ಗುರು ಎಂಬ ಪರಿಕಲ್ಪನೆ ಹಾಗೂ ಗುರು- ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ವಿಶಿಷ್ಟವಾದ ವಿಷಯಗಳು. ಯಾವುದೇ ಕ್ಷೇತ್ರದಲ್ಲಿ ಒಂದು ನಿರ್ದಿಷ್ಟವಾಗಿದ ಉತ್ತಮ ಗುರಿಯನ್ನಿಟ್ಟುಕೊಂಡು ಅದರಲ್ಲಿ ಸಫಲತೆಯನ್ನು ಹೊಂದಬೇಕಾದರೆ ಸೂಕ್ತ ಮಾರ್ಗದರ್ಶನ, ಸಾಧನೆ, ಪರಿಶ್ರಮ ಅಗತ್ಯ. ಅದು ಲೌಕಿಕವಾಗಿರಬಹುದು, ಅಧ್ಯಾತ್ಮವಾಗಿರಬಹುದು. ಒಬ್ಬ ಯೋಗ್ಯ ಗುರುವಿನ ಅಗತ್ಯ ಬೇಕೇಬೇಕು. ಅಂತೆಯೇ ನಮ್ಮ ಇತಿಹಾಸ, ಪುರಾಣಗಳಲ್ಲಿ, ಸಾಹಿತ್ಯ, ಸಂಗೀತ, ವೇದ, ವೇದಾಂತಗಳಲ್ಲಿ ಗುರುವಿಲ್ಲದೆ ಶಿಷ್ಯರಿಲ್ಲ. ಶಿಷ್ಯರಿಲ್ಲದೆ ಗುರುವಿಲ್ಲ. ಶ್ರೀ ಶಂಕರಾಚಾರ್ಯರು ’ಗುರುವಿನ ಪಾದ ಪದ್ಮದಲ್ಲಿ ಮನಸ್ಸನ್ನು ಇಡದಿದ್ದರೆ ಏನನ್ನು ತಾನೇ ಸಾಧಿಸಲಾದೀತು? ಎಂದಿದ್ದಾರೆ. ಮಹಾಭಾರತದ ಶಾಂತಿಪರ್ವದಲ್ಲಿ ಭೀಷ್ಮರು ಧರ್ಮರಾಯನಿಗೆ ಹೇಳುತ್ತಾರೆ ಗುರುವು ತಂದೆ – ತಾಯಿಗಳಿಗಿಂತ ಶ್ರೇಷ್ಠರು ಎಂದು. ಹರಿದಾಸರು ಹೇಳುತ್ತಾರೆ, ಗುರುವಿನ ಗುಲಾಮನಾಗುವ ತನಕ, ದೊರೆಯದಣ್ಣ ಮುಕುತಿ ಎಂದು.
ಗುರುದಾಸನು ಶಿಷ್ಯನ ಸಮಗ್ರ ವ್ಯಕ್ತಿತ್ವವನ್ನು ರೂಪಿಸುತ್ತಾನೆ, ಅದೂ ಒಂದು ಆರೋಗ್ಯಕರವಾದ ವ್ಯವಸ್ಥಿತವಾದ ರೀತಿಯಲ್ಲಿ. ಈ ಹಿನ್ನೆಲೆಯಲ್ಲಿ ಆಷಾಢಮಾಸದ ಹುಣ್ಣಿಮೆಯಂದು ಗುರುಗಳನ್ನು ಪೂಜಿಸುವ, ಗೌರವಿಸುವ, ಗುರುಪರಂಪರೆಯನ್ನು ವಂದಿಸುವ ಸಂಪ್ರದಾಯ ನಮ್ಮಲ್ಲಿದೆ. ಹುಣ್ಣಿಮೆಯ ಚಂದ್ರನಂತೆ ಸದ್ಗುರುವೂ ಕೂಡ ಜ್ಞಾನಪ್ರಕಾಶವನ್ನು ನೀಡುತ್ತಾನೆ ಎಂಬುದು ಇಲ್ಲಿನ ಒಂದು ಸಂದೇಶ. ಈ ಗುರುಪೂರ್ಣಿಮೆಯನ್ನು ’ವ್ಯಾಸ ಪೂರ್ಣಿಮೆ’ ಯೆಂದೂ ಆಚರಿಸುತ್ತೇವೆ. ಬ್ರಹ್ಮಾವಿದ್ಯಾ ಸಂಪ್ರದಾಯದ ಗರುಪರಂಪರೆಗೆ ನಾಂದಿ ಹಾಕಿ, ತಮ್ಮ ಜ್ಞಾನ ಪ್ರಕಾಶದಿಂದ ಲೋಕಗುರುವೆನಿಸಿದ ಮಹರ್ಷಿ ವೇದವ್ಯಾಸರು ಜನ್ಮತಳೆದ ದಿನವೇ ಇದು. ವ್ಯಾಸೋಚ್ಛಷ್ಯ ಜಗತ್ಸರ್ವಂ’ ಜಗತ್ತಿನ ಜ್ಞಾನ-ವಿಜ್ಞಾನ ಪರಂಪರೆಯೆಲ್ಲವೂ ವ್ಯಾಸರು ತಿಂದು ಬಿಟ್ಟಿದ್ದು ಎಂಬ ಮಾತಿದೆ. ಅಂದರೆ ವ್ಯಾಸರು ವಿವರಿಸದೆ ಬಿಟ್ಟಿದ್ದು ಯಾವುದೂ ಇಲ್ಲ ಎಂದರ್ಥ. ಅದಕ್ಕೇ ಅವರು ಗುರುಗಳಿಗೆಲ್ಲ ಪರಮಗುರುಗಳು. ಮಹಾಭಾರತದಂತಹ ವಿಶಾಲ ಆಧ್ಯಾತ್ಮಿಕ, ಐತಿಹಾಸಿಕ ವಾಙ್ಮಯದ ಕರ್ತೃ. ಜ್ಞಾನರಾಶಿಯಾದ ವೇದವಾಙ್ಮಯವನ್ನು ಜನಸಾಮಾನ್ಯರ ಗ್ರಹಿಕೆಗೆ ಅನುವಾಗುವಂತೆ ಋಗ್, ಯಜುರ್, ಸಾಮ, ಅಥರ್ವಣಗಳೆಂದು ವಿಂಗಡಿಸಿದರು. ಅವರು ಅಷ್ಟಾದಶ ಪುರಾಣಗಳನ್ನು ರಚಿಸಿದವರು. ಅವರು ’ಹನುಮದ್ರಾಮಾಯಾಣ’ ವೆಂಬ ಅಪೂರ್ವ, ಅದ್ಭುತ ಕೃತಿಯ ರಚನಕಾರರೂ ಅವರು. ಸ್ವತಃ ರಾಮದೂತ ಹನುಮಂತನು ಭೀಮಸೇನನಿಗೆ ಚತುರ್ಯುಗಗಳನ್ನು ಪರಿಚಯಿಸುತ್ತಾ ತಿಳಿಸುವುದರೊಂದಿಗೆ ರಾಜಧರ್ಮವನ್ನು ಬೋಧಿಸಿರುವ ಒಂದು ವಿಶಿಷ್ಟ ಕೃತಿ ’ಹನುಮದ್ರಾಮಾಯಣ’.
ನಮ್ಮ ಪುರಾಣದ ಕಥೆಗಳಲ್ಲಿ ಗುರು-ಶಿಷ್ಯರ ನಡುವಿನ ಆತ್ಮೀಯ ಹಾಗೂ ಪವಿತ್ರವಾದ ಸಂಬಂಧದ ಕುರಿತು ಅನೇಕ ದೃಷ್ಟಾಂತಗಳನ್ನು ಕಾಣುತ್ತೇವೆ. ಗುರುಕುಲದಲ್ಲಿ ಶಿಕ್ಷಣ ಪಡೆಯಲು ಹೋದ ವಿದ್ಯಾರ್ಥಿಗಳಲ್ಲಿ ಗುರು ಯಾವುದೇ ರೀತಿಯಲ್ಲಿಯೂ ತಾರತಮ್ಯ ತೋರುವುದಿಲ್ಲ. ಸಾಮಾನ್ಯರ ರಾಜ ಮಹಾರಾಜರ ಮಕ್ಕಳೆಲ್ಲರೂ ಸಮಾನರೇ- ಕೃಷ್ಣ- ಬಲರಾಮರು, ರಾಮ, ಲಕ್ಷ್ಮಣಾದಿಗಳು ಇತರ ವಿದ್ಯಾರ್ಥಿಗಳೊಂದಿಗೇ ಕಲಿತದ್ದು ಉಲ್ಲೇಖವಾಗಿದೆ. ಶಿಷ್ಯರನ್ನು ಪುತ್ರವಾತ್ಸಲ್ಯದಿಂದ ಕಾಣುತ್ತಿದ್ದ ಗುರು, ಗುರುವಿನಲ್ಲಿ ಪಿತೃವಿಗೆ ಸಮಾನವಾದ ಪೂಜ್ಯಭಾವನೆ ಹೊಂದಿದ್ದ ಶಿಷ್ಯ- ಎಂಬ ವಿವರಗಳ ಮೂಲಕ ಅವರಲ್ಲಿನ ಪರಸ್ಪರ ಸಂಬಂಧದ ಆಳವನ್ನು ತಿಳಿಯಬಹುದು. ಗುರುಕುಲದಿಂದ ಹೊರಡುವ ಶಿಷ್ಯನಿಗೆ ಗುರು ಉಪದೇಶಿಸುವುದು ’ಸತ್ಯಂವದ| ಧರ್ಮಂಚರ| ಸ್ವಾಧ್ಯಾಯಾನ್ನಪ್ರಮದಿತವ್ಯಮ್ ಅಂದರೆ, ಸತ್ಯವನ್ನು ಹೇಳು, ಧರ್ಮವನ್ನು ಆಚರಿಸು, ಅಧ್ಯಯನ ಬಿಡಬೇಡ ಎಂದು.
ಶಿಷ್ಯನಿಗೆ ಕೇವಲ ಬೌದ್ಧಿಕ ಶಿಕ್ಷಣ ನೀಡುವುದಷ್ಟೇ ತನ್ನ ಕರ್ತವ್ಯವಲ್ಲ. ನೈತಿಕ ಶಿಕ್ಷಣ ಕೂಡ ನೀಡಿ ಅವನ ವ್ಯಕ್ತಿತ್ವದ ಪೂರ್ಣತೆಗೆ ಮಾರ್ಗದರ್ಶನ ನೀಡುತ್ತಿದ್ದುದು ಗುರುವಿನ ಧರ್ಮವಾಗಿತ್ತ್ತು. ಅಂತೆಯೇ ಗುರು ಸಾಕ್ಷಾತ್ ಭಗವಂತನ ಸ್ವರೂಪವೆನಿಸಿಕೊಳ್ಳುತ್ತಾನೆಂದು ಉಪನಿಷತ್ತುಗಳಲ್ಲಿ ಹೇಳಿದೆ. ಅವನು ಜ್ಞಾನದ ಭಂಡಾರವೇ ಆಗಿರುತ್ತಾನೆ. ಹಾಗೆಯೇ ಶಿಷ್ಯನಿಗೆ ಇರಬೇಕಾದ ಯೋಗ್ಯತೆಯ ಕುರಿತು ಕೂಡ ಉಪನಿಷತ್ತುಗಳಲ್ಲಿ ತಿಳಿಸಲಾಗಿದೆ. ಗುರು-ಶಿಷ್ಯರಿಬ್ಬರೂ ಪರಸ್ಪರರನ್ನು ಪರೀಕ್ಷೆ ಮಾಡಿ ಒಪ್ಪಿಕೊಳ್ಳುತ್ತಾರಂತೆ. ಅದೇ ಯೋಗ್ಯ ಗುರು ಮತ್ತು ಯೋಗ್ಯ ಶಿಷ್ಯನ ಲಕ್ಷಣವಂತೆ. ಸ್ವಾಮಿ ವಿವೇಕಾನಂದರಾಗುವ ಮೊದಲು ನರೇಂದ್ರನಾಗಿದ್ದವರು ರಾಮಕೃಷ್ಣಪರಮಹಂಸರನ್ನು ಗುರುವೆಂದು ಒಪ್ಪಿಕೊಂಡದ್ದು, ಅವರೂ ಆತನನ್ನು ಶಿಷ್ಯನೆಂದು ಸ್ವೀಕರಿಸಿದ್ದೂ ಹೀಗೇ ತಾನೇ?
ಗುರುವಿಗೆ ತ್ರಿಮೂರ್ತಿಗಳ ಸ್ಥಾನವೂ ಸಲ್ಲುತ್ತದೆ. ’ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ| ಗುರುರ್ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ’ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಇಂತಹ ಉನ್ನತ ಸ್ತರದ ಸ್ಥಾನವನ್ನು ನೀಡಲಾಗಿದೆ. ಏಕೆಂದರೆ ಗುರುವಿನ ವ್ಯಕ್ತಿತ್ವವೇ ಅಂತಹದು. ಆತನ ಧ್ಯೇಯವೇ ಮಹತ್ವ್ತಪೂರ್ಣವಾದುದು ಆತನಿಗೆ ಸಮಾಜದಲ್ಲಿ ಸದಾ ಮಂಗಲಕರವಾದದ್ದನ್ನೇ ಕಾಣುವ ಬಯಕೆ ಅದನ್ನು ಸಾಧಿಸಲು ಆತನ ಪ್ರಯತ್ನ ಸತತವಾಗಿ ನಡೆಯುತ್ತದೆ. ಒಂದು ಮಹೋನ್ನತ ಸಂಸ್ಕೃತಿಯ ಸಾಮ್ರಾಜ್ಯವನ್ನೇ ಕಟ್ಟುವ ಗುರಿ ಆತನದು. ಈ ಪವಿತ್ರವಾದ ಕಾರ್ಯ ಶಿಷ್ಯನಿಂದಲೂ ಮುಂದುವರಿಯುತ್ತಿತ್ತೆಂಬುದನ್ನು ನಮ್ಮ ಇತಿಹಾಸ, ಪುರಾಣಗಳಲ್ಲಿನ ನಿದರ್ಶನಗಳಲ್ಲಿ ಕಾಣುತ್ತೇವೆ.
’ಶಿಷ್ಯನಾದವನು ತನ್ನ ಗುರುವಿನ ಉಪದೇಶವನ್ನು ಸಂಪೂರ್ಣವಾಗಿ ಮನವರಿಕೆ ಮಾಡಿಕೊಂಡ ನಂತರದಲ್ಲಿ ಆ ಗುರುವಿನ ಅನುಭವವೇ ಅವನಿಗೆ ಸಾಕ್ಷಾತ್ತಾಗಿ ಆಗುತ್ತದೆ. ಆಗಲೇ ಅವನ ಅಧ್ಯಯನ ಪೂರ್ಣವಾಗುತ್ತದೆ. ಆಗ, ಅವನ ವಿದ್ಯೆ ಸ್ವಂತವಾಗಿ ಪರಿಣಮಿಸಿ, ಕಾಲಾಂತರದಲ್ಲಿ ತನ್ನ ಬಳಿಗೆ ಬಂದ ಶಿಷ್ಯರಿಗೆ ಗುರುವಾಗಿ, ತಾನು ಬೋಧಿಸುವುದು ತನ್ನ ಗುರುವಿನ ಅನುಗ್ರಹದಿಂದ ತಿಳಿದ ಉಪದೇಶವೆಂದೇ ಭಾವಿಸಿ ಬೋಧಿಸುತ್ತಾನೆ. ಹೀಗೆ ಗುರು ಶಿಷ್ಯರ ಪರಂಪರೆ ಒಂದು ಪಾವಿತ್ರ್ಯದ ಆಧಾರದೊಂದಿಗೆ ಮುಂದುವರಿಯುತ್ತದೆ’. ಉಪನಿಷತ್ತಿನಲ್ಲಿ ಹೀಗೆ ಹೇಳಿದೆ.
ಗುರುಪೂರ್ಣಿಮೆಯ, ವ್ಯಾಸ ಪೂರ್ಣಿಮೆಯ ಹಿನ್ನೆಲೆ ಇದು. ಇದನ್ನು ಸ್ಮರಿಸುತ್ತ ಆಚರಣೆ ಮಾಡುವುದು ಅಗತ್ಯ. ಪ್ರಸ್ತುತ ದಿನಗಳಲ್ಲಿ ಗುರು-ಶಿಷ್ಯ ಸಂಬಂಧಗಳು ಜಾಳಾಗುತ್ತ ಬಂದಿದ್ದರೂ, ಕೇವಲ ಒಂದು ಪ್ರದರ್ಶನವಾಗಿ ’ಶಿಕ್ಷಕರ ದಿನ’ವನ್ನು ಹಲವು ಕಡೆಗಳಲ್ಲಿ ಆಚರಿಸುತ್ತಿದ್ದರೂ ಯೋಗ್ಯ ಗುರು, ಯೋಗ್ಯ ಶಿಷ್ಯರ ಸಂಬಂಧದಲ್ಲಿ ಅದೇ ಪೂಜ್ಯಭಾವನೆ ಉಳಿದಿದೆ. ಅದರಿಂದಲೇ ಗುರುಪೂರ್ಣಿಮೆಯ ಮಹತ್ವ್ತವನ್ನು ಕೆಲವರಾದರೂ ತಿಳಿದು ಗೌರವಿಸುವ ಸಂಪ್ರದಾಯ ಉಳಿದುಕೊಂಡಿದೆ.
’ವರ್ಣಮಾತ್ರಂ ಕಲಿಸಿದಾತಂ ಗುರು’ ಎಂಬುದನ್ನು ಮರೆಯದೆ, ನಮಸ್ಕರಿಸುತ್ತಾ, ಲೋಕಗುರುವಾದ ಮಹರ್ಷಿ ವೇದವ್ಯಾಸರಿಗೆ ಸಾಷ್ಟಾಂಗ ಪ್ರಾಣಾಮಗಳನ್ನು ಅರ್ಪಿಸುವ ಪರಮ ಪವಿತ್ರವಾದ ದಿನ ಗುರುಪೂರ್ಣಿಮೆ.
✍ ನಂ. ನಾಗಲಕ್ಷ್ಮಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.