ಮಳೆನೀರು ಕೊಯ್ಲು ವ್ಯವಸ್ಥೆಗಳು ಇಂದಿನ ಸಮಯದ ಅಗತ್ಯವಾಗಿದ್ದರೂ ಕೂಡ ಅದನ್ನು ಕೈಗೆತ್ತಿಕೊಳ್ಳುವುದು ಒಂದು ದೊಡ್ಡ ಸವಾಲಿನ ಕಾರ್ಯವೇ ಆಗಿದೆ. ಕೆಲವರಿಗೆ, ಮಳೆನೀರು ಕೊಯ್ಲು ಹಣಕಾಸಿನ ಸಮಸ್ಯೆಯಿಂದ ಕೈಗೆಟುಕಲಾಗದ ತುತ್ತಾಗಿರಬಹುದು, ಮತ್ತೆ ಕೆಲವರಿಗೆ ಬಾಡಿಗೆ ಮನೆಗಳಲ್ಲಿ ಅಥವಾ ಅಂತಹ ಸ್ವತಂತ್ರ ವ್ಯವಸ್ಥೆಗಳನ್ನು ಹೊಂದಿರದ ಫ್ಲ್ಯಾಟ್ಗಳಲ್ಲಿ ವಾಸಿಸುವ ಕಾರಣ ಮಳೆ ನೀರು ಕೊಯ್ಲು ಮಾಡಲಾಗದೆ ಇರಬಹುದು.
ಚೆನ್ನೈನಲ್ಲಿ ಭೀಕರವಾದ ಬರಗಾಲದ ಸಂಭವಿಸಿರುವ ಹಿನ್ನೆಲೆಯಲ್ಲಿ, ನೂರಾರು ನಿವಾಸಿಗಳು ಮಳೆನೀರು ಕೊಯ್ಲು ಮಾಡಲು ಆಸಕ್ತಿ ವಹಿಸುತ್ತಿದ್ದಾರೆ. ಕೆಲವರು ಈಗಾಗಲೇ ಆರು ತಿಂಗಳ ಬಳಕೆಗಾಗಿ ಸಾಕಷ್ಟು ನೀರನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ, ಮತ್ತೆ ಕೆಲವರು ತಮ್ಮ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವನ್ನು ಪುನಃಸ್ಥಾಪಿಸಲು ರಾತ್ರಿ ಮತ್ತು ಹಗಲು ಎನ್ನದೆ ಕೆಲಸ ಮಾಡುತ್ತಿದ್ದಾರೆ.
ಈ ಆತಂಕದ ಪರಿಸ್ಥಿತಿಯಲ್ಲಿ, ಪ್ರತಿ ಹನಿ ನೀರು ಕೂಡ ಅತ್ಯಮೂಲ್ಯ ಎನಿಸಿಕೊಂಡಿದೆ. ನಮಗೆ ನಾವು ಬಳಸುವ ಶೇ.80ರಷ್ಟು ನೀರನ್ನು ಉಳಿಸಲು ಸಾಧ್ಯವಾಗುವುದಾದರೆ ನಾವು ಆ ಅವಕಾಶವನ್ನು ಯಾಕೆ ಬಳಸಿಕೊಳ್ಳಬಾರದು? ಈ ನೀರು ಉಳಿಸುವ ವಿಧಾನಗಳು ನಮಗೆ ಎಲ್ಲಾ ಆಯಾಮದಲ್ಲೂ ಸಹಕಾರಿಯಾಗಬಹುದು.
ಈ ನೀರಿನ ಸಂರಕ್ಷಕರ ಪೈಕಿ ಚೆನ್ನೈನ 45 ವರ್ಷದ ದಯಾನಂದ ಕೃಷ್ಣನ್ ಕೂಡ ಒಬ್ಬರು, ಮಳೆನೀರು ಕೊಯ್ಲಿನಲ್ಲಿ ಅಗ್ಗದ DIY ಆವಿಷ್ಕಾರವನ್ನು ಸೇರಿಸುವ ಮೂಲಕ ಇವರು ಕೇವಲ 10 ನಿಮಿಷಗಳಲ್ಲಿ 200 ಲೀಟರ್ ನೀರನ್ನು ಉಳಿಸಲು ಸಹಾಯ ಮಾಡಿದ್ದಾರೆ!
ಇಡೀ ವ್ಯವಸ್ಥೆಗೆ ಕೃಷ್ಣನ್ ಅವರಿಗೆ ತಗಲಿರುವ ವೆಚ್ಚ ಕೇವಲ ರೂ. 250.
ಈ ಬಗ್ಗೆ ಮಾತನಾಡಿರುವ ಕೃಷ್ಣನ್ ಅವರು, ಚೆನ್ನೈನಲ್ಲಿ ಸುಡುವ ಬಿಸಿಲು ಹಠಾತ್ತನೆ ಹೆಚ್ಚಾಗಿರುವುದು ನನ್ನನ್ನು ಮತ್ತೊಂದು ಸಮಸ್ಯೆಯ ಮುಂದೆ ಮುಖಾಮುಖಿಯಾಗುವಂತೆ ಮಾಡಿದೆ ಎಂದಿದ್ದಾರೆ.
“ತಮಿಳುನಾಡು ತೀವ್ರ ನೀರಿನ ಕೊರತೆಯಿಂದ ಬಳಲುತ್ತಿರುವಾಗ ಕೂಡ ನಿತ್ಯ ಸಾವಿರಾರು ಲೀಟರ್ ನೀರು ವ್ಯರ್ಥವಾಗುತ್ತಿವೆ. ಈ ಶುದ್ಧ ನೀರನ್ನು ಉಳಿಸಲು ನನ್ನ ವೈಯಕ್ತಿಕ ಸಾಮರ್ಥ್ಯವನ್ನು ಬಳಸಿಕೊಂಡು ಏನಾದರೂ ಮಾಡುವುದು ನನಗೆ ಅನಿವಾರ್ಯವಾಗಿತ್ತು”ಎಂದು ಅವರು ಹೇಳುತ್ತಾರೆ.
ಎಂಜಿನಿಯರ್ ಆಗಿರುವ ಕೃಷ್ಣನ್ ಅವರು ಮಳೆಕೊಯ್ಲು ಮಾಡಲು ಕಂಡು ಹಿಡಿದಿರುವ ಆವಿಷ್ಕಾರಕ್ಕೆ ಯಾವುದೇ ಪ್ಲಂಬರ್ ಅಥವಾ ತಜ್ಞರ ಅಗತ್ಯ ಇಲ್ಲ. ಯಾರು ಬೇಕಾದರೂ ಇದನ್ನು ತಮ್ಮ ಮನೆಗಳಲ್ಲಿ ಅಳವಡಿಸಿಕೊಳ್ಳಬಹುದು.
ಈಗಾಗಲೇ ಮನೆಯಲ್ಲಿ ಡ್ರಮ್ ಹೊಂದಿದ್ದರೆ, ಕೇವಲ ಮೂರು ಅಡಿ ಪಿವಿಸಿ ಪೈಪ್, ಎರಡು ಪೈಪ್ ಬೆಂಡ್ ಮತ್ತು ಬಟ್ಟೆ ಫಿಲ್ಟರ್ ಖರೀದಿಸಬೇಕಾಗುತ್ತದೆ. 400 ಚದರ ಅಡಿ ವಿಸ್ತೀರ್ಣದ ಟೆರೇಸ್ ಮೇಲೆ ಕನೆಕ್ಷನ್ ಪಾಯಿಂಟ್ ನಿರ್ಮಿಸಿ ಅದಕ್ಕೆ ಪೈಪ್ ಗಳನ್ನು ಜೋಡಿಸಬೇಕು. ಪೈಪಿನ ಇನ್ನೊಂದು ತುದಿಯನ್ನು ಡ್ರಮ್ಗೆ ಸಂಪರ್ಕಿಸಬೇಕು, ಬಟ್ಟೆಯ ಫಿಲ್ಟರ್ನೊಂದಿಗೆ ಅದನ್ನು ಸೆಕ್ಯೂರ್ ಮಾಡಬೇಕು.
“ಪ್ರತಿ ಟೆರೇಸ್ ಮತ್ತು ಹೆಚ್ಚಿನ ಬಾಲ್ಕನಿಗಳು ನೀರನ್ನು ಹೊರಹಾಕಲು ಎಕ್ಸಿಟ್ ಪೈಪ್ ಅನ್ನು ಹೊಂದಿರುತ್ತವೆ, ಅದು ನೀರನ್ನು ಹೊರಹಾಕುತ್ತದೆ. ನನ್ನ ಟ್ರಿಕ್ ಈ ಪೈಪ್ಗಳ ಅಂತ್ಯವನ್ನು ಸುರಕ್ಷಿತಗೊಳಿಸುವುದು ಮತ್ತು ಡ್ರಮ್ಗಳಲ್ಲಿ ನೀರನ್ನು ಸಂಗ್ರಹಿಸುವುದು ಮಾತ್ರ. ಸ್ಪಷ್ಟ ಕಾರಣಗಳಿಗಾಗಿ ನಾನು ಬಟ್ಟೆ ಫಿಲ್ಟರ್ ಅನ್ನು ಹಾಕಿದ್ದೇನೆ. ಜೂನ್ 26 ರಂದು ಚೆನ್ನೈ ಭಾರಿ ಮಳೆ ಬೀಳುವಿಕೆಯನ್ನು ಸ್ವಾಗತಿಸಿದಾಗ, ಮಳೆನೀರು ಕೊಯ್ಲು ವ್ಯವಸ್ಥೆಯು ಸುಲಲಿತವಾಗಿ ತನ್ನ ಕೆಲಸವನ್ನು ಮಾಡಿತು, ”ಎಂದು ಅವರು ಹೇಳುತ್ತಾರೆ.
ಮಳೆ ಬಿದ್ದ 10 ನಿಮಿಷಗಳಲ್ಲಿ 225 ಲೀಟರ್ ನೀರು ಸಂಗ್ರಹವಾಯಿತು. ಇದು 2-3 ದಿನಗಳಿಗೆ ಸಾಕಾಗುವಷ್ಟಾಗಿದೆ ಎಂದಿದ್ದಾರೆ.
ನಾವು ವಾಸಿಸುವ ಪ್ರದೇಶದಲ್ಲಿ ವಾರಕ್ಕೊಮ್ಮೆ ಪುರಸಭೆಯ ನೀರು ಪೂರೈಕೆಯಾಗುತ್ತದೆ. ನೀರು ಸಂಗ್ರಹದ ವೇಳೆ ಜಾಗರೂಕರಾಗಿರದಿದ್ದರೆ, ನೀರು ನಾಲ್ಕು ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನುವ ಕೃಷ್ಣನ್, ನಮ್ಮ ಶೇಖರಣಾ ವ್ಯವಸ್ಥೆಯಿಂದಾಗಿ ಮೂವರು ಸದಸ್ಯರ ಕುಟುಂಬಕ್ಕೆ ತಮ್ಮ ದೈನಂದಿನ ಅಗತ್ಯಗಳಾದ ಬಟ್ಟೆ ಮತ್ತು ಪಾತ್ರೆಗಳನ್ನು ತೊಳೆಯಲು, ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಫ್ಲಶಿಂಗ್ ಮಾಡಲು ನೀರು ಸಾಕಾಗುತ್ತದೆ. ಕುಡಿಯುವುದು ಮತ್ತು ಅಡುಗೆ ಮಾಡುವುದು ನಮ್ಮ ದೈನಂದಿನ ನೀರಿನ ಅಗತ್ಯಗಳಲ್ಲಿ ಕೇವಲ 20 ಶೇಕಡಾ ಮಾತ್ರ ಆಗಿರುತ್ತದೆ. ಬಹುತೇಕ ನೀರು ಬೇರೆ ಕೆಲಸಗಳಿಗಾಗಿಯೇ ವಿನಿಯೋಗ ಆಗುತ್ತದೆ ಎಂದು ಅವರು ಹೇಳುತ್ತಾರೆ.
ಈ ವ್ಯವಸ್ಥೆಯು ಫ್ಲ್ಯಾಟ್ಗಳು ಮತ್ತು ಸ್ವತಂತ್ರ ಮನೆಗಳಿಗೆ, ಸಣ್ಣ ಕುಟುಂಬಗಳಿಗೆ ಮತ್ತು ದೊಡ್ಡ ಕುಟುಂಬ ಎಲ್ಲದಕ್ಕೂ ಉಪಯೋಗಕಾರಿಯಾಗಿದೆ. ಕೃಷ್ಣನ್ ಅವರು ತಮ್ಮ ಮನೆಯಲ್ಲಿ ಅಳವಡಿಸಿಕೊಂಡಿರುವ ಈ ವಿಧಾನವನ್ನು ಅವರ ಕೆಲವು ಸ್ನೇಹಿತರು ಅನುಸರಿಸಿದ್ದಾರೆ. ಅವರೆಲ್ಲರಿಗೂ ಇದರಿಂದ ಪ್ರಯೋಜನವಾಗುತ್ತಿದೆ.
ಈ ವಿಧಾನವನ್ನು ಅನುಸರಿಸಲು ನಾವು ಮಾಡಬೇಕಾಗಿರುವುದು ಇಷ್ಟೇ. ಟೆರೇಸ್ / ಬಾಲ್ಕನಿಯ ವಾಟರ್ ಎಕ್ಸಿಟ್ ಪೈಪ್ಗಳನ್ನು ಪಿವಿಸಿ ಪೈಪ್ಗಳೊಂದಿಗೆ ಸಂಪರ್ಕಿಸುವುದು ಮತ್ತು ಅವುಗಳನ್ನು ಸಂಪ್ ಅಥವಾ ಡ್ರಮ್ಗಳಿಗೆ ಕನೆಕ್ಟ್ ಮಾಡುವುದು. ಸಂಗ್ರಹಣಾ ಸ್ಥಳ ಮತ್ತು ಡ್ರಮ್ ನಡುವಿನ ಅಂತರವನ್ನು ಅವಲಂಬಿಸಿ, ನಾವು ಕೃಷ್ಣನ್ಗಿಂತ ಹೆಚ್ಚು ಅಥವಾ ಕಡಿಮೆ ವ್ಯಯದಲ್ಲಿ ಇದನ್ನು ಅಳವಡಿಸಿಕೊಳ್ಳಬಹದು. ಈ ವ್ಯವಸ್ಥೆಯನ್ನು ಅಳವಡಿಸಲು ತಜ್ಞರ ಅಥವಾ ಪ್ಲಂಬರ್ನ ಅಗತ್ಯವಿಲ್ಲ. ಆದರೂ ತಜ್ಞರ ಮಾರ್ಗದರ್ಶನ ಪಡೆಯುವುದರಿಂದ ನೀರು ಸರಾಗವಾಗಿ ಹರಿಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.