ಸುಮಾರು ನೂರೈವತ್ತು ವರ್ಷಗಳ ಹಿಂದಿನ ಮಾತು. ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಕಾಲ. ಮಧ್ಯ ಪ್ರದೇಶದ ಒಂದು ಜಿಲ್ಲೆ. ಕಲೆಕ್ಟರ್ ಸ್ಲೀಮೆನ್ ತನ್ನ ಪ್ರವಾಸದಲ್ಲಿ ಒಮ್ಮೆ ಗೊಂಡ್ವಾನದ ಬೆಟ್ಟಗಾಡಿಗೆ ಬಂದ, ಸುತ್ತ ಬೆಟ್ಟಗಳು ಹಬ್ಬಿದ ರಮ್ಯವಾದ, ಪ್ರಶಾಂತವಾದ ಒಂದು ಕಣಿವೆ. ಮಧ್ಯೆ ಒಂದು ಸಮಾಧಿ. ಅದರ ಮುಂದೆ ಸೊಗಸಾದ ದುಂಡನೆಯ ಬಿಳಿಯ ಕಲ್ಲುಗಳ ರಾಶಿ. ಬಂದವರೆಲ್ಲ ಎರಡೆರಡು ಅಂತಹ ಆಯ್ದ ಕಲ್ಲುಗಳನ್ನು ಸಮಾಧಿಯ ಮುಂದಿರಿಸಿ ನಮಸ್ಕರಿಸುವುದು ವಾಡಿಕೆ. ಹೋದಲ್ಲೆಲ್ಲ ಒಂದೊಂದು ಸ್ಥಳ ಚರಿತ್ರೆಯನ್ನು ಕೇಳುತ್ತಿದ್ದ ಕಲೆಕ್ಟರ್ ಸಾಹೇಬನಿಗೆ ಇದರ ಬಗ್ಗೆಯೂ ಕುತೂಹಲವುಂಟಾಯಿತು. ಜೊತೆಯಲ್ಲಿದ್ದ ದೇಶೀಯರು ಅದರ ಸೋಜಿಗದ ಕತೆ ಹೇಳಿದರು.
ಶೂರಳಾದ ರಾಣಿ
ಆಗ್ಗೆ ಇನ್ನೂರೈವತ್ತು ವರ್ಷಗಳ ಹಿಂದೆ ಗೊಂಡ್ವಾನ ರಾಜ್ಯವನ್ನಾಳಿದ ರಾಣಿ ದುರ್ಗಾವತಿಯ ಸಮಾದಿ ಅದು. ಆಕೆಯ ಪ್ರಜಾವಾತ್ಸಲ್ಯ ಅಸದೃಶ್ಯವಾದುದು. ರೂಪ, ಗುಣ,ಬುದ್ಧಿ, ಒಳ್ಳೆಯ ಹೃದಯ, ಶೌರ್ಯ ಪರಾಕ್ರಮ ಎಲ್ಲವೂ ಆಕೆಯಲ್ಲಿದ್ದವು. ಜನರಿಗೆ ಆಕೆಯಲ್ಲಿ ಅಪಾರವಾದ ಭಕ್ತಿ. ಆಕೆಯ ದಕ್ಷವಾದ ಆಡಳಿತದಲ್ಲಿ ನಾಡು ಸುಭಿಕ್ಷವಾಗಿತ್ತು; ನೆಮ್ಮದಿಯಾಗಿತ್ತು ಆಕೆಯ ಲೋಕಕಾರುಣದಯ ಮತ್ತು ಪರಾಕ್ರಮದ ಕತೆಗಳು ಜನಜನಿತವಾಗಿದ್ದವು. ಗೊಂಡ್ವಾನದ ಕೀರ್ತಿ ಬಹು ದೂರದವರೆಗೂ ಹಬ್ಬಿತ್ತು. ಸಾಮ್ರಾಜ್ಯದ ವಿಸ್ತರಣೆಯ ದಾಹದಿಂದ ಆಕ್ರಮಣ ಮಾಡಿದ ಮೊಗಲ್ ಚಕ್ರವರ್ತಿ ಅಕ್ಬರನಿಗೂ ತಲೆಬಾಗದೆ ಎರಡು ಬಾರಿ ಆತರ ಸೇನೆಯನ್ನು ಸೋಲಿಸಿ ಹಿಮ್ಮೆಟ್ಟಿಸಿದಳು. ಕಡೆಯ ಕದನದಲ್ಲಿ ಹೋರಾಡುತ್ತ ವೀರಮರಣವನ್ನಪ್ಪಿದಳು.
ಸೋತ ಗೊಂಡ್ವಾನದ ಸಂಪತ್ತು, ವೈಭವ ಎಲ್ಲ ಅಳಿದುಹೋದವು. ಗೆದ್ದ ಮೊಗಲ್ ಸಾಮ್ರಾಜ್ಯವೂ ಕಾಲಕ್ರಮದಲ್ಲಿ ಅಳಿದುಹೋಯಿತು. ಆದರೆ ರಾಣಿಯ ವೀರಗತೆ ಮಾತ್ರ ಅಚ್ಚಳಿಯದೆ ಜನಮನದಲ್ಲಿ ಉಳಿಯಿತು. ಜನತೆಯ ಭಕ್ತಿ ಗೌರವಗಳ ಸಾಕ್ಷಿಯಾಗಿ ಮತ್ತು ಆಕೆಯ ನೆನಪಾಗಿ ಇದೊಂದು ನಿರಾಡಂಬರವಾದ ಸಮಾಧಿ ಈಗಲೂ ಇದೆ. ಆಕೆಯ ಸೇವೆಯನ್ನು ಕಡೆಯವರೆಗೂ ನಿಷ್ಠೆಯಿಂದ ಮಾಡಿ ಮಡಿದ ಆನೆಯ ಮತ್ತು ಮಾಹುತ ಗಣೇಶನ ಸಮಾಧಿಗಳೂ ಅಲ್ಲೇ ಇವೆ. ಹಿಂದೆ ಯುದ್ಧ ಒದಗಿದಾಗಲೆಲ್ಲ ನಾಡಿನ ಸ್ವಾತಂತ್ಯ್ರ ರಕ್ಷಣೆಗೆ ಕರೆ ನೀಡುವಂತೆ ರಾಣಿ ಹೊಡೆಸುತ್ತಿದ್ದ ರಣಭೇರಿಗಳೂ ಈಗ ಇಲ್ಲಿ ಕಲ್ಲಾಗಿ ನಿಂತಿವೆ. ಈಗಲೂ ಹುಣ್ಣಿಮೆಯ ರಾತ್ರಿ ಬೆಟ್ಟಕಾಡುಗಳ ಮೇಲೆಲ್ಲ ಬೆಳದಿಂಗಳು ಸುರಿವಾಗ ಈ ಸಗಾರಿಗಳ ಸದ್ದು ಕೇಳೂತ್ತದೆ; ಸುತ್ತ ಸಾವಿರ ಸಮಾಧಿಗಳಿಂದ ರಾಣಿಯ ಶೂರ ಸೈನಿಕರು ಮೇಲೇಳುತ್ತಾರೆ; ರಣರಂಗದ ಕಡೆ ಸಾಗುವ ಹೆಜ್ಜೆ ಸದ್ದು ಕೇಳುತ್ತದೆ – ಹೀಗೆ ಈಗಲೂ ಜನರು ನಂಬುತ್ತಾರೆ ಎಂಬುದನ್ನು ಬಹು ಹಿಂದೆ ಕೇಳಿದ ಬ್ರಿಟಿಷ್ ಸೈನ್ಯಾಧಿಕಾರಿ ಕರ್ನಲ್ ಯೂಲ್ ಎಂಬಾತ ಹತ್ತಿರದ ತೊರೆಯಲ್ಲಿ ಹೇರಳವಾಗಿದ್ದ ದುಂಡನೆಯ ಕಲ್ಲಿಗಳಲ್ಲಿ ಎರಡು ಸೊಗಸಾದ ಬಿಳಿಯ ಕಲ್ಲಿಗಳನ್ನು ಆರಿಸಿ ತಂದು ಸಮಾಧಿಯ ಮುಂದಿರಿಸಿದ. ಗೌರವದಿಂದ ತಲೆಬಾಗಿ ನಮಸ್ಕರಿಸಿದನಂತೆ. ಅಂದಿನಿಂದ ಅದೇ ವಾಡಿಕೆಯಾಗಿ ಶುಭ್ರವಾದ ಬಿಳಿಯ ಕಲ್ಲುಗಳ ರಾಶಿ ಬೆಳೆಯಿತಂತೆ.
ಈ ಕತೆ ಕೇಳೀದ ಕಲೆಕ್ಟರ್ ಸ್ಲೀಮೆನ್ ನ ಮೈ ಪುಲಕಿತವಾಯಿತು. ಇನ್ನೂರೈವತ್ತು ವರ್ಸಗಳಾದರೂ ಜನತೆಯ ಹೃದಯದಲ್ಲಿ ಜೀವಂತವಾಗಿರುವ ರಾಣಿ ದಿಟವಾಗಿಯೂ ಮಹಾ ವ್ಯಕ್ತಿ ಎಂದೆನಿಸಿತು.
ಸ್ವಾರ್ಥಕ್ಕಿಂತ ಜನತೆಯ ಹಿತ ದೊಡ್ಡದು. ದೇಶಕ್ಕಾಗಿ ಮಾಡುವ ಯಾವ ಸೇವೆಯೂ ಕೀಳಲ್ಲ. ಯಾವ ತ್ಯಾಗವೂ ದೊಡ್ಡದಲ್ಲ. ಹೀಗೆ ತಿಳಿದು ನಡೆದವರ ನಿದರ್ಶನಗಳು ನಮ್ಮ ದೇಶದ ಇತಿಹಾಸದಲ್ಲಿ ಬೇಕಾದಷ್ಟು ಸಿಕ್ಕುತ್ತವೆ. ಹಾಗೆಯೆ ದೇಶವನ್ನು ನಾನಾ ಸಂಕಟಗಳಿಗೂ ಅವಮಾನಕ್ಕೂ ದೂಡಿದ ಸ್ವಾರ್ಥಿಗಳ ಮತ್ತು ದ್ರೋಹಿಗಳ ಕತೆಗಳೂ ಸೇರೆಕೊಂಡಿವೆ. ರಾಷ್ಟ್ತಭಕ್ತಿ, ಧರ್ಮನಿಷ್ಠೆಗಳಿಲ್ಲದ ಯಾವ ಜನತೆಯೂ ತಲೆಯೆತ್ತಿ ಬಾಳಲಾರದು ಎಂಬುದು ಮಾತ್ರ ಇತಿಹಾಸ ಸಾರುವ ನಿತ್ಯಸತ್ಯವಾಗಿದೆ.
ದುರ್ಗಾವತಿ ಭಾರತದ ವೀರಮಹಿಳಾಮಣಿಯರಲ್ಲಿ ಉಜ್ವಲ ಪ್ರಭೆಯ ಒಂದು ರತ್ನ. ಎಷ್ಟೇ ಶಕ್ತಿ ಸಂಪನ್ನಳಾದರೂ ಪರರ ನೆಲಕ್ಕಾಗಲಿ, ಧನಕ್ಕಾಗಿಲಿ, ಎಂದೂ ಆಸೆ ಪಡಲಿಲ್ಲ. ಸ್ವದೇಶ, ಸ್ವಾಭಿಮಾನಗಳನ್ನು ಎಂದೂ ಬಿಟ್ಟು ಕೊಡಲಿಲ್ಲ. ಮೊಗಲ್ ಸಾಮ್ರಾಜ್ಯ ಶಕ್ತಿಗೂ ಮಣಿಯದ ವೀರಶ್ರೀ ಆಕೆ. ಅಬುಲ್ ಫಜಲ್ “ಅಕ್ಬರ್ ನಾಮಾ” ಗ್ರಂಥದಲ್ಲಿ ರಾಣಿ ದುರ್ಗಾವತಿಯನ್ನು ಕುರಿತು ಬರೆಯುವಾಗ ಅಕ್ಬರನನ್ನೂ ಮರೆತು ಆಕೆಯ ಗುಣಗಾನ ಮಾಡಿದ್ದಾನೆ.
ಗೊಂಡ್ವಾನ ಈಗಿನ ಮಧ್ಯ ಪ್ರದೇಶದ ಉತ್ತರದ ಒಂದು ಭಾಗ. ಪರ್ವತಾವಳಿಗಳಿಂದಲೂ ದಟ್ಟವಾದ ಕಾಡಿನಿಂದಲೂ ಶತ್ರುಗಳಿಗೆ ದುರ್ಗಮವಾದ ಪ್ರದೇಶ. ಹದಿನಾರನೆಯ ಶತಮಾನದಲ್ಲಿ ಎಪ್ಪತ್ತು ಸಾವಿರ ಹಳ್ಳಿ, ಪಟ್ಟಣಗಳಿಂದ ತುಂಬಿದ ವಿಸ್ತಾರವಾದ ರಾಜ್ಯವಾಗಿತ್ತು; ಸಂಪದ್ಭರಿತವಾಗಿತ್ತು. ಆದರೆ ಒಂದು ಅಖಂಸ ಆಡಳಿತಕ್ಕೆ ಒಳಪಟ್ಟಿರಲಿಲ್ಲ. ಅನೇಕ ಪಾಳೆಯಪಟ್ಟುಗಳಿದ್ದವು. ಅವುಗಳಲಲ್ಲೆ ಚಾಂದೇಲರ ದೊರೆ ಕೀರ್ತಿಸಿಂಹ ಪ್ರಬಲನಾಗಿದ್ದ. ಆತ ಪರಾಕ್ರಮಿ. ಸದ್ಗುಣಿ ಆಡಳಿತದಲ್ಲಿ ದಕ್ಷ. ಪ್ರಜಾನುಸಾರವಾಗಿ. ಬಾಂದಾ ಜಿಲ್ಲೆಯ ಕಾಲಂಜರ ದುರ್ಗ ಆತನ ರಾಜಧಾನಿಯಾಗಿತ್ತು. ಆತನಿಗೆ ಮಕ್ಕಳೀಲಿಲ್ಲದಿರುವದೇ ದೊಡ್ಡ ಚಿಂತೆಯಾಗಿತ್ತು.
ದುರ್ಗೆಯ ವರ
ಮುನಿಯಾದೇವಿ ಚಾಂದೇಲ ರಾಜವಂಶದ ಕುಲ ದೇವತೆ. ಸಾಕ್ಷಾತ್ ದುರ್ಗೆಯ ಅವತಾರ. ಆಕೆ ಕರುಣಾಮಯಿ. ಶತ್ರುಗಳಿಂದಲೂ ನಾನಾ ಪಿಡುಗುಗಳಿಂದಲೂ ತಮ್ಮನ್ನು ರಕ್ಷಿಸುವ ತಾಯಿ ಎಂದು ಇಡೀ ಗೊಂಡ್ವಾನದ ಜನರೆಲ್ಲ ಆರಾಧಿಸುತ್ತಿದ್ದರು. ಮನಿಯಾಗಡದಲ್ಲಿ ಆಕೆಯ ದೊಡ್ಡ ಮಂದಿರವಿತ್ತು. ಪ್ರತಿವರ್ಷವೂ ಅಲ್ಲಿ ಭಾರಿ ಜಾತ್ರೆಯಾಗುತ್ತಿತ್ತು. ಮನೆಯಾಗಡದ ರಾಜಾಗೌಂಡನಾಗಿದ್ದ ಸಂಗ್ರಾಮಸಿಂಹ ಕೀರ್ತಿಸಿಂಹನ ನೆಚ್ಚಿನ ಮಿತ್ರ. ದೇವಿಯ ಉತ್ಸವಕ್ಕೆಂದು ಹೋದಾಗ ಆತನ ವಿಶೇಷವಾದ ಆದರಾತಿಥ್ಯ ಕೀರ್ತಿಸಿಂಹನಿಗೆ ಲಭಿಸುತ್ತಿತ್ತು.
ಹೀಗಿರುವಾಗ ಒಂದು ಸಲ ಉತ್ಸವಕ್ಕೆ ಹೋದ ಕೀರ್ತಿಸಿಂಹನ ಪತ್ನಿ ವಂಶೋದ್ಧಾರಕ ಸಂತಾನಕ್ಕಾಗಿ ಮಾಡಿದ ಪ್ರಾರ್ಥನೆಗೆ ಮನಿಯಾದೇವಿ ಕೃಪೆ ಮಾಡಿದಳೋ ಏನೋ! ವರ್ಷ ತುಂಬುವುದರಲ್ಲಿ ರಾಜದಂಪತಿಗಳಿಗೆ ಮುದ್ದಾದ ಹೆಣ್ಣುಮಗುವಾಯಿತು. ದೇವಿ ತನ್ನಂತೆಯೇ ಚೆಲುವಾಗಿರುವ ಹೆಣ್ಣು ಮಗುವನ್ನು ಕರುಣಿಸಿದ್ದಾಳೆ ಎಂದು ತಾಯಿ, ತಂದೆ ಸಂತೋಷಭರಿತರಾದರು. ಮಗುವಿಗೆ ದುರ್ಗಾ ಎಂದು ದೇವಿಯ ಹೆಸರನ್ನೇ ಇಟ್ಟರು.
ಅಸಾಧಾರಣ ಹುಡುಗಿ
ದುರ್ಗಾವತಿಯ ಅನಂತರ ಅರಸನಿಗೆ ಮತ್ತೆ ಮಕ್ಕಳಾಗಲಿಲ್ಲ. ದುರ್ಗಾವತಿಯಾದರೂ ಒಳ್ಳೆಯ ಗುಣ, ನಡತೆಗಳಿಂದ ತಾಯಿ – ತಂದೆ ಇಬ್ಬರಿಗೂ ಅಚ್ಚುಮೆಚ್ಚಾಗಿ ಅಕ್ಕರೆಯ ಮಗಳಾಗಿ ಬೆಳೆದಳು. ಅವಳ ಪುಟ್ಟವಯಸ್ಸಿಗೆ ಸಹಜವಾದ ತುಂಟತನ ತಂಬಾ ಸಲುಗೆಯಿದ್ದವರಿಗೆ ಮಾತ್ರ ಗೊತ್ತು. ಸಾಧಾರಣವಾಗಿ ಎಲ್ಲರಿಗೂ ಅಷ್ಟು ಎಳೆಯ ವಯಸ್ಸಿನಲ್ಲೂ ಎದ್ದು ಕಾಣುತ್ತಿದ್ದ ಆಕೆಯ ರಾಜ ಗಾಂಭೀರ್ಯವಷ್ಟೆ ಪರಿಚಯ. ಬಡವರು, ಕಷ್ಟದಲ್ಲಿರುವವರು ಎಂದರೆ ಆಕೆಯ ಪುಟ್ಟ ಹೃದಯ ದಯೆ – ಔದಾರ್ಯಗಳ ಭಂಡಾರವಾಗುತ್ತಿತ್ತು. ಸಹಾಯ ಪಡೆದ ಹಳ್ಳಿಯ ಸಾವಿರಾರು ದನಗಾಹಿಗಳೂ ಕಾಡುಕುರುಬರೂ ರಾಜಕುವರಿಯನ್ನು ಹಾಡಿ ಹರಸುತ್ತಿದ್ದರು.
ಒಂದು ದಿನ ಕೀರ್ತಿ ಸಿಂಹ ಮುಖ್ಯ ಅಮಾತ್ಯರು ಮತ್ತು ರಾಜಗುರುಗಳೊಡನೆ ಆಪ್ತಾಲೋಚನೆ ಮಾಡುವಾಗ, “ಅಮಾತ್ಯರೇ, ನಮ್ಮ ಕುಮಾರಿಗೆ ರಾಜಯೋಗ್ಯವಾದ ಎಲ್ಲ ಶಿಕ್ಷಣ-ತರಬೇತಿಗಳನ್ನೂ ಕೊಡಿಸಲು ಸೂಕ್ತವಾದ ಏರ್ಪಾಟು ಮಾಡಿರಿ. ನಮಗೆ ಮಗಳೂ ಮಗನೂ ಎಲ್ಲ ಆಕೆಯೇ. ಮುಂದೆ ರಾಜ್ಯವನ್ನಾಳಲು ಸಮರ್ಥಳಾಗಬೇಕು.” ಎಂದು ಹೇಳಿದ.
ವೃದ್ಧರಾದ ಅಮಾತ್ಯರು “ಹೆಣ್ಣು ಮಕ್ಕಳು ಎಂದಿದ್ದರೂ. ಗಂಡನ ಮನೆಸೇರುವವರೆ. ರಾಜಕುಮಾರಿಗೆ ಗಂಡನ ಮನೆ ಬೆಳಗುವಷ್ಟು ವಿದ್ಯೆ ಹೇಳಿಸಿದರೆ ಸಾಕು” ಎಂದು ಸೂಚಿಸಿದರು. ರಾಜನು ರಾಜಲಕ್ಷಣಗಳುಳ್ಳ ಹುಡುಗನೊಬ್ಬನನ್ನು ದತ್ತು ತೆಗೆದುಕೊಳ್ಳಬೇಕು ಎಂದೂ ಸಲಹೆ ಮಾಡಿದರು.
ದೊರೆ ಕ್ಷಣಕಾಲ ಯೋಚಿಸಿ, “ಅದು ನನಗೇಕೊ ಇಷ್ಟವಾಗುತ್ತಿಲ್ಲ ಗುರುಗಳೇ. ಇಡೀ ಲೋಕವನ್ನೆಲ್ಲ ರಕ್ಷಿಸುತ್ತಿರುವ ತಾಯಿ, ಮನೆಯಾದೇವಿ, ಕೇವಲ ಕೃಪೆಯಿಟ್ಟು ಮಗಳಾಗಿ ಬಂದಿದ್ದಾಳೆ. ಆಕೆಗೆ ನಮ್ಮದೊಂದು ರಾಜ್ಯವನ್ನಾಳುವುದು ಕಷ್ಟವೇ? ಪಾಳೆಯಪಟ್ಟುಗಳಾಗಿ ಹರಿದು ಹಂಚಿಹೋಗಿರುವ ನಾಡನ್ನೆಲ್ಲ ಒಂದುಗೂಡಿಸಿ ಆಳಿಯಾಳು” ಎಂದ.
ಒಂದು ಶುಭದಿನ ರಾಜಕುಮಾರಿಯ ಶಿಕ್ಷಣ ಆರಂಭವಾಯಿತು. ಕಲಿಸಿದ ಪಾಠವನ್ನು ತಕ್ಷಣ ಗ್ರಹಿಸುತ್ತಿದ್ದ ರಾಜಕುಮಾರಿಯ ಅಸಾಧಾರಣ ಶಕ್ತಿ ಗುರುಗಳನ್ನು ಚಕಿತಗೊಳಿಸುತ್ತಿತ್ತು. ಅವಳ ನಯವಿನಯಗಳಿಂದ ಕೂಡಿದ ನಡವಳಿಕೆ ಅಷ್ಟೇ ಮೆಚ್ಚಿಗೆಯನ್ನುಂಟು ಮಾಡುತ್ತಿತ್ತು. ಓದು, ಬರಹ, ಗಣಿತಗಳಿಂದ ಹಿಡಿದು ಬುದ್ಧಿ – ಮನಸ್ಸುಗಳ ವಿಕಾಸಕ್ಕೆ ತಕ್ಕಂತೆ ಶಾಸ್ತ್ರಗಳವರೆಗೂ ಪಾಠವಾಯಿತು. ಜೊತೆಗೆ ವ್ಯಾಯಾಮ, ಯೋಗಾಸನ, ಕತ್ತಿವರಸೆ, ಕುದುರೆ ಸವಾರಿ, ಈಜು ಇತ್ಯಾದಿ ದೈಹಿಕ ಶಿಕ್ಷಣದ ತರಬೇತಿಯೂ ಆಯಿತು.
ದುರ್ಗಾವತಿಗೆ ಶಾಸ್ತ್ರಕ್ಕಿಂತ ಶಸ್ತ್ರವಿದ್ಯೆಯೇ ಹೆಚ್ಚು ಇಷ್ಟವಾದುದಾಗಿತ್ತು. ಅನ್ಯಾಯ ಪಕ್ಷಪಾತಗಳನ್ನು ಕಂಡರೆ ಮಾತ್ರ ಸಹನವಾಗುತ್ತಿರಲಿಲ್ಲ. ಕೂಡಲೆ ದಿಟ್ಟವಾಗಿ ವಿರೋಧಿಸುತ್ತಿದ್ದಳು.
ಶಸ್ತ್ರ ವಿದ್ಯೆಯಲ್ಲಿ ಅಸಮಾನ
ಆಕೆಗೆ ಎಲ್ಲ ಶಸ್ತ್ರಗಳನ್ನೂ ಪ್ರಯೋಗಿಸುವುದರಲ್ಲಿ ಪರಿಣತಿ ಇತ್ತು. ಧನುರ್ವಿದ್ಯೆ ಎಂದರೆ ಮಾಥ್ರ ವಿಶೇಷವಾದ ಪ್ರೀತಿ. ಗುರಿಯಿಡುವುದರಲ್ಲಿ, ಅತಿ ವೇಗವಾಗಿ ಒಂದಾದ ಮೇಲೊಂದರಂತೆ ಬಾಣ ಬಿಡುವುದರಲ್ಲಿ ಆಕೆಯನ್ನು ಮೀರಿಸುವವರು ಆ ಸುತ್ತಿನಲ್ಲೇ ಯಾರೂ ಇರಲಿಲ್ಲ. ಕಾಡನ್ನೆಲ್ಲ ಅಲೆಯುವುದು, ಷಿಕಾರಿ ಮಾಡುವುದು, ಈಜುವುದು ಎಂದರೆ ಬಹಳ ಹುಚ್ಚು. ಹುಲಿ, ಚಿರತೆ ಮುಂತಾದ ಕ್ರೂರ ಮೃಗಗಳನ್ನಲ್ಲದೆ ಸಾಧು ಪ್ರಾಣಿಗಳನ್ನೆಂದೂ ಬೇಟೆಯಾಡುತ್ತಿರಲಿಲ್ಲ. ತುಂಬಿದ ಪ್ರವಾಹದೆದರು ಘಂಟೆಗಟ್ಟಲೆ ಈಜುವ ಸಾಹಸವೆಂದರೆ ಬಹಳ ಖುಷಿ.
ಹುಲಿ ಷಿಕಾರಿಯ ವಿನೋದಕ್ಕೆ ಮನೆಯಾಗಡದ ರಾಜಗೌಡರಿಂದ ಬರುತ್ತಿದ್ದ ಆಹ್ವಾನಗಳು ಮಾಮೂಲು. ಅಲ್ಲದೆ ಹುಲಿಯ ಕಾಟವಿಪರೀತವಾಗಿದೆ ಎಂದು ಎಲ್ಲಿಂದಾದರೂ ದೂರು ಬಂದರೆ ರಾಜಕುಮಾರಿ ಬಿಟ್ಟದು ಬಿಟ್ಟು, ಕಾಡಿಸಿ, ಪೀಡಿಸಿ ತಂದೆಯ ಅನುಮತಿ ಪಡೆದು, ಬೇಟೆಗೆ ಹೊರಟು ಬಿಡುತ್ತಿದ್ದಳು. ಪೀಡಕವಾದ ಆ ಹುಲಿಯನ್ನು ಕೊಲ್ಲುವವರೆಗೂ ನೀರು ಸಹ ಕುಡಿಯುತ್ತಿರಲಿಲ್ಲ.
ಪ್ರತಿವರ್ಷ ದೇವೀ ಜಾತ್ರೆಯ ಸಮಯದಲ್ಲಿ ಅನೇಕ ವೀರ ಪಂದ್ಯಗಳಾಗುತ್ತಿದ್ದವು. ರಾಜಕುಮಾರರಿಗೆ ಸಮನಾದ ಸ್ಫರ್ಧಿ ಎಂದರೆ ರಾಜಗೌಂಡ ಸಂಗ್ರಾಮಸಿಂಹನ ಮಗ ದಳಪತಿಸಿಂಹ ಒಬ್ಬನೆ. ಕುದುರೆ ಸವಾರಿಯಲ್ಲಿ ಮೊದಲ ಸ್ಥಾನ ಯಾವಾಗಲೂ ಅವನದೆ. ಬಿಲ್ಲು ವಿದ್ಯೆಯಲ್ಲಿ ರಾಜಕುಮಾರಿಯೇ ಗೆದ್ದು ಬಿಟ್ಟಾಗ ಆತ “ಭವಾನಿ” ಎಂಬ ತನ್ನ ರತ್ನ ಖಚಿತವಾದ ಕಠಾರಿಯನ್ನೇ ಆಕೆಗೆ ಮೆಚ್ಚುಗೆಯಾಗಿ ಕೊಟ್ಟ. ಆತನ ಧೋರೋದಾತ್ತ ವ್ಯಕ್ತಿತ್ವವನ್ನು ಯಾವಾಗಲೂ ಮೆಚ್ಚಿಕೊಂಡಿದ್ದ. ದುರ್ಗಾವತಿ ಈ ಅಸೂಯಾ ರಹಿತವಾದ ಔದಾರ್ಯಕ್ಕೆ ಮತ್ತಷ್ಟು ಮನಸೋತಳು. ಆತನಲ್ಲಿ ಆಕೆಗೆ ಕ್ರಮೇಣ ಅನುರಾಗವೂ ಉಂಟಾಯಿತು.
ಕೀರ್ತಿಸಿಂಹನಿಗೆ ಮಗಳ ಶಕ್ತಿ, ಸಾಮರ್ಥ್ಯಗಳಲ್ಲಿ ಅಪರಿಮಿತವಾದ ನಂಬಿಕೆ. ಅತಿಶಯವಾದ ಅಭಿಮಾನ. ಯಾವ ರಾಜಕಾರ್ಯವಿರಲಿ, ಪರದೇಶಗಳೊಂದಿಗೆ ವ್ಯವಹಾರವಿರಲಿ ಅವಳೊಂದಿಗೆ ಸಮಾಲೋಚನೆ ಮಾಡದೆ ನಿರ್ಣಯ ತೆಗೆದುಕೊಳ್ಳುತ್ತಿರಲಿಲ್ಲ. ಕಿರಿಯಳಾದರೂ ಆಕೆಯ ವಿವೇಚನೆ, ದೂರದರ್ಶಿತ್ವ ಅನುಭವಸ್ಥ ಸಚಿವರಲ್ಲಿ ಇರುವಂತಹವು.
ಸಣ್ಣಪುಟ್ಟ ಕಾರಣಗಳಿಗೆ ತಮ್ಮೊಳಗೇ ಕಲಹ ಮಾಡುತ್ತಾ ಹೊರಗಿನ ಶತ್ರುಗಳ ಆಕ್ರಮಣ ಮಾಡಿದಾಗ ಹೆಚರಿ ಕಾಣಿಕೆ ತೆತ್ತು ತಮ್ಮ ಖಜಾನೆಗಳನ್ನೆಲ್ಲ ಬರಿದುಮಾಡಿಕೊಳ್ಳುತ್ತಿದ್ದ. ಪಾಳೆಯಗಾರರೆಲ್ಲ ಕೀರ್ತಿಸಿಂಹನ ನಾಯಕತ್ವದಲ್ಲಿ ಬಲಿಷ್ಠ ಮಂಡಲಿಯೊಂದನ್ನು ಮಾಡಿಕೊಂಡರು. ನಾಡಿನಲ್ಲೆಲ್ಲ ಹೊಸ ಚೈತನ್ಯ ಸಂಚಾರವಾದಂತಾಯಿತು. ಅಮಿತವಾದ ಆತ್ಮ ವಿಶ್ವಾಸ, ದೇಶ ಭಕ್ತಿಗಳಿಂದ ಎಲ್ಲಿಲ್ಲದ ಶಕ್ತಿ ಬಂದಂತಾಯಿತು. ಇದಕ್ಕೆಲ್ಲ ದುರ್ಗಾವತಿಯ ಪ್ರಭಾರವೇ ಕಾರಣ.
ದಳಪತಿಸಿಂಹನ ರಾಣಿ
ದುರ್ಗಾವತಿ ಪ್ರಾಪ್ತವಯಸ್ಕಳಾದಳು. ಆಕೆಯ ಮದುವೆ ಮಾಡಬೇಕು ಎಂಬ ಚಿಂತೆ ತಂದೆಗೆ ಹತ್ತಿತು. ರಾಜಕುಮಾರಿಯ ರೂಪ, ಸೌಜನ್ಯ, ಶೌರ್ಯಗಳು ಲೋಕವಿಧಿತವಾಗಿದ್ದವು. ಆಕೆಯನ್ನು ಮದುವೆಯಾಗುವ ಭಾಗ್ಯಶಾಲಿ ಯಾರೋ ಎಂದು ಅವಳನ್ನು ಕಂಡವರೆಗೆಲ್ಲ ಬೆರಗು. ಆಕೆಗೆ ತಕ್ಕ ಜೋಡಿ ಎಂದರೆ ಮನಿಯಾಗಡದ ದಳಪತಿಸಿಂಹ ಒಬ್ಬನೆ ಎಂದು ಕೆಲ್ವು ಮಾತಾಡಿಕೊಳ್ಳುತ್ತಿದ್ದರು. ಕೀರ್ತಿಸಿಂಹ ಉಚ್ಚ ಕ್ಷತ್ರಿಯ ಕುಲದವನು. ಮನಿಯಾಗಡದ ಗೌಳಿಗೆ ರಾಜನ ಸಂಬಂಧ ಬೆಳೆಸಲು ಆತ ಖಂಡಿತ ಒಪ್ಪುವುದಿಲ್ಲ ಎಂದು ಜನ ತಿಳಿದಿದ್ದರು. ಕೀರ್ತಿಸಿಂಹನಿಗೂ ತನ್ನ ಮಗಳನ್ನು ಶ್ರೇಷ್ಠ ರಜಪೂತ ವಂಶದ ರಾಜಕುಮಾರನೊಬ್ಬನಿಗೆ ಕೊಟ್ಟು ಮದುವೆ ಮಾಡುವ ಅಭಿಲಾಷೆಯಿತ್ತು. ಆದರೆ ತನ್ನ ಅಚ್ಚುಮೆಚ್ಚಿನ ಮಗಳ ಇಷ್ಟವೇನೆಂದು ತಿಳಿದ ಮೇಲೆ ಅವಳ ಅಪೇಕ್ಷೆಗೆ ವಿರುದ್ಧವಾಗಿ ಹೋಗಲಿಲ್ಲ. ೧೫೪೩ ರಲ್ಲಿ ದುರ್ಗಾವತಿ – ದಳಪತಿಸಿಂಹರ ಮದುವೆ ಭಾರಿ ವಿಜೃಂಭಣೆಯಿಂದ ನಡೆಯಿತು. ಆದಾದ ಕೆಲವು ದಿನಗಳಲ್ಲೆ ಸಂಗ್ರಾಮಸಿಂಹ ಅಸ್ವಸ್ಥನಾಗಿ ಮರಣಹೊಂದಿದ. ನೂತನ ದಂಪತಿಗಳಿಗೆ ಅಪಾರವಾದ ಶೋಕ ಒದಗಿತು.
ಒಂದೆರಡು ತಿಂಗಳ ಬಳಿಕ ಶೋಕವನ್ನು ಮರೆಯಲೆಂದು ರಾಜ್ಯದಲ್ಲೆಲ್ಲ ಪ್ರವಾಸ ಕೈಗೊಂಡರು. ಎಲ್ಲ ಕಡೆಯೂ ಅವರಿಗೆ ರಾಜ ಯೋಗ್ಯವಾದ, ಭವ್ಯವಾದ ಸ್ವಾಗತ ದೊರೆಯಿತು. ಜನತೆಯ ಪ್ರೇಮಾದರಗಳು ಹೃದಯಸ್ಪರ್ಶಿಯಾಗಿ ವ್ಯಕ್ತವಾದವು. ಶೇರ್ ಶಹ ಸೂರಿ ಭಾರಿ ಸೇನೆಯೊಂದಿಗೆ ರಾಜ್ಯವನ್ನಾಕ್ರಮಿಸಲು ಬರುತ್ತಿದ್ದಾನೆಂದು ಕಾಲಂಜರ ದುರ್ಗದಿಂದ ಪತ್ರ ಬಂದ ಕೂಡಲೆ ಪ್ರವಾಸವನ್ನು ರದ್ದುಮಾಡಿ ದಳಪತಿಸಿಂಹ, ದುರ್ಗಾವತಿಯರು ಕಾಲಂಜರಕ್ಕೆ ಬಂದರು. ಗುಪ್ತಾ ಲೋಚನೆಯ ಸಭೆ ಸೇರಿ ಯುದ್ಧ ಸಿದ್ಧತೆಗಳನ್ನು ನಿಶ್ಚಯಿಸಿತು. ಶೇರ್ ಶಹನ ಪ್ರಚಂಡ ಸೇನೆ ಕಾಲಂಜರ ದುರ್ಗವನ್ನು ಮುತ್ತಿತು.
ದ್ರೋಹಕ್ಕೆ ತಂದೆ ಬಲಿ
ಸಂಪದ್ಭರಿತವಾದ ಗೊಂಡ್ವಾವನ್ನು ಗೆದ್ದರೆ ಪ್ರಬಲವಾದ ಸಾಮ್ರಾಜ್ಯವನ್ನು ಕಟ್ಟಬಹುದೆಂದು ಶೇರ್ ಶಹ ದಾಳಿ ಮಾಡಿದ್ದ. ತಿಂಗಳುಗಟ್ಟಲೆ ಬಿಗಿಯಾದ ಮುತ್ತಿಗೆ ಹಾಕಿದರೂ ಕಾಲಂಜರ ಜಗ್ಗಲಿಲ್ಲ. ಶೇರ್ ಶಹನಿಗೆ ತುಂಬಾ ಚಿಂತೆಯಾಯಿತು. ನೇರವಾದ ಮಾರ್ಗ ಬಿಟ್ಟು ಕುಟಿಲ ತಂತ್ರವನ್ನು ಅವಲಂಬಿಸಿದ. ಮಹಾ ಚಾಣಾಕ್ಷರಾದ ಬೇಹುಗಾರರ ಮೂಲಕ ಕೀರ್ತಿಸಿಂಹನ ಆಸ್ಥಾನಿಕರಲ್ಲಿ ಒಬ್ಬ ದ್ರೋಹಿಯನ್ನು ಪತ್ತೆ ಮಾಡಿದ. ಅಧಿಕಾರದ ಆಸೆ ಹಚ್ಚಿ ವಶಮಾಡಿಕೊಂಡ. ಕೆಲಸ ಸುಲಭವಾಯಿತು. ದುರ್ಗದ ಗುಪ್ತಮಾರ್ಗ ತಿಳಿಯಿತು. ರಾತ್ರೋ ರಾತ್ರಿ ಆತನ ಸೇನೆ ಲಗ್ಗೆ ಹಾಕಿ ದುರ್ಗದ ಭದ್ರತೆಯನ್ನು ಛಿದ್ರಗೊಳಿಸಿತು. ಕೋಟೆಯೊಳಗೆ ಭಯಂಕರದ ಯುದ್ಧವಾಯಿತು. ಯುದ್ಧದಲ್ಲಿ ಶೇರ್ ಶಹ ತೀವ್ರವಾಗಿ ಗಾಯಗೊಂಡ. ದೂರದ ಸುರಕ್ಷಿತ ಶಿಬಿರಕ್ಕೆ ಆತನನ್ನು ಸಾಗಿಸಿದರು. ಆತನ ಸ್ಥಿತಿ ಚಿಂತಾಜನಕವಾಗಿತ್ತು. ಅವನ ಸಚಿವನು ಮತ್ತೆ ಕಾಲಂಜರ ದುರ್ಗದೊಳಗಿನ ದ್ರೋಹಿಯನ್ನೇ ಬಳಸಿಕೊಂಡ. ಗುಟ್ಟಾತಿ ಕಂಡು ಅವನಿಗೆ ಅಧಿಕಾರದ ಆಸೆ ತೋರಿಸಿದ. ದೇಶದ್ರೋಹಿಯ ಮೋಸಕ್ಕೆ ಒಳಗಾಗಿ ಕೀರ್ತಿಸಿಂಹ ಸೆರೆಸಿಕ್ಕಿದ.
ದುರ್ಗದ ಮೇಲೆ ಸಿಡಿಲೆರಗಿದಂತೆ ಈ ಸುದ್ದಿ ಹಬ್ಬಿತು. ಕ್ಷಣಕಾಲ ರಜಪೂತ ಸೈನ್ಯವೆಲ್ಲ ತತ್ತರಿಸಿತು. ಆಗ ದುರ್ಗಾವತಿಯ ಸಮಯಸ್ಫೂರ್ತಿ ಮಿಂಚಿನಂತೆ ಕೆಲಸಮಾಡಿತು. ದೇಶದ್ರೋಹಿಯನ್ನು ಪತ್ತೆ ಮಾಡಿ ಅವನ ಒಳಚಂಚನೆಲ್ಲ ಬಹಿರಂಗ ಪಡಿಸಿ ಆತನನ್ನು ಬತೇರಿಯ ಮೇಲಿ ನಿಲ್ಲಿಸಿ ಕೊಲ್ಲಿಸಿದಳು. ತಾನೇ ಸೇನಾಧಿಪತ್ಯ ವಹಿಸಿ ಶತ್ರುಸೇನೆಯನ್ನು ಸೋಲಿಸಿ ಧೂಳೀಪಟ ಮಾಡಿದಳು. ತನ್ನ ತಂದೆಯನ್ನು ಸೆರೆಯಿಂದ ಬಿಡಿಸಿಕೊಂಡು ಬರಲು ಧಾವಿಸುವುದರೊಳಗಾಗಿ ಶತ್ರು ಶಿಬಿರದಲ್ಲಿ ಕೀರ್ತಿಸಿಂಹನ ವಧೆ ಆಗಿತ್ತು.
ತಂದೆಯನ್ನು ರಕ್ಷಿಸಿಕೊಳ್ಳಲಾಗಲಿಲ್ಲವಲ್ಲಾ ಎಂದು ದುರ್ಗಾವತಿ ಪರಿತಪಿಸಿದಳು. ತಂದೆಯಿಲ್ಲದೆ ರಾಜ್ಯ, ಅರಮನೆಗಳನ್ನು ಸುತ್ತಿಕೊಂಡು ಶೂನ್ಯವನ್ನು ಎದುರಿಸದಾದಳು. ಬಂದಲ್ಲಿ, ಹೋದಲ್ಲಿ, ಪ್ರತಿಕ್ಷಣವೂ ತಂದೆಯ ಒಂದೊಂದು ನೆನಪಾಗಿ ಶೋಕತಪ್ತಳಾಗುವಳು. ದಳಪತಿಸಿಂಹ ತನ್ನ ವಿವೇಕವಾಣಿಯಿಂದ ಆಕೆಯನ್ನು ಆದಷ್ಟು ಸಮಾಧಾನಗೊಳಿಸಿದ. ಆತನ ಪ್ರೇಮವೇ ಈಗ ಆಕೆಗಿರುವ ಏಕೈಕ ಆಸರೆ.
ಎರಡು ರಾಜ್ಯಗಳೂ ಒಂದಾದವು. ಸಾತ್ಪುರ ಪರ್ವತಾವಳಿಗಳಿಂದ ಹಿಡಿದು ನರ್ಮದಾ ಮೂಲದವರೆಗೂ ವಿಸ್ತರಿಸಿದ ನಾಡಿನ ರಾಜ್ಯ ಭಾರವೆಲ್ಲ ದಳಪತಿಸಿಂಹನ ಮೇಲೆ ಬಿದ್ದಿತ್ತು. ದುರ್ಗಾವತಿ ಪತಿಗೆ ಹೆಗಲೆಣೆಯಾಗಿ ನಿಂತು ಸಹಾಯ ಮಾಡುತ್ತಿದ್ದುದರಿಂದ ಆತನಿಗದು ಭಾರವಾಗಿ ಕಾಣಲಿಲ್ಲ.
ಶೇರ್ಶಹನಂತಹ ಪ್ರಬಲ ವೈರಿಯನ್ನು ಸೋಲಿಸಿ ವಿಜಯ ಪಡೆದ ವರ್ಷ 1545 ರಲ್ಲಿಯೇ ರಾಜ ದಂಪತಿಗಳಿಗೆ ಪುತ್ರೋತ್ಸವವಾಯಿತು.
ಮಗುವಿಗೆ ವೀರನಾರಾಯಣ ಎಂದು ಹೆಸರಿಟ್ಟರು. ಮಗು ಸುಂದರವಾಗಿ, ದಷ್ಟಪುಷ್ಟವಾಗಿ, ನೋಡಿದರೆ ದೃಷ್ಟಿತಾಗುವ ಹಾಗಿತ್ತು. ಮಗನ ಲಾಲನೆ-ಪಾಲನೆಗಳಲ್ಲಿ ತನ್ಮಯಳಾಗುತ್ತಿದ್ದ ದುರ್ಗಾವತಿ ರಾಜ್ಯದ ಗುರುತರ ಕಾರ್ಯಗೌರವಗಳನ್ನು ಎಂದೂ ಅಲಕ್ಷಿಸಲಿಲ್ಲ.
ಹುಲಿಯಾಗಲಿ, ಪ್ರವಾಹವಾಗಲಿ–
ಹೀಗಿರುವಾಗ ಒಂದು ಸಲ, ಹುಲಿಗಳ ಕಾಟ ತಂಬಾ ಹೆಚ್ಚಾಗಿ ತಮ್ಮ ಮತ್ತು ಗೋವುಗಳ ಕ್ಷೇಮ ಆತಂಕಕ್ಕೆ ಒಳಗಾಗಿದೆ ಎಂದು ಸಾತ್ಪುರ ಮಲೆನಾಡಿನ ಗೋವಳಿಗರು ಬಂದು ಮೊರೆಯಿಟ್ಟರು. ರಾಣಿ ಮಗುವನ್ನು ದಾದಿಯು ಬಳಿ ಬಿಟ್ಟು ಪತಿಯೊಡನೆ ಹುಲಿ ಶಿಕಾರಿಗೆ ಹೊರಟಳು. ತನ್ನ ಮೆಚ್ಚಿನ ಆನೆಯ ಮೇಲೆ ಕಟ್ಟಿದ ಹೌದಾದಲ್ಲಿ ಆಪ್ತಸೇವಕಿಯರೊಡನೆ ದುರ್ಗಾವತಿ ಕುಳಿತಿದ್ದಳು. ಮಾಹುತ ಗಣೇಶನ ಜೊತೆಗೆ ಆತನ ಮೂರು ವರ್ಷದ ತಾಯಿಯಿಲ್ಲದ ತಬ್ಬಲಿ ಮಗುವೂ ಕುಳಿತ್ತತ್ತು. ದಳಪತಿಸಿಂಹ ಮತ್ತು ಪರಿವಾರದ ಇತರರು ಬೇರೆ ಬೇರೆ ಆನೆಗಳ ಮೇಲಿದ್ದರು. ದಾರಿಯಲ್ಲಿ ನರ್ಮದಾ -ಹಿರಣ್ ನದಿಗಳ ಸಂಗಮವನ್ನು ದಾಟಬೇಕಿತ್ತು. ಮುಂಗಾರು ಮಳೆಯಿಂದಾಗಿ ನದಿಗೆ ಪ್ರವಾಹ ಬಂದಿತ್ತು. ಅಂತಹ ಸ್ಥಿತಿಯಲ್ಲಿ ನದಿಯನ್ನು ದಾಟುವುದು ವಿಹಿತವೇ ಎಂದು ಕೊಂಚಕಾಲ ಚರ್ಚೆಯಾಯಿತು. ರಾಣಿ ಹೇಳಿದ ಧೈರ್ಯದ ಮೇಲೆ ಹೊರಟೇಬಿಟ್ಟರು. ದಳಪತಿಸಿಂಹನೂ ಸಾಹಸಪ್ರಿಯನೇ ಆಗಿದ್ದುದರಿಂದ ಬೇಡವೆನ್ನಲಿಲ್ಲ.
ನದಿಯ ಮಧ್ಯಕ್ಕೆ ಬಂದಾಗ ಪ್ರವಾಹ ಸಾಧಾರಣವಾದುದಲ್ಲ ಎಂದು ತಿಳಿದು ಗಾಬರಿಯಾಯಿತು. ಸೊಂಡಿಲೆತ್ತಿ ಘೀಂಕರಿಸುತ್ತ ಆನೆಗಳು ನೀರನ್ನು ಸೀಳಿ ಮುಂದೆ ಹೋಗುತ್ತಿದ್ದವು. ಅಷ್ಟರಲ್ಲಿ ಅದೇನಾಯಿತೋ! ಗಣೇಶನ ಮಗು ಆಯ ತಪ್ಪಿ ಪ್ರವಾಹದಲ್ಲಿ ಬಿದ್ದುಬಿಟ್ಟಿತು. ಮಾಹುತ, “ಹೋ, ಮಗು ಹೋಯಿತು, ರಕ್ಷಿಸಿರಿ” ಎಂದು ಕೂಗಿದ. ಆದರೆ ಸುರಕ್ಷಿತವಾಗಿ ಆನೆ ನಡೆಸುವ ತನ್ನ ಕರ್ತವ್ಯವನ್ನು ಬಿಡಲಿಲ್ಲ. ಪ್ರವಾಹದಲ್ಲಿ ತೇಲಿಹೋಗುತ್ತಿದ್ದ ಮಗುವನ್ನು ನೋಡಿ ಪರಿವಾರದವರೆಲ್ಲರೂ ಕೂಗಿ ಕೋಲಾಹಲ ವೆಬ್ಬಿಸಿದರು. ಕಣ್ಣು ಮುಚ್ಚಿ ತೆರೆಯುವುದರಲ್ಲಿ ರಾಣಿ ದುರ್ಗಾವತಿ ಹಿಡಿದು ಮೇಲೆತ್ತಿದಳು. ಮತ್ತೆ ಪ್ರವಾಹಕ್ಕೆದುರಾಗಿ ಈಜಿ ಬಂದು ಆನೆಯ ಹಗ್ಗವನ್ನು ಹಿಡಿದು ಮಗುವನ್ನು ಮಾಹುತನ ಚಾಚಿದ ಕೈಗೆ ಕೊಟ್ಟಳು. ಅನಂತರ ತಾನೂ ಮೇಲೇರಿ ಬಂದಳು.
ಆಚೆಯ ದಡ ಸೇರಿದ ಕೂಡಲೆ ಮಾಹುತ ರಾಣಿಯ ಕಾಲ ಮೇಲೆ ತಲೆಯಿಟ್ಟು – “ಅಮ್ಮಾ, ಇವತ್ತು ನನ್ನ ಮಗುವಿನ ಜೀವಾ ಉಳಿಸಿದಿರಿ. ಈ ನಿಮ್ಮ ಋಣಾನ ನನ್ನ ಜನ್ಮ ಇರೋವರೆಗೂ ತೀರಿಸೋಕಾಗಲ್ಲ ತಾಯೀ” ಎಂದು ಕೃತಜ್ಞತೆಯ ಕಣ್ಣೀರಿನಿಂದ ಪಾದ ತೊಳೆದ.
ಈಟಿಯನ್ನು ಹಿಡಿದು ರಾನಿ ದುರ್ಗಾವತಿ ರಣರಂಗವನ್ನು ಹೊಕ್ಕಳು.
ಪ್ರವಾಹವಾಗಲಿ, ಹುಲಿಯಾಗಲಿ, ಆಪತ್ತಿನಿಂದ ತನ್ನ ಪ್ರಜೆಗಳನ್ನು ರಕ್ಷಿಸುವುದು ತನ್ನ ಮೊದಲ ಕರ್ತವ್ಯ. ರಾಣಿಯಾಗಿರುವುದು ಸುಖದ ಸುಪ್ಪತ್ತಿಗೆಯ ಮೇಲೆ ಓಲಾಡುವುದಕ್ಕಲ್ಲ. ಹೀಗೆಂದು ತಿಳಿದು ಹಳ್ಳಿಹಳ್ಳಿಗೂ ಹೋಗಿ ದೀನೆಲಿತರ ಕಷ್ಟ ಸುಖಗಳನ್ನು ವಿಚಾರಿಸಿ ಅವರಿಗೆ ಬೇಕಾದ ನೆರವನ್ನು ತಕ್ಷಣ ಒದಗಿಸುವ ರಾಣಿಯನ್ನು ಮನೆ – ಮನೆಯಲ್ಲೂ ಕೊಂಡಾಡುತ್ತಿದ್ದರು.
ಅನ್ಯಾಯವಾಗಬಾರದು
ದೈವಭಕ್ತಿ, ಧಾರ್ಮಿ ಶ್ರದ್ದೇಗಳಿದ್ದರೂ ದುರ್ಗಾವತಿ ಮೂಢ ಸಂಪ್ರದಾಯಗಳನ್ನು ಕಂಡರೆ ಆಗುತ್ತಿರಲಿಲ್ಲ.
ಒಮ್ಮೆ ಮುದುಕನಾದ ಶ್ರೀಮಂತನೊಬ್ಬ ಕಡು ಬಡತನದಲ್ಲಿದ್ದ ಒಬ್ಬರ ಅತ್ಯಂತ ಕಿರಿಯ ವಯಸ್ಸಿನ ಚೆಲುವೆಯಾದ ಮಗಳನ್ನು ಹಣದ ಆಸೆಯೊಡ್ಡಿ ಮದುವೆ ಮಾಡಿಕೊಳ್ಳುವ ಸನ್ನಾಹ ಮಾಡಿದ. ವಯಸ್ಸಿನ ಅಂತರ ತುಂಬಾ ಇರುವ ಇಂತಹ ವಿಷಮ ವಿವಾಹಗಳನ್ನು ಪ್ರತಿಬಂಧಿಸುವ ರಾಜಶಾಸನದಿಂದ ವಿನಾಯತಿ ಪಡೆಯಲು ಆತ ದೊರೆಗೆ ಐವತ್ತು ಸಾವಿರ ಮೊಹರುಗಳನ್ನು ದಂಡಶುಲ್ಕವಾಗಿ ಕೊಡುವುದಾಗಿ ಮನವಿಮಾಡಿಕೊಂಡ. ದಳಪತಿಸಿಂಹ ಹೆಚ್ಚು ವಿಚಾರಣೆಮಾಡದೆ ಆ ಜನಾಂಗದ ಸಂಪ್ರದಾಯ ಎಂಬ ನೆಪದಲ್ಲಿ ಸಮ್ಮತಿಸುವುದರಲ್ಲಿದ್ದ. ರಾಣಿಗೆ ಶ್ರೀಮಂತನ ಕುತಂತ್ರ ತಿಳಿಯಿತು. ಆತನ ಮದುವೆಗೆ ರಾಜ ಸಮ್ಮತಿ ಕೊಡುವುದು ಸರಿಯಲ್ಲ ಎಂದೆನಿಸಿತು. ಬಡವರನ್ನು ಶೋಷಿಸುವ ಯಾವ ಅನ್ಯಾಯಕ್ಕೂ ರಾಜಬೆಂಬಲ ಪರೋಕ್ಷವಾಗಿಯೂ ದೊರೆಯಕೊಡದೆಂದು ಅವಳ ವಾದ. ಅನುನಯದಿಂದ ಪತಿಯ ಮನವೊಲಿಸಿ ಇಂತಹ ಪಾಪದ ಹಣವನ್ನು ಎಂದು ಪವಿತ್ರವಾದ ರಾಜಭಂಡಾರಕ್ಕೆ ಸೇರಿಸಕೂಡದೆಂದು ವಚನ ತೆಗೆದುಕೊಂಡಳು.
ರಾಣಿ ದುರ್ಗಾವತಿ ನೀರಿಗೆ ಧುಮುಕಿದಳು.
ಇನ್ನೊಂದು ಸಂಧರ್ಬದಲ್ಲಿ ರಾಣಿಯ ಮೈದುನ ಸಿಗೌರ್ ಗಿಡದ ಹಾದಿಯಲ್ಲಿ ಸಿಕ್ಕಿತೆಂದು ತಂದ ಚಿನ್ನದ ನಾಣ್ಯಗಳು ತುಂಬಿದ್ದ ಚೀಲವನ್ನು ಕೈಯಿಂದ ಸಹ ಮುಟ್ಟದೆ ಸಾರ್ವಜನಿಕವಾಗಿ ಡಂಗುರ ಸಾರಿಸಿ, ಕಳೆದುಕೊಂಡ ವರ್ತಕರಿಗೆ ಹಿಂತಿರುಗಿಸಿದಳು.
ಇಂತಹ ಸಂಗತಿಗಳು ಕೇಳಿ ಪ್ರಜೆಗಳಲ್ಲೂ ಪ್ರಾಮಾಣಿಕತೆ, ಧರ್ಮಬುದ್ಧಿ ಉಂಟಾಗುತ್ತಿದ್ದುದು ಸಹಜ. ಕಳ್ಳಕಾಕರಿಗೂ ಲಾಭಕೋರರ ವರ್ತಕರಿಗೂ ಒಂದೇ ತೆರನಾದ ಕ್ರೂರಶಿಕ್ಷೆ ವಿಧಿಸಲ್ಪಡುತ್ತಿದ್ದುದರಿಂದ ಈ ಬಗೆಯ ಅಪರಾಧಗಳು ವಿರಳವಾಗಿದ್ದವು.
ನಾಡಿನಂತೆ ದುರ್ಗಾವತಿಯ ಸಾಂಸಾರಿಕ ಜೀವನವೂ ನೆಮ್ಮದಿಯಿಂದ ಕೂಡಿತ್ತು. ಮೂರು ವರ್ಷದ ಪುಟ್ಟ ವೀರನಾರಾಯಣ ಆಟದ ಬಿಲ್ಲು ಹಿಡಿದು ಮೇಣದ ಹು – ಚಿರತೆಗಳಿಗೆ ಬಾಣ ಬಿಡುವ ಆಟ ಆಡುತ್ತಿದ್ದ. ಮಗುವಿನೊಡನೆ ದಳಪತಿಸಿಂಹನೂ ಆಟದಲ್ಲಿ ಸೇರೆ ಕೊಳ್ಳುತ್ತಿದ್ದ. ಇದನ್ನು ನೋಡುವುದೇ ದುರ್ಗಾವತಿಗೆ ಒಂದು ಆನಂದ.
ಸಿಡಿಲೆರಗಿತು
ಹೀಗೆ ತನ್ನಷ್ಟು ಸುಖಿ ಬೇರೆ ಯಾರು ಇಲ್ಲ ಎಂಧು ದುರ್ಗಾವತಿ ಭಾವಿಸುವ ಕಾಲದಲ್ಲಿ ಅನಿರೀಕ್ಷಿತರಾಗಿ ವಿಪತ್ತೊಂದು ಎರಗಿತು. ದಳಪತಿಸಿಂಹನಿಗೆ ನೆಗಡಿ – ಕೆಮ್ಮಿನಂತೆ ಆರಂಭವಾದ ಅಸ್ವಸ್ಥತೆ ತೀವ್ರವಾದ ಖಾಯಿಲೆಯಾಗಿ ಪರಿಣಮಿಸಿತು. ರಾಜವೈದ್ಯರು, ಉತ್ತರದ ಹಕೀಮರು ಎಲ್ಲರೂ ತಮಗೆ ಗೊತ್ತಿದ್ದ ವೈದ್ಯವನ್ನೆಲ್ಲ ಮಾಡಿದರು. ದುರ್ಗಾವತಿಯಂತೂ ಸದಾ ಪತಿಯ ಬಳಿಯೇ ಇದ್ದು ಪ್ರೀತಿಯಿಂದ ಶ್ರದ್ದೆಯಿಂದ ಶುಶ್ರೂಷೆ ಮಾಡಿದಳು. ಶಾಂತಿ, ಹೋಮ – ಹವನ, ಹರಕೆ, ಪೂಜೆ ಎಲ್ಲ ವ್ಯರ್ಥವಾದವು. ದಳಪತಿಸಿಂಹ ಸ್ವರ್ಗಸ್ಥನಾದನು.
ಎಂತಹ ದುರ್ಭರ ಪ್ರಸಂಗಗಳಲ್ಲೂ ಎದೆಗುಂದದ ದುರ್ಗಾವತಿ ಶೋಕದಿಂದ ನಿರ್ವಿಣ್ಣಳಾದಳು. ಆಕೆಯ ಸ್ಥೈರ್ಯ ಪತಿಯ ಮರಣದ ಕರಾಳ ಸತ್ಯದೆದುರು ನುಚ್ಚುನೂರಾಯಿತು. ನಿಶ್ಚೇಷ್ಟಿತಳಾಗಿ ಬಿದ್ದವಳು ಬಂಧು ಬಾಂಧವರ ಶೈತ್ಯೋಪಚಾರದಿಂದೇನೊ ಚೇತರಿಸಿಕೊಂಡು ಎದ್ದು ಕುಳಿತಳು. ಆದರೆ ಮಂಕು ಬಡಿದವಳಂತೆ ಕುಳಿತು ಬಿಟ್ಟಳು. ಆಪ್ತವರ್ಗದ ಹಿರಿಯ ಹೆಂಗಸು ಮಗು ವೀರನಾರಾಯಣನನ್ನು ತಂದು ತೊಡೆಯ ಮೇಲೆ ಕೂರಿಸಿದಾಗಲೇ ಆಕೆಯ ಮಂಕು ಹರಿಯಿತು. ಒಣಗಿ ಶೂನ್ಯವಾಗಿದ್ದ ಆಕೆಯ ಹೃದಯ ಮಗುವಿನ ಅಳು, ಕರೆಯಿಂದ ಜೀವ ತುಂಬಿಕೊಂಡಿತು. ಸಹಗಮನದ ಯೋಚನೆ ಮಾಡಿದವಳು ತನ್ನ ನಾಲ್ಕು ವರ್ಷದ ಹಸುಳೆಯನ್ನೂ ದೊರೆಯ ಅಕಾಲ ಮರಣದಿಂದ ಕಂಗಾಲಾಗುವ ಜನತೆಯನ್ನೂ ನೆನೆದು ಮನಸ್ಸನ್ನೂ ಬದಲಾಯಿಸಿದಳು. ಮಗನು ಮತ್ತು ದೇಶದ ರಕ್ಷಣೆಗಾಗಿ, ಏಳಿಗೆಗಾಗಿ ಇನ್ನು ಬದುಕುವೆನು ಎಂದು ನಿಶ್ಚಯಿಸಿದಳು.
ರಾಜ್ಯಕ್ಕೆ ರಕ್ಷೆ
ಶೋಕದಿನಗಳ ಅನಂತರ ರಾಜಕುಮಾರ ವೀರ ನಾರಾಯಣನ ಪಟ್ಟಾಭಿಷೇಕವಾಯಿತು. ಆತ ಪ್ರಾಪ್ತ ವಯಸ್ಸಿಗೆ ಬರುವವರೆಗೂ ರಾಜಮಾತೆ ದುರ್ಗಾವತಿಯೇ ಅವನ ಪರವಾಗಿ ರಾಜ್ಯಭಾರ ಮಾಡಬೇಕೆಂದಾಯಿತು. ಸುವ್ಯವಸ್ಥೀತವಾದ ಸುಭದ್ರವಾದ ಆಡಳಿತ ಕ್ರಮವನ್ನು ಈಗಾಗಲೇ ರಾಣಿ ಸ್ಥಾಪಿಸಿದಳು. ಶೇರ್ ಶಹನ ಮೇಲೆ ಮಾಡಿದ ಯುದ್ಧದ ಅನುಭವದಿಂದ ಸೇನೆಯಲ್ಲಿ ಬಿಗಿಯಾದ ಶಿಸ್ತನ್ನು ತಂದಳು. ಶೂರರೂ ಸ್ವಾಮಿನಿಷ್ಠರೂ ಆದವರನ್ನು ಗುರುತಿಸಿ ಉನ್ನತ ಸೈನ್ಯಾಧಿಕಾರಿಗಳನ್ನಾಗಿ ನೇಮಿಸಿದಳು. ಬೇಹುಗಾರಿಕೆಯನ್ನು ಬಲಪಡಿಸಿದಳು. ಬಸ್ತಾರ ಗಿರಿಜನರೊಂದಿಗೆ ಸ್ನೇಹದ ಒಪ್ಪಂದ ಮಾಡಿಕೊಂಡು ಆನೆಗಳನ್ನು ಹಿಡಿಯುವ ಸುಲಭ ಸಾಧನೆಗಳನ್ನೇರ್ಪಾಟು ಮಾಡಿದಳು. ಇದರಿಂದ ಪ್ರತಿವರ್ಷ ನೂರಾರು ಆನೆಗಳನ್ನು ಸುಲಭ ಬೆಲೆಗೆ ಕೊಳ್ಳಲು ಸಾಧ್ಯವಾಯಿತು. ಆಕೆಯದು ಸಾವಿರ ಆನೆಗಳ ಸೇನೆಯೊಂದನ್ನು ಸಜ್ಜುಗೊಳಿಸುವ ಯೋಜನೆ. ಶೇರ್ ಶಹನ ಉತ್ತಮ ಆಡಳಿತ ಕ್ರಮದ ಬಗ್ಗೆ ಬೇಕಾದಷ್ಟು ಕೇಳಿದ್ದ ರಾಣಿ ತನ್ನ ರಾಜ್ಯಭಾರ ಕ್ರಮದಲ್ಲಿಯೂ ಅನೇಕ ಸುಧಾರಣೆಗಳನ್ನು ಮಾಡಿದಳು. ಜನಗಳಲ್ಲಿ ನ್ಯಾಯ-ನೀತಿ, ಪಾಪಭೀತಿ, ದೈವಭಕ್ತಿ ಉಂಟಾದವು. ಬಡವರಾದರೂ ಪ್ರಾಮಾಣಿಕರಾದವರಿಗೆ, ಆಲಸಿಗಳಾಗದೆ ಶ್ರಮವಹಿಸಿ ದುಡಿಯುವವರಿಗೆ ಔದ್ಯೋಗಿಕ ಉತ್ತೇಜನ ಮತ್ತು ರಾಜಮನ್ನಣೆ ದೊರೆಯುತ್ತಿದ್ದವು. ಹೀಗೆ ದೇಶದಲ್ಲಿ ಶಾಂತಿ, ಸುಭಿಕ್ಷೆಗಳು ನೆಲೆಸಿ, ಐದಾರು ವರ್ಷ ರಾಜ್ಯದ ಬದುಕು ನೆಮ್ಮದಿಯಿಂದ ಸಾಗಿತು.
ಜೀವನದಲ್ಲಿ ಒಂದಾದ ಮೇಲೊಂದರಂತೆ ಬಂದ ಸಂಕಷ್ಟ, ವಿಯೋಗ, ದುಃಖಗಳ ಅನುಭವದಿಂದ ರಾಣಿಯ ಹೃದಯ ಮತ್ತಷ್ಟು ಮೃದುವಾಯಿತು; ಮನೋದಾರ್ಢ್ಯ ಮತ್ತಷ್ಟು ಬಲಗೊಂಡಿತು. ದೈವಭಕ್ತಿಯೂ ವೃದ್ಧಿಯಾಯಿತು. ಅನೇಕ ದೇವಾಲಯಗಳ ಜೀರ್ಣೋದ್ಧಾರ ಮಾಡಿದಳು.
ಪ್ರಜೆಗಳ ತಾಯಿ
ಗೊಂಡ್ವಾನದ ಬಯಲು ಸೀಮೆಯಲ್ಲಿ ಮಳೆಯನ್ನೆಂದೂ ನೆಚ್ಚುವ ಹಾಗಿರಲಿಲ್ಲ. ಇಲ್ಲಾ ಅತಿವೃಷ್ಟಿ, ಇಲ್ಲಾ ಅನಾವೃಷ್ಟಿ. ಎರಡರಿಂದಲೂ ಹಾನಿ. ಪದೇ ಪದೇ ಕ್ಷಾಮಪೀಡಿತವಾಗುತ್ತಿದ್ದ ಆ ಪ್ರದೇಶದ ರೈತಾಪಿ ಜನರ ಅನ್ನಕ್ಕಾಗಿ ನೀರಾವರೆ ಸೌಕರ್ಯವನ್ನು ಒದಗಿಸಲು ರಾಣಿ ನಿರ್ಧರಿಸಿದಳು. ಒಂದು ವಿಶಾಲವಾದ ಕೆರೆಯನ್ನು ಕಟ್ಟಿಸುವ ಯೋಜನೆ ಕೇಳಿ ಮಂತ್ರಿ ಅಧರ್ ಸಿಂಹ ರಾಜ್ಯದ ಅರ್ಥಿಕ ಸ್ಥಿತಿ ಅಷ್ಟು ವೆಚ್ಚದ ಭಾರವನ್ನು ಹೊರುವುದಕ್ಕೆ ಅನುಕೂಲವಾಗಿಲ್ಲವೆಂದು ವಿವರಿಸಿದ. ಆಗಲೆ ದೇಗುಲಗಳ ಜೀರ್ಣೋದ್ಧಾರಕ್ಕೆ, ಅನೇಕ ಅಡೆ ತಡೆ ತೋಡಿಸಿದ ಬಾವಿಗಳಿಗೆ, ಛೇಡಾಘಾಟಿನ ಭವ್ಯವಾದ ಮಂದಿರ ನಿರ್ಮಾಣಕ್ಕೆ ಬೇಕಾದಷ್ಟು ಹಣ ವ್ಯಯವಾಗಿತ್ತು. ಅಲ್ಲದೆ ಇತ್ತೀಚಿನ ಕ್ಷಾಮದಲ್ಲಿ ಲಕ್ಷಾಂತರ ಜನರಿಗೆ ಅನ್ನವೊದಗಿಸಲು ರಾಣಿ ತನ್ನ ಅರಮನೆಯ ಉಗ್ರಾಣವನ್ನೂ ರಾಜ ಬೊಕ್ಕಸವನ್ನೂ ಧಾರಾಳವಾಗಿ ಬಳಸಿದ್ದಳು. ಸಾವಿರ ಆನೆಗಳ ಸೇನೆಯ ಖರ್ಚಂತೂ ವಿಪರೀತವಾಗಿತ್ತು; ಅನಿವಾರ್ಯವಾಗಿತ್ತು. ಅಧರ್ ಸಿಂಹ ಪ್ರಜಾಹಿತಕ್ಕೆಂದೂ ವಿರೋಧಿಯಲ್ಲ. ರಾಜ ನಿಷ್ಠನಾಗಿದ್ದ ಆತನಿಗೆ ಅರಮನೆಯ ಅಪದ್ಧನವೂ ಕರಗಿ ಹೋದರೆ ಗತಿ ಏನು ಎಂದು ಚಿಂತೆ. ರಾಣಿ ಆತನ ಆತಂಕವನ್ನು ಬಲ್ಲಳು. ಆದರೂ, “ನಾವಾಗಲೀ, ನಮ್ಮ ಹಣವಾಗಲಿ ನಾಳೆ ಇರುವುದೇನು ನಿಶ್ಚಯ, ಅಮಾತ್ಯರೆ? ಅನೇಕ ಪೀಳಿಗೆಗಳ ಕಾಲ ಬಡಜನರಿಗೆ ಅನ್ನ-ನೀರು ಒದಗಿಸುವ ಕರೆಯೊಂದು ಉಳಿದೀತು. ನಮ್ಮ ಅಪದ್ಧನ ಪ್ರಜೆಗಳದು. ಈಗ ಅವರ ಆಪತ್ಕಾಲ ಅದು ಉಪಯೋಗವಾಗುವುದೇ ಸಾರ್ಥಕ” ಎಂದು ತನ್ನ ನಿಶ್ಚಯವನ್ನು ಹೇಳಿದಳು.
ಬೃಹತ್ ಪ್ರಮಾಣದ ಕರೆಯ ಕೆಲಸ ಆರಂಭವಾಯಿತು. ರಾಣಿಯನ್ನು ಹಾಡಿ ಹರಸುತ್ತ ಸಹಸ್ರಾರು ಜನ ಕೆಲಸ ಮಾಡತೊಡಗಿದರು. ಹಳ್ಳವನ್ನು ಅಗೆಯುವಾಗ ಒಂದು ಕಡೆ ಗುಪ್ತನಿಧಿ ಸಿಕ್ಕಿತು. ಒಂದಲ್ಲ ಎರಡಲ್ಲ, ಮೂರು ಕೊಪ್ಪರಿಗೆ ತುಂಬಿದ ಚೀಲದ ನಾಣ್ಯಗಳು, ರತ್ನಾಭರಣಗಳು ದೊರೆತವು! ರಾನಿಯ ಮಹಿಮೆ ಎಂದರು ಜನ. ಜಗನ್ಮಾತೆಯ ಕೃಪೆ ಎಂದಳು ರಾಣಿ.
ಹೊಸಕೆರೆಯಲ್ಲಿ ಜಲವೂ ಹುಟ್ಟಿತು. ಆ ಸಲ ಸಮೃದ್ಧವಾಗಿ ಮಳೆ ಬಿದ್ದು ಕೆರೆತುಂಬಿ ಕಣ್ಣಿಗೆ ಹಬ್ಬವೆನಿಸಿತು. ಸುತ್ತ ಹತ್ತುಗಾವುದ ನೆಲ ಪಚ್ಚೆಪೈರಿನಿಂದ ನಕ್ಕಾಗ ಜನ ಹಿಗ್ಗಿ ನಲಿದರು. ಕೆರೆಗೆ “ರಾಣಿತಾಲೆ” ಎಂಬ ಹೆಸರು ಬಂದಿತು.
ಮಾರನೆಯ ವರ್ಷ ದೂರದ ಇನ್ನೂ ಒಂದೆರಡು ಕಡೆ ಕೆರೆಗಳನ್ನು ಮಂತ್ರಿ ಅಧರ್ ಸಿಂಹ ಮತ್ತು ರಾಣಿಯ ಆಪ್ತಸುಖಿ ರಾಮಚರಿ ತಮ್ಮ ಸ್ವಂತ ಖರ್ಚಿನಲ್ಲಿ ಕಟ್ಟಿಸಿದರು. ಈಗಲೂ ಜಬ್ಬಲಪುರದ ಬಳಿ ರಾಣಿತಾಲ್ ಇರುವಂತೆ ಬಯಲಿಸೀಮೆಯ ಇನ್ನೆರಡು ಕಡೆ “ಅಧರ್ ತಾಲ್”, “ಚರಿತಾಲ್” ಗಳಿವೆ.
ಬುದ್ಧಿ ಕಲಿತ ಬಾಜ್ ಬಹಾದೂರ್
ಗೊಂಡ್ವಾನದ ಸಂಪತ್ತಿನ ಮೇಲೆ ಮಾಳವದ ಬಾಜ್ ಬಹಾದೂರನಿಗೆ ಮೊದಲಿನಿಂದಲೂ ಕಣ್ಣು. ಇತ್ತೀಚಿಗೆ ಕೊಪ್ಪರಿಗೆಗಟ್ಟಲೆ ಚಿನ್ನದ ನಗ – ನಾಣ್ಯಗಳು ರಾಣಿಗೆ ದೊರೆತ ಸುದ್ಧಿ ವರ್ಣರಂಜಿತ ಕತೆಯಾಗಿ ಅವನ ಕಿವಿ ಮುಟ್ಟಿತು. “ರಾಜ್ಯದ ಅರಸು ಚಿಕ್ಕ ಬಾಲಕ”, “ಆಳುತ್ತಿರುವವಳು ಹೆಂಗಸು”, “ಆಸ್ಥಾನದ ಸರದಾರರಲ್ಲೆ ಒಡಕಿದೆ” ಮುಂತಾಗಿ ಸುಲ್ತಾನನ ಸಲಹೆಗಾರರು ಹೇಳಿ ಆಸೆ ಹುಟ್ಟಿಸಿದರು. ಒಳಸಂಚು ಮಾಡಿ ರಕ್ತಪಾತವೇ ಇಲ್ಲದೆ ರಾಜ್ಯವನ್ನು ವಶಪಡಿಸಿಕೊಳ್ಳುವುದಾಗಿ ಭರವಸೆ ಕೊಟ್ಟರು. ರಾಣಿಯ ರೂಪ, ಯೌವನಗಳನ್ನೂ ವರ್ಣಿಸಿದರು.
1555 ರಲ್ಲಿ ಬಾಜ್ ಬಹದೂರ್ ತನ್ನ ಚಿಕ್ಕಪ್ಪನಾದ ಫತೇಖಾನ್ ನ ನಾಯಕತ್ವದಲ್ಲಿ ಸೈನ್ಯವೊಂದನ್ನು ಗೊಂಡ್ವಾನದ ಮೇಲೆ ಕಳಿಸಿದ. ಶರಣಾಗತಳಾಗಿ, ಯುದ್ಧದಿಂದಾಗುವ ರಕ್ತಪಾತ, ಅನಾಹುತಗಳನ್ನು ತಪ್ಪಿಸುವುದು ವಿವೇಕವೆಂದು ಬುದ್ಧಿ ಹೇಳುವ ಪತ್ರವೊಂದನ್ನು ಫತೇಖಾನ್ ರಾಣಿಗೆ ಕಳಿಸಿದ. ರಾಣಿಯಿಂದ ತಿರಸ್ಕಾರದ ಉತ್ತರ ಬಂದಾಗ ಕೆರಳಿ ಕಿಡಿಕಿಡಿಯಾಗಿ ರಣಕಹಳೆಯನ್ನು ಮೊಳಗಿಸಿದ. ಆದರೆ ಎರಡೇ ದಿನಗಳ ಯುದ್ಧದಲ್ಲಿ ಫತೇಖಾನನ ಸೈನ್ಯ ದಿಕ್ಕಾಪಾಲಾಗಿ ಒಟ ಕಿತ್ತಿತು. ಯಾವ ಯಾವ ಕಡೆಯಿಂದ ಗೊಂಡ್ವಾನದ ಶೂರರು ಬಂದು ಮುತ್ತುತ್ತಾರೆಯೊ ಎಂಬುದೇ ತಿಳಿಯದೆ ದಿಗ್ಭ್ರಮೆ ಹಿಡಿದ ಮಾಳವದ ಸೇನಾಪತಿ ಬೋನಿನಲ್ಲಿ ಸಿಕ್ಕಿ ಬಿದ್ದ ಇಲಿಯಾದ. ಸೆರೆ ಸಿಕ್ಕಿದೆ ಪಾರಾದರೆ ಸಾಕು ಎನ್ನುವಂತಾಯಿತು ಅವನ ಸ್ಥಿತಿ. ಸಾಧುಸಂತರನ್ನಾಗಲಿ, ಫಕೀರರನ್ನಾಗಲಿ ಯಾವುದೇ ಕಾರಣಕ್ಕೂ ಪೀಡಿಸಬಾರದೆಂದು ಗೊಂಡ್ವಾನದಲ್ಲಿ ರಾಜಶಾಸನವಿದ್ದುದು ಅವನ ಅದೃಷ್ಟ. ಫಕೀರ ವೇಷ ಹಾಕಿ ಬಹು ಕಷ್ಟದಿಂದ ತಪ್ಪಿಸಿ ಕೊಂಡು ಓಡಿಹೋದ.
ಬಾಜ್ ಬಹಾದೂರನಿಗೆ ಮುಖಭಂಗವಾದಂತಾಯಿತು. ಮರುವರ್ಷ ಭಾರಿ ಸೈನ್ಯದೊಂದಿಗೆ ತಾನೇ ಗೊಂಡ್ವಾನದ ಮೇಲೆ ದಾಳಿ ಮಾಡಿದ. ಈ ಮರು ದಾಳಿಯ ಸನ್ನಾಹವನ್ನು ಮೊದಲೇ ತಿಳಿದು ಸಿದ್ಧವಾಗಿದ್ದ ರಾಣಿ ಹೊಸಬಗೆಯ ರಕ್ಷಣಾವ್ಯೂಹವನ್ನು ರಚಿಸಿಕೊಂಡು ಗಡಿಯ ಬಳಿಯೇ ಶತ್ರುವಿನ ಮೇಲೆ ಅನಿರೀಕ್ಷಿತವಾಗಿ ಆಕ್ರಮಣ ಮಾಡಿದಳು. ರಾಣಿಯೇ ಸ್ವತಃ ಸೇನಾ ನಾಯಕಿಯಾಗಿ ಚದುರಂಗದ ಶ್ರೇಷ್ಠ ಆಟಗಾರ್ತಿಯಂತೆ ದಳಗಳನ್ನು ನಡೆಸಿದಳು. ಸುಲ್ತಾನ ರಾಣಿಯ ಯುದ್ಧ ವಿಧಾನವನ್ನು ಕಂಡು ಬೆರಳು ಕಚ್ಚಿದ ನಂತರ ಪರಾಭವ, ಅವಮಾನಗಳಿಂದ ಭಾರೀ ಸೈನ್ಯ ಅನೇಕ ತುಂಡುಗಳಾಗಿ ಮಾಳವಕ್ಕೆ ಹಿಂತಿರುಗಿತು.
ಹೀಗೆ ಇನ್ನೂ ಎರಡು ಬಾರಿ ಮಾಡಿದ ಅವನ ದಾಳಿಯ ಪ್ರಯತ್ನಗಳಿಗೂ ಇದೇ ಗತಿ ಆಯಿತು. 1560 ರಲ್ಲಿ ಮಾಡಿದ ಕಡೆಯ ಬಾರಿಯ ಆಕ್ರಮಣದಿಂದ ಗೊಂಡ್ವಾನಕ್ಕೆ ದೊಡ್ಡ ಪೆಟ್ಟು ಬಿದ್ದಿತು. ಆದರೂ ಗೊಂಡ್ವಾನರ ಉಜ್ವಲವಾದ ರಾಷ್ಟ್ರ ಭಕ್ತಿ, ರಾಣಿಯ ಪ್ರತಿಮವಾದ ನಿರ್ದೇಶನ ಪ್ರಚಂಡ ವಿಜಯವನ್ನೇ ತಂದವು. ಬಾಜ್ ಬಹದ್ದೂರ್ ಇನ್ನೆಂದೂ ದುರ್ಗಾವತಿಯ ತಂಟೆಗೆ ಬಾರದಂತಾಯಿತು. ಆಕೆಯ ಹೆಸರು ಕೇಳಿದರೆ ಸಾಕು ಅವನ ಮೈ ಬೆವತು, ಎದೆ ಹಾರುತ್ತಿತ್ತು.
ಮತ್ತೊಂದು ವಿಪತ್ತು
ವರ್ಷೇ ವರ್ಷೇ ನಡೆದ ಯುದ್ಧಗಳಿಂದ ಗೊಂಡ್ವಾನ ಚೇತರಿಸಿಕೊಳ್ಳಲು ಎರಡು ಮೂರು ವರ್ಷಗಳಾದವು. ಇನ್ನು ಯಾವ ಶತ್ರುವಿನ ಕಾಟವೂ ಸದ್ಯಕ್ಕಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದರು ಜನ. ಆದರೆ ಆಕೆಯ ರಾಜ್ಯದ ಮೇಲೆ ಮೊಗಲ್ ಸಾಮ್ರಾಟ್ ಅಕ್ಬರನ ವಕ್ರದೃಷ್ಟಿ ಬಿತ್ತು.
ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ಅಖಂಡ ಹಿಂದು ಸ್ಥಾನದ ಏಕಚಕ್ರಾಧಿಪತಿಯಾಗಬೇಕೆಂಬ ಮಹತ್ವಕಾಂಕ್ಷಿ ಅಕ್ಬರ್. ಈ ದೌರ್ಬಲ್ಯವನ್ನರಿತ ಅವನ ಕೆಲವು ಸರದಾರರು ರಾಣಿ ದುರ್ಗಾವತಿಯ ಮೇಲೆ ಇಲ್ಲ ಸಲ್ಲದ ಚಾಡಿ ಹೇಳಿ ಗೊಂಡ್ವಾನ ರಾಜ್ಯವನ್ನು ವಶಪಡಿಸಿಕೊಳ್ಳಲು ಸಾಮ್ರಾಟನ ಅನುಮತಿ ಬೇಡಿದರು. ರಾಣಿ ತುಂಬ ಉದ್ಧತಳಾಗಿ ಅಕ್ಬರ್ ಚಕ್ರವರ್ತಿಯ ಬಗ್ಗೆ ಬಹು ತಾತ್ಸಾರ ತೋರಿಸುತ್ತ ಮೊಗಲ್ ರಾಜ್ಯ ಗಡಿಗಳ ಮೇಲೆ ಆಕ್ರಮಣವನ್ನು ಕೂಡ ಮಾಡುತ್ತಿರುವಳೆಂದು ಖರಾ ಪ್ರಾಂತಾಧಿಕಾರಿ ಅಸಫ್ ಖಾನ್ ದೂರುಕೊಟ್ಟ. ಅನಿವಾರ್ಯವಾದರೆ ಮಾತ್ರ ಯುದ್ಧ ಮಾಡಬಹುದು ಎಂಬಷ್ಟರ ಮಟ್ಟಿಗೆ ಅಕ್ಬರ್ ಸಮ್ಮತಿಸಿದ. ಯುದ್ಧದಲ್ಲಿ ರಾಣಿಯನ್ನು ಸೋಲಿಸಿ ಸೆರೆಹಿಡಿದಾಗ ಆಕೆಯನ್ನು ಸಕಲ ಗೌರವ – ಮರ್ಯಾದೆಗಳಿಂದ ತನ್ನ ಬಳಿಗೆ ಕರೆತರಬೇಕೆಂದೂ ಕಟ್ಟು ನಿಟ್ಟು ಮಾಡಿದ. ಕುತಂತ್ರಿ ಅಸಫ್ ಖಾನನಿಗೆ ಇಷ್ಟು ಅವಕಾಶ ಸಿಕ್ಕದ್ದೇ ಸಾಕಾಯಿತು. ಅಕ್ಬರನ ಹೆಸರಿನಲ್ಲಿ ರಾಣಿಗೆ ಒಂದು ವ್ಯಂಗವೂ ಅವಮಾನಕರವೂ ಆದ ಪತ್ರ ಬರೆದು ಜೊತೆಗೆ ಒಂದು ಬಂಗಾರದ ಗಿಳಿ ಪಂಜರವನ್ನು ಕಳಿಸಿಕೊಟ್ಟ.
ದುರಹಂಕಾರಕ್ಕೆ ಎಚ್ಚರಿಕೆ
ದುರ್ಗಾವತಿಯ ಆಸ್ಥಾನಕ್ಕೆ ಪತ್ರವನ್ನೋದಿದಾಗ, ಬಂಗಾರದ ಪಂಜರವನ್ನು ನೋಡಿದಾಗ ಕೋಪದ ಕಿಡಿ ಹಾರಿದವು. ತಮ್ಮ ಮೇಲೆ ನಿಷ್ಕಾರಣವಾಗಿ ಕಾಲು ಕೆರೆದು ಬರುತ್ತಿರುವ ಶತ್ರುವಿನ ಸೊಕ್ಕು ಮುರಿದು ಕಳಿಸಬೇಕೆಂದು ಬಿಸಿರಕ್ತದ ತರುಣ ದೊರೆ ವೀರನಾರಾಯಣ ಮೊದಲಾಗಿ ಯುವಕ ಸರದಾರರೆಲ್ಲರೂ ವಿರೋಚಿತವಾಗಿ ಮಾತನಾಡಿದರು. ವಿಚಾರವಂತರಾದ ಹಿರಿಯರು ಪ್ರಬಲ ಚಕ್ರಾಧಿಪತ್ಯವನ್ನೇ ಬೆಳೆಸಿದ್ದ ಮೊಗಲರ ಶಕ್ತಿ, ಪ್ರಾಬಲ್ಯಗಳ ಕಡೆ ಗಮನ ಸೆಳೆದು ಆವೇಶಕ್ಕಿಂತಲೂ ಎಚ್ಚರಿಕೆಯಿಂದ ನಡೆಯುವುದು ವಿಹಿತ ಎಂದರು. ಅಸಫ್ ಖಾನನೊಂದಿಗೆ ಸ್ನೇಹ ಸಂಧಾನ ಮಾಡಿಕೊಳ್ಳುವುದೇ ಸದ್ಯಕ್ಕೆ ಕ್ಷೇಮ ಎಂದು ವೃದ್ಧ ಸರದಾರರು ಸಲಹೆ ಮಾಡಿದರು.
ಸ್ವಲ್ಪ ಹೊತ್ತು ಗಂಭೀರವಾದ ಚರ್ಚೆ ಆದನಂತರ ಮಹಾರಾಣಿ ತನ್ನ ನಿಶ್ಚಯವನ್ನು ಸ್ಪಷ್ಟಪಡಿಸಿದಳು. ಕೊನೆಯಲ್ಲಿ, “ಗೊಂಡ್ವಾನದ ಗಂಡುಗಲಿಗಳೇ, ರಾಜ ನಿಷ್ಠರಾದ ಸರದಾರರೇ ಮೊಗಲರ ದೊರೆಯೇ ಬಂದಿದ್ದರೆ ಅವರೊಂದಿಗೆ ಸಂಧಾನದ ಮಾತನ್ನು ಆಡಬಹುದಾಗಿತ್ತು. ಕೇವಲ ಪ್ರಾಂತಾಧಿಕಾಋಇ ಅಸಫ್ ಖಾನನು ನಡೆದುಕೊಂಡ ರೀತಿ ನಮ್ಮ ಸ್ವಾಭಿಮಾನಕ್ಕೆ ಸವಾಲು. ಇಂದು ನಮ್ಮ ನಾಡಿನ ಪ್ರಾಣ ಮತ್ತು ಮಾನರಕ್ಷಣೆ ನಿಮಗೆ ಸೇರಿದೆ. ಶತ್ರುವಿನ ರಾಕ್ಷಸ ಬಲಕ್ಕೆ ಹೆದರಿ ನಮ್ಮ ದೈವೀತೇಜ ಮಂಕಾಗಬಾರದು. ನಮ್ಮ ಪವಿತ್ರವೂ ಸನಾತನವೂ ಆದ ಧರ್ಮ – ಸಂಸ್ಕೃತಿಗಳ ರಕ್ಷಣೆಗಿಂತ ದೊಡ್ಡ ಪುಣ್ಯ ಕಾರ್ಯ ಬೇರೆ ಯಾವುದೂ ಇಲ್ಲ. ಎಲ್ಲ ಅನ್ಯಾಯ ಅನಾಚಾರಗಳಿಗೂ ಸಿಡಿದೆದ್ದು, ಪ್ರಾಣ ಹೋದರೂ ಸರಿ, ಆತ್ವಗೌರವವನ್ನು ಕಾಪಾಡಿಕೊಳ್ಳುವಿರೊ, ಹೇಡಿಗಳಂತೆ ಶರಣಾಗುವಿರೋ?” ಎಂಬ ರಾಣಿಯ ಸ್ಫೂರ್ತಿಯುತ ವೀರ ನುಡಿಗಳನ್ನು ಸಭೆ ಸ್ತಬ್ಧವಾಗಿ ಕೇಳಿತು. ರಾಜ್ಯ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹೋರಾಡುವುದಾಗಿ ಎಲ್ಲರೂ ಒಕ್ಕೊರಲಿನಿಂದ ಪ್ರತಿಜ್ಞೆ ಮಾಡಿದರು.
“ಪರರ ರಾಜ್ಯವನ್ನು ಅಪಹರಿಸಬೇಕೆನ್ನುವ ದುರಾಸಿ ಒಳ್ಳೆಯದಲ್ಲ. ರಜಪೂತ ವೀರ ರಮಣಿಯರು ಪಂಜರದಲ್ಲಿ ನಿಮ್ಮಂತಹ ಹುಲಿಗಳನ್ನು ಹಿಡಿದು ಆಡಿಸಬಲ್ಲರು – ಇದು ನಿಮ್ಮ ಚಕ್ರವರ್ತಿಗೆ ತಿಳಿದಿರಲಿ” ಎಂದು ಅಸಫ್ ಖಾನ್ ನಿಗೆ ಉತ್ತರ ಹೋಯಿತು.
ಶಕ್ತಿದೇವತೆಯೇ!
ಶಕ್ತಿ ಮಂದಾಂಧನಾಗಿದ್ದ ಅಸಫ್ ಖಾನನ ಸೇನೆ ಗೊಂಡ್ವಾನದ ಗಡಿಯ ಬಳಿ ಬೀಡುಬಿಟ್ಟಿತು. ರಾಣಿ ತನ್ನ ಚತುರಂಗ ಬಲವನ್ನು ಸಜ್ಜುಗೊಳಿಸಿ ಗಡಿಯ ಬಳಿ ಇಟ್ಟಳು. ಖಾನನದು ಕೇವಲ ಉಪ್ಪಿನ ಋಣಕ್ಕೆ ಕಟ್ಟುಬಿದ್ದು ಬಂದ ಸಂಖ್ಯಾಬಲ. ರಾಣಿಯದು ಮಾತೃಭೂಮಿಯ ಸಂರಕ್ಷಣೆಗಾಗಿ ಪ್ರಾಣವನ್ನು ಪಣವಾಗಿಟ್ಟು ನಿಂತ ಆತ್ಮಬಲ. ಘೋರವಾದ ಯುದ್ಧ ಪ್ರಾರಂಭವಾಯಿತು. ಶಿರಸ್ತ್ರಾಣ, ವಜ್ರಕವಚಗಳನ್ನು ಧರಿಸಿ, ಬಿಲ್ಲು ಬಾಣ, ಖಡ್ಗ ಮುಂತಾದ ಶಸ್ತ್ರ ಸಜ್ಜಿತಳಾಗಿ ರಾಣಿ ತನ್ನ ಪ್ರಿಯವಾದ ಆನೆಯನ್ನೇರಿದಳು. ಕಣ್ಣು ಕೋರೈಸುವಂತೆ ಹೊಳೆಯುತ್ತಿದ್ದ ಈಟಿಯನ್ನು ಹಿಡಿದು ಸಾಕ್ಷಾತ್ ದುರ್ಗೆಯಂತೆ ರಣರಂಗವನ್ನು ಹೊಕ್ಕಳು. ಆಕೆಯ ಪರಾಕ್ರಮದ ತೇಜದೆದುರು ಮೊಗಲ್ ಸೇನೆಗೆ ಕಣ್ಣು ಕಾಣದಾಯಿತು.
ದ್ರೋಹ ಮೊಳಕೆ ಇಟ್ಟಿತು
ಸತತವಾಗಿ ಎರಡು ಕದನಗಳಲ್ಲಿ ಅಸಫ್ ಖಾನ್ ಸೋತು ಹಿಮ್ಮೆಟ್ಟಿದ. ಆತನ ಸೇನೆ ಭೀತನಾಗಿ ಪಲಾಯನ ಮಾಡುವುದೇ ಹೋರಾಡುವುದೇ ಎಂದು ತೋಚದೆ ದೂರಕ್ಕೆ ಓಡಿಹೋಗಿ ಒಂದೆಡೆ ಅಡಗಿಕೊಂಡಿತು. ಜಯಲಭಿಸಿದ ಹುಮ್ಮಸ್ಸಿನಲ್ಲೇ ಹಿಂಬಾಲಿಸಿ ಹೋಗಿ ಅದೇ ರಾತ್ರಿ ಶತ್ರುಗಳ ಗುಪ್ತಶಿಬಿರವನ್ನು ಮುತ್ತಬೇಕೆಂಬ ರಾಣಿಯ ಆದೇಶವನ್ನು ಕೆಲವು ಸರದಾರರೇ ನಯವಾಗಿ ನಿರಾಕರಿಸಿದರು. ಶತ್ರುವಿನ ಕುಟಿಲತಂತ್ರದ ಬೀಜ ಆಗಲೆ ಮೊಳೆತು ರಾಣಿಯ ಸರದಾರರಲ್ಲಿ ಒಡಕು ಹುಟ್ಟಿತು. ದಣಿದ ಸೇನೆಗೆ ವಿಶ್ರಾಂತಿ ಕೊಡುವುದು ಧರ್ಮ, ಶತ್ರು ಪಲಾಯನ ಮಾಡಿ ತಮ್ಮ ವಿಜಯ ಖಚಿತವಾಗಿರುವ ಭೀತಿ ಏಕೆ ಎಂದು ಪ್ರತಿಯಾಡಿದರು. ಭೀತಿಯನ್ನೇ ಅರಿಯದ ರಾಣಿಗೆ, ಯುದ್ಧದಲ್ಲಿ ಗಾಯಗೊಂಡ ಸೈನಿಕರು ಸೂಕ್ತವಾದ ಚಿಕಿತ್ಸೆ ಪಡೆದು ಗುಣವಾಗುವವರೆಗೂ ಆತಂಕಪಡುತ್ತ ಸ್ವತಃ ನಿಂತು ವಿಚಾರಿಸಿಕೊಳ್ಳೂತ್ತಿದ್ದ ರಾಣಿಗೆ ಇಂತಹ ಉಪದೇಶ! ಅದುವರೆಗೂ ತನ್ನ ಮಾತಿಗೆ ಎದುರಾಡಿದವರನ್ನು ರಾಣಿ ಕಂಡಿರಲಿಲ್ಲ. ಸರದಾರರ ಈ ರೀತಿ, ಯಾವುದೋ ವಿಪತ್ತಿನ ಸೂಚನೆ ಎಂದೆನಿಸಿತು. ನಿರುಪಾಯಳಾದ ರಾಣಿ ಚಿಂತಾಕ್ರಾಂತವಾಗಿ ತನ್ನ ಬೀಡಿಗೆ ಹಿಂತಿರುಗಿದಳು.
ಶತ್ರು ಓಡಿಹೋದನೆಂದು ಭ್ರಮಿಸಿದ್ದ ಗೊಂಡ್ವಾನರ ಶಿಬಿರದ ಮೇಲೆ ಮಾರನೆ ಬೆಳಿಗ್ಗೆ ಮೊಗಲರು ಬಿದ್ದರು. ಮತ್ತೆ ಭಯಂಕರವಾದ ಕದನವಾಯಿತು. ದೊರೆ ವೀರನಾರಾಯಣ ತೀವ್ರವಾಗಿ ಗಾಯಗೊಂಡರು. ಮೂರ್ಛಿತರಾದರೆಂದು ರಾಣಿಗೆ ವಾರ್ತೆ ಬಂದಿತು. ಮರ್ಮಾಹತಳಾದ ತಾಯಿ ಮನಸ್ಸಿನಲ್ಲೇ ಮಗನ ಕ್ಷೇಮವನ್ನು ಹಾರೈಸಿ ಜಗನ್ಮಾತೆಯನ್ನು ಪ್ರಾರ್ಥಿಸಿ ಮೊರೆಯಿಟ್ಟಳು. ದೊರೆಯನ್ನು ಕೂಡಲೇ ದೂರದ ಸುರಕ್ಷಿತ ಶಿಬಿರಕ್ಕೆ ಸಾಗಿಸಿ ಸೂಕ್ತವಾದ ಚಿಕಿತ್ಸೆಗೆ ಏರ್ಪಾಟು ಮಾಡಬೇಕೆಂದು ಹೇಳಿ ತನ್ನ ಬೆಂಗಾವಲಿನ ಕೆಲವರನ್ನು ಕಳಿಸಿದಳು. ಆದಷ್ಟು ಬೇಗ ತಾನೂ ಬಂದು ದೊರೆಯನ್ನು ನೋಡುವುದಾಗಿಯೂ ಹೇಳಿದಳು.
ಶತ್ರುವಿನ ಕೈ ಮೇಲಾಗಿತ್ತು. ಇದ್ದಕ್ಕಿದ್ದಂತೆ ರಾಣಿ ಏಕಾಕಿಯಾಗಿ ಶತ್ರುಗಳ ಮಧ್ಯೆ ಸಿಕ್ಕಿಕೊಳ್ಳುವ ಪರಿಸ್ಥಿತಿ ಬಂದಿತು. ನೆಚ್ಚಿದವರು ಮೆಲ್ಲಗೆ ದೂರವಾಗಿದ್ದರು. ರಾಣಿಯ ತೋಳು, ಭುಜಗಳಿಗೆ ಬಾಣಗಳು ನೆಟ್ಟು ರಕ್ತ ಬಸಿದಿತ್ತು. ನಂಬಿಕೆ ದ್ರೋಹ ಮಾಡಿದ ಆಘಾತ ಅದಕ್ಕಿಂತ ಹೆಚ್ಚು ನೋವನ್ನುಂಟುಮಾಡಿತು. ಅಷ್ಟು ಹೋರಾಡಿಯೂ ಆಯಾಸಗೊಳ್ಳದಿದ್ದ ಆಕೆಗೆ ಈಗ ಬಹಳ ದಣಿವಾದಂತೆ ತೋರಿತು.
ದೀಪ ಆರಿತು, ಆದರೂ ಜನಮನದಲ್ಲಿ ಬೆಳಗುತ್ತಿದೆ
ಬೆಂಗಾವಲಿನ ಪಡೆಯ ನಾಯಕ ಶತ್ರುಂಜಯ ಸಂಕೇತ ಮಾಡಿದ ಶತ್ರುಂಜಯನ ಕುದುರೆಯನ್ನನುಸರಿಸಿ ಮಾಹುತ ಗಣೇಶ ವೇಗವಾಗಿ ಆನೆಯನ್ನು ಓಡಿಸಿದ. ಶತ್ರುಗಳಿಗೆ ಸುಳಿವು ಹತ್ತದೆ ಏಕಾಂತ ಸ್ಥಳಕ್ಕೆ ರಾನಿಯನ್ನು ಕರೆತಂದರು. ವೀರನಾರಾಯಣ ದೊರೆಯ ಸ್ಥಿತಿಯನ್ನು ಕಂಡು ಗೊಂಡ್ವಾನ ಸೇನೆ ಚದುರಿ ಓಡಿಹೋಗುತ್ತಿದ್ದುದನ್ನೂ ಅಸಫ್ ಖಾನ್ ರಾಣಿಯವರನ್ನು ಸೆರೆಹಿಡಿಯುವ ಹವಣಿಕೆಯಲ್ಲಿದ್ದುದನ್ನೂ ಅರಿತು ಶತ್ರುಂಜಯ ರಾಣಿಯ ರಕ್ಷಣೆಗೆ ಈ ಮುಂಜಾಗ್ರತೆಯ ಕ್ರಮವನ್ನು ಕೈಗೊಂಡಿದ್ದ. ರಾಣಿಗೂ ಸೆರೆಹಿಡಿಯುವ ಹವಣಿಕೆಯಲ್ಲಿದ್ದುದನ್ನೂ ಅರಿತು ಶತ್ರುಂಜಯ ರಾಣಿಯ ರಕ್ಷಣೆಗೆ ಈ ಮುಂಜಾಗ್ರತೆಯ ಕ್ರಮವನ್ನು ಕೈಗೊಂಡಿದ್ದ. ರಾಣಿಗೂ ಪರಿಸ್ಥಿತಿಯನ್ನು ವಿವರಿಸಿದ. ಆಕೆ ಎಲ್ಲವನ್ನೂ ಶಾಂತವಾಗಿ ಕೇಳಿದಳು. ತನಗೂ ರಾಜ್ಯಕ್ಕೂ ಅಶುಭ ಕಾದಿದೆ ಎಂದು ಆಕೆಯ ಅಂತರಾತ್ಮ ನುಡಿಯಿತು. ಯಾವ ವಿಚಾರದಲ್ಲೂ ದುಡುಕುವುದು ರಾಣಿಯ ಸ್ವಭಾವವಲ್ಲ. ಆದರೆ ಮಿಂಚಿನಂತೆ ಕೆಲಸ ಮಾಡುವ ಬುದ್ಧಿ ಆಕೆಯದು.
ರಣರಂಗದಲ್ಲಿ ಗಾಯಗೊಂಡು ಏಕಾಕಿಯಾದ ತನ್ನ ರಕ್ಷಣೆಯನ್ನು ನಿಷ್ಠೆಯಿಂದ ಮಾಡಿದ ಗಣೇಶನಿಗೆ ಕೊರಳಲ್ಲಿದ್ದ ಒಂದೇ ಒಂದು ರತ್ನಹಾರವನ್ನು ತೆಗೆದು ಬಹುಮಾನವಾಗಿ ಕೊಟ್ಟಳು. ತನ್ನ ಮೆಚ್ಚಿನ ಆನೆಯ ಸೊಂಡಿಲನ್ನು ಪ್ರೀತಿಯಿಂದ ನೇವರಿಸಿದಳು. “ಶತ್ರುಂಜಯಾ, ನಿನ್ನ ನಿಷ್ಠೆ ಆದರ್ಶವಾದುದು. ಚುಚ್ಚಿಕೊಂಡಿರುವ ಈ ಬಾಣಗಳಿಗಿಂತಲೂ ನಮ್ಮವರೇ ಬಗೆದ ದ್ರೋಹ ಹೆಚ್ಚು ನೋವು ಕೊಡುತ್ತಿದೆ. ಹುಂ……..ಜಗನ್ಮಾತೆಯ ಇಚ್ಛೆ!……ಆಗಲಿ………ಯಾವ ಶತ್ರುವಿಗೂ ಇದುವರೆಗೆ ತಲೆಬಾಗದೆ, ಸೋಲದೆ ಬಾಳಿದೆ. ಸೋಲೆಂದರೇನು ಎಂದು ಈಗ ತಿಳಿಯಬೇಕಾಗಿ ಬಂದಿತು. ಆದರೆ ಶರಣಾಗಿ ಅಪಮಾನವೆಂದರೇನು ಎಂದು ತಿಳಿಯುವುದು ಬೇಡ” -ಹೀಗೆ ಹೇಳಿ ಭವಾನಿ ಎಂಬ ತನ್ನ ಕಠಾರಿಯಿಂದ ಇರಿದುಕೊಂಡು ಆತ್ಮಾರ್ಪಣೆ ಮಾಡಿದಳು. ಮಹಾರಾಣಿ ದುರ್ಗಾವತಿ. ಆಕೆಯ ತಪ್ಪದ ಗುರಿಯನ್ನು ಮೆಚ್ಚಿ ದಳಪತಿಸಿಂಹ ಕೊಟ್ಟ ಭವಾನಿ ಕಠಾರಿ ಈಗ ಆಕೆಯಿಟ್ಟ ಹಿರಿಯ ಧ್ಯೇಯದ ಗುರಿಗೆ ತಪ್ಪದೆ ಆಕೆಯನ್ನು ಮುಟ್ಟಿಸಿತು.
ಶತ್ರುಂಜಯ, ಮಾಹುತ ಗಣೇಶ ಮತ್ತು ರಾಣಿಯ ಪ್ರಿಯವಾದ ಆನೆ ಅಸಹಾಯಕರಾಗಿ ಕಣ್ಣೀರ ಧಾರೆ ಸುರಿಸುತ್ತ ನಿಂತರು.
ಮಹಾ ಚೈತನ್ಯವೊಂದು ದೇಹವನ್ನು ತೊರೆದು ವಿಶ್ವದಲ್ಲಿ ಲೀನವಾಯಿತು. ಮಹಾರಾಣಿ ದುರ್ಗಾವತಿಯಂತಹ ಚೇತನಗಳು ಒಂದು ಕಾಲದವರಲ್ಲ. ಕಾಲ ಕಾಲಕ್ಕೂ ಉದಾತ್ರ ಧ್ಯೇಯಗಳನ್ನು ಸಂರಕ್ಷಿಸಲು ಬರುತ್ತಿರುತ್ತಾರೆ. ಅವರ ಬದುಕು ದೊಡ್ಡದು. ಅವರಿಗೆ ಸಾವೆಂಬುದೇ ಇಲ್ಲ.
ಕೃಪೆ : kanaja.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.