ಗ್ರಾಮೀಣ ಭಾಗದಲ್ಲಿ ಅಂಚೆ ಕಚೇರಿಗಳೇ ಬಡವರ ಪಾಲಿನ ಬ್ಯಾಂಕ್. ದುಡಿದ ಹಣ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿದ್ದರೆ ಸೇಪ್ ಎಂಬ ಭಾವನೆ ಗ್ರಾಮೀಣ ಜನರಲ್ಲಿದೆ. ಈಗ ಇಂಟರ್ನೆಟ್ ಆಧಾರಿತವಾಗಿಯೇ ಹಣ ಪಡೆಯುವ ವ್ಯವಸ್ಥೆ ಬಂದ ಬಳಿಕ ಗ್ರಾಮೀಣ ಜನರು ಹಣಕ್ಕಾಗಿ 2-3 ದಿನ ಓಡಾಟ ನಡೆಸಬೇಕಾದ ಸ್ಥಿತಿ ಬಂದಿದೆ. ಆಗಾಗ ಕೈಕೊಡುವ ಇಂಟರ್ನೆಟ್, ವಿದ್ಯುತ್ ಕಾರಣದಿಂದ ವ್ಯವಸ್ಥೆ ಹದಗೆಡುತ್ತಿದೆ. ಗ್ರಾಮೀಣ ಬ್ಯಾಂಕ್, ಜನರ ವಿಶ್ವಾಸದ ಮೇಲೆ ಹೊಡೆತ ಬೀಳುತ್ತಿದೆ. ಎಚ್ಚೆತ್ತುಕೊಳ್ಳದೇ ಹೋದರೆ ಗ್ರಾಮೀಣ ಬ್ಯಾಂಕ್ ಸೇವೆ ಸ್ಥಗಿತಗೊಳಿಸುವ ದಿನ ದೂರವಿಲ್ಲ. ಮನಸ್ಸಿದ್ದರೆ ಅಂಚೆ ಕಚೇರಿ ಮೂಲಕ ಬಹಳಷ್ಟು ಸೇವೆಯನ್ನು ಗ್ರಾಮೀಣ ಭಾಗದ ಜನರಿಗೆ ನೀಡಲು ಸಾಧ್ಯವಿದೆ. ಆರ್ ಡಿ, ಉಳಿತಾಯ ಖಾತೆ, ಜೀವವಿಮೆ, ವಿದ್ಯುತ್ ಬಿಲ್, ದೂರವಾಣಿ ಬಿಲ್ ಸೇರಿದಂತೆ ಹಲವಾರು ಸೇವೆ ಸುಧಾರಣೆಗೂ ಅವಕಾಶ ಇದೆ. ಇಂತಹ ಸೇವೆ ಈಗ ಕೈಕೊಡುತ್ತಿದೆ, ಭರವಸೆ ನಿರಾಸೆಯಾಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮೀಣ ಜನರ ಈ ಸಂಕಷ್ಟದತ್ತ ಗಮನಹರಿಸಬೇಕಿದೆ.
ಬಹುತೇಕ ಅಂಚೆ ಕಚೇರಿಗಳಲ್ಲಿ ಈಗ ವ್ಯವಹಾರ ಕಷ್ಟವಾಗಿದೆ. ಗ್ರಾಮೀಣ ಭಾಗದ ಬ್ಯಾಂಕ್, ಜನರ ಜೀವನಾಡಿಯಾಗಿರುವ ಅಂಚೆ ಕಚೇರಿಗಳಲ್ಲಿ ಈಗ ಇಂಟರ್ನೆಟ್ ಕೈಕೊಟ್ಟರೆ ಹಣವೂ ಸಿಗುವುದಿಲ್ಲ. ಈಗ ಬಡವರ ಬೆವರ ಹನಿ ಈಗ ಇಂಟರ್ನೆಟ್ ಆಧಾರಿತವಾಗಿದೆ. ಕಷ್ಟಕಾಲಕ್ಕೆಂದು ದುಡಿದು ಕೂಡಿಟ್ಟ ಹಣ ಇಂಟರ್ನೆಟ್ ಆಧಾರಿತವಾದರೆ ಗ್ರಾಮೀಣ ಭಾಗದಲ್ಲಿ ಕಷ್ಟ. ಹೀಗಿದ್ದರೂ ಜನರು ಮಾತನಾಡದೆ ಮೌನವಾಗಿದ್ದರೆ. ಅಂಚೆ ಕಚೇರಿಯಲ್ಲಿ ವ್ಯವಹಾರ ಕಡಿಮೆಯಾಗಿದೆ. ಹೀಗಾದರೆ ಬಿಎಸ್ಎನ್ಎಲ್ ಹಾದಿಯನ್ನೇ ಅಂಚೆ ಕಚೇರಿ ಹಿಡಿಯುವುದು ನಿಶ್ಚಿತ. ಅದಕ್ಕೂ ಮುನ್ನ ಜನಪ್ರತಿನಿಧಿಗಳು ಧ್ವನಿ ಎತ್ತಬೇಕಿದೆ.
ಒಂದು ಕಾಲದಲ್ಲಿ ಅಂಚೆ ಕಚೇರಿ ಎಂದರೆ ಸೇಫ್ ಎಂಬ ಭಾವನೆ ಗ್ರಾಮೀಣ ಜನರಲ್ಲಿ ಇತ್ತು. ತಾವು ದುಡಿದ ಹಣ, ಬೆವರಿನ ಹನಿ ಅಂಚೆ ಕಚೇರಿಯ ಉಳಿತಾಯ ಖಾತೆ ಸೇರಿದರೆ ಚಿಂತೆ ಇಲ್ಲ. ಬಡ್ಡಿ ಬಗ್ಗೆ ಲೆಕ್ಕ ಹಾಕದೆ ಅದು ನಮ್ಮ ಬ್ಯಾಂಕ್ ಎಂದು ಮನೆಗೊಂದರಂತೆ ಖಾತೆ ತೆರೆದು ಜನರು ವ್ಯವಹಾರ ಮಾಡುತ್ತಿದ್ದರು. ಪೋಸ್ಟ್ ಮಾಸ್ಟರ್, ಪೋಸ್ಟ್ ಮ್ಯಾನ್ ಇಬ್ಬರೇ ಅವರ ವಿಶ್ವಾಸದ ಕೊಂಡಿಗಳು. ಇಂದಿಗೂ ಹಲವಾರು ಮಂದಿ ಅಂಚೆ ಕಚೇರಿ ಬಿಟ್ಟು ಉಳಿದ ಕಡೆ ಉಳಿತಾಯ ಖಾತೆ ಮಾಡದ ಜನರು ಇದ್ದಾರೆ. ಆದರೆ ಈಚೆಗೆ ಕೆಲವು ಸಮಯಗಳಿಂದ ಅಂತಹ ಮಂದಿಗೂ ನೋವಾಗಲು ಶುರುವಾಗಿದೆ. ಇದೆಂತಾ ಕತೆ, “ನಮ್ಮ ಹಣಕ್ಕೆ ಅಲೆದಾಟ ಮಾಡಬೇಕಾ” ಎಂದು ಕೇಳಲು ಶುರು ಮಾಡಿದ್ದಾರೆ. ಕಾರಣ ಇಷ್ಟೇ, ಈಗ ಇಂಟರ್ನೆಟ್ ಆಧಾರಿತವಾಗಿಯೇ ವ್ಯವಹಾರ ನಡೆಯಬೇಕು. ಒಂದು ವೇಳೆ ವಿದ್ಯುತ್ ಕೈಕೊಟ್ಟರೆ ಬಿ ಎಸ್ ಎನ್ ಎಲ್ ಮೊಬೈಲ್ ಟವರ್ ಆಫ್ ಆಗುತ್ತದೆ. ಗ್ರಾಮೀಣ ಭಾಗದ ಬಹುತೇಕ ಕಡೆ ಬಿ ಎಸ್ ಎನ್ ಎಲ್ ಬಿಟ್ಟು ಬೇರೆ ಸಿಗ್ನಲ್ ಇಲ್ಲ. ಅದರ ಜೊತೆ ಅಂಚೆ ಕಚೇರಿಗೆ ನೀಡಿದ ಉಪಕರಣದಲ್ಲಿ ಬಿ ಎಸ್ ಎನ್ ಎಲ್ ಸಿಮ್ ಮಾತ್ರವೇ ಕೊಡಲಾಗಿದೆ. ಹೀಗಾಗಿ ಸರಿಯಾಗಿ 3 ಜಿ ವ್ಯವಸ್ಥೆ ಇದ್ದರೆ ಮಾತ್ರವೇ ಅಂಚೆ ಕಚೇರಿ ವ್ಯವಹಾರ ನಡೆಯುತ್ತದೆ. ಹೀಗಾಗಿ ಈಗ ಎಲ್ಲಾ ಕಡೆ ಬಿ ಎಸ್ ಎನ್ ಎಲ್ ಕೈಕೊಡುತ್ತಿದೆ. ಈ ಕಾರಣದಿಂದ ಅಂಚೆ ಕಚೇರಿ ಕೆಲಸಗಳು ನಡೆಯುವುದಿಲ್ಲ. ಮುಖ್ಯ ಕಚೇರಿಯಿಂದ ಹಣದ ಬ್ಯಾಗ್ ಅಥವಾ ಇತರ ಯಾವುದೇ ಬ್ಯಾಗ್ ಬಂದರೆ ಅದನ್ನು ತೆರೆಯಬೇಕಾದರೆ ಇಂಟರ್ನೆಟ್ ಬೇಕು. ಅದಾದ ಬಳಿಕ ಹಣ ಪಾವತಿ ಮಾಡಲು ಇಂಟರ್ನೆಟ್ ಬೇಕು. ಅದು ಯಾವುದೇ ಬೇರೆ ಇಂಟರ್ನೆಟ್ ಆಗುವುದಿಲ್ಲ. ಬಿ ಎಸ್ ಎನ್ ಎಲ್ ಸಿಗ್ನಲ್ ಇರಲೇಬೇಕು. ಹೀಗಾಗಿ ಕೆಲಸವಾಗುವುದಿಲ್ಲ. ಇತ್ತೀಚೆಗೆ ಸುಳ್ಯ ತಾಲೂಕಿನ ನಡುಗಲ್ಲು ಬಿ ಎಸ್ ಎನ್ ಎಲ್ ಟವರ್ ವಾರಗಳ ಕಾಲ ಆಫ್ ಆಗಿತ್ತು. ಅಲ್ಲಿನ ಅಂಚೆ ಕಚೇರಿ ಸ್ಥಿತಿ ಹೇಗಿರಬೇಡ ಊಹಿಸಿ. ಅಲ್ಲಿ ಬೇರೆ ನೆಟ್ವರ್ಕ್ ಇದೆ, ಆದರೂ ಉಪಯೋಗಿಸುವ ಹಾಗಿಲ್ಲ. ಅಲ್ಲಿನ ಪೋಸ್ಟ್ ಮಾಸ್ಟರ್ ಸಮೀಪದ ಟವರ್ ಗೆ ಬಂದು ಆನ್ ಮಾಡಿ ಜನರಿಗೆ ಸೇವೆ ನೀಡಿದ್ದರು. ಅಂಚೆ ಕಚೇರಿಯ ಕೆಲವರು ಬಿಡಿ, ಅನೇಕ ಸಿಬಂದಿಗಳು ಉತ್ತಮವಾದ ಸೇವೆಯನ್ನು ನೀಡುತ್ತಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಇಂದಿಗೂ ವಿಶ್ವಾಸ ಉಳಿಸಿಕೊಂಡಿದೆ, ಇಷ್ಟೆಲ್ಲಾ ಅವ್ಯವಸ್ಥೆಯಾದರೂ ಒಂದೇ ಒಂದು ಪ್ರತಿಭಟನೆ, ಧ್ವನಿ ಎತ್ತುತ್ತಿಲ್ಲ. ಹಾಗೆಂದು ಇದೇ ಗ್ರಾಮೀಣ ಜನರ ದೌರ್ಬಲ್ಯವೂ ಅಲ್ಲ.
ಹಾಗೆಂದು ಸ್ವಲ್ಪ ತುರ್ತಾಗಿ ಹಣ ಬೇಕಾದ ಗ್ರಾಮೀಣ ಭಾಗದ ಮಂದಿ ಮುಖ್ಯ ಕಚೇರಿಗೆ ಬಂದರೆ ಅಲ್ಲೂ ಹಾಗೆ, ಇಂಟರ್ನೆಟ್ ಇಲ್ಲದೇ ಇದ್ದರೆ ಹಣವೂ ಇಲ್ಲ…!. ಹೀಗಾಗಿ ಈಗ ಅಂಚೆ ಕಚೇರಿಯಲ್ಲಿ ಡಿಪಾಸಿಟ್ ಇರಿಸಿದ ಹಣ ಪಡೆಯಲು ವಾರಗಳ ಮುಂದೆಯೇ ಪ್ಲಾನ್ ಮಾಡಬೇಕಾಗುತ್ತದೆ. ಆದರೆ ಗ್ರಾಮೀಣ ಭಾಗದ ಜನರಿಗೆ ಇದೆಲ್ಲಾ ಹೇಗೆ ತಿಳಿಯುತ್ತದೆ.
ಇದೆಲ್ಲಾ ಸಮಸ್ಯೆ ಗ್ರಾಮೀಣ ಭಾಗದ ಜನರಿಗೆ ಮಾತ್ರಾ. ನಗರದ ಮಂದಿ ಅಂಚೆ ಕಚೇರಿಯನ್ನೇ ಅವಲಂಬನೆ ಮಾಡುವುದಿಲ್ಲ. ಇತರ ಬ್ಯಾಂಕ್ ಗಳಿಗೆ ತೆರಳುತ್ತಾರೆ. ನಗರದಲ್ಲಿ ಇಂಟರ್ನೆಟ್ ವ್ಯವಸ್ಥೆ ಕೈಕೊಡುವುದೂ ಕಡಿಮೆ. ಇತ್ತೀಚೆಗೆ ಬೆಳ್ಳಾರೆ ಬಳಿಯ ಮುಕ್ಕೂರು ಅಂಚೆ ಕಚೇರಿ ಕೂಡಾ ಇಂಟರ್ನೆಟ್ ಕಾರಣದಿಂದಲೇ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ಮೂಲಗಳು ಹೇಳಿತ್ತು. ಇಂಟರ್ನೆಟ್ ಲಭ್ಯವಾಗುವ ಕಡೆ ಅಂಚೆ ಕಚೇರಿ ಸ್ಥಾಪಿಸುವ ಉದ್ದೇಶವಿತ್ತು.
ಅದಕ್ಕೂ ಮೊದಲು ಸಣ್ಣ ಸಂದೇಹ ವ್ಯಕ್ತವಾಗುತ್ತದೆ, ಎಲ್ಲಾ ಅಂಚೆ ಕಚೇರಿಗಳಿಗೆ ಇಂಟರ್ನೆಟ್ ಉಪಯೋಗಿಸಲು ಸ್ವೈಪ್ ಮಾದರಿಯ ಯಂತ್ರ ನೀಡಿದ್ದಾರೆ, ಇದರ ಬೆಲೆ 1 ಲಕ್ಷಕ್ಕೂ ಅಧಿಕ ಎಂದು ಸಿಬ್ಬಂದಿಗಳು ಹೇಳುತ್ತಾರೆ. ವಾಸ್ತವಾಗಿ ಅಷ್ಟೊಂದು ಹಣ ಆ ಯಂತ್ರಕ್ಕೂ ಇರುವುದಿಲ್ಲ. ಅಲ್ಲೇನೋ ನಡೆದಿರಬೇಕು ಎಂದು ಅನುಮಾನ ವ್ಯಕ್ತವಾಗುತ್ತದೆ. ಅದಿರಲಿ, ಇಲ್ಲಿ ಈ ಯಂತ್ರದ ಬದಲಾಗಿ ಲ್ಯಾಪ್ ಟಾಪ್ ನೀಡಿ ಯಾವುದೇ ಇಂಟರ್ನೆಟ್ ಬಳಕೆಗೆ ವ್ಯವಸ್ಥೆ ಮಾಡಿದ್ದರೆ ಇಷ್ಟು ದೊಡ್ಡ ಸಮಸ್ಯೆಯಾಗುತ್ತಿರಲಿಲ್ಲ ಎಂಬುದು ಸಿಬ್ಬಂದಿಗಳು ಗುಟ್ಟಾಗಿ ಹೇಳುತ್ತಾರೆ.
ಅತಿ ಶೀಘ್ರದಲ್ಲೇ ಈ ವ್ಯವಸ್ಥೆ ಸರಿಯಾಗದೇ ಇದ್ದರೆ ಅಂಚೆ ಕಚೇರಿಯಲ್ಲಿ ವ್ಯವಹಾರ ಕುಂಠಿತವಾಗಿ ಲಾಭದಲ್ಲಿರುವ ಗ್ರಾಮೀಣ ಜನರ ಜೀವನಾಡಿಯಾದ ಬ್ಯಾಂಕ್ ನಷ್ಟದತ್ತ ಸಾಗುವುದು ಖಚಿತ, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕಡೆಗೆ ಗಮನಹರಿಸುವುದು ಉತ್ತಮ.
ಗ್ರಾಮೀಣ ಭಾರತ ಎನ್ನುತ್ತಾ ಬಿಎಸ್ಎನ್ಎಲ್ ವ್ಯವಸ್ಥೆ ಹದಗೆಡುತ್ತದೆ, ಇದೀಗ ಗ್ರಾಮೀಣ ಭಾರತ ಎನ್ನುತ್ತಾ ಅಂಚೆ ಕಚೇರಿಯೂ ಶಿಥಿಲವಾಗುತ್ತದೆ, ಗ್ರಾಮೀಣ ಭಾರತ ಎನ್ನುತ್ತಾ ಬಹುತೇಕ ವ್ಯವಸ್ಥೆಗಳು ಶಿಥಿಲವಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಿಸಿ ಸಂಬಂಧಿತರ ಗಮನಕ್ಕೆ ತಂದರೆ ಸುಧಾರಣೆಯಾಗುವ ಭರವಸೆ ಇದೆ, ವಿಶ್ವಾಸ ಇದೆ. ಜಾತಿ, ಧರ್ಮದ ರಾಜಕಾರಣ ಮಾಡುವ ಬದಲಿಗೆ ಗ್ರಾಮೀಣ ಸೇವೆಯ ಕಡೆಗೆ ಆದ್ಯತೆ ನೀಡುವ ಮಂದಿ ಮುಂದೆ ಬರಲಿ.
✍ ಸುಳ್ಯನ್ಯೂಸ್.ಕಾಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.