ಕಾನ್ಪುರ: ದೇಶದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿರುವ ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ-ಕಾನ್ಪುರ) ವಿಶೇಷ ವೈದ್ಯಕೀಯ ಶಿಕ್ಷಣಕ್ಕೂ ಕಾಲಿಡುತ್ತಿದೆ. ಬಯೋ ಎಂಜಿನಿಯರಿಂಗ್ ಮತ್ತು ಬಯೋಸೈನ್ಸಿನಲ್ಲಿ ತನ್ನ ಸಂಶೋಧನೆಯನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ತನ್ನದೇ ಆದ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಸ್ಥಾಪಿಸಲು ಅದು ಯೋಜಿಸಿದೆ.
ಯೋಜನೆಗೆ ಅನುಮೋದನೆ ಸಿಕ್ಕರೆ ಎಂಜಿನಿಯರಿಂಗ್ ಕಾಲೇಜು ಸಮೀಪದ ಶಿವ್ಲಿ ಪ್ರದೇಶದಲ್ಲಿನ 20 ಎಕರೆ ಜಮೀನಿನಲ್ಲಿ ಒಟ್ಟು 800 ಕೋಟಿ ರೂ.ಗಳ ವೆಚ್ಚದಲ್ಲಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಿರುವುದಾಗಿ ಐಐಟಿ-ಕಾನ್ಪುರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಪ್ರಸ್ತುತ ಯೋಜನೆಯು ಪ್ರಸ್ತಾವನೆಯ ಹಂತದಲ್ಲಿದೆ ಮತ್ತು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾದ ನಂತರ ಯೋಜನೆ ಒಂದು ಆಕಾರವನ್ನು ಪಡೆಯಲಿದೆ” ಎಂದು ಐಐಟಿ-ಕಾನ್ಪುರದ ನಿರ್ದೇಶಕ ಅಭಯ್ ಕರಂದಿಕರ್ ಹೇಳಿದ್ದಾರೆ.
ಈ ಯೋಜನೆಯ ಮೇಲ್ವಿಚಾರಣೆಗಾಗಿ ಕರಂದಿಕರ್ ಅವರು, ಸಂಶೋಧನೆ ಮತ್ತು ಅಭಿವೃದ್ಧಿಯ ಡೀನ್ ಆಗಿರುವ ಎಸ್. ಗಣೇಶ್ ಅವರ ನೇತೃತ್ವದಲ್ಲಿ ಐದು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಪ್ರದೀಪ್ ಸಿನ್ಹಾ, ಓಂಕರ್ ದೀಕ್ಷಿತ್, ಸಂದೀಪ್ ವರ್ಮಾ ಮತ್ತು ಅಮಿತಾಬ್ ಬಂದೋಪಾಧ್ಯಾಯ ಸಮಿತಿಯ ಇತರ ಸದಸ್ಯರಾಗಿದ್ದಾರೆ. ಟಾಟಾ ಟ್ರಸ್ಟ್ಗಳ ತಜ್ಞರ ಸಹಯೋಗದೊಂದಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸಮಿತಿಗೆ ಸೂಚಿಸಲಾಗಿದೆ.
ವಿಸ್ತೃತ ಯೋಜನಾ ವರದಿ ಸಿದ್ಧವಾದ ಬಳಿಕ ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಮತ್ತು ಕೇಂದ್ರದ ಅನುಮೋದನೆ ಸಿಕ್ಕ ಬಳಿಕ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣದ ಕಾರ್ಯ ಪ್ರಾರಂಭವಾಗುತ್ತದೆ ಎಂದು ಕರಂದಿಕರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.