ಶಿಲ್ಲಾಂಗ್: ನೀರಿನ ಸಮಸ್ಯೆಯನ್ನು ನಿವಾರಿಸಲು, ನೀರು ಮತ್ತು ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ ಮೇಘಾಲಯವು ಜಲ ನೀತಿಯನ್ನು ತರಲು ಮುಂದಾಗಿದೆ. ಈಗಾಗಲೇ ಕರಡು ಜಲ ನೀತಿಗೆ ಅದು ಅನುಮೋದನೆಯನ್ನು ನೀಡಿದ್ದು, ಈ ಮೂಲಕ ಜಲ ನೀತಿ ತರುತ್ತಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.
ಸಂಪುಟದ ಸಚಿವರ ನಡುವೆ ನಡೆದ ವಿಸ್ತೃತ ಚರ್ಚೆ, ಸಂವಾದಗಳ ಬಳಿಕ ಶುಕ್ರವಾರ ಕರಡು ಜಲ ನೀತಿಗೆ ಅನುಮೋದನೆಯನ್ನು ನೀಡಲಾಗಿದೆ.
“ಈ ಜಲ ನೀತಿಯು ಸಮುದಾಯದ ಸಹಭಾಗಿತ್ವದೊಂದಿಗೆ ಸುಸ್ಥಿರ ಅಭಿವೃದ್ಧಿ, ನಿರ್ವಹಣೆ ಮತ್ತು ನೀರಿನ ಸಂಪನ್ಮೂಲಗಳ ಬಳಕೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಇದು ಆರೋಗ್ಯ ಮತ್ತು ಜೀವನೋಪಾಯವನ್ನು ಸುಧಾರಿಸಲಿದೆ ಮತ್ತು ಜನರಲ್ಲಿ ದುರ್ಬಲತೆಯನ್ನು ಕಡಿಮೆ ಮಾಡಲಿದೆ. ಇದು ಇಂದಿನ ಮತ್ತು ಮುಂದಿನ ಪೀಳಿಗೆಗೆ ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ ಮತ್ತು ಪರಿಸರ ಸುಸ್ಥಿರತೆಯ ಮೂಲಕ ಉತ್ತಮ ಆಡಳಿತದ ಭರವಸೆ ನೀಡಿದೆ ” ಎಂದು ಉಪ ಮುಖ್ಯಮಂತ್ರಿ ಪ್ರೆಸ್ಟೋನ್ ಟೈನ್ಸಾಂಗ್ ಹೇಳಿದ್ದಾರೆ.
“ಜಲಾನಯನ ಪ್ರದೇಶಗಳ ರಕ್ಷಣೆ ಮತ್ತು ನದಿ ಮಾಲಿನ್ಯದಂತಹ ವಿಷಯಗಳನ್ನೂ ನೀತಿಯಲ್ಲಿ ವಿವರಿಸಲಾಗಿದೆ. ಈ ನೀತಿಯೊಂದಿಗೆ ನಾವು ಗ್ರಾಮಗಳನ್ನು ತಲುಪಲು ಬಯಸುತ್ತಿರುವುದರಿಂದ ಸಮುದಾಯದ ಸಹಭಾಗಿತ್ವವನ್ನು ನಾವು ಬಯಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಈ ನೀತಿಯ ಮೂಲಕ ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚನೆ ಮಾಡುತ್ತೇವೆ ಮತ್ತು ಅಂತರ್ಜಲದ ಸಮಸ್ಯೆಯನ್ನು ಕೂಡ ಈ ನೀತಿಯ ಮೂಲಕ ಪೂರೈಸಲಾಗುವುದು ಎಂದು ಟೈನ್ಸಾಂಗ್ ಹೇಳಿದ್ದಾರೆ. ಅಲ್ಲದೆ, ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶವಿದೆಯೇ ಅಥವಾ ಆಮ್ಲೀಯವಾಗಿದೆಯೇ ಎಂದು ಪರೀಕ್ಷಿಸಲು ನೀರಿನ ಗುಣಮಟ್ಟವನ್ನು ಇಲಾಖೆಯಡಿ ಮೇಲ್ವಿಚಾರಣೆ ಮಾಡುತ್ತೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.