ನವದೆಹಲಿ: ತನ್ನ ಮನೋರಂಜನೆಗಾಗಿ, ವಿಕೃತ ಸಂತೋಷಕ್ಕಾಗಿ ಮನುಷ್ಯ ಪ್ರಾಣಿಗಳನ್ನು ಅತಿ ಹೀನಾಯ ರೀತಿಯಲ್ಲಿ ಬಳಸಿಕೊಳ್ಳುತ್ತಾನೆ. ಗೂಳಿ ಓಟ, ಕೋಳಿ ಅಂಕ ಇದಕ್ಕೆಲ್ಲಾ ಪ್ರತ್ಯಕ್ಷ ಸಾಕ್ಷಿ. ಆದರೆ ಇದಕ್ಕಿಂತಲೂ ಭಯಾನಕವಾಗಿ ‘ನಾಯಿ ಕಾದಾಟ’ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ನಾಯಿಗಳ ರಕ್ತಪಾತ ನಡೆಸಲಾಗುತ್ತದೆ.
ಮಾನವ ಎಂಬ ಬುದ್ಧಜೀವಿಯ ಮನೋ ವಿಕಾರತೆಗೆ ಹಿಡಿದ ಕೈಗನ್ನಡಿಯಂತಿದೆ ಈ ‘ನಾಯಿಗಳ ಕಾದಾಟ’. ಕೋಳಿ ಅಂಕದಂತೆಯೇ ನಡೆಯುವ ಈ ಸ್ಪರ್ಧೆಯಲ್ಲಿ ನಾಯಿಗಳನ್ನು ಕೆರಳಿಸಿ ಪರಸ್ಪರ ಕಾದಾಟ ಮಾಡುವಂತೆ ಮಾಡಲಾಗುತ್ತದೆ.
ಎರಡು ನಾಯಿಗಳಿಗೆ ಆಹಾರ ನೀಡದೆ ಕೆಲ ದಿನಗಳ ಕಾಲ ಗೂಡಿನಲ್ಲಿ ಬಂಧಿಸಿ ಇಡಲಾಗುತ್ತದೆ, ಇವುಗಳ ಬಾಲಗಳನ್ನೂ ಕತ್ತರಿಸಲಾಗುತ್ತದೆ. ಇದರಿಂದ ಕೆರಳಿದ ಸಿಂಹದಂತಾಗುವ ನಾಯಿಗಳನ್ನು ಗೂಡಿನಿಂದ ಬಿಟ್ಟು ಪರಸ್ಪರ ಕಚ್ಚಾಡುವಂತೆ ಮಾಡಲಾಗುತ್ತದೆ, ಈ ಕಚ್ಚಾಟದಲ್ಲಿ ನಾಯಿಗಳ ರಕ್ತಪಾತವೇ ನಡೆಯುತ್ತದೆ. ಸೋತ ನಾಯಿ ಸಾವಿಗೆ ಶರಣಾಗುತ್ತದೆ.
‘ನಾಯಿಗಳ ಕಾದಾಟ’ದಲ್ಲಿ ಬೆಟ್ಟಿಂಗ್ ಕೂಡ ನಡೆಸಲಾಗುತ್ತದೆ. ಸಾವಿರ, ಲಕ್ಷದಷ್ಟು ಬೆಟ್ ಕಟ್ಟಲಾಗುತ್ತದೆ. ಈ ಸ್ಪರ್ಧೆಗಾಗಿ ನಾಯಿಗಳನ್ನು ಅಫ್ಘಾನಿಸ್ಥಾನ, ಪಾಕಿಸ್ಥಾನ, ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಂದ ಕಳ್ಳ ಸಾಗಾಣೆ ಮೂಲಕ ತರಿಸಿಕೊಳ್ಳಲಾಗುತ್ತದೆ. ಭಾರತೀಯ ತಳಿಗಳನ್ನೂ ಬಳಸಲಾಗುತ್ತದೆ.
ಆಫ್ರಿಕಾದಲ್ಲೋ, ಯುರೋಪನಲ್ಲೋ ಈ ಸ್ಪರ್ಧೆ ನಡೆಯುತ್ತದೆ ಎಂದು ಕೊಂಡರೆ ಅದು ತಪ್ಪು, ನಮ್ಮ ರಾಷ್ಟ್ರ ರಾಜಧಾನಿ ಹೊರ ವಲಯದಲ್ಲಿರುವ ಗೋರೆಗಾಂವ್ನಲ್ಲಿ ಇಂತಹ ಸ್ಪರ್ಧೆಗಳು ಆಯೋಜನೆಗೊಳ್ಳುತ್ತಿವೆ. ಮನೋರಂಜನೆಗಾಗಿ ನಡೆಸುತ್ತಿರುವ ಆಟವಂತೆ ಇದು. ಸುಪ್ರೀಂಕೋರ್ಟ್ ಇದನ್ನು ನಿಷೇಧಿಸಿದ್ದರೂ ನಾಯಿಗಳ ಕಾದಾಟ ಅಂತ್ಯಗೊಂಡಿಲ್ಲ. ಪೊಲೀಸರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿಲ್ಲ.
ತನ್ನ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಗಳನ್ನು ಪರಸ್ಪರ ಕಚ್ಚಾಡುವಂತೆ ಮಾಡುವ ಮಾನವನ ಅನಾಗರಿಕತೆಗೆ ಅಂತ್ಯ ಎಂಬುದು ಇಲ್ಲ. ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.