ನವದೆಹಲಿ: ಮತ್ತಷ್ಟು ಬಲಶಾಲಿಯಾಗುವ ನಿಟ್ಟಿನಲ್ಲಿ ದಾಪುಗಾಲನ್ನು ಇಟ್ಟಿರುವ ಭಾರತೀಯ ಸೇನೆಯು, ಮಿರಾಜ್ 2000 ಯುದ್ಧವಿಮಾನವನ್ನು ಅಪ್ಗ್ರೇಡ್ ಮಾಡುವ ಮತ್ತು 5ನೇ ತಲೆಮಾರಿನ ಲಘು ಯುದ್ಧ ವಿಮಾನವನ್ನು ಹೊಂದುವ ಹಾದಿಯಲ್ಲಿದೆ. ಇದರಿಂದಾಗಿ ವಾಯುಸೇನೆಯ ತಾಂತ್ರಿಕ ವಿಭಜನೆಯು ನಿವಾರಣೆಯಾಗಲಿದೆ ಮತ್ತು ಬಲಿಷ್ಠ ಶಸ್ತ್ರಾಸ್ತ್ರವನ್ನು ಇದು ಖಾತ್ರಿಪಡಿಸುತ್ತದೆ.
ಚೀನಾ ಮತ್ತು ರಷ್ಯಾದಂತಹ ದೇಶಗಳು ಈಗಾಗಲೇ 5 ನೇ ತಲೆಮಾರಿನ ಯುದ್ಧವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದಿರುವ ವೆಸ್ಟರ್ನ್ ಏರ್ ಕಮಾಂಡಿನ ವಾಯು ಅಧಿಕಾರಿ ಕಮಾಂಡಿಂಗ್-ಇನ್-ಚೀಫ್ ಏರ್ ಮಾರ್ಷಲ್ ರಘುನಾಥ್ ನಂಬಿಯಾರ್ ಅವರು, ಭಾರತವೂ ಈ ನಿಟ್ಟಿನಲ್ಲಿ ಹೆಜ್ಜೆಯಿರಿಸುವ ಅವಶ್ಯಕತೆ ಇದೆ ಎಂಬುದನ್ನು ಪ್ರತಿಪಾದಿಸಿದ್ದಾರೆ.
ಭಾರತೀಯ ವಾಯುಪಡೆಯು 5 ನೇ ತಲೆಮಾರಿನ ಲಘು ಯುದ್ಧ ವಿಮಾನವನ್ನು ತಯಾರಿಸುವ ಪ್ರಕ್ರಿಯೆಯಲ್ಲಿದ್ದು, ಅದರ ಮೂಲಮಾದರಿಯು 10 ವರ್ಷಗಳಲ್ಲಿ ಸಿದ್ಧವಾಗಲಿದೆ ಎಂದಿದ್ದಾರೆ.
ಫೆಬ್ರವರಿ 26 ರಂದು ಪಾಕಿಸ್ಥಾನದ ಬಾಲಕೋಟ್ನ ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಲು ಬಳಸಲಾಗಿದ್ದ ಮಿರಾಜ್ 2000 ಯುದ್ಧ ವಿಮಾನವು ನವೀಕರಣಗೊಳ್ಳುತ್ತಿದೆ ಎಂದು ವಾಯುಸೇನೆಯ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸೆಂಟ್ರಲ್ ಏರ್ ಕಮಾಂಡಿನ ಏರ್ ಮಾರ್ಷಲ್ ರಾಜೇಶ್ ಕುಮಾರ್ ಪ್ರಕಾರ, ನವೀಕರಣ ಕಾರ್ಯವು ಮಿರಾಜ್ 2000ನ ಜೀವಿತಾವಧಿಯನ್ನು 20 ವರ್ಷಗಳವರೆಗೆ ವಿಸ್ತರಿಸಲಿದೆ ಎಂದಿದ್ದಾರೆ.
ಗ್ವಾಲಿಯರ್ ವಾಯುಪಡೆಯ ನೆಲೆಯಲ್ಲಿ 20 ವರ್ಷಗಳ ಕಾರ್ಗಿಲ್ ಯುದ್ಧದ ಸ್ಮರಣಾರ್ಥ ನಡೆದ ಪತ್ರಿಕಾಗೋಷ್ಠಿಯಲ್ಲಿ ಏರ್ ಚೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ, ಏರ್ ಮಾರ್ಷಲ್ ನಂಬಿಯಾರ್ ಮತ್ತು ಏರ್ ಮಾರ್ಷಲ್ ಕುಮಾರ್ ಮಾತನಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.