ಮೇದಕ್: ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಂಸ್ಥೆ (National Institute of Rural Development and Panchayati Raj-NIRDPR) ನ ತಂಡವು, ತೆಲಂಗಾಣದ ಮೇದಕ್ ಜಿಲ್ಲೆಯ ಪಾಸ್ಟಾಪುರ ಗ್ರಾಮದಲ್ಲಿ ಯುನೆಸ್ಕೋ ನೆರವಿನಿಂದ ನಿರ್ಮಿಸಲಾದ ಸಮುದಾಯ ಬಾನುಲಿ (ಕಮ್ಯೂನಿಟಿ ರೇಡಿಯೋ) ಕೇಂದ್ರಕ್ಕೆ ಭೇಟಿ ನೀಡಿ ಅದರ ಕಾರ್ಯವೈಖರಿ ಮತ್ತು ಅದರ ಪ್ರಭಾವಗಳ ಬಗ್ಗೆ ತಿಳಿದುಕೊಂಡಿದೆ.
ಸೆಂಟರ್ ಫಾರ್ ಡೆವಲಪ್ಮೆಂಟ್ ಡಾಕ್ಯುಮೆಂಟೇಶನ್ ಅಂಡ್ ಕಮ್ಯುನಿಕೇಷನ್ (ಸಿಡಿಸಿ)ನ ಮುಖ್ಯಸ್ಥೆ ಡಾ.ಅಕಾಂಕ್ಷಾ ಶುಕ್ಲಾ ನೇತೃತ್ವದಲ್ಲಿ ತಂಡವು, ಸಮುದಾಯ ಬಾನುಲಿ ಕೇಂದ್ರಕ್ಕೆ ಭೇಟಿ ನೀಡಿದ್ದು, ಈ ವೇಳೆ ಸಮುದಾಯಕ ಬಾನುಲಿಗೆ ಸಮುದಾಯವನ್ನು ಭದ್ರಕೋಟೆಯನ್ನಾಗಿ ರೂಪಿಸುವ ಸಾಮರ್ಥ್ಯ ಇದೆ ಮತ್ತು ಇವುಗಳು ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುತ್ತದೆ ಎಂಬುದನ್ನು ಕಂಡುಕೊಂಡಿದೆ.
“ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (ಜಿಪಿಡಿಪಿ), ಸಾಮಾಜಿಕ ಲೆಕ್ಕಪರಿಶೋಧನೆ, ನೀರಿನ ಕೊಯ್ಲು ಮತ್ತು ಸೌರ ಫಲಕ ಸ್ಥಾಪನೆ ಮುಂತಾದ ವಿವಿಧ ಗ್ರಾಮೀಣಾಭಿವೃದ್ಧಿ ಸಂಬಂಧಿತ ವಿಷಯಗಳಲ್ಲಿ ಚರ್ಚೆಯನ್ನು ನಡೆಸಲು ಈ ಕೇಂದ್ರ ಸಾಕಷ್ಟು ಪ್ರಯೋಜನಕಾರಿಯಾಗಿದೆ” ಎಂದು NIRDPR ಪ್ರಕಟನೆಯಲ್ಲಿ ತಿಳಿಸಿದೆ.
ಪಾಸ್ಟಾಪುರ ಗ್ರಾಮದ ಸಮುದಾಯ ರೇಡಿಯೊ ಕೇಂದ್ರಕ್ಕೆ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿ ಅನುದಾನ ನೀಡುತ್ತಿದೆ ಮತ್ತು ಸ್ಥಳೀಯ ಸಮುದಾಯದ ಮೂವರು ಮಹಿಳಾ ಸಿಬ್ಬಂದಿಗಳು ಇದನ್ನು ಮುನ್ನಡೆಸುತ್ತಿದ್ದಾರೆ. ಈ ಮಹಿಳೆಯರು ಕಳೆದ 20 ವರ್ಷಗಳಿಂದ ಈ ಸಂಘಟನೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ, ಇದಕ್ಕೂ ಮೊದಲು ಅವರು ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಈ ಬಾನುಲಿ ಕೇಂದ್ರವು ಈಗ ಸುಮಾರು 30 ಹಳ್ಳಿಗಳನ್ನು ತಲುಪಿದ್ದು, ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ, ಸಾಮಾಜಿಕ ಪಿಡುಗುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.