ನವದೆಹಲಿ: ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸಂಪುಟವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ 2012 ಗೆ ತಿದ್ದುಪಡಿಯನ್ನು ತರಲು ಅನುಮೋದನೆಯನ್ನು ಬುಧವಾರ ನೀಡಿದೆ. ಅಮಾನುಷವಾದ ಪ್ರಕರಣಗಳಿಗೆ ಮರಣ ದಂಡನೆಯನ್ನು ವಿಧಿಸುವ ನಿಯಮವನ್ನೂ ಈ ಕಾಯ್ದೆ ಒಳಗೊಳ್ಳಲಿದೆ.
“ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ, 2012ಗೆ ತಿದ್ದುಪಡಿಗಳನ್ನು ತರಲು ಅಂಗೀಕಾರವನ್ನು ನೀಡಲಾಗಿದೆ. ಮಕ್ಕಳ ವಿರುದ್ಧ ಲೈಂಗಿಕ ಅಪರಾಧ ಎಸಗುವವರಿಗೆ ಮರಣದಂಡನೆ ಸೇರಿದಂತೆ ಶಿಕ್ಷೆ ಹೆಚ್ಚು ಕಠಿಣವಾಗಲಿದೆ. ಮಕ್ಕಳ ಅಶ್ಲೀಲತೆಯನ್ನು ತಡೆಯಲು ದಂಡ ವಿಧಿಸುವುದು ಮತ್ತು ಜೈಲು ಶಿಕ್ಷೆ ವಿಧಿಸುವುದಕ್ಕೆ ಈ ತಿದ್ದುಪಡಿಗಳು ಅವಕಾಶ ನೀಡುತ್ತವೆ ”ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಈ ತಿದ್ದುಪಡಿಗಳನ್ನು ಮೊದಲು 2018 ರಲ್ಲಿ ಸಂಪುಟವು ಅನುಮೋದಿಸಿತ್ತು, ಇದನ್ನು ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ಮಸೂದೆಯಾಗಿ ಪರಿಚಯಿಸಲಾಯಿತು ಆದರೆ, ಬಳಿಕ ಲೋಕಸಭಾ ಚುನಾವಣೆ ಘೋಷಣೆಯಾದ ಕಾರಣ ಅದನ್ನು ಅಂಗೀಕರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಂಪುಟ ಈಗ ಇವುಗಳನ್ನು ಮತ್ತೊಮ್ಮೆ ಅನುಮೋದಿಸಿದೆ.
ಈ ತಿದ್ದುಪಡಿಗಳು, ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ಕಿರುಕುಳದ ಪ್ರಕರಣಗಳಿಗೆ ಕಡಿವಾಣವನ್ನು ಹಾಕುವ ನಿಟ್ಟಿನಲ್ಲಿ ಅಪರಾಧಿಗಳಿಗೆ ಮರಣದಂಡನೆಯನ್ನು ನೀಡುವ ಪ್ರಯತ್ನವನ್ನು ಮಾಡಲಿದೆ. ಮಕ್ಕಳ ಅಶ್ಲೀಲ ಚಿತ್ರಗಳನ್ನು ಹೊಂದಿರುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯೊಂದಿಗೆ ದಂಡ ವಿಧಿಸಲು ಈ ತಿದ್ದುಪಡಿಗಳು ಅವಕಾಶ ನೀಡಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.