ಆಧಾರ್ ನೋಂದಣಿ ಈಗ ಬಹುದೊಡ್ಡ ಸಮಸ್ಯೆಯಾಗಿದೆ. ಎಲ್ಲೆಡೆಯೂ ಸಮಸ್ಯೆಗಳ ಸುಳಿ. ಈ ಸಂದರ್ಭದಲ್ಲಿ ಜಿಲ್ಲಾಡಳಿತಗಳು ಸೂಕ್ತ ಕ್ರಮ ಕೈಗೊಳ್ಳಬೇಕು, ಸರಕಾರಗಳು ಸೂಕ್ತ ನಿರ್ದೇಶನ ನೀಡಬೇಕು. ಈಗಲೂ ಅನೇಕ ಮಂದಿಗೆ ಆಧಾರ್ ಕಾರ್ಡ್ ಆಗಿಲ್ಲ, ಆಧಾರ್ ತಿದ್ದುಪಡಿಯೂ ಆಗಿಲ್ಲ. ಇಂತಹ ಸಂದರ್ಭದಲ್ಲಿ ಕೊಡಗು ಜಿಲ್ಲಾಡಳಿತ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮೊಬೈಲ್ ಸಂಚಾರಿ ವಾಹನದ ಮೂಲಕ ಆಧಾರ್ ನೋಂದಣಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದೆ. ಕಳೆದ ಹಲವಾರ ಸಮಯಗಳಿಂದ ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವ ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾಧಿಕಾರಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಬಗೆಹರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ನೀಡುವ ದೂರಿಗೆ ಅತಿ ಶೀಘ್ರದಲ್ಲಿ ಸ್ಪಂದಿಸಿ ಪರಿಹಾರ, ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮೊಬೈಲ್ ಸಂಚಾರಿ ವಾಹನದ ಮೂಲಕ ಆಧಾರ್ ನೋಂದಣಿ ಕಾರ್ಯಕ್ರಮ ನಡೆಸಲು ಕೊಡಗು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ವಿಶೇಷವಾಗಿ ಗಿರಿಜನ ಹಾಡಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ರೂಪಿಸಲಾಗಿದ್ದು, ಜಿಲ್ಲೆಯ ಸುಮಾರು 167 ಹಾಡಿಗಳಲ್ಲಿ ಸಂಚಾರಿ ವಾಹನದ ಮೂಲಕ ಆಧಾರ್ ನೋಂದಣಿ ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಗ್ರ ಗಿರಿಜನ ಯೋಜನಾ ಇಲಾಖೆಯಿಂದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೋಮವಾರ (ಇಂದು) ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ವಿವಿಧ ಹಾಡಿಗಳಲ್ಲಿ ಸುಮಾರು 15 ದಿನಗಳ ಕಾಲ ಆಧಾರ್ ನೋಂದಣಿ ಕಾರ್ಯಕ್ರಮ ಜರುಗಲಿದ್ದು, ಗಿರಿಜನ ಹಾಡಿಯ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಐಟಿಡಿಪಿ ಇಲಾಖೆ ಅಧಿಕಾರಿ ಸಿ.ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಆಧಾರ್ ನೋಂದಣಿ ವಿವರ ಹೀಗಿದೆ : ಜು.15 ರಿಂದ ಆ.28 ರವರೆಗೆ ಸಂಚಾರಿ ಸಂಚಾರಿ ವಾಹನದ ಮೂಲಕ ಆಧಾರ್ ನೋಂದಣಿ ಕಾರ್ಯಕ್ರಮ ನಡೆಯಲಿದೆ. ಜು.15ರಂದು ಕುಟ್ಟ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮಂಚಳ್ಳಿಯ ಸಿಂಕೋನ ಹಾಗು ಕುಟ್ಟ ನಾತಂಗಾಲ ಹಾಡಿಯ ಗಿರಿಜನರಿಗಾಗಿ ಕಾರ್ಯಕ್ರಮ ನಡೆಯಲಿದ್ದು, 16ರಂದು ನಾಣಚ್ಚಿಗದ್ದೆ ಹಾಡಿ, ಕೇಂಬುಕೊಲ್ಲಿ, ಚಂದನಕೆರೆ ಹಾಡಿಯವರಿಗಾಗಿ ನಾಣಚ್ಚಿಗದ್ದೆ ಸರಕಾರಿ ಶಾಲೆಯಲ್ಲಿ, ಜು.17ರಂದು ನಾಗರಹೊಳೆ ಹಾಗೂ ಗೋಣಿಗದ್ದೆ ಹಾಡಿಯವರಿಗೆ ನಾಗರಹೊಳೆ ಆಶ್ರಮ ಶಾಲೆ, 18ರಂದು ನಿಟ್ಟೂರು, ತಟ್ಟೆಕೆರೆ, ದಾಳಿಂಬೆತೋಟ, ಬೆಂಡೆಗುತ್ತಿ, ಕೊಲ್ಲಿಹಾಡಿಯವರಿಗಾಗಿ ನಿಟ್ಟೂರು ಆಶ್ರಮ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಜು.19ರಂದು ಕೋತೂರು ಮಲ್ಲಂಗೆರೆ ಹಾಡಿ ಹಾಗೂ ಬ್ರಹ್ಮಗಿರಿಯವರಿಗೆ ಕೋತೂರು ಆಶ್ರಮ ಶಾಲೆ, 20ರಂದು ಶ್ರೀಮಂಗಲದ ಬಣ್ಣಮೊಟ್ಟೆ, ಕುಮಟೂರಿನ ನೆಮ್ಮಲೆ, ಬೀರುಗದ ವೆಸ್ಟ್ನೆಮ್ಮಲೆ, ಈಸ್ಟ್ನೆಮ್ಮಲೆ, ಕುರ್ಚಿ ಗ್ರಾಮದ ತಾವಳಗೇರಿಯ ಕುರ್ಚಿ, ಹರಿಹರದ ಶ್ರೀಮಂಗಲ ಲೈನ್ಮನೆಯವರಿಗೆ ಹಾಗೂ ಕಾಕೂರಿನ ಆದಿವಾಸಿಗಳಿಗೆ ಶ್ರಿಮಂಗಲ ಸರಕಾರಿ ಶಾಲೆ, 22ರಂದು ಬಿರುನಾಣಿ, ತೆರಾಲು, ಪರಕಟಗೇರಿ, ಬಾಡಗರಕೇರಿ, ಪೊರಾಡು, ಹುದಿಕೇರಿ, ಹೈಸೊಡ್ಲೂರು, ಹೈಸೊಡ್ಲೂರು ಟಿ ಎಸ್ಟೇಟ್, ಕೋಣಗೇರಿ, ಚೀಣಿವಾಡ, ಬೇಗೂರು ಗ್ರಾಮದ ನಿವಾಸಿಗಳಿಗೆ ಹುದಿಕೇರಿಯಲ್ಲಿ ಆಧಾರ್ ನೋಂದಣಿ ಕಾರ್ಯಕ್ರಮ ಜರುಗಲಿದೆ.
ಆ.1ರಂದು ಹಾತೂರು ಸರಕಾರಿ ಮಾದರಿ ಶಾಲೆಯಲ್ಲಿ ಕೊಳತ್ತೋಡು, ಬೈಗೋಡು, ಕೈಕೇರಿ, ಕುಂದ, ಅತ್ತೂರು, ಈಚೂರು, ಆ.2ರಂದು ಬಿಟ್ಟಂಗಾಲ ಸರಕಾರಿ ಮಾದರಿ ಶಾಲೆಯಲ್ಲಿ 2ನೇ ರುದ್ರಗುಪ್ಪೆ, ರುದ್ರಗುಪ್ಪೆ, ಬಿ.ಬಾಡಗ, ಬಿಟ್ಟಂಗಾಲ, ನಾಮಗಾಲ, 1ನೇ ರುದ್ರಗುಪ್ಪೆ, ಕಂಡಂಗಾಲ ಅಂಬಟ್ಟಿ, ಬಾಳುಗೋಡು ಹಾಗೂ ಅಂಬಟ್ಟಿ-1 ಗ್ರಾಮದವರಿಗೆ ಕಾರ್ಯಕ್ರಮ ನಡೆಯಲಿದೆ.
ಆ.3ರಂದು ಸೋಮವಾರಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರು ಸರಕಾರಿ ಶಾಲೆಯಲ್ಲಿ ವಾಲ್ನೂರು ತ್ಯಾಗತ್ತೂರು, ಬಾಳೆಗುಂಡಿ, ಆ.5ರಂದು ನಂಜರಾಯಪಟ್ಟಣ ಸರಕಾರಿ ಶಾಲೆಯಲ್ಲಿ ಮಾವಿನಹಳ್ಳ, ರಂಗಸಮುದ್ರ, ಹೊಸಪಟ್ಟಣ, ಕಬ್ಬಿನಗದ್ದೆ,ಕಟ್ಟೆಹಾಡಿಯವರಿಗೆ, ಆ.6ರಂದು ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಹೆಬ್ಬೆಟ್ಟಗೇರಿ, ಚಿಕ್ಕಬೆಟ್ಟಗೇರಿ, ಹೊಸಕಾಡು ಹಾಡಿಯವರಿಗೆ, ಆ.7ರಂದು ಹೇರೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಕೂರು ಶಿರಂಗಾಲ, ಕಲ್ಲೂರು ಗ್ರಾಮದವರಿಗೆ, 8ರಂದು ಯಡವನಾಡು ಆಶ್ರಮಶಾಲೆಯಲ್ಲಿ ಗಂಧದ ಹಾಡಿ, ಸೀತಾಕಾಲೋನಿ, ಕೂಪಾಡಿ, ಸೂಳೆಬಾವಿ, ರಂಗನಹಾಡಿ ಹಾಗೂ ಸಜ್ಜಳ್ಳಿ ಹಾಡಿಯವರಿಗೆ ಕಾರ್ಯಕ್ರಮ ನಡೆಯಲಿದೆ.
ಆ.9ರಂದು ಬ್ಯಾಡಗೊಟ್ಟ ಪುನರ್ವಸತಿ ಬಡಾವಣೆಯಲ್ಲಿ ಹುಣಸೆಪಾರೆ, ಯಲಕೂರು ಹೊಸಳ್ಳಿ, ಚಿನ್ನೇಹಳ್ಳಿ, ಹೆಗ್ಗಡಳ್ಳಿಯವರಿಗೆ, ಆ.13ರಂದು ಅಬ್ಬೂರುಕಟ್ಟೆಯಲ್ಲಿ ಹಿತ್ಲಮಕ್ಕಿ, ಚಿಕ್ಕ ಅಬ್ಬೂರು, ವಳಗುಂದ, ಆಡಿನಾಡೂರು, ಹಳೆ ಮದಲಾಪುರದವರಿಗೆ, ಆ.14ರಂದು ಗಣಗೂರು ಪಂಚಾಯಿತಿಯಲ್ಲಿ ಗಣಗೂರು ಎಡುಂಡೆ, ಊಂಜಿಗನಹಳ್ಳಿ, ಬಾಣಾವರ, ಸಂಗಯ್ಯನಪುರ, ಗೋಣಿಮರೂರು ಗ್ರಾಮದ ಆದಿವಾಸಿಗಳಿಗೆ ಆಧಾರ್ ನೋಂದಣಿ ಕಾರ್ಯಕ್ರಮ ಜರುಗಲಿದೆ.
ಆ. 16 ರಂದು ಮಾಲಂಬಿ ಆಶ್ರಮಶಾಲೆಯಲ್ಲಿ ಮಾಲಂಬಿ, ಪಳಗೋಟುಹಾಡಿ. ಕಡ್ಲೆಮಕ್ಕಿ, ಆಲೂರುಸಿದ್ಧಾಪುರ, ಆ.17ರಂದು ದೊಡ್ಡಳ್ಳಿ ಸರಕಾರಿ ಶಾಲೆಯಲ್ಲಿ ಹಾರೆ ಹೊಸೂರು ಬ್ಯಾಡಗೊಟ್ಟ, ಕಟ್ಟೆಪುರ ಹಾಡಿಯವರಿಗೆ, ಆ. 19 ರಂದು ಗರಗಂದೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗರಗಂದೂರು ಗ್ರಾಮದ ಆದಿವಾಸಿಗಳಿಗೆ ಕಾರ್ಯಕ್ರಮ ನಡೆಯಲಿದೆ.
ಆ. 20 ರಂದು ಮಡಿಕೇರಿ ತಾಲೂಕಿನ ಮದೆನಾಡು ಪಂಚಾಯತ್ನಲ್ಲಿ ಬೆಟ್ಟತ್ತೂರು, ಜೋಡುಪಾಲ, ದೇವರಕೊಲ್ಲಿಯವರಿಗೆ, ಆ. 21 ರಂದು ಸಂಪಾಜೆ ಪಂಚಾಯತ್ನಲ್ಲಿ ಕೊಯನಾಡು, ಮಂಗಳಪಾರೆ, ಕುಂಟಿಕಾನ, ಅರೆಕಲ್ಲು, ಆ. 22 ರಂದು ಬಾಲಂಬಿ ಗ್ರಾಮ ಪಂಚಾಯತ್ನಲ್ಲಿ ಕಟ್ಟಪಳ್ಳಿ, ಕುದ್ರೆಪಾಯದವರಿಗೆ, 23ರಂದು ಪೆರಾಜೆ ಕುಂಬಳಚೇರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿಡ್ಯಮಲೆ, ಕುಂಡಾಡು, ಆ. 24 ರಂದು ಕರಿಕೆ ಆಶ್ರಮ ಶಾಲೆಯಲ್ಲಿ ಚೆತ್ತುಕಾಯ, ಎಳ್ಳುಕೊಚ್ಚಿ, ಕುಂಡತ್ತಿಕಾನ, ಆ. 26 ರಂದು ಚೆಯ್ಯಂಡಾಣೆ ಸರಕಾರಿ ಶಾಲೆಯಲ್ಲಿ ಯವಕಪಾಡಿ, ಚೇಲಾವರ, ಆ. 27 ರಂದು ತಣ್ಣಿಮಾನಿ, ಕೋಪಟ್ಟಿ ಚೇರಂಗಾಲ, ಕೋರಂಗಾಲದವರಿಗಾಗಿ ಭಾಗಮಂಡಲ ಪಂಚಾಯತ್ನಲ್ಲಿ ಹಾಗೂ ಆ. 28 ರಂದು ಗಾಳಿಬೀಡು ಪಂಚಾಯತ್ನಲ್ಲಿ ಗಾಳಿಬೀಡು ಹಾಗೂ 2ನೇ ಮೊಣ್ಣಂಗೇರಿಯವರಿಗೆ ಆಧಾರ್ ನೋಂದಣಿ ಕಾರ್ಯಕ್ರಮ ನಡೆಯಲಿದೆ.
ದಕ್ಷಿಣ ಕನ್ನಡ ಮಾತ್ರವಲ್ಲ ಇತರ ಜಿಲ್ಲೆಗಳಲ್ಲೂ ಇಂತಹದ್ದೊಂದು ಅಭಿಯಾನ ನಡೆಸುವ ಮೂಲಕ ಆಧಾರ್ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡಬಹುದಾಗಿದೆ.
✍ ಸುಳ್ಯನ್ಯೂಸ್.ಕಾಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.