ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದೆ, ಇದರಿಂದಾಗಿ ಜನರು ಎಲ್ಲಾ ಕೆಲಸಗಳಿಗೂ ಕಡಿಮೆ ನೀರು ಬಳಕೆಯ ಪರ್ಯಾಯ ಮಾರ್ಗವನ್ನು ಕಂಡುಹಿಡಿಯುವ ಅನಿವಾರ್ಯತೆಗೆ ಸಿಲುಕಿಕೊಂಡಿದ್ದಾರೆ. ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಇಲ್ಲಿನ ಹೆಚ್ಚಿನ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಪ್ಲೇಟ್ಗಳ ಬದಲು ಹಳೆಯ ಸಾಂಪ್ರದಾಯಿಕ ಮಾದರಿಯಾದ ಬಾಳೆ ಎಲೆಯಲ್ಲಿ ಊಟ ತಿಂಡಿಗಳನ್ನು ಬಡಿಸುತ್ತಿವೆ.
ಬಾಳೆ ಎಲೆ ಅಥವಾ ಸ್ಟೀಲ್ ತಟ್ಟೆಯ ಮೇಲೆ ಬಾಳೆ ಎಲೆಯನ್ನು ಇಟ್ಟು ಅದರಲ್ಲಿ ಆಹಾರಗಳನ್ನಿಟ್ಟು ಗ್ರಾಹಕರಿಗೆ ಸರ್ವ್ ಮಾಡಲಾಗುತ್ತಿದೆ. ಚಿಕ್ಕ ಹೋಟೆಲ್ನಿಂದ ಹಿಡಿದು ದೊಡ್ಡ ಹೋಟೆಲ್ಗಳವರೆಗೂ ಇದೇ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇದರಿಂದ ತಟ್ಟೆ ತೊಳೆಯುವ ಪ್ರಮೇಯ ಇರುವುದಿಲ್ಲ, ಇದರಿಂದ ಸಾಕಷ್ಟು ನೀರಿನ ಉಳಿತಾಯವೂ ಆಗುತ್ತದೆ. ಮಾತ್ರವಲ್ಲದೇ ಬಾಳೆ ಎಲೆಗಳು ಪರಿಸರ ಸ್ನೇಹಿಯೂ ಆಗಿವೆ.
ಫುಡ್ ಆರ್ಡರ್ ಮಾಡುವಾಗ ಹೆಚ್ಚುವರಿ ತಟ್ಟೆಗಳಿಗಾಗಿ ಮನವಿ ಮಾಡಿಕೊಳ್ಳಬೇಡಿ ಎಂಬ ಮನವಿಯನ್ನೂ ಗ್ರಾಹಕರಿಗೆ ಈ ಹೋಟೆಲ್ಗಳು ಮಾಡುತ್ತಿವೆ. ಎಲ್ಲಾ ತಿನಿಸುಗಳನ್ನು ಒಂದೇ ತಟ್ಟೆ ಅಥವಾ ಎಲೆಯಲ್ಲಿ ಸರ್ವ್ ಮಾಡಲಾಗುತ್ತಿದೆ.
ಕೆಲವೊಂದು ಹೋಟೆಲ್ಗಳು ಸಮುದ್ರದ ನೀರನ್ನು ಕೈ ತೊಳೆಯುದಕ್ಕಾಗಿ ಇಟ್ಟಿವೆ. ‘ಉಪ್ಪು ನೀರು’ ಎಂದು ಬೋರ್ಡ್ ಹಾಕಿ ಈ ನೀರನ್ನು ಕೈ ತೊಳೆಯಲು ನೀಡಲಾಗುತ್ತಿದೆ.
ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ತಮಿಳುನಾಡು, ಕರ್ನಾಟಕಗಳಲ್ಲಿ ಹಿಂದಿನಿಂದಲೂ ಶುಭ ಕಾರ್ಯಗಳಲ್ಲಿ ಬಾಳೆ ಎಲೆಯಲ್ಲೇ ಊಟ ಬಡಿಸುವ ಸಂಪ್ರದಾಯವಿದೆ. ಈಗಲೂ ಅದನ್ನು ಹಲವಾರು ಮಂದಿ ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ ಈಗ ನೀರಿನ ಕೊರತೆಯಿಂದಾಗಿ ಬಾಳೆ ಎಲೆ ಮತ್ತೆ ಪ್ರಸಿದ್ಧಿಗೆ ಬರುತ್ತಿದೆ.
ಇನ್ನೊಂದೆಡೆ ಪ್ಲಾಸ್ಟಿಕ್ ಬದಲು ಫುಡ್ ಪ್ಯಾಕಿಂಗ್ ಮಾಡಲು ಬಾಳೆ ಎಲೆಗಳನ್ನು ಬಳಸಬೇಕು ಎಂಬ ಕೂಗು ಕೂಡಾ ಕೇಳಿ ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.