ಪುತ್ತೂರು : ಒಬ್ಬ ಕಟ್ಟಡ ಕಾರ್ಮಿಕನಾಗಿ 8.50 ರೂಪಾಯಿ ದಿನಗೂಲಿ ಸಂಬಳಕ್ಕೆ ಒಂದು ಸಂಸ್ಥೆಗೆ ಸೇರಿ ಸಂಸ್ಥೆಯ ಒಂದು ವಿಭಾಗದ ಮ್ಯಾನೇಜರ್ ಹುದ್ದೆಗೆ ತಲಪಿ ನಿವೃತ್ತಿಹೊಂದಲು ಸಾಧ್ಯ ಇದೆಯೇ? ಹೌದು ಇದು ಕೂಡಾ ಸಾಧ್ಯವಿದೆ. ಕ್ಯಾಂಪ್ಕೋದಲ್ಲಿ ಕೆಲಸ ಮಾಡಿದ ಈ ವ್ಯಕ್ತಿ ಚಂದ್ರಶೇಖರ್.
ಚಂದ್ರಶೇಖರ್ ಕಳೆದ ವಾರ ಸೇವಾ ನಿವೃತ್ತಿಹೊಂದಿದರು. ಅವರ ಸೇವಾ ನಿವೃತ್ತಿಗೆ ಸಹೋದ್ಯೋಗಿಗಳಿಂದ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ತ್ತೂರು ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ರೀಜಿನಲ್ ಮ್ಯಾನೇಜರ್ ಆರ್.ಎಂ ನಂಬಿಯಾರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ತಮ್ಮ ಸುರ್ದೀರ್ಘ 40 ವರ್ಷದ ಸೇವೆಯನ್ನು ತೆರೆದಿಟ್ಟ ಚಂದ್ರಶೇಖರ್, 8.50 ರೂಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿ ನಿವೃತ್ತಿಯ ಹೊತ್ತಿಗೆ 60 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಖುಷಿಯನ್ನು ಹೇಳುತ್ತಾ ಸಂಸ್ಥೆ ತನ್ನನ್ನು ಹೇಗೆ ಬೆಳೆಸಿತು ಎಂದು ಹೆಮ್ಮೆಯಿಂದ ಹೇಳುತ್ತಿದ್ದರು.
1979 ರಲ್ಲಿ ಕ್ಯಾಂಪ್ಕೋ ಸಂಸ್ಥೆಯ ತ್ತೂರಿನ ಕಟ್ಟವೊಂದಕ್ಕೆ ಮಣ್ಣಿನ ಕೆಲಸ ಮಾಡಲು ದಿನಗೂಲಿ ನೌಕರನಾಗಿ ಚಂದ್ರಶೇಖರ್ ಅವರು ಮೇಸ್ತ್ರಿಯೊಬ್ಬರ ಜೊತೆ ಬಂದಿದ್ದರು. ಆಗ ಇವರಿಗೆ ಸಿಗುತ್ತಿದ್ದ 8.50 ರೂಪಾಯಿ. ಮೇಸ್ತ್ರಿ ಅವರಿಗೆ ಸಂಸ್ಥೆ 10 ರೂಪಾಯಿ ಕೊಡುತ್ತಿತ್ತು. ಖರ್ಚು ಕಳೆದ 8.50 ರೂಪಾಯಿ ಚಂದ್ರಶೇಖರ್ ಅವರ ಸಂಬಳ. ಅದಾದ ನಂತರ ಕ್ಯಾಂಪ್ಕೋ ಕೊಕೋ ಪ್ಲಾಂಟೇಶನ್ ವಿಭಾಗದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿದರು. ಆಗ ಲಾರಿ ಬಂದಿತ್ತು, ಲಾರಿಯಲ್ಲಿ ಕೊಕೋ ಸಾಗಾಟ ಸೇರಿದಂತೆ ಇತರ ಸಾಗಾಟ ಸಂದರ್ಭ ಕಂಡೆಕ್ಟರ್ ಆಗಿ ಹೋಗಲು ಸಂಸ್ಥೆ ಹೇಳಿತು. ಆದರೆ ಆರು ತಿಂಗಳು ಹೋದಾಗ ಅಪಾತಗಳು ನೋಡಿದಾಗ ಭಯಗೊಂಡು ಲಾರಿಯಲ್ಲಿ ಹೋಗಲು ಸಾಧ್ಯವಿಲ್ಲ ನಾನು ಗ್ರೇಡರ್ ಆಗಿಯೇ ಕೆಲಸ ಮಾಡುತ್ತೇನೆ ಎಂದರು. ಹೀಗಾಗಿ ಮತ್ತೆ ವಿಟ್ಲದಲ್ಲಿ ಕ್ಲಾಸರ್ ಆಗಿ ದಿನಗೂಲಿ ವೇತನದಲ್ಲೇ ಮುಂದುವರಿದರು. ಕೇವಲ ಒಂದು ಲುಂಗಿ ಹಾಗೂ ಬನಿಯನ್ನಲ್ಲಿ ಲಾರಿಗೆ ತುಂಬುವುದು, ಇಳಿಸುವುದು ಇತ್ಯಾದಿಗಳನ್ನು ಮಾಡುತ್ತಲೇ ಇದ್ದರು. ಆಗ ಕೊಕೋ ಪ್ಲಾಂಟೇಶನ್ ಕೆಲಸವೂ ಇದೆ ಎಂದು ತಿಳಿದು ಖಾಯಂ ಮಾಡುವಂತೆ ಸಂಸ್ಥೆಗೆ ಮನವಿ ಮಾಡಿದರು. 1984 ರಲ್ಲಿ ಈ ಬಗ್ಗೆ ವಿಚಾರಿಸಿದಾಗ ಈಗ ಪ್ಲಾಂಟೇಶನ್ ಕೆಲಸ ಇಲ್ಲವಂದು ಉತ್ತರ ಬಂತು. ನಂತರ 1986 ರಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಬಂತು. ಆಗ ಖಾಯಂ ಆಗಿ ಸೇರಿಕೊಂಡರು. 1993 ರಲ್ಲಿ ಪ್ಲಾಂಟೇಶನ್ ಕೆಲಸ ಬಿಟ್ಟು ಗ್ರೇಡರ್ ಆಗಿ ವಿಟ್ಲಕ್ಕೆ ಹೋದರು. ನಂತರ 1994 ರಲ್ಲಿ ಸಿರಸಿ ನಂತರ ಕಾಂಞಗಾಡ್, ಪುತ್ತೂರು ಹೀಗೇ ವಿವಿಧ ಕಡೆಗಳಲ್ಲಿ ಕೆಲಸ ಮಾಡಿದರು. ಕೊನೆಗೆ ಕಳೆದ ವರ್ಷ ಕಡಬದ ಬ್ಯಾಂಚ್ ಮೆನೇಜರ್ ಆಗಿ ನಿಯೋಜನೆಗೊಂಡು ನಿವೃತ್ತರಾದರು. ಆಗ ಅವರ ವೇತನ 60,000 ರೂಪಾಯಿ.
ಕಡಬ ಶಾಖೆಯ ಮ್ಯಾನೇಜರ್ ಹುದ್ದೆ ಲಭಿಸುವ ಹೊತ್ತಿಗೆ, ಇದು ಸಾಧ್ಯವಿಲ್ಲ ಎಂದರು ಚಂದ್ರಶೇಖರ್, ಅದಕ್ಕೆ ಅವರು ಕೊಟ್ಟ ಕಾರಣ ಹೀಗಿತ್ತು, ” ನಾನು ಕೇವಲ SSLC ಓದಿದ್ದು, ನನಗೆ ಒಂದು ಶಾಖೆಯನ್ನು ನಿರ್ವಹಣೆ ಮಾಡಲು ಕಷ್ಟ, ಇಂಗ್ಲಿಷ್ ಬರುವುದಿಲ್ಲ. ಹೀಗಾಗಿ ನನಗೆ ಬೇಡ” ಎಂದಿದ್ದರು. ಇದಕ್ಕೆ ಕ್ಯಾಂಪ್ಕೋ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು, “ನಿಮಗೆ ಸಾಧ್ಯವಿದೆ, ನೀವು ಮಾಡಿ, ಅನುಭವವವೇ ಮುಖ್ಯವಾಗಿದೆ” ಎಂದು ನನ್ನನ್ನು ಮ್ಯಾನೇಜರ್ ಮಾಡಿದರು ಎಂದು ಹೇಳುತ್ತಾ ಚಂದ್ರಶೇಖರ್ ಕೃತಜ್ಞಾತಾ ಭಾವವನ್ನು ಹೊಂದುತ್ತಾರೆ.
ಇಲ್ಲಿ ಗಮನಿಸಬೇಕಾದ್ದು ಇಷ್ಟೇ, ಸಣ್ಣ ವೇತನದಿಂದ ತೊಡಗಿ ಲಕ್ಷ ಸಂಪಾದನೆಯೊಂದಿಗೆ ನಿವೃತ್ತರಾಗುವ ಅನೇಕರು ಇರಬಹುದು. ಆದರೆ ಸಂಸ್ಥೆಯೊಂದು ಅದರಲ್ಲೂ ಕ್ಯಾಂಪ್ಕೋ ಒಬ್ಬ ನೌಕರನನ್ನು ಹೇಗೆ ಬೆಳೆಸಿದೆ ಎಂಬುದು ಗಮನಿಸಬೇಕಾದ್ದು. ಎಸ್ಎಸ್ಎಲ್ಸಿ ಆಗಿರುವ ಒಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಗುರುತಿಸಿ ಬೆಳೆಸಿದೆ. ಇನ್ನೊಂದು ಸತತ ಪರಿಶ್ರಮ, ವಿಶ್ವಾಸಾರ್ಹತೆ ಹೇಗೆ ವ್ಯಕ್ತಿಯನ್ನು ಎತ್ತರಕ್ಕೆ ಬೆಳೆಸುತ್ತದೆ ಎನ್ನುವುದಕ್ಕೆ ಇಂದೊಂದು ಮಾದರಿ.
ಇಂತಹ ನೌಕರ ಸೇವಾ ನಿವೃತ್ತಿ ಸಂದರ್ಭ ಸಂಸ್ಥೆಯ ಇತರ ನೌಕರರು ಅಭಿನಂದನೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿದರು. ವಿಶೇಷವಾಗಿ ಈ ಕಾರ್ಯಕ್ರಮ ನಡೆಯಿತು.
ಕ್ಯಾಂಪ್ಕೋದಲ್ಲಿ ನೌಕರರು ಹಾಗೂ ಆಡಳಿತ ಮಂಡಳಿ ನಡುವೆ ಉತ್ತಮ ಸೌಹಾರ್ದ ಸಂಬಂಧವಿದೆ. ಅದರ ಜೊತೆಗೆ ನೌಕರರ ಪ್ರಾಮಾಣಿಕತೆ, ದಕ್ಷತೆಗೆ ಯಾವತ್ತೂ ಗೌರವ ಸಿಗುತ್ತದೆ. ಮುಂದೆಯೂ ಸಿಗುತ್ತದೆ. ಸಂಸ್ಥೆಗಳನ್ನು ವ್ಯಕ್ತಿಗಳನ್ನು ಬೆಳೆಸುವ ಕೆಲಸ ಮಾಡುತ್ತದೆ ಎನ್ನುತ್ತಾರೆ ಎಸ್.ಆರ್.ಸತೀಶ್ಚಂದ್ರ.
ಇಂದು ಚಂದ್ರಶೇಖರ್ ಹೇಳುತ್ತಾರೆ, “ನನ್ನನ್ನು ಕ್ಯಾಂಪ್ಕೋ ಬೆಳೆಸಿದೆ. ಎಲ್ಲೋ ಇದ್ದವನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಇವತ್ತು ಸಂತೃಪ್ತ ಜೀವನ ಸಾಗಿಸುತ್ತಿದ್ದೇನೆ. 3 ಮಕ್ಕಳೊಂದಿಗೆ ಸುಖೀ ಜೀವನ. ಮಕ್ಕಳೂ ವಿದ್ಯಾವಂತರಾಗಿದ್ದಾರೆ. ಇದಕ್ಕಾಗಿ ಕ್ಯಾಂಪ್ಕೋ ಸಂಸ್ಥಾಪಕ ವಾರಣಾಸಿ ಸುಬ್ರಾಯ ಭಟ್ ಹಾಗೂ ಇಂದಿನ ಎಲ್ಲಾ ಆಡಳಿತ ಮಂಡಳಿಯನ್ನು ನೆನಪಿಸಿಕೊಳ್ಳುತ್ತೇನೆ” ಎನ್ನುತ್ತಾರೆ.
✍ ಸುಳ್ಯನ್ಯೂಸ್.ಕಾಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.