ್ನು ತಲುಪುವಲ್ಲಿ ಸಾಕಷ್ಟು ಸಹಾಯ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.