ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ 5 ನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 31 ನೇ ವಾರದ ಶ್ರಮದಾನವನ್ನು ಪಂಜಿಮೊಗರುವಿನಲ್ಲಿ ಏರ್ಪಡಿಸಲಾಗಿತ್ತು. ದಿನಾಂಕ 7-7-2019 ಭಾನುವಾರದಂದು ಬೆಳಿಗ್ಗೆ ವೇದಘೋಷದ ಮೂಲಕ ಚಾಲನೆ ದೊರೆಯಿತು. ಎಂ.ಆರ್.ಪಿ.ಎಲ್ ಅಧಿಕಾರಿಗಳಾದ ಮಂಜುನಾಥ್ ಎಚ್ ವಿ ಹಾಗೂ ಶ್ರೀಶ ಕರ್ಮರನ್ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದಡಿ ಪಂಜಿಮೊಗರು ವಿದ್ಯಾನಗರದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಲೋಕಾರ್ಪಣೆ ಮಾಡಲಾಯಿತು. ಮಾಜಿ ಮನಪಾ ಸದಸ್ಯ ದಯಾನಂದ ಶೆಟ್ಟಿ ಇವರು ತಂಗುದಾಣವನ್ನು ಉದ್ಘಾಟಿಸಿದರು. ಎಂ.ಆರ್.ಪಿ.ಎಲ್. ಗ್ರೂಪ್ ಜನರಲ್ ಮೆನೇಜರ್ ಬಿ.ಎಚ್. ವಿ. ಪ್ರಸಾದ್, ಚೀಫ್ ಜನರಲ್ ಮೆನೇಜರ್ ಸುಭಾಷ ಪೈ, ಸ್ವಾಮಿ ಏಕಗಮ್ಯಾನಂದಜಿ, ಸತೀಶ್ ಆಳ್ವ, ರಾಮಸುಬ್ರಮಣ್ಯಮ್, ಪ್ರಕಾಶ್ ಅಮೀನ್, ಸುಧಾಕರ್ ಕಾವೂರು, ಸುನೀಲ್ ಪಾಂಡೇಶ್ವರ್, ರಾಮಕೃಷ್ಣ ಕೊಟ್ಟಾರಿ ಇನ್ನಿತರರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಶ್ರಮದಾನಕ್ಕೆ ಚಾಲನೆ ನೀಡಿದ ಮಂಜುನಾಥ್ ಮಾತನಾಡಿ ಸ್ವಚ್ಛತೆಯನ್ನು ಕಾಪಾಡುವುದು ಹಾಗೂ ಅದನ್ನು ಪ್ರಚುರಪಡಿಸುವುದು ನಮ್ಮೆಲ್ಲರ ಕರ್ತವ್ಯ. ಸ್ವಚ್ಛತೆ ಒಂದು ಬೃಹದಾಕಾರವಾದ ಸಮಸ್ಯೆಯಾಗಿ ಮಾರ್ಪಟ್ಟು ಅದೊಂದು ಸವಾಲಾಗಿದೆ. ಆದರೆ ಸ್ವಚ್ಛ ಭಾರತ ಅಭಿಯಾನದಿಂದಾಗಿ ಸಾರ್ವಜನಿಕರಲ್ಲಿ ಈಗೀಗ ಶುಚಿತ್ವದ ಕುರಿತು ಅರಿವು ಮೂಡಲಾರಂಭಿಸಿದೆ, ಅದಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗ ಸಿಗಬೇಕಿದೆ, ಅಂತಹ ಪ್ರಯತ್ನದಲ್ಲಿ ಸರ್ವರೂ ಕೈಜೋಡಿಸಬೇಕು. ಎಂ.ಆರ್.ಪಿ.ಎಲ್ ತನ್ನ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ಸ್ವಚ್ಛ ಮಂಗಳೂರ ಕನಸನ್ನು ನನಸು ಮಾಡುವ ವಿಶಿಷ್ಠ ಪ್ರಯೋಗ ಯಶಸ್ವಿಯಾಗಲಿ. ಮಂಗಳೂರು ಸ್ವಚ್ಛತೆಗೆ ಮಾದರಿಯಾಗಲಿ ಎಂದು ಹಾರೈಸಿದರು.
ಬಸ್ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದ ದಯಾನಂದ್ ಶೆಟ್ಟಿ ಇಂದಿನ ವ್ಯವಸ್ಥೆಯಲ್ಲಿ ಬೃಹತ್ ಕಾರ್ಯಕ್ರಮಗಳನ್ನು ರೂಪಿಸುವ ಭರಾಟೆಯಲ್ಲಿ ಜನಸಾಮಾನ್ಯನ ಮೂಲಭೂತ ಅವಶ್ಯಕತೆಗಳನ್ನು ಮರೆಯಲಾಗುತ್ತಿದೆ. ನಗರದ ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ಅಗಲೀಕರಣವಾಗಿ ತಂಗುದಾಣಗಳು ಕಣ್ಮರೆಯಾಗುತ್ತಿವೆ. ಪುನ: ಅದನ್ನು ನಿರ್ಮಿಸುವಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ, ಆದ್ದರಿಂದ ಬಸ್ ಪ್ರಯಾಣಿಕರಿಗೆ ಅನಾನೂಕೂಲವಾಗುತ್ತಿದೆ. ಅದೇ ರೀತಿ ಈ ಪ್ರದೇಶದಲ್ಲಿ ಅಂತಹ ತಂಗುದಾಣದ ಅವಶ್ಯಕತೆಯಿತ್ತು. ಇಂದು ಅದು ಸಾಕಾರಗೊಂಡಿದೆ. ಇಂತಹ ಸುಂದರ ತಂಗುದಾಣದ ನಿರ್ಮಾತೃ ರಾಮಕೃಷ್ಣ ಮಿಷನ್ ತನ್ನ ಜನಪರವಾದ ಕಾಳಜಿಯಿಂದ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿರುವುದು ನಿಜವಾಗಿ ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಶ್ರಮದಾನ
ಪಂಜಿಮೊಗರು-ವಿದ್ಯಾನಗರ ಪರಿಸರದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ಎಂ.ಆರ್.ಪಿ.ಎಲ್ ಸಿಬ್ಬಂದಿಗಳು ಶ್ರೀ ಸುಭಾಷ ಪೈ ನೇತೃತ್ವದಲ್ಲಿ ವಿದ್ಯಾನಗರ ಬಸ್ ತಂಗುದಾಣದ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಮಾಡಿದರು. ಸಚಿನ್ ಕಾಮತ್ ಹಾಗೂ ಸೂರಜ್ ಸೋಲಂಕಿ ನೇತೃತ್ವದಲ್ಲಿ ಕಾರ್ಯಕರ್ತರು ಎಂ ವಿ ಶೆಟ್ಟಿ ಕಾಲೇಜಿನ ಮುಂಭಾಗದಲ್ಲಿದ್ದ ತ್ಯಾಜ್ಯರಾಶಿಯನ್ನು ತೆಗೆದು ಸ್ವಚ್ಛಗೊಳಿಸಿದರು. ಒಟ್ಟು ಮೂರು ತ್ಯಾಜ್ಯ ಬಿಸಾಡುತ್ತಿದ್ದ ಸ್ಥಳಗಳನ್ನು ಸ್ವಚ್ಛಗೊಳಿಸಿ ಮತ್ತೆ ಸಾರ್ವಜನಿಕರು ಅಲ್ಲಿ ಕಸ ಹಾಕದಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಮಾರ್ಗ ಬದಿಯ ತೋಡುಗಳಲ್ಲಿದ್ದ ತ್ಯಾಜ್ಯ ಹಾಗೂ ಮಣ್ಣು ತೆಗೆದು ಮಳೆಗಾಲದ ನೀರು ಸರಾಗವಾಗಿ ಸಾಗುವಂತೆ ಮಾಡಲಾಯಿತು. ರಸ್ತೆ ಬದಿಯ ದೊಡ್ದ ದೊಡ್ದ ಹೊಂಡಗಳನ್ನು ಜೆಸಿಬಿ ಬಳಸಿಕೊಂಡು ಮಣ್ಣು ಹಾಕಿ ಮುಚ್ಚಲಾಯಿತು. ಕೊನೆಯದಾಗಿ ಗಾಂಧಿನಗರ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ ನಾಮ ಫಲಕವನ್ನು ತೊಳೆದು ಶುಚಿಮಾಡಲಾಯಿತು.
ಪ್ರಯಾಣಿಕರ ತಂಗುದಾಣದ ನಿರ್ಮಾಣ ಹಾಗೂ ಲೋಕಾರ್ಪಣೆ
ಪಂಜಿಮೊಗರು-ವಿದ್ಯಾನಗರ ಪರಿಸರದಲ್ಲಿ ಸಾರ್ವಜನಿಕರೇ ನಿರ್ಮಿಸಿಕೊಂಡ ತಾತ್ಕಾಲಿಕ ತಂಗುದಾಣದಲ್ಲಿ ಸಮರ್ಪಕ ವ್ಯವಸ್ಥೆಗಳಿರಲಿಲ್ಲ. ಜನರ ಮನವಿಯ ಮೇರೆಗೆ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದಡಿ ಅಲ್ಲಿ ಇದೀಗ ನೂತನವಾಗಿ ಬಸ್ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿಕೊಡಲಾಗಿದೆ. ಕುಳಿತುಕೊಳ್ಳಲು ಆಕರ್ಷಕ ಹಾಗೂ ಸ್ವತಂತ್ರ ಆಸನಗಳು, ಮೇಲ್ಛಾವಣಿ, ಉತ್ತಮ ನೆಲಹಾಸು ಹಾಗೂ ಸ್ವಚ್ಛತೆಯ ಸಂದೇಶ ಸಾರುವ ಬೋರ್ಡುಗಳನ್ನು ತಂಗುದಾಣದಲ್ಲಿ ಕಾಣಬಹುದಾಗಿದೆ. ಸ್ವಚ್ಛ ಮಂಗಳೂರು ಪ್ರಧಾನ ಸಂಯೋಜಕ ದಿಲ್ರಾಜ್ ಆಳ್ವ ಹಾಗೂ ರಾಕೇಶ್ ನೇತೃತ್ವದಲ್ಲಿ ತಂಗುದಾಣದ ನಿರ್ಮಾಣವಾಗಿದೆ. ಎಂ ಆರ್ ಪಿ ಎಲ್ ಸಂಸ್ಥೆ ಪ್ರಾಯೋಜಕತ್ವ ಒದಗಿಸಿ ಸಹಕರಿಸಿದೆ. ೩೧ನೇ ಶ್ರಮದಾನದ ಪ್ರಯುಕ್ತ ಇಂದು ಅದನ್ನು ಜನತೆಯ ಉಪಯೋಗಕ್ಕಾಗಿ ಬಿಟ್ಟುಕೊಡಲಾಯಿತು. ಎಂ.ಆರ್.ಪಿ.ಎಲ್ ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ ಕಾರ್ಯಕರ್ತರಾದ ಮೋಹನ್ ಕೊಟ್ಟಾರಿ, ಭರತ್ ಚಂದ್ರ, ಜಗನ್ ಕೋಡಿಕಲ್, ಅವಿನಾಶ್ ಅಂಚನ್, ಮತ್ತು ಇನ್ನಿತರರು ಶ್ರಮದಾನದಲ್ಲಿ ಭಾಗವಹಿಸಿದರು. ಸ್ವಯಸೇವಕರಿಗೆ ಡಾ. ಎಂವಿ ಶೆಟ್ಟಿ ಕಾಲೇಜಿನಲ್ಲಿ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.