ಸುದೀರ್ಘ ಸಮಯದಿಂದ ಕಾಯುತ್ತಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಕರಡು ಕೊನೆಗೂ ಸರ್ಕಾರದಿಂದ ಬಿಡುಗಡೆಯಾಗಿದೆ. ಕರಡು ಪ್ರತಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವೆಬ್ಸೈಟಿನಲ್ಲಿ ಸಾರ್ವಜನಿಕ ಪ್ರತಿಕ್ರಿಯೆಗಾಗಿ ಅಪ್ಲೋಡ್ ಮಾಡಲಾಗಿದೆ. ಕೇಂದ್ರ ಸರಕಾರದ ಶಿಕ್ಷಣ ನೀತಿಯ ವರದಿಯು ದಶಕಗಳವರೆಗೆ ದೇಶದ ಶೈಕ್ಷಣಿಕ ವ್ಯವಸ್ಥೆಯ ರೂಪುರೇಷೆಯಾಗುತ್ತದೆ. ಹಿಂದಿನ ಶಿಕ್ಷಣ ನೀತಿಯನ್ನು 1986 ರಲ್ಲಿ ರಾಜೀವ್ ಗಾಂಧಿ ಸರ್ಕಾರದಡಿ ಜಾರಿಗೊಳಿಸಲಾಯಿತು ಮತ್ತು ನಂತರ 1992 ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದಲ್ಲಿ ಇದನ್ನು ಪರಿಷ್ಕರಿಸಲಾಯಿತು.
ಹಿಂದಿನ ಶಿಕ್ಷಣ ನೀತಿಯೂ’ಇನ್ಫಾರ್ಮೇಶನ್ ರೆವಲ್ಯೂಷನ್’ನಿಂದಾಗಿ ಹಳತಾಗಿ ಹೋಗಿದೆ ಮತ್ತು ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ಮಾರ್ಗದರ್ಶನ ಮಾಡಲು ಹೊಸ ಮಾರ್ಗಸೂಚಿಯ ರಚನೆ ಇಂದಿನ ಅತ್ಯವಶ್ಯಕತೆಯಾಗಿದೆ. “ಇಂಟರ್ನೆಟ್ ಕ್ರಾಂತಿಯ ಮುಂಚೆಯೇ NPE 1986/92 ಅನ್ನು ರೂಪಿಸಲಾಯಿತು ಮತ್ತು ಇದರಲ್ಲಿ ತಂತ್ರಜ್ಞಾನದ ಸಾಮರ್ಥ್ಯವನ್ನು ಗುರುತಿಸುವಾಗ ಕಳೆದ ಕೆಲವು ದಶಕಗಳ ಮೂಲಭೂತ ಬದಲಾವಣೆಗಳ ಬಗ್ಗೆ ಯೋಚಿಸಲಾಗಲಿಲ್ಲ” ಎಂದು ಡ್ರಾಫ್ಟ್ ನ್ಯಾಷನಲ್ ಎಜುಕೇಶನ್ ಪಾಲಿಸಿ ಸಮಿತಿಯ ಅಧ್ಯಕ್ಷರಾದ ಡಾ.ಕೆ. ಕಸ್ತೂರಿರಂಗನ್ ಅವರು ವರದಿಯ ಪೀಠಿಕೆಯಲ್ಲಿ ಬರೆದಿದ್ದಾರೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊಸ ಶಿಕ್ಷಣ ನೀತಿಯನ್ನು ವಿನ್ಯಾಸಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ‘ಅಂತಿಮ’ ಡ್ರಾಫ್ಟ್ ಹೊರತರಲು ನಾಲ್ಕು ಸುದೀರ್ಘ ವರ್ಷಗಳನ್ನು ತೆಗೆದುಕೊಂಡಿತು. ಅದೇನೆಯಿರಲಿ, ಸಮಗ್ರ 484 ಪುಟದ ಡಾಕ್ಯುಮೆಂಟ್ ಓದಿದ ನಂತರ, ಇದು ನಾಲ್ಕು ವರ್ಷಗಳ ಕಾಯುವಿಕೆಗೆ ಯೋಗ್ಯವಾಗಿರುವಂತಹುದು ಎಂದು ಅನಿಸುತ್ತದೆ.
ಸ್ವಾತಂತ್ರ್ಯ ಬಳಿಕದ ಕಳೆದ ಏಳು ದಶಕಗಳಲ್ಲಿ ಕೇಂದ್ರ ಸರ್ಕಾರವು ಪ್ರೀ ಸ್ಕೂಲ್ಗೆ ಯಾವುದೇ ಮಾನ್ಯತೆಯನ್ನು ನೀಡಲಿಲ್ಲ. ಆರಂಭಿಕ ಬಾಲ್ಯ ಶಿಕ್ಷಣವು ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್ಮೆಂಟ್ ಸ್ಕೀಮ್ (ಐಸಿಡಿಎಸ್) ಅಡಿಯಲ್ಲಿ ನಡೆಯುವ ಅಂಗನವಾಡಿಗಳ ಭಾಗವಾಗಿತ್ತು. ಆದರೆ ಅದಕ್ಕೆ ಸ್ವತಂತ್ರ ಮಾನ್ಯತೆ ಇರಲಿಲ್ಲ. ನ್ಯುರೋಸೈನ್ಸ್ ಪ್ರಕಾರ, ಮಗುವಿನ ಸಂಚಿತ ಮಿದುಳಿನ ಶೇ.85ರಷ್ಟು ವಿಕಸನವು 6 ವರ್ಷಗಳೊಳಗೆ ಆಗುತ್ತದೆ. ಆದ್ದರಿಂದ ಬಾಲ್ಯದ ಶಿಕ್ಷಣವು ಮಗುವಿನ ಸಮಗ್ರ ಬೆಳವಣಿಗೆಗೆ ನಿರ್ಣಾಯಕವಾಗುತ್ತದೆ. NEP ಪ್ರಿಸ್ಕೂಲ್ಗಳ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ ಮತ್ತು “ಪ್ರತಿ ಮಗುವಿಗೆ 3-6 ವರ್ಷಗಳ ವಯಸ್ಸಿನ ವ್ಯಾಪ್ತಿಯಲ್ಲಿ 2025 ರೊಳಗೆ ಉಚಿತ, ಸುರಕ್ಷಿತ, ಉನ್ನತ ಗುಣಮಟ್ಟದ, ಅಭಿವೃದ್ಧಿಶೀಲ ಸೂಕ್ತವಾದ ಆರೈಕೆ ಮತ್ತು ಶಿಕ್ಷಣವನ್ನು ನೀಡಬೇಕು ಎಂಬುದನ್ನು ಪ್ರತಿಪಾದಿಸುತ್ತದೆ.
ಬಾಲ್ಯ ಶಿಕ್ಷಣದ ಪ್ರವೇಶಾತಿಗಳಲ್ಲಿ ಸವಲತ್ತುಗಳ ವರ್ಗ ಮತ್ತು ಹಿಂದುಳಿದ ವರ್ಗಗಳ ನಡುವೆ ದೊಡ್ಡ ಅಂತರ ಕಂಡುಬಂದಿದೆ. ಸ್ವತಂತ್ರವಾದ ಪೂರ್ವ ಶಾಲೆಗಳು ಅನಿಯಂತ್ರಿತವಾದುದು ಮತ್ತು ಇದಕ್ಕೆ ಸರ್ಕಾರಿ ಅನುಮತಿ ಅಗತ್ಯವಿಲ್ಲ ಎಂಬ ಕಾರಣದಿಂದಾಗಿ ಅದು ‘ಶಿಕ್ಷಣ ಮಾಫಿಯಾ’ಗೆ ಉದ್ಯಮವಾಗಿ ಬೆಳೆದು ಹೋಗಿದೆ. ಖಾಸಗಿ ಶಾಲೆಗಳು ನಿರಂಕುಶವಾಗಿ ಶುಲ್ಕ ವಿಧಿಸುತ್ತಿವೆ. ಕೆಲವು ‘ಗಣ್ಯ’ ಶಾಲೆಗಳು ತಮ್ಮ ಸ್ವಂತ ಪ್ರೀ ಸ್ಕೂಲ್ ಶಾಖೆಯನ್ನು ಪ್ರಾರಂಭಿಸಿದವು, ಇನ್ನು ಕೆಲವು ಪ್ರಿ-ಸ್ಕೂಲ್ಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡವು. ಪ್ರಾಥಮಿಕ ಹಂತದಲ್ಲಿ ಪ್ರವೇಶ ಪಡೆಯಲು ನಿರ್ದಿಷ್ಟ ‘ಪ್ರಿಸ್ಕೂಲ್’ನಲ್ಲಿ ಪೂರ್ವ ಶಿಕ್ಷಣವನ್ನು ಮಾಡಿರುವುದನ್ನು ಕಡ್ಡಾಯಗೊಳಿಸಿದವು. ‘ಪ್ರೀ ಸ್ಕೂಲ್’ ಶ್ರೀಮಂತ ವರ್ಗಗಳ ಐಷಾರಾಮಿಯಾಗಿ ಮತ್ತು ಬಡ ವರ್ಗದ ಪೋಷಕರಿಗೆ ಆರ್ಥಿಕ ಹೊರೆಯಾಗಿ ಮಾರ್ಪಟ್ಟವು.
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ನಂತರ, ಸರ್ಕಾರವು ಪ್ರತಿ ಮಗುವಿಗೆ “ಉಚಿತ ಮತ್ತು ಕಡ್ಡಾಯ” ಆರಂಭಿಕ ಬಾಲ್ಯ ಶಿಕ್ಷಣವನ್ನು ಒದಗಿಸುತ್ತದೆ ಮತ್ತು ಇದು ಪೋಷಕರ ಹೊರೆಯನ್ನೂ, ಮತ್ತು ವಿಶೇಷ ಮತ್ತು ದುರ್ಬಲರ ನಡುವಣ ಬೇಧಭಾವವನ್ನೂ ಕಡಿಮೆಗೊಳಿಸುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿಯು ‘ಫೌಂಡೇಷನ್ ಸ್ಟೇಜ್’ ಶಿಕ್ಷಣದಡಿಯಲ್ಲಿ ಮೂರು ವರ್ಷಗಳಾಗಿ ಪ್ರೀ-ಸ್ಕೂಲ್ ಅನ್ನು ವಿಭಾಗೀಕರಿಸಿದೆ. ಪ್ರೀ-ಸ್ಕೂಲ್ (ವಯಸ್ಸು 3-6) ಮತ್ತು ಗ್ರೇಡ್ 2 (ವಯಸ್ಸು 8) ರನ್ನು ವರ್ಗೀಕರಿಸಿದೆ. ಈ ಕೆಳಗಿನ ನಾಲ್ಕು ವಿಧಾನಗಳ ಮೂಲಕ ಮಗುವಿಗೆ ಆರಂಭಿಕ ಬಾಲ್ಯ ಶಿಕ್ಷಣ (ಇಸಿಇ) ಅನ್ನು ಒದಗಿಸಲಾಗುವುದು.
1. ಶಿಕ್ಷಣವನ್ನು ಬಲಪಡಿಸಲು ಅಂಗನವಾಡಿ ವ್ಯವಸ್ಥೆಯ ವಿಸ್ತರಣೆ
2. ಅಸ್ತಿತ್ವದಲ್ಲಿರುವ ಪ್ರಾಥಮಿಕ ಶಾಲೆಗಳೊಂದಿಗೆ ಅಂಗನವಾಡಿಗಳನ್ನು ಸೇರಿಸುವುದು
3. ಸಾಧ್ಯವಿದ್ದ ಕಡೆ ಪ್ರೀ ಸ್ಕೂಲ್ಗಳನ್ನು ಪ್ರಾಥಮಿಕ ಶಾಲೆಗಳೊಂದಿಗೆ ಸೇರಿಸುವುದು
4. ಸ್ವತಂತ್ರ ಪ್ರೀ ಸ್ಕೂಲ್ಗಳ ನಿರ್ಮಾಣ
ಶಾಲಾ ಶಿಕ್ಷಣಕ್ಕೆ ಪ್ರಸ್ತುತ ಪಠ್ಯಪುಸ್ತಕ ಅಭಿವೃದ್ಧಿಪಡಿಸುವ ಪ್ರಾಧಿಕಾರವಾದ NCERTಯು ಆರಂಭಿಕ ಬಾಲ್ಯ ಶಿಕ್ಷಣಕ್ಕಾಗಿ ಪಠ್ಯಕ್ರಮ ಮತ್ತು ವಿಧಾನಗಳ ಚೌಕಟ್ಟನ್ನು ತಯಾರಿಸಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ವರದಿಯ ಪ್ರಕಾರ, “ಗುಣಮಟ್ಟದ ಆರಂಭಿಕ ಬಾಲ್ಯ ಶಿಕ್ಷಣದ ಸಾರ್ವತ್ರಿಕ ಲಭ್ಯತೆಯು ಬಹುಶಃ ನಮ್ಮ ಮಕ್ಕಳು ಮತ್ತು ನಮ್ಮ ದೇಶದ ಭವಿಷ್ಯಕ್ಕಾಗಿ ಭಾರತವು ಮಾಡಬಹುದಾದ ಅತ್ಯುತ್ತಮ ಹೂಡಿಕೆಯಾಗಿದೆ.” ಇದು ಶಿಕ್ಷಣದ ಮೂಲಭೂತ ಹಂತಕ್ಕೆ ಬಹುವಾದ ಪ್ರಾಮುಖ್ಯತೆಯನ್ನು ನೀಡಲಿದೆ, ಪ್ರೀ ಸ್ಕೂಲ್ಗೆ 3-8 ವರ್ಷದ ಮಕ್ಕಳ ಪ್ರವೇಶವನ್ನು ಸರಳಗೊಳಿಸಲಿದೆ, ಬಹುಮುಖಿಗೊಳಿಸಲಿದೆ ಮತ್ತು ಚಟುವಟಿಕೆ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಆರಂಭಿಕ ಬಾಲ್ಯ ಶಿಕ್ಷಣವನ್ನು ತಂದಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಈ ನೀತಿ ಅನುಷ್ಠಾನಗೊಂಡಲ್ಲಿ, ದೇಶದಲ್ಲಿ ಮಾನವ ಸಂಪನ್ಮೂಲದ ಗುಣಮಟ್ಟ ತೀವ್ರವಾಗಿ ಸುಧಾರಿಸುತ್ತದೆ ಮತ್ತು ವರ್ಗ, ಜಾತಿ, ಧರ್ಮಗಳ ಬೇಧವಿಲ್ಲದೆ ಪ್ರತಿ ಮಗುವೂ ತನ್ನ ಪೂರ್ಣ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಯಶಸ್ವಿಯಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.